ಕಳೆದ ವರ್ಷ ಸಂಕ್ರಾಂತಿ ದಿನ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಮಾಡಿದ ದಿನ. ಅಂದು ತಮಗೆ ಸಚಿವ ಸ್ಥಾನ ನೀಡದ ಕಾರಣ ಯಡಿಯೂರಪ್ಪ ವಿರುದ್ಧ ಗರಂ ಆಗಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಆದಷ್ಟು ಬೇಗ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅದಾದ ಬಳಿಕ ಯತ್ನಾಳ ಹೇಳಿದಂತೆ ಸಿಎಂ ಬದಲಾವಣೆಯೂ ಆಯಿತು. ಅದಾದ ಒಂದು ವರ್ಷದ ಬಳಿಕ ಇದೀಗ ಮತ್ತೊಂದು ಸಲ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂದಿದ್ದಾರೆ. ಈ ಮೂಲಕ ಮತ್ತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಜೋರಾಗುವಂತೆ ಮಾಡಿದ್ದಾರೆ.
ಸದ್ಯ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿರುವವರ ಪೈಕಿ ಹಲವು ಸಚಿವರ ಕಾರ್ಯವೈಖರಿ ಬಗ್ಗೆ ಬಿಜೆಪಿ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೂರ್ಣ ಪ್ರಮಾಣದ ಉಸ್ತುವಾರಿ ಸಚಿವರ ನೇಮಕ ಆಗದ ಕಾರಣ ಆಡಳಿತ ಚುರುಕುಗೊಂಡಿಲ್ಲ. (ಈಗ ಉಸ್ತುವಾರಿ ಇರುವುದೇ ಕೇವಲ ಪ್ರವಾಹ ಹಾಗೂ ಕೋವಿಡ್ ನಿರ್ವಹಣೆ ಮಾತ್ರ ) ಇದು ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎನ್ನುವ ಆತಂಕ ಉಂಟಾಗಿರುವ ಕಾರಣ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಅಧಿಕವಾಗಿದೆ.
ಹಾನಗಲ್ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದಿರೋದು ಕೂಡಾ ಸಂಪುಟದಲ್ಲಿ ಬದಲಾವಣೆ ಕಾರಣವಾಗುವ ಸಾಧ್ಯತೆ ಇದೆ. ಜೊತೆಗೆ ಈಗ ಹಂಚಿಕೆ ಮಾಡಿರುವ ಖಾತೆಗಳಲ್ಲಿ ಬದಲಾವಣೆ ಮಾಡುವಂತೆ ಬಿಜೆಪಿ ಶಾಸಕರಿಂದಲೇ ಬೇಡಿಕೆ ಬಂದಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಬದಲು ಬೇರೆ ಖಾತೆ ನೀಡುವಂತೆ ಶಾಸಕ ಯತ್ನಾಳ ಬಹಿರಂಗವಾಗಿ ಹೇಳಿದ್ದಾರೆ. ಈ ಎಲ್ಲ ಅಂಶಗಳು ಸಂಪುಟದಲ್ಲಿ ಬದಲಾವಣೆಯ ಮುನ್ಸೂಚನೆ ನೀಡಿವೆ.
ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಜನವರಿ 20ರ ಒಳಗಾಗಿ ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂದಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡಾ ಸಂಪುಟ ವಿಸ್ತರಣೆ ಆಗಲಿದೆ ಎಂದಿದ್ದಾರೆ. ಈ ಇಬ್ಬರು ನಾಯಕರ ಮಾತಿನ ಬಳಿಕ ಗುಪ್ತವಾಗಿ ರಾಜಕೀಯ ಚಟುವಟಿಕೆ ನಡೆದಿವೆ. ಸದ್ಯ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ತುಂಬುವ ಸಾಧ್ಯತೆ ಅಧಿಕವಾಗಿದ್ದು, ಈ ಸಲವಾದರು ಶಾಸಕ ಯತ್ನಾಳ ಅವರಿಗೆ ಸಚಿವ ಸ್ಥಾನ ಸಿಗುತ್ತಾ ಕಾದು ನೋಡಬೇಕಾಗಿದೆ.
ಕಳೆದ ಕೆಲ ದಿನಗಳ ಹಿಂದೆ ದೆಹಲಿಗೆ ಹೋಗಿ ಬಂದಿರುವ ಯತ್ನಾಳ್ ಬಹಳ ಖುಷಿಯಲ್ಲಿದ್ದಾರೆ. ಕೆಲ ದಿನಗಳ ಬಳಿಕ ಮತ್ತೆ ದೆಹಲಿಗೆ ಹೋಗುವ ಸಾಧ್ಯತೆ ಇದೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಯತ್ನ ಮಾಡುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತಮ್ಮದೆಯಾದ ಪ್ರಭಾವವಿದೆ. ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಯತ್ನಾಳ ಅವರಿಗೆ ಈಗಲೂ ಕೇಂದ್ರದಲ್ಲಿ ಸ್ನೇಹಿತರಿದ್ದಾರೆ. ಪ್ರಮುಖ ನಾಯಕರು ನಿಕಟ ಸಂಪರ್ಕವಿದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರದಲ್ಲಾಗುವ ಬದಲಾವಣೆ ಬಗ್ಗೆ ಅಧಿಕೃತ ಹಾಗೂ ಹೆಚ್ಚಿನ ಮಾಹಿತಿ ಯತ್ನಾಳ ಹೊಂದಿದ್ದಾರೆ. ಜೊತೆಗೆ ಯಡಿಯೂರಪ್ಪ ವಿರೋಧಿ ಪಾಳೆಯ ಯತ್ನಾಳ ಅವರ ಬೆಂಬಲಕ್ಕೆ ನಿಂತಿದೆ. ಈ ಕಾರಣದಿಂದಾಗಿ ಸಂಪುಟ ಬದಲಾವಣೆ ಬಗ್ಗೆ ಯತ್ನಾಳ ಹೇಳಿಕೆಗೆ ಮಹತ್ವ ಬಂದಿದೆ.
ಕೈ ಹಿಡಿಯುತ್ತಾ ಪಂಚಮಸಾಲಿ ಹೋರಾಟ?
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಖಂಡ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಯಡಿಯೂರಪ್ಪ ವಿರುದ್ಧ ಪಂಚಮಸಾಲಿ ಮೀಸಲಾತಿ ಅಸ್ರ್ತ ಬಳಕೆ ಮಾಡಿ ಹೋರಾಟ ಮಾಡಿದರು. ಇಂದಿಗೆ (ಜನವರಿ) ಒಂದು ವರ್ಷದ ಹಿಂದೆ ಪಂಚಮಸಾಲಿ ಹೋರಾಟ ಆರಂಭಿಸಿ ಯಡಿಯೂರಪ್ಪ ಮಣಿಸಲು ಯಶಸ್ವಿಯಾದರು. ಇದೀಗ ಈ ಹೋರಾಟ ಅವರ ಕೈ ಹಿಡಿಯುತ್ತಾ ಕಾದು ನೋಡಬೇಕು.
ಯತ್ನಾಳ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಅವರದ್ದೇ ಸಮುದಾಯದ ನಾಯಕರಾದ ಮುರುಗೇಶ ನಿರಾಣಿ ಸಚಿವರಾಗಿದ್ದು, ಯತ್ನಾಳ ಹೇಗೆ ಸ್ಥಾನ ಪಡೆಯುತ್ತಾರೆ ಎಂಬುದು ಕೂತೂಹಲ ಮೂಡಿಸಿದೆ. ಹೈ ಕಮಾಂಡ್ ಮಟ್ಟದಲ್ಲಿ ಇಬ್ಬರೂ ವರ್ಚಸ್ಸು ಹೊಂದಿರುವ ನಾಯಕರಾಗಿದ್ದಾರೆ. ಯತ್ನಾಳ ಅವರಿಗೆ ಹಿಂದುತ್ವದ ಆಧಾರದ ಮೇಲೆ ದೊಡ್ಡ ಸಂಖ್ಯೆಯ ಯುವ ಪಡೆ ಅವರ ಹಿಂದಿದೆ.
ಸಚಿವ ಮುರುಗೇಶ ನಿರಾಣಿ ಹಣ ಬಲದ ಜೊತೆಗೆ ಪಕ್ಷಕ್ಕೆ ಆರ್ಥಿಕ ಶಕ್ತಿ ತುಂಬುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇಬ್ಬರು ನಾಯಕರು ವೈಯಕ್ತಿಕವಾಗಿ ವಿರೋಧಿಗಳಾದರು ಬಿಜೆಪಿ ಹೈ ಕಮಾಂಡ್ ಗೆ ಇಬ್ಬರನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಯತ್ನಾಳ ಜನ ಬೆಂಬಲ, ನಿರಾಣಿ ಆರ್ಥಿಕ ಬಲ ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಪಕ್ಷಕ್ಕೆ ಸಹಾಯಕವಾಗಲಿದೆ ಎಂದು ಪಕ್ಷದ ನಾಯಕರು ಲೆಕ್ಕಾಚಾರ ಹಾಕಿದ್ದು, ಮುಂದೇನಾಗುತ್ತೋ ಅನ್ನೋದಕ್ಕೆ ಪಕ್ಷದ ಹೈ ಕಮಾಂಡ್ ಉತ್ತರ ನೀಡಲಿದೆ.