ಬೆಂಗಳೂರು, ಮೇ 21: ನಗರದ ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 23 ವರ್ಷದ ಭಾನುರೇಖಾ ಅವರ ಕುಟುಂಬ ವರ್ಗದವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ತಕ್ಷಣ ದಾಖಲಿಸಿಕೊಳ್ಳದೆ ವಿಳಂಬ ಮಾಡಿದ್ದರ ಕುರಿತು ಮುಖ್ಯಮಂತ್ರಿಯವರು ತನಿಖೆಗೆ ಆದೇಶಿದ್ದಾರೆ.
ಮಳೆ ಅನಾಹುತದ ಮಾಹಿತಿ ದೊರೆಯುತ್ತಿದ್ದಂತೆ ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರ ಜತೆ ತುರ್ತು ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಮಳೆಯಿಂದ ಉರುಳಿ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು, ಮಳೆ ಅನಾಹುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿ ಸಾರ್ವಜನಿಕರಿಗೆ ತೊಂದರೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.