ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅನ್ನೋದು ಜನರ ಬಳಿ ಇರುವ ಬ್ರಹ್ಮಾಸ್ತ್ರ. ಪ್ರತಿ 5 ವರ್ಷಕ್ಕೆ ಒಮ್ಮೆ ಈ ಅಸ್ತ್ರ ಜನತೆಯ ಕೈಗೆ ಬರುತ್ತದೆ. ಈ ಬ್ರಹ್ಮಾಸ್ತ್ರ ಬಳಕೆ ಮಾಡುವಾಗ ಜನರು ಯೋಚನೆ ಮಾಡಿ ಬಳಸಬೇಕು ಅನ್ನೋದು ಸತ್ಯ. ಆದರೆ ರಾಜಕಾರಣಿಗಳು ಜನರ ದಿಕ್ಕು ತಪ್ಪಿಸಿ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ನಾಯಕರು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನುವುದು ಸತ್ಯ. ಯಾಕಂದರೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳು ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. 40 ಲಕ್ಷ ಲಂಚ ಸ್ವೀಕಾರ ಮಾಡುವಾಗ ರೆಂಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತ್ರ ಕಾಂಗ್ರೆಸ್ಗೆ ವೋಟ್ ಹಾಕ್ಬೇಡಿ, ಕಾಂಗ್ರೆಸ್ಗೆ ಮತ ನೀಡಿದ್ರೆ ದೆಹಲಿ ಪರಿವಾರದ ಎಟಿಎಂ ರೀತಿ ಕೆಲಸ ಮಾಡ್ತಾರೆ. ಜೆಡಿಎಸ್ಗೂ ವೋಟ್ ಹಾಕ್ಬೇಡಿ, ಅವರು 15 ರಿಂದ 20 ಸೀಟ್ ಗೆದ್ದು ಕಾಂಗ್ರೆಸ್ ಜೊತೆಗೆ ಸೇರಿಕೊಳ್ತಾರೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಬಿಜೆಪಿಗೆ ಮತನೀಡಿ ಎಂದು ಭಾಷಣದಲ್ಲಿ ಅಬ್ಬರಿಸಿದ್ದಾರೆ.
ಶಾಸಕ ಮಾಡಾಳು ವಿರೂಪಾಕ್ಷಪ್ಪ ನಾಪತ್ತೆ.. ಅಮಿತ್ ಷಾ ಗಪ್ಚುಪ್..
ಅಮಿತ್ ಷಾ ಬೆಂಗಳೂರಿಗೆ ಆಗಮಿಸುವ ಹಿಂದಿನ ದಿನವೇ ಲೋಕಾಯುಕ್ತರು ದಾಳಿ ನಡೆಸಿ 8 ಕೋಟಿ 10 ಲಕ್ಷ 30 ಸಾವಿರ ಹಣವನ್ನು ಸೀಜ್ ಮಾಡಿದ್ದಾರೆ. ದಾಳಿ ಅಂತಿಮ ಹಂತಕ್ಕೆ ಬರೋದಕ್ಕೆ ಬರೋಬ್ಬರಿ 24 ಗಂಟೆಗಳ ಕಾಲ ಹಿಡಿದಿದೆ. ಬೆಂಗಳೂರು ಮಾತ್ರವಲ್ಲದೆ ದಾವಣೆಗೆರೆಯ ಚನ್ನಗಿರಿ ನಿವಾಸದಲ್ಲೂ ಸರ್ಚಿಂಗ್ ಕೆಲಸ ನಡೆದಿದೆ. ಶ್ರೇಯಸ್ ಕಶ್ಯಪ್ ಎಂಬ ಕೆಮಿಕಲ್ ಕಂಪನಿಯ ಪಾಲುದಾರ ದೂರು ನೀಡಿದ್ದು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿ ಆರು ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಎ1 ಆರೋಪಿ. BWSSB ಚೀಫ್ ಅಕೌಂಟಿಂಗ್ ಆಫೀಸರ್ ಆಗಿರುವ ಪುತ್ರ ಪ್ರಶಾಂತ ಮಾಡಾಳ್ A2 ಆರೋಪಿ, ಇನ್ನು ಕಚೇರಿ ಲೆಕ್ಕಾಧಿಕಾರಿ ಸುರೇಂದ್ರ A3 ಆರೋಪಿ, ಪ್ರಶಾಂತ್ ಮಾಡಾಳ್ ಸಂಬಂಧಿ ಸಿದ್ದೇಶ್ A4 ಆರೋಪಿ ಇನ್ನು ಕರ್ನಾಟಕ ಅರೋಮಸ್ ಕಂಪನಿಯ ಸಿಬ್ಬಂದಿ ಆಲ್ಬರ್ಟ್ ನಿಕೋಲಾಸ್ A5 ಆರೋಪಿ ಮತ್ತು ಗಂಗಾಧರ್ ಎಂಬಾತ A6 ಆರೋಪಿ ಆಗಿದ್ದಾರೆ. ಪ್ರಕರಣದಲ್ಲಿ 8 ಕೋಟಿ ಹಣ ಸೀಜ್ ಆಗ್ತಿದ್ದ ಹಾಗೆ ಅಜ್ಞಾತ ಸ್ಥಳ ಸೇರಿಕೊಂಡ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಧ್ಯಮಗಳ ಎದುರು ಕಾಣಿಸಿಕೊಂಡಿಲ್ಲ, ಬಂಧನ ಭೀತಿಯಿಂದ ಅಡಗಿ ಕುಳಿತಿದ್ದಾರೆ. ಆದರೂ ಅಮಿತ್ ಷಾ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಶಾಸಕರ ಬಗ್ಗೆ ಮೌನ ವ್ರತ ಮಾಡಿದ್ದಾರೆ.
ಶಾಸಕರನ್ನು ಸಮರ್ಥಿಸಿಕೊಳ್ತಿದ್ದಾರೆ ಬಿಜೆಪಿ ಶಾಸಕರು, ಬೆಂಬಲಿಗರು..!

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ 40 ಲಕ್ಷ ಹಣ ಪಡೆಯುತ್ತಿದ್ದದ್ದು ಅಪ್ಪ ಅಧ್ಯಕ್ಷರಾಗಿರುವ ನಿಗಮ ಮಂಡಳಿಯಲ್ಲಿ ನಡೆಸಿದ್ದ ಡೀಲಿಂಗ್ಗೆ ಅನ್ನೋ ವಿಚಾರ ಈಗಾಗಲೆ ಬಹಿರಂಗ ಆಗಿದೆ. ಆದರೂ ಬಿಜೆಪಿಯ ಬಹುತೇಕ ಶಾಸಕ ಮಹಾಶಯರು ಮಾಡಾಳ್ ವಿರೂಪಾಕ್ಷಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳೋದಕ್ಕೆ ಅವರು ಸಚಿವರಲ್ಲ. ದುಡ್ಡಿಗೆ ಸರಿಯಾದ ದಾಖಲೆ ನೀಡಿದ್ರೆ ನಮ್ಮ ನಿಮ್ಮ ಮಾತುಗಳು ಬಂದ್ ಆಗುತ್ತವೆ. ನಾವು ಅದರ ಬಗ್ಗೆ ಕಮೆಂಟ್ ಮಾಡೋಕೆ ಅಗಲ್ಲ. ಮಗ ಸರ್ಕಾರಿ ಅಧಿಕಾರಿ ಆಗಿದ್ದು, ಮಗ ಲಂಚ ತೆಗೆದುಕೊಂಡರೆ ಶಾಸಕರು, ಸಿಎಂ ಯಾಕೆ ರಾಜೀನಾಮೆ ಕೊಡಬೇಕು..? ಎನ್ನುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ. ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಎನ್ನುವುದಕೆ ಆಗಲ್ಲ ಎನ್ನುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ರೀತಿಯಲ್ಲಿ ಕಾನೂನು ಸಚಿವರೇ ಹೇಳಿಕೆ ನೀಡಿದ್ದಾರೆ. ಇನ್ನು ಹಾಸಕ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಕೂಡ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಬ್ಯಾಟ್ ಬೀಸಿದ್ದಾರೆ. ಶಾಸಕ ಮಾಡಾಳು ವಿರೂಪಾಕ್ಷ ಪುತ್ರನ ಆಫೀಸ್ ಹಾಗೂ ಮನೆ ಮೇಲೆ ಲೋಕಾಯುಕ್ತ ರೇಡ್ ಆಗಿದೆ. ಶಾಸಕರ ಮಗ ಅಧಿಕಾರಿಯಾಗಿದ್ದಾನೆ. ಯಾವ ಕಾರಣಕ್ಕೆ ತೆಗೆದುಕೊಂಡಿದ್ದಾನೆ ಅನ್ನೋದು ಇನ್ನೂ ತನಿಖೆನೆ ಆಗಿಲ್ಲ. ಹಣ ಸಿಕ್ಕಿದೆ ಅನ್ನೋದು ಸತ್ಯ. ಶಾಸಕರ ಮಗ ದುಡ್ಡು ತೆಗೆದುಕೊಂಡಿದ್ದಾನೆ ಅಂದರೆ, ಶಾಸಕರ ದುಡ್ಡು ಅಂತ ಏಕೆ ಕಲ್ಪನೆ ಮಾಡಿಕೊಳ್ಳುತ್ತೀರಿ..? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಬಿಜೆಪಿ ನಾಯಕರ ಉದ್ದೇಶ ಏನಿದೆ..? ಹೇಳಿಕೆ ಹಿಂದಿನ ಮರ್ಮವೇನು..?
ಒಂದು ಕಡೆ ಬಿಜೆಪಿ ಶಾಸಕರು ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಮಾತನಾಡಿದರೆ ಮತ್ತೊಂದು ಕಡೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಬಿಜೆಪಿ ಸರ್ಕಾರಕ್ಕೂ ಈ ಹಣಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಲೋಕಾಯುಕ್ತ ಮರು ಸ್ಥಾಪನೆ ಮಾಡಿದ್ದೇ ಈ ರೀತಿಯ ಭ್ರಷ್ಟಾಚಾರ ಹೊರ ಬರುವುದಕ್ಕೆ ಎನ್ನುವ ಮೂಲಕ ಇದು ಭ್ರಷ್ಟಾಚಾರ ಎಂದು ಒಪ್ಪಿಕೊಂಡಿದ್ದಾರೆ. ಶಾಸಕರ ಪುತ್ರ ಹಣ ಪಡೆದ ವಿಚಾರದ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿ. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲ ಮಾಡಿದ್ದ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಗುಮಾನಿ ವ್ಯಕ್ತಪಡಿಸುವ ಮೂಲಕ ಭ್ರಷ್ಟಾಚಾರದಲ್ಲಿ ಓರ್ವ ಶಾಸಕ ಸಿಕ್ಕಿಬಿದ್ದರೂ ಲಾಭ ಮಾಡಿಕೊಳ್ಳುವ ಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಇಂತಹ ಹಗರಣ ಮಾಡಿದೆ, ನಾನು ತನಿಖೆ ಮಾಡಿ ಶಿಕ್ಷೆ ಕೊಡಿಸ್ತೇನೆ ಎನ್ನುವ ಮಾತನ್ನು ಕಳೆದ ಮೂರೂವರೆ ವರ್ಷಗಳಿಂದ ಮಾತನಾಡದ ಸಿಎಂ ಚುನಾವಣೆಗಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಬಹುದು.