ಚಿಲ್ಲರೆ ದರ ಹಣದುಬ್ಬರದ ನಂತರ ಈಗ ಸಗಟುದರ ಹಣದುಬ್ಬರ (ಡಬ್ಲ್ಯೂಪಿಐ) ಮಿತಿ ಮೀರಿ ಜಿಗಿದಿದೆ. ಏಪ್ರಿಲ್ ತಿಂಗಳಲ್ಲಿ ಶೇ.15.08ಕ್ಕೆ ಏರಿದೆ. ಮಾರ್ಚ್ ತಿಂಗಳಲ್ಲಿ ಶೇ.14.55ರಷ್ಟಿತ್ತು. ಏಪ್ರಿಲ್ ತಿಂಗಳಲ್ಲೂ ಎರಡಂಕಿ ಹಣದುಬ್ಬರ ದಾಖಲಾಗುವುದರೊಂದಿಗೆ ಸಗಟು ದರ ಹಣದುಬ್ಬರವು ಸತತ 13 ತಿಂಗಳ ಕಾಲ ಎರಡಂಕಿ ದಾಟಿ ದಾಖಲೆ ಮಾಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು ಮಂಗಳವಾರ ಹಣದುಬ್ಬರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಸಗಟುದರ ಹಣದುಬ್ಬರ ಶೇ.10.74ರಷ್ಟಿತ್ತು. ಚಿಲ್ಲರೆ ದರ ಹಣದುಬ್ಬರವು (ಸಿಪಿಐ) ಏಪ್ರಿಲ್ ತಿಂಗಳಲ್ಲಿ ಶೇ.7.79ರಷ್ಟು ದಾಖಲಾಗಿದೆ. ಇದು ಮೇ2014ರ ನಂತರ ಅತಿಗರಿಷ್ಠ ಹಣದುಬ್ಬರವಾಗಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಒಟ್ಟಾರೆ ಸೂಚ್ಯಂಕ ಶೇ.2.1ರಷ್ಟು ಹೆಚ್ಚಳವಾಗಿದ್ದರೆ, ಇಂಧನ ಮತ್ತು ವಿದ್ಯುತ್ ಶೇ.2.8ರಷ್ಟು ಹೆಚ್ಚಳವಾಗಿದೆ. ತರಕಾರಿ ಮತ್ತಿತರ ಸರಕುಗಳ ಸೂಚ್ಯಂಕ ಮಾರ್ಚ್ ತಿಂಗಳಿಗಿಂತ ಶೇ.1.7ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್ನಲ್ಲಿ ಹಣದುಬ್ಬರದ ತೀವ್ರ ಹೆಚ್ಚಳದ ನಿರೀಕ್ಷಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯು ಜೂನ್ ತಿಂಗಳ ನಿಗದಿತ ಸಭೆಗಿಂತ ಒಂದು ತಿಂಗಳು ಮುಂಚಿತವಾಗಿ ಮೇ 4ರಂದು ಸಭೆ ನಡೆಸಿ, ರೆಪೊದರವನ್ನು 40 ಅಂಶಗಳಷ್ಟು (ಶೇ. 0.40) ಏರಿಕೆ ಮಾಡಿತ್ತು.
ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಯ ಹೊತ್ತಿಗೆ ಶೇ.0.75 ರಿಂದ ಶೇ.1.0ರಷ್ಟು ಬಡ್ಡಿ ದರ ಏರಿಸುವ ನಿರೀಕ್ಷೆ ಹಣಕಾಸು ಮಾರುಕಟ್ಟೆಯಲ್ಲಿದೆ. ಹಣದುಬ್ಬರ ಹೆಚ್ಚಳಕ್ಕೆ ಇತ್ತೀಚೆಗೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರದ ಆರ್ಥಿಕ ಪರಿಣಾಮಗಳು ಕಾರಣವಾದರೂ, ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ತೀವ್ರವಾಗಿ ಏರಿಕೆಯಾಗಿದ್ದರಿಂದಾಗಿ ಯುದ್ಧ ಆರಂಭಕ್ಕೂ ಮುನ್ನವೇ ಅಂದರೆ ಜನವರಿ ತಿಂಗಳಿಂದಲೇ ಚಿಲ್ಲರೆ ದರ ಹಣದುಬ್ಬರ ಶೇ. 6ರ ಗಡಿದಾಟಿತ್ತು. ಹದಿಮೂರು ತಿಂಗಳಿಂದಲೂ ಸಗಟುದರದ ಸೂಚ್ಯಂಕವು ಎರಡಂಕಿ ದಾಟಿತ್ತು. ಯುದ್ಧದ ಪರಿಣಾಮ ಹಣದುಬ್ಬರ ಹೆಚ್ಚಳ ತ್ವರಿತವಾಗಿದೆ.
ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಕೇಂದ್ರ ಸರ್ಕಾರವು ಸತತ ಹದಿನೈದು ದಿನಗಳ ಕಾಲ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಏರಿಕೆ ಮಾಡಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸರಾಸರಿ 10 ರೂಪಾಯಿ ಅಂದರೆ ಶೇ.12ರಷ್ಟು ಏರಿಕೆಯಾಗಿತ್ತು. ಇದಲ್ಲದೇ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಸಿದ ನಂತರವೂ ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿ ಏರಿಸಿ 1000 ರೂಪಾಯಿ ಗಡಿ ದಾಟಿಸಿದೆ. ನಿನ್ನೆಯಷ್ಟೇ ಸಿಎನ್ಜಿ ದರವನ್ನು ಏರಿಕೆ ಮಾಡಿದೆ. ಹೀಗಾಗಿ ಹಣದುಬ್ಬರ ಸದ್ಯಕ್ಕೆ ತಗ್ಗುವ ಯಾವುದೇ ಸಾಧ್ಯತೆ ಇಲ್ಲ.