ಹೊಸ ವರ್ಷದ ದಿನ ಬೆಂಗಳೂರಿನ ಕನಕಪುರ ರಸ್ತೆಯ ಕಗ್ಗಲೀಪುರದ ಬಳಿ ಪ್ರದೀಪ್ ಎನ್ನುವ ಉದ್ಯಮಿ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರದೀಪ್ ಅಸಲಿಗೆ ಬಿಜೆಪಿ ಕಾರ್ಯಕರ್ತನಾಗಿದ್ದು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಜೊತೆಗೆ ಓಡಾಡಿಕೊಂಡು ಇದ್ದ ಎನ್ನುವುದು ಗೊತ್ತಾಗಿದೆ. ಇದೇ ವೇಳೆ ಅರವಿಂದ ಲಿಂಬಾವಳಿ ಜೊತೆಗೆ ಐವರು ತನ್ನ ಸಾವಿಗೆ ಕಾರಣ ಎಂದು ಡೆತ್ನೋಟ್ನಲ್ಲಿ ಬರೆದಿರುವುದು ಕಂಡುಬಂದಿದೆ. ಇನ್ನು ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೂಡ ಬಿಜೆಪಿ ಕಾರ್ಯಕರ್ತನೇ ಆಗಿದ್ದನು. ಸಚಿವರಾಗಿದ್ದ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದನು. ಆ ಬಳಿಕ ಕಾಮಗಾರಿಯ ಬಿಲ್ ಬಿಡುಗಡೆ ಮಾಡದೆ ಕಮಿಷನ್ಗಾಗಿ ಈಶ್ವರಪ್ಪ ಅವರಿಂದ ಕಿರುಕುಳ ಆಯ್ತು ಅಂತಾ ಸಂದೇಶ ಕಳುಹಿಸಿ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದನು
ಪ್ರದೀಪ್ ಪತ್ನಿ ನಮಿತಾ ಮೇಲೆ ಖಾಕಿಗೆ ಯಾಕೆ ಅನುಮಾನ..?
ಬೆಂಗಳೂರಿನ ಬೆಳ್ಳಂದೂರಿನಲ್ಲಿ ವಾಸವಾಗಿದ್ದ ಉದ್ಯಮಿ ಪ್ರದೀಪ್ 2017ರಲ್ಲಿ ಪಬ್ ಓಪನ್ ಮಾಡಿದ್ದ. ಸ್ನೇಹಿತರ ಜೊತೆಗೆ ಸೇರಿಕೊಂಡು ಎರಡೂವರೆ ಕೋಟಿ ರೂಪಾಯಿ ಬಂಡವಾಳ ಹಾಕಿದ್ದ. ಆ ಬಳಿಕ ಕೊರೊನಾ ಕಾರಣಕ್ಕಾಗಿ 2019ರಲ್ಲಿ ಪಬ್ ಬಂದ್ ಆಗಿತ್ತು. ಅಂದಿನಿಂದ ಪಬ್ ಓಪನ್ ಆಗಿರಲಿಲ್ಲ, ಇದರ ನಡುವೆ ಸ್ನೇಹಿತರಿಂದ ಹಣದ ಕಿರುಕುಳ ಶುರುವಾಗಿತ್ತು. ಜೊತೆಗೆ ಮನೆಯಲ್ಲೂ ಸಂಕಷ್ಟಗಳು ಎದುರಾಗಿದ್ದವು. ಪತ್ನಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರದೀಪ್ ಪತ್ನಿ ನಮಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಸಾಕ್ಷಿ ಎನ್ನುವಂತೆ ಎಫ್ಐಆರ್ (FIR) ಕಾಪಿ ಕೂಡ ಬಿಡುಗಡೆ ಆಗಿದೆ. ಇದೇ ಕಾರಣಕ್ಕೆ ಬೇಸತ್ತು ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಬಳಿ ನಮಿತಾ ಹೇಳಿದ್ದೇನು ಗೊತ್ತಾ..?
ಬಿಜೆಪಿ ಕಾರ್ಯಕರ್ತ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮಾಜಿ ಸಿಎಂ ಹಾಗು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರದೀಪ್ ನಿವಾಸಕ್ಕೆ ಭೇಟಿ ನೀಡಿದ್ದರು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗು ರಾಮಲಿಂಗಾರೆಡ್ಡಿ ಜೊತೆಗೆ ಭೇಟಿ ಮಾಡಿದ ಸಿದ್ದರಾಮಯ್ಯ, ಪ್ರದೀಪ್ ಪತ್ನಿ ನಮಿತಾ ಹಾಗು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಘಟನೆ ಹಿನ್ನೆಲೆ ಬಗ್ಗೆ ನಮಿತಾ ಜೊತೆಗೆ ಸಿದ್ದರಾಮಯ್ಯ ಸ್ಪಷ್ಟನೆ ಪಡೆದುಕೊಂಡು. ಈ ವೇಳೆ ಸಿದ್ದರಾಮಯ್ಯ ಬಳಿ ನ್ಯಾಯಕ್ಕಾಗಿ ಅವಲತ್ತುಕೊಂಡ ನಮಿತಾ, ಕುಟುಂಬ ಅಂದ ಮೇಲೆ ಸಾಕಷ್ಟು ಘಟನೆಗಳು ನಡೆಯುತ್ತವೆ. ಅದೇ ರೀತಿ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಆಗ ದೂರು ಕೊಟ್ಟಿದ್ದು ಸತ್ಯ. ಆ ಬಳಿಕ ಎಲ್ಲವನ್ನು ಸರಿ ಮಾಡಿಕೊಂಡಿದ್ದೆವು. ಡೆತ್ನೋಟ್ನಲ್ಲಿ ಯಾರ ಯಾರ ಹೆಸರಿದೆ ಅವರನ್ನು ಬಂಧಿಸಬೇಕು. ನಮ್ಮ ಹಣವನ್ನು ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದ್ರು.

ಪೊಲೀಸರು ಯಾಕೆ ಲಿಂಬಾವಳಿಗೆ ನೋಟಿಸ್ ಕೊಟ್ಟಿಲ್ಲ..?
ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಹೀಗಾಗಿ ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿ 6 ಜನರ ವಿರುದ್ಧ FIR ದಾಖಲಾಗಿದೆ. ಆದರೆ ಕಗ್ಗಲೀಪುರ ಪೊಲೀಸರು ಐವರಿಗೆ ಮಾತ್ರ ನೋಟಿಸ್ ನೀಡಿದ್ದು ಅರ ವಿಂದ ಲಿಂಬಾವಳಿ ಅವರಿಗೆ ನೋಟಿಸ್ ಕೊಟ್ಟಿಲ್ಲ, ವಿಚಾರಣೆ ಮಾಡುವ ಗೋಜಿಗೂ ಹೋಗಿಲ್ಲ. ಇದನ್ನು ನೋಡಿದಾಗ ಪೊಲೀಸ್ರು ಉದ್ದೇಶ ಪೂರ್ವಕವಾಗಿ ಪ್ರಬಾವಿ ನಾಯಕನ ಒತ್ತಡಕ್ಕೆ ಮಣಿದು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರಾ..? ಎನ್ನುವ ಅನುಮಾನ ಮೂಡಿಸುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ದಿನವೇ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನೂನು ರೀತಿಯಲ್ಲೇ FIR ದಾಖಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಪೊಲೀಸ್ರು ನಡೆದುಕಕೊಳ್ತಿರೋ ರೀತಿ ನೋಡಿದಾಗ ಡಿಕೆ ಶಿವಕುಮಾರ್ ಹೇಳಿದ್ದು ಸತ್ಯ ಎನಿಸುವಂತಾಗಿದೆ. ಅದೇನೇ ಇರಲಿ, ಬಿಜೆಪಿ ಕಾರ್ಯಕರ್ತರು ಬಿಜೆಪಿ ನಾಯಕರಿಂದಲೇ ಸಮಸ್ಯೆಗೆ ಒಳಗಾಗಿ ಸಾವನ್ನಪ್ಪುತ್ತಿರುವುದು ದುರಂತವೇ ಸರಿ.. ಅಲ್ಲವೇ..?