ಪಶ್ಚಿಮ ಬಂಗಾಳದಲ್ಲಿ BJP ಯಿಂದ TMC ಯತ್ತ ಮತ್ತೆ ವಲಸೆ ನಾಯಕರ ಚಿತ್ತ

ಪಶ್ಚಿಮ ಬಂಗಾಳದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದ್ದು, ಪಂಚ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಅಧಿಕಾರದ ಆಸೆಗೋ ಅಥವಾ ಆಮಿಷಕ್ಕೋ ಒಳಗಾಗಿ ತೃಣ ಮೂಲ ಕಾಂಗ್ರೆಸ್ನಿಂದ ಹಲವು ನಾಯಕರು ಬಿಜೆಪಿಗೆ ವಲಸೆ ಬಂದಿದ್ದರು. ಇದೀಗ ಅದೇ ನಾಯಕರು ಆಡಳಿತ ಪಕ್ಷ ಟಿಎಂಸಿ ಕಡೆಗೆ ಒಲವು ತೋರಿ ಬಿಜೆಪಿಯನ್ನು ಕೆರಳಿಸಿದ್ದಾರೆಂಬ ಸುದ್ದಿ ಹಬ್ಬಿದೆ.

2021 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಹರಸಾಹಸ ಮಾಡಿತ್ತು. ಆ ವೇಳೆ ಕರೋನಾ ಎರಡನೇ ಅಲೆಯ ಭೀಕರತೆಯ ಬಗ್ಗೆ ತಜ್ಞರು ವರದಿ ನೀಡಿದ್ದರೂ ಕೂಡ ರಾಜಕೀಯ ಪಕ್ಷಗಳು ಕ್ಯಾರೇ ಅನ್ನದೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದವು, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಾಮ್ರಾಜ್ಯವನ್ನು ಅಡಗಿಸಿ, ಕಮಲ ಅರಳಿಸಲು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ರಾಷ್ಟ್ರೀಯ ಪ್ರಭಾವಿ ನಾಯಕರು ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ಚುನಾವಣಾ ರ್ಯಾಲಿಗಳನ್ನು ನಡೆಸಿ ಹಲವು ಟಿಎಂಸಿ ನಾಯಕರನ್ನು ಪಕ್ಷದತ್ತ ಬರ ಮಾಡಿಕೊಂಡು ಯಶಸ್ವಿಯಾಗಿದ್ದರು.

ವಲಸೆ ನಾಯಕರಿಂದಲೇ ಬಿಜೆಪಿಗೀಗ ಕುತ್ತು.

ಹಿಂದೆ ಟಿಎಂಸಿಯ ಪ್ರಬಲ ನಾಯಕರಾದ ಹಾಗು ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಸುವೆಂದು ಅಧಿಕಾರಿ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ನಿಂತು ಗೆಲುವು ಸಾಧಿಸಿದ್ದರೂ ರಾಜ್ಯದಲ್ಲಿ ಬಹುಮತ ಟಿಎಂಸಿ ಕಡೆಗೆ ಒಲಿದು ಸತತ ಮೂರನೇ ಬಾರಿ ದೀದಿ ಅಧಿಕಾರದ ಗದ್ದುಗೆಯೇರಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಿದ್ದ ಬಿಜೆಪಿಗೀಗ ಅದೇ ಸಮಸ್ಯೆಯಾಗಿ ಪರಿಣಮಿಸಿದೆ. ಬಿಜೆಪಿಯಿಂದ ಸುಮಾರು 24ಕ್ಕೂ ಹೆಚ್ಚು ಶಾಸಕರು ಟಿಎಂಸಿಗೆ ವಲಸೆ ಹೋಗಲು ನಿರ್ಧರಿಸಿದ್ದಾರೆಂಬ ಹೊಸ ಸುದ್ದಿ ಹರಿದಾಡುತ್ತಿದೆ.

ಟಿಎಂಸಿ ಗೆ ಬಿಜೆಪಿ ನಾಯಕರ ವಲಸೆ ಆರಂಭವಾಗಿದೆ ಎಂಬುವುದಕ್ಕೆ ಪುಷ್ಟಿ ನೀಡಿದ್ದು, ಕೆಲವು ದಿನಗಳ ಹಿಂದೆ ಬಿಜೆಪಿಯ ಹಿರಿಯ ನಾಯಕ ಮುಕುಲ್ ರಾಯ್ ಮತ್ತು ಪುತ್ರ ಸುಭ್ರಾಂಘ್ಷು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬ್ಯಾನರ್ಜಿಯ ಆಪ್ತರಾದ ಮುಕುಲ್ ರಾಯ್ 2017 ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಚುನಾವಣೆಯಲ್ಲಿ ಬಿಜೆಪಿ ಸೋತ ಕಾರಣಕ್ಕೆ ಮುಕುಲ್ ರಾಯ್ ಇದೀಗ ಪಕ್ಷ ತೊರೆದಿಲ್ಲ, ಬದಲಾಗಿ ದಿನ ಕಳೆದಂತೆ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಾದ ಮುಕಲ್ ರಾಯ್ ಅವರನ್ನು ಸಾಕಷ್ಟು ವಿಚಾರದಲ್ಲಿ ಮೂಲೆ ಗುಂಪಾಗಿ ಮಾಡಲಾಗಿತ್ತು.ಅಸಮಧಾನಗೊಂಡು ಮತ್ತೆ ಟಿಎಂಸಿ ಗೂಡಿಗೆ ಮರಳಿದ್ದಾರೆ ಎನ್ನಲಾಗಿದೆ. “ನಾನು ಬಿಜೆಪಿಯಲ್ಲಿರಲು ಸಾಧ್ಯವಿಲ್ಲ, ಹಳೆಯ (ಟಿಎಂಸಿ) ಸಹೋದ್ಯೋಗಿಗಳನ್ನು ನೋಡುವುದರಲ್ಲಿ ನನಗೆ ತುಂಬಾ ಖುಷಿ ಇದೆ. ಸಿಎಂ ಮಮತಾ ಬ್ಯಾನರ್ಜಿ ಬಂಗಾಳದ ಹಾಗು ಭಾರತದ ಪ್ರಬಲ ಏಕೈಕ ನಾಯಕಿ ಎಂದು ಬಣ್ಣಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದವರಿಗೆ ಈ ಎಲ್ಲಾ ಬೆಳವಣಿಗೆಗಳು ಮುಜುಗರಕ್ಕೀಡು ಮಾಡಿದಂತಿದೆ.

ರಾಜ್ಯಪಾಲರ ಭೇಟಿ- ಅನೇಕ ನಾಯಕರು ಗೈರು

ಜೂನ್ 14 ರಂದು ವಿರೋಧ ಪಕ್ಷದ ನಾಯಕ (ಬಿಜೆಪಿ) ಸುವೆಂಧು ಅಧಿಕಾರಿ ರಾಜ್ಯಪಾಲ ಭೇಟಿಯಾಗಿದ್ದರು. ಆ ವೇಳೆ ಮೂರನೇ ಒಂದು ಭಾಗ ಅಂದರೆ 74 ಶಾಸಕರಲ್ಲಿ 24 ಮಂದಿ ಗೈರಾಗಿದ್ದರು. ಇದು ಟಿಎಂಸಿ ಗೆ ವಲಸೆ ಹೋಗುತ್ತಾರೆಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಸುವೆಂಧು ಅಧಿಕಾರಿಯ ನಾಯಕತ್ವ ಸ್ವೀಕರಿಸಲು ಕೆಲವು ಶಾಸಕರು ಸಿದ್ಧರಿಲ್ಲ ಎಂಬುವುದನ್ನು ತೋರ್ಪಡಿಸಿದಂತಿದೆ.

ಮಮತಾ ಬ್ಯಾನರ್ಜಿ ಖಡಕ್ ವಾರ್ನ್

ವಲಸೆ ಹೋದ ಕೆಲವು ನಾಯಕರಿಗೆ ಪಕ್ಷಕ್ಕೆ ಮತ್ತೆ ಮರಳುವ ಮನಸ್ಸಿದೆ ಎಂಬ ವಿಚಾರ ತಿಳಿದು ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ “ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಬಗ್ಗೆ ಅಪಹಾಸ್ಯ ಮಾಡಿ, ಕೀಳಾಗಿ ಮಾತನಾಡಿದವರನ್ನು ಮರಳಿ ಬರ ಮಾಡಿಕೊಳ್ಳುವುದಿಲ್ಲ” ಎಂದು ಸ್ಪಷ್ಟ ಪಡಿಸಿದ್ದಾರೆ. ಆದರೆ ಒಳೊಳಗೆ ಟಿಎಂಸಿ ನಾಯಕರು ಬಿಜೆಪಿ ನಾಯಕರನ್ನು ಸೆಳೆಯುವ ತಂತ್ರಗಾರಿಕೆ ಉಪಯೋಗಿಸುತ್ತಿದ್ದಾರೆಂಬ ಆರೋಪ ಕೂಡ ಕೇಳಿ ಬರುತ್ತಿದೆ.

ಪಕ್ಷಾಂತರ ವಿಚಾರ ತಿಳಿದು ಸಿಡಿದೆದ್ದ ಸುವೆಂಧು ಅಧಿಕಾರಿ

‘ತೋಡ್ನಾ-ಜೋಡ್ನಾ (ಕಳಿಸುವುದು-ಕರೆದುಕೊಳ್ಳುವುದು)’ ಟಿಎಂಸಿಯ ಕೊಳಕು ರಾಜಕೀಯದ ಒಂದು ಭಾಗವಾಗಿದೆ. ಇಂತಹ .ಕೆಲಸವನ್ನು ಹತ್ತು ವರ್ಷದಿಂದ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಅದನ್ನು ನಾವು ವಿರೋಧಿಸುತ್ತೇವೆ ಎಂದು ಸುವೆಂಧು ಅಧಿಕಾರಿ ಟಿಎಂಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಸುವೇಂಧು ಅಧಿಕಾರಿ 50 ಶಾಸಕರೊಂದಿಗೆ ಕೋಲ್ಕತ್ತಾದ ರಾಜ್ ಭವನದಲ್ಲಿ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಮತದಾನದ ನಂತರದ ನಡೆದ ಹಿಂಸಾಚಾರ ಹಾಗು ಪಕ್ಷಾಂತರ ವಿರೋಧಿ ಕಾನೂನು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಜೊತಗೆ ಪಕ್ಷಾಂತರವಾಗುವ ಶಾಸಕರ ವಿರುದ್ಧ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸುವೆಂದು ಅಧಿಕಾರಿ ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ದೀದಿ ರಾಜ್ಯದಲ್ಲಿ ವಲಸೆ ಪರ್ವ ಶುರುವಾಗಿದ್ದು, ಬಿಜೆಪಿಯಿಂದ ಸುಮಾರು 24 ಕ್ಕೂ ಹೆಚ್ಚು ಶಾಸಕರು ಮರಳಿ ಟಿಎಂಸಿಯೆಡೆಗೆ ಮಹಾವಲಸೆ ನಡೆಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡತೊಡಗಿವೆ. ಈ ಮಧ್ಯೆ, ಮುಕುಲ್ ರಾಯ್ ತಮ್ಮ ಮೂರು ವರ್ಷದ ಬಿಜೆಪಿಯೊಂದಿಗಿನ ಸಂಬಂಧವನ್ನು ಕೈಬಿಡುವ ಮೂಲಕ ಟಿಎಂಸಿ ಸೇರಿ ಅಚ್ಚರಿ ಮೂಡಿಸಿದ್ದು, ಮುಕುಲ್ ರಾಯ್ ಬೆನ್ನಲ್ಲೇ ರಾಜೀವ್ ಬ್ಯಾನರ್ಜಿ, ದೀಪೆಂದು ವಿಶ್ವಾಸ್ ರಂತಹ ಪ್ರಮುಖ ನಾಯಕರು ಕೂಡಾ ಟಿಎಂಸಿ ಸಂಪರ್ಕದಲ್ಲಿದ್ದಾರೆನ್ನಲಾಗಿದೆ. ಬಿಜೆಪಿ ಯ ಹಲವು ಪ್ರಬಲ ನಾಯಕರ ವಲಸೆ ಆರಂಭಗುತ್ತದೆ ಎಂಬ ವಿಚಾರ ಅಲ್ಲಿನ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಬಂಗಾಳ ಬಿಜೆಪಿಯ ನಾಯಕರಲ್ಲಿಯೇ ಬಿರುಕಿರುವುದು ಈ ಮೂಲಕ ಜಗಜ್ಜಾಹೀರು ಮಾಡಿದೆ.

Please follow and like us:

Related articles

Share article

Stay connected

Latest articles

Please follow and like us: