ಮೂಲ : ನಿಖಿಲ್ ಮಾಜಿತಿಯಾ
What’s stopping India’s judicial infrastructure upgrade?
The absence of Centre-state unity
ದ ಪ್ರಿಂಟ್
ಅನುವಾದ : ನಾ ದಿವಾಕರ
ಪ್ರತಿ ಬಾರಿ ಹೊಸ ಮುಖ್ಯ ನ್ಯಾಯಾಧೀಶರು ಅಧಿಕಾರ ವಹಿಸಿಕೊಂಡಾಗಲೂ, ಭಾರತದ ನ್ಯಾಯಾಂಗ ಇಲಾಖೆಯ ಮೂಲ ಸೌಕರ್ಯಗಳ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. 2010ರಲ್ಲಿ ನ್ಯಾಯಮೂರ್ತಿ ಎಸ್ ಹೆಚ್ ಕಪಾಡಿಯಾ, ಲಭ್ಯವಿದ್ದ ಮೂಲ ಸೌಕರ್ಯಗಳ ಪರಿಸ್ಥಿತಿಗಳನ್ನು ಅವಲೋಕನ ಮಾಡಲು ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದರು. ತನ್ಮೂಲಕ ಜಿಲ್ಲಾ ನ್ಯಾಯಾಂಗ ಇಲಾಖೆಯ ಭವಿಷ್ಯದ ಅವಶ್ಯಕತೆಗಳನ್ನು ಮನಗಂಡಿದ್ದರು. ಅಂದಿನಿಂದಲೂ, ನ್ಯಾಯಾಂಗ ಇಲಾಖೆಯ ಮೂಲ ಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದ್ದು, ಹೊಸ ಮುಖ್ಯ ನ್ಯಾಯಾಧೀಶರು ಅಧಿಕಾರ ವಹಿಸಿಕೊಂಡಾಗಲೆಲ್ಲಾ ಮುನ್ನೆಲೆಗೆ ಬರುತ್ತದೆ.
ಮ್ಯಾಜಿಸ್ಟ್ರೇಟರುಗಳು ಎಂತಹ ದುರವಸ್ಥೆಯ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನ್ಯಾ ಟಿ.ಎಸ್. ಥಾಕುರ್ ಅವರು ಸಾರ್ವಜನಿಕವಾಗಿಯೇ ವಿಷಾದ ವ್ಯಕ್ತಪಡಿಸಿದ್ದರು. ಆನಂತರ ನ್ಯಾ ರಂಜನ್ ಗೊಗೊಯಿ ಜಿಲ್ಲಾ ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಯಶಸ್ವಿಯಾಗಿ ಸುಧಾರಣೆ ತಂದಿದ್ದರು. ನ್ಯಾ ಎನ್.ವಿ. ರಮಣ, ರಾಷ್ಟ್ರೀಯ ನ್ಯಾಯಿಕ ಮೂಲ ಸೌಕರ್ಯ ಪ್ರಾಧಿಕಾರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚರ್ಚೆಯನ್ನೂ ಹುಟ್ಟುಹಾಕಿದ್ದರು. ಆದರೆ ಇದನ್ನು ತಿರಸ್ಕರಿಸಲಾಗಿತ್ತು. ಈಗ ನ್ಯಾ ಡಿ.ವೈ ಚಂದ್ರಚೂಡ್ ಪುನಃ ಜಿಲ್ಲಾ ನ್ಯಾಯಾಂಗ ಇಲಾಖೆಯನ್ನು ಬಲಪಡಿಸುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಏರ್ಪಡಿಸಿದ್ದ ಸನ್ಮಾನ ಸಮಾರಂಭವೊಂದರಲ್ಲಿ ಮಾತನಾಡುತ್ತಾ ನ್ಯಾ ಡಿ.ವೈ ಚಂದ್ರಚೂಡ್ ಜಿಲ್ಲಾ ನ್ಯಾಯಾಲಯಗಳಲ್ಲಿರುವ ದುರವಸ್ಥೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಈ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳಿಗೆ ಇಡೀ ದಿನದಲ್ಲಿ ಶೌಚಾಲಯದ ವ್ಯವಸ್ಥೆಯೂ ಇಲ್ಲದಿರುವುದು ನಿರಂತರ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವೂ ಸಹ ಸಮರ್ಪಕ ಹಣಕಾಸು ನಿಧಿ ಒದಗಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. 1993-94 ರಿಂದಲೂ ಕೇಂದ್ರ ಸರ್ಕಾರದ, ಕೇಂದ್ರೀಯ ಪ್ರಾಯೋಜಿತ ಕಾರ್ಯಕ್ರಮವು (ಸಿಎಸ್ಎಸ್) ಜಾರಿಯಲ್ಲಿದ್ದು, ನ್ಯಾಯಾಂಗ ಇಲಾಖೆಯ ಮೌಲ್ಯ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಯತ್ನಿಸಲಾಗುತ್ತಿದೆ. ಈ ಯೋಜನೆಯ ಮೂಲಕ ಕೇಂದ್ರವು ಆಯಾ ರಾಜ್ಯ ಸರ್ಕಾರಗಳು ನೀಡುವ ಚಂದಾ ಹಣದೊಂದಿಗೆ ಇನ್ನೂ ಹೆಚ್ಚಿನ ನಿಧಿಯನ್ನು ಮೀಸಲಿಡುತ್ತಿದೆ. ಕೇಂದ್ರ ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ನಿಧಿಯನ್ನು ಒದಗಿಸುತ್ತವೆ.( ಈಶಾನ್ಯ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದು 90:10 ಅನುಪಾತದಲ್ಲಿರುತ್ತದೆ). ಇದರಲ್ಲೇ ಪ್ರಾಯೋಜಿತ ಯೋಜನೆಗಳ ಪ್ರಗತಿಯ ಮೇಲ್ವಿಚಾರಣೆ ಮಾಡಲು ಅವಶ್ಯವಾದ ಮೊತ್ತವೂ ಸೇರಿರುತ್ತದೆ. ಈ ಯೋಜನೆಯು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಮೇಲ್ವಿಚಾರಣೆಯಲ್ಲಿದ್ದರೂ ಜಿಲ್ಲಾ ನ್ಯಾಯಾಲಯಗಳ ಭೌತಿಕ ಸ್ಥಿತಿಗತಿಗಳಲ್ಲಿ ಯಾವುದೇ ಗಣನೀಯ ಸುಧಾರಣೆಗಳು ಕಂಡುಬರುತ್ತಿಲ್ಲ. ಹಾಗಾಗಿಯೇ ಪ್ರತಿ ಬಾರಿಯೂ ಮುಖ್ಯ ನ್ಯಾಯಾಧೀಶರು ಅಧಿಕಾರ ವಹಿಸಿಕೊಂಡಾಗ ಈ ದುರವಸ್ಥೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿರುತ್ತಾರೆ.
ಇದಕ್ಕೆ ಕಾರಣಗಳನ್ನು ಶೋಧಿಸುವುದು ಕಷ್ಟವೇನಲ್ಲ. ಈ ಯೋಜನೆಯಡಿ ಮಂಜೂರು ಮಾಡಲಾಗುವ ಬಹುಪಾಲು ನಿಧಿಯು ಬಳಸದೆ ಹಾಗೆಯೇ ಉಳಿದುಕೊಂಡಿರುತ್ತದೆ ಏಕೆಂದರೆ ರಾಜ್ಯಗಳು ತಮ್ಮ ಪಾಲಿನ ನಿಧಿಯನ್ನು ಒದಗಿಸುವುದಿಲ್ಲ. ಹಾಗಾಗಿ ವಾರ್ಷಿಕ ಬಜೆಟ್ನಲ್ಲಿ ಮಾಡುವ ಮಂಜೂರಾತಿಯ ಸಮಯ ಮೀರಿಹೋಗುತ್ತದೆ. ಒಂದು ಸಣ್ಣ ಉದಾಹರಣೆಯಾಗಿ ನೋಡುವುದಾದರೆ, 2019-20ರಲ್ಲಿ ಈ ಯೋಜನೆಗೆ 981.98 ಕೋಟಿ ರೂಗಳನ್ನು ಮಂಜೂರು ಮಾಡಲಾಗಿತ್ತು. ಅಂತಿಮವಾಗಿ ಕೇವಲ 84.9 ಕೋಟಿ ರೂಗಳನ್ನು ಮಾತ್ರವೇ ಖರ್ಚು ಮಾಡಲಾಗಿತ್ತು. ಶೇ 91.36ರಷ್ಟು ಹಣ ಖರ್ಚಾಗದೆಯೇ ಉಳಿದುಕೊಂಡಿತ್ತು. 2020-21ರಲ್ಲಿ ಒಟ್ಟು 594.36 ಕೋಟಿ ರೂಗಳನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ ರಾಜಸ್ಥಾನ ಸರ್ಕಾರವು 41.28 ಕೋಟಿ ರೂಗಳನ್ನು ಬಳಸುವ ಮೂಲಕ ಮೊದಲ ಸ್ಥಾನದಲ್ಲಿತ್ತು, ಆದಾಗ್ಯೂ ಬಳಕೆಯಾಗದ ಕಾರಣ ಬಹುಪಾಲು ಮಂಜೂರಾದ ನಿಧಿಯು ವ್ಯರ್ಥವಾಗಿತ್ತು. ಸಿಎಸ್ಎಸ್ ಯೋಜನೆಯು 2021ರಲ್ಲಿ ಕೊನೆಯಾಗಿದ್ದು, ಕೆಂಧ್ರ ಸರ್ಕಾರ ಇನ್ನೂ ಐದು ವರ್ಷಗಳ ಕಾಲ ಮುಂದುವರೆಸಿದೆ. ಪ್ರಸಕ್ತ ಬಜೆಟ್ನಲ್ಲಿ 9000 ಕೋಟಿ ರೂಗಳನ್ನು ಮಂಜೂರು ಮಾಡಿದ್ದು, ಕೇಂದ್ರ ಸರ್ಕಾರದ ಪಾಲು 5307 ಕೋಟಿ ರೂಗಳಷ್ಟಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಮಹತ್ವದ ಹೆಚ್ಚಳವಾಗಿದೆ. ಒಟ್ಟಾರೆ ಹಿಂದಿನ ವರ್ಷಗಳಲ್ಲಿ 8758.11 ಕೋಟಿ ರೂಗಳನ್ನು ಮಂಜೂರು ಮಾಡಲಾಗಿತ್ತು.
ಈ ಯೋಜನೆಯ ಆಮೆಗತಿಯ ಪ್ರಗತಿಗೆ ಮೂಲತಃ ಎರಡು ಕಾರಣಗಳಿವೆ. ಮೊದಲನೆಯದು, ಯೋಜನೆಗೆ ಏಕ ಯಜಮಾನಿಕೆ ಇಲ್ಲ. ಸಹಯೋಗಿ ಏಜೆನ್ಸಿಗಳು ಇಲ್ಲದಿರುವುದರಿಂದ ಯಶಸ್ವಿ ಅನುಷ್ಟಾನವೂ ಕಷ್ಟವಾಗುತ್ತದೆ. ಸಿಎಸ್ಎಸ್ ಯೋಜನೆಯು ಪ್ರಸ್ತುತ ಸ್ವರೂಪದಲ್ಲಿ ಪ್ರತ್ಯೇಕವಾದ ರಾಜ್ಯ ಹಾಗೂ ಕೇಂದ್ರ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ಹೊಂದಿರುತ್ತದೆ. ಎರಡನೆ ಕಾರಣವೆಂದರೆ, ಕೇಂದ್ರೀಯ ಸಮಿತಿಯಲ್ಲಿ ಸಾಂಸ್ಥಿಕವಾಗಿ ನ್ಯಾಯಾಂಗಕ್ಕೆ ಪ್ರಾತಿನಿಧಿತ್ವವೇ ಇಲ್ಲ. ಹಾಗಾಗಿ, ಯೋಜನೆಯ ಆತ್ಯಂತಿಕ ಬಳಕೆದಾರ ವಲಯವೇ ಇಡೀ ಪ್ರಕ್ರಿಯೆಯಿಂದ ಮರೆಯಾಗಿದೆ.
ಕಾರ್ಯ ನಿರ್ವಹಣೆಗಾಗಿ ಒಂದು ಮಧ್ಯವರ್ತಿ ಸಂಸ್ಥೆ
ಒಂದು ನಿರ್ದಿಷ್ಟ ಮಧ್ಯವರ್ತಿ ಸಂಸ್ಥೆ ಇಲ್ಲದಿರುವುದರಿಂದ ಯೋಜನೆಯ ಅಲ್ವಾವಧಿಯ ಮತ್ತು ದೀರ್ಘಾವಧಿಯ ಉದ್ದೇಶಗಳನ್ನು ಸಾಕಾರಗೊಳಿಸುವುದು ದುಸ್ತರವಾಗುತ್ತದೆ. ಅಲ್ಪಾವಧಿಯ ಉದ್ದೇಶಗಳಲ್ಲಿ ಪ್ರಮುಖವಾಗಿ ನ್ಯಾಯಾಂಗ ಇಲಾಖೆಯ ಮಂಜೂರಾಗಿರುವ ಸಾಮರ್ಥ್ಯಕ್ಕೆ ಬದಲು ಹಾಲಿ ಲಭ್ಯವಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ನ್ಯಾಯಾಲಯ ಕೊಠಡಿಗಳನ್ನು, ದಾಖಲೆ ಕಡತಗಳ ಕೊಠಡಿಗಳನ್ನು, ಗಣಕಯಂತ್ರ ಕೊಠಡಿಗಳನ್ನು ನಿರ್ಮಿಸುವುದು ಈ ಎಲ್ಲ ಕೆಲಸಗಳು, ಯೋಜನೆಯ ಪಾಲುಗಾರರು ಸಕಾಲದಲ್ಲಿ ಕಾರ್ಯ ನಿರ್ವಹಿಸುವಂತೆ ಮೇಲ್ವಿಚಾರಣೆ ಮಾಡುವ ಹಾಗೂ ಪ್ರಗತಿಯನ್ನು ನಿರ್ವಹಿಸುವ ಒಂದು ನಿರ್ದಿಷ್ಟ ಮಧ್ಯವರ್ತಿ ಸಂಸ್ಥೆ ಇಲ್ಲದಿರುವುದರಿಂದ ಹಿನ್ನಡೆ ಅನುಭವಿಸುತ್ತಿವೆ. ಅಲ್ಪಾವಧಿಯ ಉದ್ದೇಶಗಳನ್ನು ನಿರ್ಧರಿಸುವ ನಿಟ್ಟಿನಲ್ಲೂ ಸಹ ಸಮಸ್ಯೆಗಳಿದ್ದು, ಪ್ರತಿಯೊಂದು ರಾಜ್ಯವೂ ವಿಭಿನ್ನವಾದ ಅವಶ್ಯಕತೆಗಳನ್ನು ಹೊಂದಿರುತ್ತವೆ. ಈ ಅವಶ್ಯಕತೆಗಳು ನ್ಯಾಯಾಂಗ ಇಲಾಖೆಯ ರಾಷ್ಟ್ರೀಯ ಉದ್ದೇಶಗಳಿಗೆ ವ್ಯತಿರಿಕ್ತವಾಗಿ ಕಾರ್ಯಗತಗೊಳ್ಳುತ್ತಿರುತ್ತವೆ.
ಉದಾಹರಣೆಗೆ, ಭಾರತದಲ್ಲಿರುವ ಶೇ 27ರಷ್ಟು ನ್ಯಾಯಾಲಯದ ಶೇ 27ರಷ್ಟು ನ್ಯಾಯಾಸ್ಥಾನಗಳಲ್ಲಿ ಗಣಕಯಂತ್ರವನ್ನು ನ್ಯಾಯಾಧೀಶರ ಮೇಜಿನ ಮೇಲೆ ಇರಿಸಲಾಗಿದ್ದು, ಅಲ್ಲಿಂದಲೇ ವಿಡಿಯೋ ಸಮಾಲೋಚನೆಯ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದು ಜಿಲ್ಲಾ ನ್ಯಾಯಾಂಗ ಇಲಾಖೆಯ ಡಿಜಿಟಲೀಕರಣ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದ ವಿದ್ಯುನ್ಮಾನ ಸಮಿತಿಯ ಧ್ಯೇಯೋದ್ದೇಶಗಳಿಗೆ ಪೂರಕವಾಗಿದೆಯೇ ? ಈ ಕ್ರಮಗಳು ಅಲ್ಪ ಕಾಲಿಕ ಉದ್ದೇಶಗಳಾಗುವುದೋ, ದೀರ್ಘಾವಧಿಯ ಉದ್ದೇಶಗಳಾಗುವುದೋ ? ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೂಲ ಸೌಕರ್ಯಗಳು ನ್ಯಾಯಾಂಗ ಇಲಾಖೆಯ ಮೂಲ ಸೌಕರ್ಯಗಳ ಒಂದು ಭಾಗವಾಗಿಯೇ ಇರುವುದರಿಂದ ದುಡಿಮೆ ಮತ್ತು ಸಂಪನ್ಮೂಲಗಳ ದ್ವಿಗುಣೀಕರಣವಾಗುವುದೇ ?
ಭವಿಷ್ಯತ್ತಿಗಾಗಿ ಸೂಕ್ತ ಯೋಜನೆಯ ಕೊರತೆಯೂ ಸಹ ತನ್ನದೇ ಆದ ಅನಾಹುತಗಳನ್ನು ಉಂಟುಮಾಡುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೇಂದ್ರ ಯೋಜನೆಯು ಭವಿಷ್ಯದ ಅಗತ್ಯತೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿಲ್ಲ. ಆದ್ದರಿಂದ ಮುಂದಿನ 10-20 ವರ್ಷಗಳಲ್ಲಿ ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ಕೆಲಸದ ಹೊರೆಯ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಏತನ್ಮಧ್ಯೆ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಲಿದೆ. ಅಂದರೆ ನಮ್ಮ ಜನಸಂಖ್ಯೆಯ ಬಹುಪಾಲು ಜನತೆಗೆ ಅಪೇಕ್ಷಿತ ಮಟ್ಟದಲ್ಲಿ ನ್ಯಾಯದ ಲಭ್ಯತೆ ಒದಗುವುದಿಲ್ಲ. ಇವೆಲ್ಲವೂ ಸಹ ಸಮಾಜದ ಮೇಲೆ ಭಿನ್ನ ರೀತಿಯಲ್ಲಿ ಪರಿಣಾಮವನ್ನು ಬೀರುತ್ತವೆ. 2016ರ ಒಂದು ಅಧ್ಯಯನದಲ್ಲಿ, ಮೊಕದ್ದಮೆಗಳ ವಿಲೇವಾರಿಯಲ್ಲಿ ಉಂಟಾಗುವ ವಿಳಂಬದಿಂದಲೇ ಭಾರತದ ಜಿಡಿಪಿಯ ಮೇಲೆ ಶೇ 0.5ರಷ್ಟು ಹೊರೆ ಬೀಳುತ್ತದೆ ಎಂದು ಹೇಳಲಾಗಿದೆ. ದೀರ್ಘಾವಧಿಯ ಯೋಜನೆಯೂ ಸಹ ನ್ಯೂನತೆಗಳನ್ನು ಎದುರಿಸುತ್ತಿದ್ದು, ಒಂದು ನಿರ್ದಿಷ್ಟ ಸಾಂಸ್ಥಿಕ ದೃಷ್ಟಿಕೋನದ ಆಲೋಚನೆ, ಯೋಜನೆ ಅಥವಾ ಅನುಷ್ಟಾನಗಳು ಸಾಧ್ಯವಾಗುತ್ತಿಲ್ಲ.
ನ್ಯಾಯಮೂರ್ತಿ ಎನ್.ವಿ. ರಮಣ ಅವರ ಪ್ರಸ್ತಾವನೆಯಂತೆ ಒಂದು ಶಾಶ್ವತವಾದ ಸಂಸ್ಥೆಯನ್ನು ಸ್ಥಾಪಿಸುವುದರಿಂದ ಸಂಸಂಜಕ ಧೋರಣೆಯು ಸಾಧ್ಯವಾಗಲಿದ್ದು, ಇದರಿಂದ ರಾಜ್ಯಗಳು ತಮ್ಮ ನ್ಯಾಯಾಂಗ ಇಲಾಖೆಯ ಮೂಲ ಸೌಕರ್ಯಗಳ ಉನ್ನತೀಕರಣಕ್ಕಾಗಿ, ಸ್ಥಾಪನೆಗಾಗಿ ಕಾರ್ಯಯೋಜನೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಗೆಯೇ ಪ್ರಾಧಿಕಾರದಲ್ಲಿ ತಮ್ಮ ಪಾಲಿನ ನಿಧಿಯನ್ನು ಠೇವಣಿ ಮಾಡುವುದಕ್ಕೂ ಅನುಕೂಲವಾಗುತ್ತದೆ. ವಾಸ್ತವವಾಗಿ ಚಟುವಟಿಕೆಗಳನ್ನು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲೇ ನಡೆಸುವುದಾದರೂ, ಪ್ರಾಧಿಕಾರ ಇರುವುದರಿಂದ, ಧ್ಯೇಯೋದ್ದೇಶಗಳನ್ನು ರೂಪಿಸಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಧ್ಯವರ್ತಿ ಸಂಸ್ಥೆ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಭಾರತ 2026ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಿ ಸುಸ್ಥಿರತೆಯನ್ನು ಸಾಧಿಸುವ ಉದ್ದೇಶವನ್ನು ಸಕಾರಗೊಳಿಸಬೇಕಾದಲ್ಲಿ, ಒಂದು ದೃಢವಾದ ಹಾಗೂ ಶಾಶ್ವತವಾದ ನ್ಯಾಯಾಂಗ ಇಲಾಖೆಯ ಮೌಲ್ಯ ಸೌಕರ್ಯಗಳನ್ನು ಒದಗಿಸುವುದು ಅತ್ಯವಶ್ಯ. ಈ ಮಾರ್ಗವನ್ನು ಸಾಕಾರಗೊಳಿಸಲು ನ್ಯಾಯಾಂಗದ ಸಹಭಾಗಿತ್ವದೊಂದಿಗೇ ಸಾಗಬೇಕಾಗಿದೆ.






