ಒಡಿಶಾದ ಬಾಲಸೋರ್ನ ಬಹನಾಗ್ನಲ್ಲಿ ರೈಲ್ವೆ ಅಪಘಾತ ನಡೆದು ಸುಮಾರು 290 ಜನ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಕೇಂದ್ರ ಸರ್ಕಾರ ರೈಲ್ವೆ ಅಪಘಾತಕ್ಕೆ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಲು ಸಿಬಿಐ ತನಿಖೆಗೆ ಆದೇಶ ಮಾಡಿದ್ದಾರೆ. ಬೆಂಗಳೂರಿನಿಂದ ಹೊರಟಿದ್ದ ಹೌರಾ ಎಕ್ಸ್ಪ್ರೆಸ್ನಲ್ಲಿ ನೂರಾರು ಕನ್ನಡಿಗರು ಪ್ರಯಾಣ ಮಾಡಿದ್ದರು. ಅದೃಷ್ಟವಶಾತ್ ಕನ್ನಡಿಗರು ಯಾವುದೇ ಸಮಸ್ಯೆ ಇಲ್ಲದೆ ಪಾರಾಗಿದ್ದರು. ಆದರೂ ಕರ್ನಾಟಕದಿಂದ ಹೊರಟಿದ್ದ ರೈಲು ಆಗಿದ್ದರಿಂದ ಟಿಕೆಟ್ ಬುಕ್ಕಿಂಗ್ ಮಾಡದೆ ಸಾಮಾನ್ಯ ಟಿಕೆಟ್ ಖರೀದಿ ಮಾಡಿಕೊಂಡು ಹೋಗಿದ್ದವರಲ್ಲಿ ಕನ್ನಡಿಗರು ಏನಾದರೂ ಹೋಗಿ, ಅಪಘಾತದಲ್ಲಿ ಸಮಸ್ಯೆಗೆ ಒಳಗಾಗಿದ್ದರೆ ರಕ್ಷಣೆ ಮಾಡಬೇಕು ಅನ್ನೋ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸಚಿವ ಸಂತೋಷ್ ಲಾಡ್ ಅವರನ್ನು ಒಡಿಶಾಗೆ ಕಳುಹಿಸಿದ್ದರು. ಆದರೆ ಪ್ರತಿ ಬಾರಿಯೂ ಸಂತೋಷ್ ಲಾಡ್ರನ್ನು ಕಳಿಸುವುದು ಯಾಕೆ ಅನ್ನೋ ಪ್ರಶ್ನೆ ಬಹುತೇಕ ಜನರಲ್ಲಿ ಕಾಡುವುದಕ್ಕೆ ಶುರುವಾಗಿದೆ.

2013ರಲ್ಲಿಯೂ ಸಂತೋಷ್ ಲಾಡ್ ರಕ್ಷಣಾ ಕಾರ್ಯ..
2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವಾಗಲೇ ಉತ್ತರಾಖಂಡ್ನಲ್ಲಿ ಜಲಪ್ರಳಯ ನಡೆದಿತ್ತು. ತೀರ್ಥಯಾತ್ರೆಗೆ ತೆರಳಿದ್ದ ನೂರಾರು ಕನ್ನಡಿಗರೂ ಸೇರಿದಂತೆ ಸಾವಿರ ಸಾವಿರ ಜನರು ಉತ್ತರಾಖಂಡ್ನಲ್ಲಿ ಸಿಲುಕಿದ್ದರು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ, ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಲಾಡ್ ಅವರನ್ನು ಕಳುಹಿಸಿಕೊಟ್ಟಿದ್ದರು. ಸಂಪೂರ್ಣ ಅಧಿಕಾರಿಗಳ ತಂಡದ ಜೊತೆಗೆ ಹೋಗಿದ್ದ ಸಚಿವ ಸಂತೋಷ್ ಲಾಡ್ ಎಲ್ಲರನ್ನೂ ಸುರಕ್ಷಿತವಾಗಿ ಕರೆದುಕೊಂಡು ಬರುವುದರಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಸಿದ್ದರಾಮಯ್ಯ ಸರ್ಕಾರವೇ ಅಸ್ತಿತ್ವದಲ್ಲಿದ್ದು, ಒಡಿಶಾದಲ್ಲಿ ರೈಲು ದುರಂತ ನಡೆದಿದ್ದು, ಸಚಿವರಾಗಿರುವ ಸಂತೋಷ್ ಲಾಡ್ ರಕ್ಷಣಾ ಕಾರ್ಯಾಚರಣೆಗೆ ಹೋಗಿದ್ದಾರೆ. ಇದು ಹೇಗೆ ಸಾಧ್ಯ..? ಎಲ್ಲಾ ಸಮಯದಲ್ಲೂ ಸಂತೋಷ್ ಲಾಡ್ ಅವರನ್ನೇ ಕಳುಹಿಸುವುದು ಯಾಕೆ..? ಅನ್ನೋ ಕುತೂಹಲ ಹೆಚ್ಚಾಗಿದೆ.

ಕನ್ನಡಿಗರನ್ನು ರಕ್ಷಣೆ ಮಾಡಿದ್ರಾ ಸಚಿವ ಸಂತೋಷ್ ಲಾಡ್..?
ಬಹುತೇಕ ಕನ್ನಡಿಗ ಪ್ರಯಾಣಿಕರು ಯಾವುದೇ ಸಮಸ್ಯೆಗೆ ಒಳಗಾಗಿಲ್ಲ ಅನ್ನೋದು ಸರ್ಕಾರಕ್ಕೂ ಗೊತ್ತಿತ್ತು. ಆದರೆ ಟಿಕೆಟ್ ಪಡೆಯದೆ ಯಾರಾದರೂ ಹೋಗಿದ್ದರೆ..! ಅಥವಾ ರಿಸರ್ವೇಷನ್ ಮಾಡದೆ, ಸಾಮಾನ್ಯ ಟಿಕೆಟ್ ಖರೀದಿ ಮಾಡಿ, ಹೌರಾ ಎಕ್ಸ್ಪ್ರೆಸ್ನಲ್ಲಿ ಪ್ರಯಾಣ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರೆ ರಕ್ಷಣೆ ಮಾಡುವ ಉದ್ದೇಶದಿಂದ ಸಂತೋಷ್ ಲಾಡ್ ಅವರನ್ನು ಕಳಹಿಸಲಾಗಿತ್ತು. ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಿಗೆ ಅಧಿಕಾರಿಗಳ ತಂಡದ ಜೊತೆಗೆ ಭೇಟಿ ನೀಡಿದ್ದ ಸಂತೋಷ್ ಲಾಡ್, ಶವಾಗಾರದಲ್ಲೂ ಪರಿಶೀಲನೆ ನಡೆಸಿದ್ದಾರೆ. ಆದರೆ ರೈಲು ದುರಂತದಲ್ಲಿ ಕನ್ನಡಿಗರು ನೇರವಾಗಿ ಸಂಕಷ್ಟಕ್ಕೆ ಒಳಗಾಗದಿದ್ದರೂ ರೈಲುಗಳ ಸಂಚಾರ ಅಸ್ತವ್ಯಸ್ತ ಆಗಿದ್ರಿಂದ ಕೆಲವು ಪ್ರಯಾಣಿಕರು ಕರ್ನಾಟಕಕ್ಕೆ ಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದವರ ರಕ್ಷಣೆಗೆ ಸರ್ಕಾರ ಕೈ ಚಾಚಿದೆ. ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರದ ಇಬ್ಬರು ಯುವಕರಿಗೆ 20 ಸಾವಿರ ಆರ್ಥಿಕ ಸಹಾಯ ನೀಡಿದ್ದರು. ಇನ್ನು ವಾಲಿಬಾಲ್ 32 ಆಟಗಾರರಿಗೆ ವಿಮಾನದ ಮೂಲಕ ಕರ್ನಾಟಕಕ್ಕೆ ವಾಪಸ್ ಆಗಲು ಸರ್ಕಾರ ವ್ಯವಸ್ಥೆ ಮಾಡಿಕೊಟ್ಟಿತ್ತು.

ಸಂತೋಷ್ ಲಾಡ್ ಆಯ್ಕೆ ಹಿಂದಿರುವ ಮರ್ಮ ಏನು..?
ಧಾರವಾಡದ ಕಲಘಟಗಿ ಕ್ಷೇತ್ರದ ಶಾಸಕರಾಗಿರುವ ಸಚಿವ ಸಂತೋಷ್ ಲಾಡ್, ಉತ್ತಮ ಸಂವಹನಕಾರ ಆಗಿದ್ದಾರೆ. ಇನ್ನು ಮರಾಠಿ ಸಮುದಾಯಕ್ಕೆ ಸೇರಿರುವ ಸಂತೋಷ್ ಲಾಡ್ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಸೇರಿದಂತೆ ಹಲವಾರು ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಇನ್ನು ಸಂತೋಷ್ ಲಾಡ್ ರಾಜ್ಯಮಟ್ಟದಲ್ಲಿ ಬಹುದೊಡ್ಡ ನಾಯಕ ಅಲ್ಲದೆ ಇದ್ದರೂ ಗೆದ್ದ ಕೂಡಲೇ ಸಚಿವ ಸ್ಥಾನ ಫಿಕ್ಸ್ ಆಗುತ್ತದೆ ಅಂದರೆ ನಾಯಕರಿಗೆ ಆತ್ಮೀಯರು ಎನ್ನಬಹುದು. ಅದೇ ರೀತಿ ಸಂತೋಷ್ ಲಾಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮೀಯರಾಗಿದ್ದಾರೆ ಎನ್ನುವುದೇ ಆಗಿದೆ ಎನ್ನಬಹುದು. ಇನ್ನು ಸಂತೋಷ್ ಲಾಡ್ ಕೊಟ್ಟ ಕೆಲಸವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಬರ್ತಾರೆ ಎನ್ನುವುದು ಆಗಿದೆ. ಇದೀಗ ಒಡಿಶಾ ರೈಲು ದುರಂತದ ಬಳಿಕವೂ ಕೊಟ್ಟ ಕೆಲಸ ಉತ್ತಮವಾಗಿ ನಿರ್ವಹಿಸಿದ್ದಾರೆ. ಭುವನೇಶ್ವರದಲ್ಲಿ ಸಭೆ ನಡೆಸಿದ ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯಗೆ ಕಂಪ್ಲೀಟ್ ಮಾಹಿತಿ ಕೊಟ್ಟು ವಾಪಸ್ ಬಂದಿದ್ದಾರೆ.
ಕೃಷ್ಣಮಣಿ