ಮನೆ ಮನೆ ಸತ್ಯಕ್ಕೆ ಹಸೀ ಸುಳ್ಳಿನ ಸಾಕ್ಷಿ ನೀಡುತ್ತಿದೆ ಆರೋಗ್ಯ ಸಚಿವಾಲಯ!

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್ ಸೋಂಕಿಗೆ ಬರೋಬ್ಬರಿ 4,529 ಮಂದಿ ಬಲಿಯಾಗಿದ್ದಾರೆ. ಇದು ಈವರೆಗಿನ ದೈನಿಕ ಕೋವಿಡ್ ಸಾವುಗಳ ಪೈಕಿ ದಾಖಲೆಯ ಪ್ರಮಾಣ. ಮಂಗಳವಾರ ದೇಶಾದ್ಯಂತ ಒಟ್ಟು 2.67 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ.

ಕೋವಿಡ್ ಪರೀಕ್ಷೆಗೊಳಗಾದವರ ಪೈಕಿ ಸೋಂಕು ದೃಢಪಡುತ್ತಿರುವವರ ಪ್ರಮಾಣ ಶೇ.20ರ ಆಸುಪಾಸಿನಲ್ಲಿದೆ. ಕರ್ನಾಟಕದಂತಹ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಲ್ಲಿ ಈ ಪ್ರಮಾಣ ದೇಶದ ಸರಾಸರಿಗಿಂತ ಬಹುತೇಕ ದುಪ್ಪಟ್ಟಿದೆ. ಇದು ಸರ್ಕಾರವೇ ಒದಗಿಸುವ ಅಧಿಕೃತ ಅಂಕಿಅಂಶಗಳ ಮೇಲಿನ ಲೆಕ್ಕಾಚಾರಗಳು. ಆದರೆ, ಕೋವಿಡ್ ಎರಡನೇ ಅಲೆ ದೇಶದ ಉದ್ದಗಲಕ್ಕೆ ಎಬ್ಬಿಸಿರುವ ಹಾಹಾಕಾರ, ಹಾಸಿಗೆ, ಆಮ್ಲಜನಕ, ಆ್ಯಂಬುಲೆನ್ಸ್, ಸ್ಮಶಾನದಲ್ಲಿ ಶವ ಸಂಸ್ಕಾರಕ್ಕಾಗಿ ಉಂಟಾಗಿರುವ ಪರದಾಟದ ಹಿನ್ನೆಲೆಯಲ್ಲಿ, ವಾಸ್ತವವಾಗಿ ಕೋವಿಡ್ ಸೋಂಕಿತರು, ಮತ್ತು ಕೋವಿಡ್ ಸಾವಿನ ಪ್ರಮಾಣ ಅಧಿಕೃತ ಅಂಕಿಅಂಶಗಳ ಹಲವು ಪಟ್ಟು ಹೆಚ್ಚಿರಬಹುದು ಎಂಬುದನ್ನು ಯಾರೂ ಬೇಕಾದರೂ ಊಹಿಸಬಹುದು.

ಹಲವು ಅಂತಾರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಕೂಡ ಸರ್ಕಾರದ ಅಧಿಕೃತ ಅಂಕಿಅಂಶಗಳು ವಾಸ್ತವಾಂಶಕ್ಕೆ ದೂರ ಇವೆ. ಪ್ರಕರಣಗಳನ್ನು ತೀರಾ ಕಡಿಮೆ ಪ್ರಮಾಣದಲ್ಲಿ ವರದಿ ಮಾಡಲಾಗುತ್ತಿದೆ. ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣಗಳೆರಡರ ವಿಷಯದಲ್ಲೂ ಸರ್ಕಾರ ವಾಸ್ತವಾಂಶಗಳನ್ನು ಮುಚ್ಚಿಟ್ಟು ಜನತೆಗೆ ಸುಳ್ಳು ಲೆಕ್ಕ ನೀಡುತ್ತಿದೆ ಎಂದು ಹೇಳಿವೆ. ಗುಜರಾತ್, ಉತ್ತರಪ್ರದೇಶ, ದೆಹಲಿಯಂತಹ ಕಡೆ ಸ್ಮಶಾನ, ಗಂಗಾನದಿಯಲ್ಲಿ ಕಾಣಿಸುತ್ತಿರುವ ಹೆಣದ ರಾಶಿಗಳು ಮತ್ತು ಸ್ಮಶಾನದ ದಾಖಲಾತಿಗಳು ಕೂಡ ಸರ್ಕಾರದ ಹಸೀ ಸುಳ್ಳುಗಳನ್ನು ಬೆತ್ತಲು ಮಾಡಿವೆ.

ಆದರೆ, ಮಂಗಳವಾರ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಮ್ಮ ಹೇಳಿಕೆಯಲ್ಲಿ, “ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ವ್ಯಾಪಕ ಏರಿಕೆಯ ಹೊರತಾಗಿಯೂ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.1.8ರಷ್ಟು ಮಂದಿ ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಇನ್ನುಳಿದ 98.2 ಶೇಕಡ ಜನರನ್ನು ಕೋವಿಡ್ ಅಪಾಯದಿಂದ ಪಾರುಮಾಡುವಲ್ಲಿ ದೇಶ ಯಶಸ್ವಿಯಾಗಿದೆ” ಎಂದಿದ್ದಾರೆ. ಅಂದರೆ, ಸರ್ಕಾರದ ಪ್ರಕಾರ ಈವರೆಗೆ ದೇಶದಲ್ಲಿ ಕರೋನಾ ಸೋಂಕಿಗೆ ಒಳಗಾದವರ ಪ್ರಮಾಣ ಕೇವಲ 2 ಕೋಟಿ ಮಾತ್ರ! ಉಳಿದ ಸುಮಾರು 135 ಕೋಟಿ ಜನರು, ಸರ್ಕಾರದ ಪ್ರಯತ್ನಗಳ ಫಲವಾಗಿ ಯಾವುದೇ ರೀತಿಯಲ್ಲೂ ಕರೋನಾ ಸೋಂಕಿಗೆ ಒಳಗಾಗದೆ, ಸುರಕ್ಷಿತವಾಗಿದ್ದಾರೆ!

ದೇಶದಲ್ಲಿ ಕಳೆದ ವರ್ಷದ ಜನವರಿಯಲ್ಲಿ ಕರೋನಾ ಮೊದಲ ಪ್ರಕರಣ ಕಾಣಿಸಿಕೊಂಡ ದಿನದಿಂದ ಈವರೆಗೆ ಸೋಂಕು ದೃಢಪಟ್ಟವರ ಸಂಖ್ಯೆಯೇ ಎರಡು ಕೋಟಿ ಐವತ್ತೆರಡು ಲಕ್ಷಕ್ಕೂ ಹೆಚ್ಚಿರುವಾಗ, ಸರ್ಕಾರ, 137 ಕೋಟಿ ಜನಸಂಖ್ಯೆಯ ಪೈಕಿ ಕೇವಲ 1.8 ಶೇ. ಜನರಿಗೆ ಮಾತ್ರ ಸೋಂಕು ತಗುಲಿದೆ, ಉಳಿದವರನ್ನು ಸರ್ಕಾರದ ಕರೋನಾ ನಿಯಂತ್ರಣ ಕ್ರಮಗಳು ಬಚಾವು ಮಾಡಿವೆ ಎಂಬುದು ಎಷ್ಟು ಹಾಸ್ಯಾಸ್ಪದವಾಗಿ ಕಾಣಿಸುತ್ತದೆಯಲ್ಲವೆ? ಏಕೆಂದರೆ, ದೇಶದಲ್ಲಿ ಕರೋನಾ ಪರೀಕ್ಷೆಗೊಳಗಾದವರ ಪ್ರಮಾಣ(ಮೇ 18ರವರೆಗೆ) 32 ಕೋಟಿ ಮಾತ್ರ. ಕೇವಲ 32 ಕೋಟಿ ಪರೀಕ್ಷೆಗೊಳಗಾದವರ ಪೈಕಿ 2.52 ಕೋಟಿ ಮಂದಿಗೆ ಸೋಂಕು ದೃಢಪಟ್ಟಿರುವಾಗ, ದೇಶದ 137 ಕೋಟಿ ಜನರನ್ನೂ ಪರೀಕ್ಷೆಗೊಳಪಡಿಸಿದರೆ, ಸೋಂಕಿತರ ಪ್ರಮಾಣ ಎಷ್ಟಾಗಬಹುದು?

ಇಂತಹ ಸರಳ ಲೆಕ್ಕಾಚಾರಗಳನ್ನು ಹೊರತುಪಡಿಸಿಯೂ, ಇದೇ ಸರ್ಕಾರದ ಅಧಿಕೃತ ವೈದ್ಯಕೀಯ ಸಂಸ್ಥೆಗಳೇ ನೀಡಿರುವ ಮಾಹಿತಿಯ ಪ್ರಕಾರ ಹೋದರೂ, ಒಟ್ಟು ಜನಸಂಖ್ಯೆಯ ಶೇ.21.5ರಷ್ಟು ಮಂದಿ ಕಳೆದ ಡಿಸೆಂಬರ್-ಜನವರಿ ಹೊತ್ತಿಗೆ ಕರೋನಾ ಸೋಂಕಿಗೆ ಒಳಗಾಗಿದ್ದಾರೆ! ಏಕೆಂದರೆ, ಕಳೆದ ಫೆಬ್ರವರಿ 4ರಂದು ತನ್ನ ಮೂರನೇ ಸೀರೋ ಸರ್ವೆ ವರದಿ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್(ಐಸಿಎಂಆರ್), ತಾನು ಸಮೀಕ್ಷೆ ನಡೆಸಿದ 2020ರ ಡಿಸೆಂಬರ್ ಮತ್ತು 2021ರ ಜನವರಿ ಅವಧಿಯಲ್ಲಿ ದೇಶದ ಶೇ.21.5 ರಷ್ಟು ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಸಮೀಕ್ಷೆಯಲ್ಲಿ ನಗರ ಪ್ರದೇಶದ ಸ್ಲಮ್ ನಿವಾಸಿಗಳಲ್ಲಿ ಶೇ.31.7ರಷ್ಟು, ಸ್ಲಮ್ ಹೊರತುಪಡಿಸಿದ ಪ್ರದೇಶಗಳ ನಿವಾಸಿಗಳಲ್ಲಿ ಶೇ.26.2ರಷ್ಟು ಮತ್ತು ಗ್ರಾಮೀಣ ಪ್ರದೇಶದ ಶೇ.19.1ರಷ್ಟು ಮಂದಿಯಲ್ಲಿ ಕೋವಿಡ್ ವರಸ್ಸಿನ ಪ್ರತಿಕಾಯಗಳು ಪತ್ತೆಯಾಗಿವೆ ಎಂದು ವಿವರಿಸಿತ್ತು. ಅಂದರೆ, ಆ ಸೀರೋ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಭೀಕರ ಎರಡನೇ ಅಲೆಯ ಆರಂಭಕ್ಕೆ ಮುಂಚೆಯೇ ಸುಮಾರು 27 ಕೋಟಿ ಜನರು ವೈರಾಣು ಸಂಪರ್ಕಕ್ಕೆ ಬಂದಿದ್ದರು.

ಈ ನಡುವೆ, ಐಸಿಎಂಆರ್ ಸೀರೋ ಸರ್ವೆಯ ಡೇಟಾ ಬಹಿರಂಗಪಡಿಸುವ ಒಂದು ತಿಂಗಳ ಹಿಂದೆ, 2021ರ ಜನವರಿಯಲ್ಲಿ (ಜ.29) ವೈದ್ಯರೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಸಚಿವಾಲಯ, “ದೇಶದ ಶೇ.75ರಷ್ಟು ಜನಸಂಖ್ಯೆ ಈವರೆಗೆ ಕೋವಿಡ್ ಸೋಂಕಿನಿಂದ ದೂರ ಉಳಿದಿದೆ. ಹಾಗಾಗಿ ಈ ಹಂತದಲ್ಲಿ ಸಾಮೂಹಿಕ ರೋಗನಿರೋಧಕತೆ ಬಂದಿದೆ ಎನ್ನಲಾಗದು. ನಾವಿನ್ನೂ ಸಾಮೂಹಿಕ ರೋಗನಿರೋಧಕತೆಯಿಂದ ಬಹಳ ದೂರದಲ್ಲಿದ್ದೇವೆ… “ ಎಂದು ಹೇಳಿತ್ತು.

ಅಂದರೆ, ಐಸಿಎಂಆರ್, ತನ್ನ ಸೀರೋ ಸರ್ವೆ ಫಲಿತಾಂಶದ ಆಧಾರದ ಮೇಲೆ ದೇಶದಲ್ಲಿ ಸುಮಾರು 27 ಕೋಟಿ ಮಂದಿ ಕೋವಿಡ್ ವೈರಾಣು ಸಂಪರ್ಕಕ್ಕೆ ಬಂದಿದ್ದಾರೆ ಎಂದು ಅಂದಾಜಿಸುವ ಮುಂಚೆಯೇ, ಆರೋಗ್ಯ ಸಚಿವಾಲಯ ದೇಶದ ಸುಮಾರು 30 ಕೋಟಿಗೂ ಅಧಿಕ ಜನರು ಕರೋನಾ ವೈರಾಣು ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ಪರೋಕ್ಷವಾಗಿ ಹೇಳಿತ್ತು(137 ಕೋಟಿ ಜನರ ಪೈಕಿ ಶೇ.25ರಷ್ಟು ಮಂದಿ ಸೋಂಕಿಗೊಳಗಾಗಿದ್ದರೆ)!

ಈ ನಡುವೆ, ಡಾ. ಮನೋಜ್ ಮಹ್ರೇಕರ್, ಡಾ ರಮಣನ್ ಲಕ್ಷ್ಮಿನಾರಾಯಣನ್ ಮತ್ತು ಡಾ ಜೇಕಬ್ ಜಾನ್ ಅವರಂಥಹ ಅಂತಾರಾಷ್ಟ್ರೀಯ ತಜ್ಞರು ಕೂಡ ಜನವರಿಯ ಹೊತ್ತಿಗಾಗಲೇ ದೇಶದ ಸರಿಸುಮಾರು ಮೂವತ್ತು ಕೋಟಿಗೂ ಅಧಿಕ ಜನರು ಕೋವಿಡ್ ವೈರಾಣು ಸಂಪರ್ಕಕ್ಕೆ ಬಂದಿರಬಹುದು. ಇದು ತೀರಾ ಕನಿಷ್ಟ ಲೆಕ್ಕಾಚಾರ. ಆದರೆ, ಸಂಪರ್ಕಿತರಲ್ಲಿ ಕೆಲವರಿಗೆ ಮಾತ್ರ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ಆ ಪೈಕಿ ಕೆಲವೇ ಕೆಲವರು ಮಾತ್ರ ಪರೀಕ್ಷೆಗೆ ಒಳಗಾಗಿದ್ದಾರೆ. ಹಾಗಾಗಿ ವಾಸ್ತವವಾಗಿ ಪರೀಕ್ಷೆಗೊಳಗಾದವರು ಮತ್ತು ಆ ಪೈಕಿ ಸೋಂಕು ದೃಢಪಟ್ಟವರ ಪ್ರಮಾಣದ ಹತ್ತಾರು ಪಟ್ಟು ಮಂದಿ ಸೋಂಕಿತರಾಗಿದ್ದಾರೆ ಎಂಬುದನ್ನು ಹಲವು ಬಾರಿ ಹೇಳಿದ್ದರು.

ಈ  ನಡುವೆ, ಮೊದಲನೇ ಅಲೆಯ ವೇಳೆ ಶೇ.40ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಆ ಪೈಕಿ ಕೆಲವರಲ್ಲಿ ಮಾತ್ರ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ಕೆಲವು ತಿಂಗಳ ಹಿಂದೆ ಕರ್ನಾಟಕದ ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದರು. ಆ ಹಿನ್ನೆಲೆಯಲ್ಲಿ, “ಈ ಬಾರಿ ಕನಿಷ್ಟ ಶೇ.20ರಷ್ಟು ಮಂದಿ ಮತ್ತೆ ಸೋಂಕಿತರಾಗಿದ್ದಾರೆ ಎಂದುಕೊಂಡರೂ, ಒಟ್ಟಾರೆ ಈವರೆಗೆ ಶೇ.60 ಮಂದಿ ಸೋಂಕಿಗೆ ಒಳಗಾಗಿದ್ಧಾರೆ. ಆ ಪೈಕಿ ಬಹುತೇಕರು ಮಕ್ಕಳನ್ನು ಹೊರತುಪಡಿಸಿ ವಯಸ್ಕರು ಮತ್ತು ವಯೋವೃದ್ಧರು ಎಂಬುದು ಗಮನಾರ್ಹ. ಆದರೆ, ಇದೀಗ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೀಗೆ ದೇಶದ ಕೇವಲ 1.8 ಶೇ. ಜನರಿಗೆ ಮಾತ್ರ ಕರೋನಾ ಸೋಂಕು ಬಂದಿದೆ ಎಂದು ಹೇಳಿರುವುದು ಹಿಂದಿನ ಮರ್ಮವೇನು ಗೊತ್ತಾಗುತ್ತಿಲ್ಲ” ಎಂದು ಡಾ ಶ್ರೀನಿವಾಸ ಕಕ್ಕಿಲಾಯ ಕೂಡ ಹೇಳಿದ್ದಾರೆ.

ಐಸಿಎಂಆರ್, ಆರೋಗ್ಯ ಸಚಿವಾಲಯ ಮತ್ತು ಹಲವು ಅನುಭವೀ ತಜ್ಞರ ಇಂತಹ ಅಭಿಪ್ರಾಯಗಳು, ಸಮೀಕ್ಷೆಗಳು ಮತ್ತು ಅಂದಾಜುಗಳೆಲ್ಲವೂ, ಭಾರತದಲ್ಲಿ ಫೆಬ್ರವರಿ-ಮಾರ್ಚ್ ಹೊತ್ತಿಗೆ ಆರಂಭವಾದ ಭೀಕರ ಎರಡನೇ ಅಲೆಗೆ ಮುಂಚಿನ ಪರಿಸ್ಥಿತಿಯ ಕುರಿತು ಎಂಬುದನ್ನು ಗಮನಿಸಬೇಕು. ವಾಸ್ತವವಾಗಿ ಮೊದಲ ಅಲೆಯ ಸಂದರ್ಭದ ಸಮೀಕ್ಷೆ, ಅಂಕಿಅಂಶಗಳ ಆಧಾರಿತ ಈ ಲೆಕ್ಕಾಚಾರಗಳನ್ನು ಕೋವಿಡ್ ಎರಡನೇ ಅಲೆ ತಲೆಕೆಳಗು ಮಾಡಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಪರಿಚಿತರು, ಅಕ್ಕಪಕ್ಕದ ಮನೆ, ಊರುಗಳಲ್ಲಿ ಗಮನಿಸಿದರೂ ಮೊದಲ ಅಲೆಯ ಹೊತ್ತಿಗೆ ಸೋಂಕಿತರಾದವರ ಹತ್ತಾರು ಪಟ್ಟು ಹೆಚ್ಚು ಮಂದಿ ಈ ಬಾರಿ ಸೋಂಕಿತರಾಗಿದ್ದಾರೆ ಮತ್ತು ಆ ಪೈಕಿ ಬಹಳಷ್ಟು ಮಂದಿ ಬಾರದ ಲೋಕಕ್ಕೆ ಹೋಗಿದ್ದಾರೆ ಎಂಬುದನ್ನು ಕಣ್ಣಿಗೆ ರಾಚುವಂತಿದೆ. ಹಾಗಾಗಿ, ಮೊದಲ ಅಲೆಯ ಹೊತ್ತಿನ ಲೆಕ್ಕಾಚಾರಗಳಿಗಿಂತ ಕನಿಷ್ಟ ಐದಾರು ಪಟ್ಟಾದರೂ ಈ ಬಾರಿ ಸೋಂಕು ಮತ್ತು ಸಾವಿನ ಪ್ರಮಾಣ ಹೆಚ್ಚಿದೆ ಎಂಬುದನ್ನು ಹೇಳಲು ಯಾವ ದೊಡ್ಡ ಪರಿಣತಿಯೂ ಬೇಕಾಗಿಲ್ಲ.

ಹಾಗಿದ್ದರೂ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ದೇಶದ ಶೇ.1.8ರಷ್ಟು ಜನರನ್ನು ಹೊರತುಪಡಿಸಿ ಉಳಿದ 98.2ರಷ್ಟು ಜನರನ್ನು ಕರೋನಾದಿಂದ ತಾವು ಬಚಾವು ಮಾಡಿಬಿಟ್ಟಿದ್ದೇವೆ ಎಂದು ಹೇಳಿರುವುದು ಯಾಕೆ? ಒಂದು ಕಡೆ ಪಶ್ಚಿಮಬಂಗಾಳದ ಚುನಾವಣೆಯ ಬಳಿಕ ದೇಶದ ಭೀಕರ ಕರೋನಾ ಸೋಂಕಿಗೆ ಸಿಲುಕಿ ಸಾವುನೋವಿನ ಮಾರಣಹೋಮವನ್ನು ಕಾಣುತ್ತಿದ್ದರೂ ಜನರ ಸಂಕಷ್ಟದ ಕುರಿತು ಬಹುತೇಕ ಮೌನಕ್ಕೆ ಶರಣಾಗಿದ್ದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ದಿಢೀರನೇ ಕರೋನಾ ವಿಷಯದ ಕುರಿತು ಮಾತನಾಡಲು ಆರಂಭಿಸಿದ ದಿನವೇ ಕಾಕತಾಳೀಯ ಎಂಬಂತೆ ಉನ್ನತ ಅಧಿಕಾರಿಯ ಈ ಹೇಳಿಕೆ ಹೊರಬಿದ್ದ ಅರ್ಥವೇನು? ಪ್ರತಿಪಕ್ಷ ಮತ್ತು ದೇಶದ ಜನತೆ ಪ್ರಧಾನಿಯ ಮೌನದ ಬಗ್ಗೆ, ಸಾಂಕ್ರಾಮಿಕ ತಡೆಯುವಲ್ಲಿನ ವೈಫಲ್ಯದ ಬಗ್ಗೆ ಚರ್ಚಿಸುತ್ತಿರುವಾಗ, ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಧಾನಿ ವೈಫಲ್ಯದಿಂದಾಗಿಯೇ ದೇಶ ಸಂಕಷ್ಟಕ್ಕೆ ಸಿಲುಕಿದೆ ಎನ್ನುತ್ತಿರುವಾಗ, ಹೀಗೆ ಶೇ.98.2ರಷ್ಟು ಜನರನ್ನು ಕರೋನಾದ ದಾಳಿಯಿಂದ ಪಾರು ಮಾಡಿದ್ದೇವೆ ಎಂಬ ಹೇಳಿಕೆ ಹೊರಬಿದ್ದ ಮರ್ಮವೇನು? ಎಂಬುದನ್ನು ವಿವರಿಸುವ ಅಗತ್ಯವೇ ಇಲ್ಲ ಅಲ್ಲವೆ?

ಇದೀಗ ದೇಶದಲ್ಲಿ ಕರೋನಾ ಪ್ರಕರಣಗಳ ಇಳಿಮುಖ ಆರಂಭವಾಗುತ್ತಲೇ, ಬಹುತೇಕ ಹಾಸಿಗೆ, ಆಮ್ಲಜನಕಗಳ ಹಾಹಾಕಾರ ತಗ್ಗುತ್ತಲೇ ಕೇಂದ್ರ ಸರ್ಕಾರ, ಪ್ರತಿವಾದಿ ಭಯಂಕರರಾಗಿ, ಕೌಂಟರ್ ನರೇಷನ್ ರಂಗಪ್ರವೇಶಿಸಿದ್ದಾರೆ! ಆದರೆ, ಈಗ ದೇಶದ ಮನೆಮನೆಯ ಅನುಭವಕ್ಕೆ ಬಂದಿರುವ ಕೋವಿಡ್ ಮಹಾಮಾರಿಯ ವಿಷಯದಲ್ಲಿ ಕೂಡ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ, ಹೀಗೆ ಸತ್ಯದ ತಲೆ ಮೇಲೆ ಹೊಡೆದಂತೆ ಹಸೀ ಸುಳ್ಳುಗಳನ್ನು ಹೇಳುವುದು ತೀರಾ ಹಾಸ್ಯಾಸ್ಪದ ಎನಿಸದೇ ಇರದು!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...