ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಮತ್ತು ತರಬೇತುದಾರರ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ವೇದಿಕೆಯಿಂದ ಎಡಪಂಥೀಯ ನಾಯಕಿ ಬೃಂದಾ ಕಾರಟ್ ಅವರನ್ನು ಪ್ರತಿಭಟನಾ ನಿರತ ಕುಸ್ತಿಪಟುಗಳು ಕೆಳಗಿಳಿಯುವಂತೆ ಮಾಡಿದ್ದಾರೆ.
ದಿಲ್ಲಿಯ ಜಂತರ್ ಮಂತರ್‌ನಲ್ಲಿ ಮಹಿಳಾ ಆಟಗಾರ್ತಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧ ಸುಮಾರು 200 ಕ್ಕೂ ಅಧಿಕ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಪ್ರತಿಭಟನಾಕಾರರಿಗೆ ಬೆಂಬಲವಾಗಿ ಬಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದೆ ಬೃಂದಾ ಕಾರಟ್ ಅವರನ್ನು ವೇದಿಕೆಯಿಂದ ಇಳಿಯುವಂತೆ ಪ್ರತಿಭಟನಾ ನಿರತ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ.
“ದಯವಿಟ್ಟು ಕೆಳಗಿಳಿಯಿರಿ… ಮೇಡಂ, ದಯವಿಟ್ಟು ಇದನ್ನು ರಾಜಕೀಯ ಮಾಡಬೇಡಿ. ಇದು ಕ್ರೀಡಾಪಟುಗಳ ಪ್ರತಿಭಟನೆ” ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಅವರು ಕಾರಟ್‌ಗೆ ಹೇಳಿದ್ದಾರೆ.
#WATCH | CPI(M) leader Brinda Karat asked to step down from the stage during wrestlers' protest against WFI at Jantar Mantar in Delhi. pic.twitter.com/sw8WMTdjsk
— ANI (@ANI) January 19, 2023
“ನಾವು ಯಾವುದೇ ರೀತಿಯ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟದಲ್ಲಿದ್ದೇವೆ, ಯಾವುದೇ ವರ್ಗದ ಮಹಿಳೆಯರನ್ನು ಅವಮಾನಿಸುವ ಯಾವುದೇ ವಿಷಯದ ವಿರುದ್ಧ ನಾವು ಹೋರಾಟದಲ್ಲಿದ್ದೇವೆ. ಆದ್ದರಿಂದ, ಸರ್ಕಾರವು ಬಲವಾದ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.” ಎಂದು ಬೃಂದಾ ಕಾರಟ್ ಹೇಳಿದ್ದಾರೆ.
“ಅವರು (ಕುಸ್ತಿಪಟುಗಳು) ಇಲ್ಲಿಗೆ ಬಂದು ಧರಣಿ ಕುಳಿತಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಸರ್ಕಾರವು ಯಾವುದೇ ಮಹಿಳೆಯ ಯಾವುದೇ ದೂರಿನ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ವಿಚಾರಣೆಯು ತೀರ್ಮಾನಕ್ಕೆ ಬರುವವರೆಗೆ, ಆರೋಪಿತ ವ್ಯಕ್ತಿಯನ್ನು ಹುದ್ದೆಯಿಂದ ತೆಗೆಯಬೇಕು,’’ ಎಂದು ಹೇಳಿದರು.
ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, “ರಾಷ್ಟ್ರೀಯ ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧಿಕಾರಿಗಳು ನನಗೆ ಜೀವ ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದರು.
ಒಲಿಂಪಿಯನ್ ವಿನೇಶ್ ಫೋಗಟ್, ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಕ್ರೀಡಾ ಸಂಸ್ಥೆಯ ತರಬೇತುದಾರರು ಹಾಗೂ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ನಂತರ ಕ್ರೀಡಾ ಸಚಿವಾಲಯವು “ಮುಂದಿನ 72 ಗಂಟೆಗಳ ಒಳಗೆ” ಭಾರತೀಯ ಕುಸ್ತಿ ಫೆಡರೇಶನ್ ನಿಂದ ಪ್ರತಿಕ್ರಿಯೆಯನ್ನು ಕೋರಿತ್ತು.