ಭಾರತ ಮೂಲದ ಖ್ಯಾತ ಲೇಖಕ ಸಲ್ಮಾನ ರಶ್ದಿ ಮೇಲೆ ನ್ಯೂಯಾರ್ಕ್’ನಲ್ಲಿ ಭೀಕರ ದಾಳಿ ನಡೆದಿದೆ. ಈ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಸಲ್ಮಾನ್ ರಶ್ದಿ, ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ತೀವ್ರತೆಯಿಂದಾಗಿ ಅವರ ಜಠರ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಶ್ದಿ ಅವರ ವಿವಾದಿತ ಕಾದಂಬರಿ ‘The Satanic Verses’ ಬಿಡುಗಡೆಯಾದ ಬಳಿಕ ಅವರಿಗೆ ಜೀವ ಬೆದರಿಕೆಯೂ ಬಂದಿತ್ತು. ಈ ಕಾದಂಬರಿಯನ್ನು ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಿಷೇಧಿಸಲಾಗಿತ್ತು. ಈಗ ಬಹಿರಂಗ ವೇದಿಕೆಯಲ್ಲಿ ರಶ್ದಿ ಅವರ ಮೇಲೆ ದಾಳಿ ನಡೆಸಲಾಗಿದೆ.
ಘಟನೆ ಸಂದರ್ಭದಲ್ಲಿ ಹಾಜರಿದ್ದ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆ ಪ್ರಕಾರ, ಒಬ್ಬ ವ್ಯಕ್ತಿ ವೇದಿಕೆ ಮೇಲೆ ಹಾರಿ ಬಂದು ಸಲ್ಮಾನ್ ರಶ್ದಿ ಅವರ ಎದೆಗೆ ಮತ್ತು ಕುತ್ತಿಗೆಗೆ ಗುದ್ದಿದ್ದಾನೆ. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಪೊಲೀಸರು ದಾಳಿಕೋರರನ್ನು ಬಂಧಿಸಿದ್ದಾರೆ.
ಯಾರು ಈ ದಾಳಿಕೋರ?
ತನಿಖಾ ಸಂಸ್ಥೆಗಳ ಪ್ರಕಾರ ಈ ದಾಳಿಕೋರನ ಹೆಸರು ಹದಿ ಮಟರ್. 24 ವರ್ಷ ಪ್ರಾಯದ ಈತ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದ. ದಾಳಿಯ ವೇಳೆ ಈತ ಬಳಸಿದ್ದ ಆಯುಧದ ಕುರಿತು ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಜೊತೆಗೆ ದಾಳಿ ನಡೆಸುವ ಹಿಂದಿನ ನಿಖರ ಕಾರಣವನ್ನು ಪೊಲೀಸರು ಇನ್ನೂ ತಿಳಿಸಿಲ್ಲ.
“ಚೌಟಾಕ್ವಾ ಇನ್ಸ್ಟಿಟ್ಯೂಷನ್’ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಶ್ದಿ ಅವರು ವೇದಿಕೆ ಹತ್ತಿದ ಕೆಲವೇ ಕ್ಷಣಗಳಲ್ಲಿ ಆರೋಪಿ ವೇದಿಕೆ ಮೇಲೆ ಬಂದು ಕನಿಷ್ಟ ಒಂದು ಬಾರಿ ಕುತ್ತಿಗೆಗೆ ಹಾಗೂ ಕನಿಷ್ಟ ಒಂದು ಬಾರಿ ಹೊಟ್ಟೆಯ ಭಾಗಕ್ಕೆ ಆಯುಧದಿಂದ ಚುಚ್ಚಿದ್ದಾನೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾಳಿ ನಡೆಸಿದ ವ್ಯಕ್ತಿ ಯಾವ ದೇಶದವನೆಂದು ಇನ್ನೂ ತಿಳಿದಿಲ್ಲ. ಈ ಕುರಿತಾಗಿ ಅವನನ್ನೇ ವಿಚಾರಿಸಿದಾಗ “ಅದಿನ್ನೂ ನನಗೆ ತಿಳಿದಿಲ್ಲ” ಎಂದು ಉತ್ತರಿಸಿದ್ದಾನೆ. ಘಟನೆ ನಡೆದ ಸ್ಥಳದಲ್ಲಿ ಒಂದು ಬ್ಯಾಗ್ ಮತ್ತು ಅದರಲ್ಲಿ ಕೆಲವು ಎಲೆಕ್ಟ್ರಾನಿಕ್ ಸಾಮಗ್ರಿಗಳು ಪತ್ತೆಯಾಗಿವೆ. ಆರೋಪಿಯು ಒಬ್ಬನೇ ಈ ಕೃತ್ಯ ನಡೆಸಿದ್ದು, ಯಾವುದೇ ತಂಡ ಇದರಲ್ಲಿ ಭಾಗಿಯಾಗಿರುವ ಕುರಿತು ಸಂಶಯವಿಲ್ಲ ಎಂದು ಅವರು ಹೇಳಿದ್ದಾರೆ.