ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ, ನೂತನ್ ಉಮೇಶ್ ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ “ಫೈಟರ್” ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ “ಐ ವಾನ ಫಾಲೋ ಯು” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್. ಜಿ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಗುರುರಂಜನ್ ಶೆಟ್ಟಿ(ನಟಿ ಅನುಷ್ಕಾ ಶೆಟ್ಟಿ ಸಹೋದರ), ನಾಗರಾಜ್, ಕೃಷ್ಣಪ್ಪ , ಗೌರೀಶ್ ಹಾಗೂ ಹಿರಿಯ ಪತ್ರಕರ್ತರಾದ ಕೆ.ಎಸ್ ವಾಸು, ಕೆ.ಎನ್.ನಾಗೇಶ್ ಕುಮಾರ್ ಮುಂತಾದ ಗಣ್ಯರು “ಐ ವಾನ ಫಾಲೋ ಯು” ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಹಾಡಿನ ಮೊದಲ ಪದ “ಐ ವಾನ ಫಾಲೋ” ಎಂಬುದನ್ನು ನಿರ್ದೇಶಕರು ಹೇಳಿದಾಗ “ಫಾಲೋ” ಎಂಬ ಪದದಿಂದಲೇ ಈ ಹಾಡು ಆರಂಭವಾಯಿತು. ವಿಶೇಷವೆಂದರೆ, ಈ ಹಾಡಿನಲ್ಲಿ ಬರುವ ಪದಗಳಿಗೆ ಎರಡು ಅರ್ಥಗಳಿದೆ. ಕವಿರಾಜ್ ಅದ್ಭುತವಾಗಿ ಹಾಡು ಬರೆದಿದ್ದಾರೆ. ಚೈತ್ರ ಸೊಗಸಾಗಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.
ಈ ಹಾಡನ್ನು ಪಾಂಡಿಚೇರಿಯಲ್ಲಿ ಚಿತ್ರಿಸಲಾಗಿದೆ. ಗುರುಕಿರಣ್ ಅವರ ಸಂಗೀತ, ಕವಿರಾಜ್ ಅವರ ಸಾಹಿತ್ಯ, ಮೋಹನ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಪ್ರಭಾಕರ್, ಲೇಖಾ ಚಂದ್ರ ಅವರ ಅಭಿನಯ ಎಲ್ಲವೂ ಸೇರಿ ಈ “ಫಾಲೋ ಯು” ಹಾಡು ಅದ್ಭುತವಾಗಿ ಹಾಗೂ ಅದ್ದೂರಿಯಾಗಿ ಮೂಡಿಬಂದಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ನೂತನ್ ಉಮೇಶ್.
ಚಿತ್ರದ ಮುಹೂರ್ತಕ್ಕೆ ಬಂದು ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನೆಯುತ್ತಾ ಮಾತು ಆರಂಭಿಸಿದ ನಾಯಕ ವಿನೋದ್ ಪ್ರಭಾಕರ್, ಈ “ಫೈಟರ್” ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ “ಫೈಟರ್”. ನಿರ್ಮಾಪಕ ಸೋಮಶೇಖರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಅಷ್ಟೇ ಚೆನ್ನಾಗಿ ಕಥೆ ,ಚಿತ್ರಕಥೆ ಬರೆದಿದ್ದಾರೆ. ಇಂದು ಬಿಡುಗಡೆಯಾದ ಹಾಡಿನ ಚಿತ್ರೀಕರಣ ಮಾರ್ಚ್ ನಲ್ಲಿ ಪಾಂಡಿಚೇರಿಯಲ್ಲಿ ಚಿತ್ರೀಕರಣವಾಗಿದ್ದು, ಅಲ್ಲಿನ ಬಿಸಿಲು ತಡೆಯುವುದು ಕಷ್ಟ. ಎಲ್ಲರ ಶ್ರಮದಿಂದ ಈ ಹಾಡು ಚೆನ್ನಾಗಿ ಬಂದಿದೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಈ ಚಿತ್ರ ದೊಡ್ಡ ಯಶಸ್ಸು ತಂದು ಕೊಡಲಿ. ಅವರಿಂದ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿ ಎಂದು ಹಾರೈಸಿದರು.
ಇಡೀ ಚಿತ್ರತಂಡದ ಶ್ರಮದಿಂದ ” ಫೈಟರ್ ” ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇಂದು ಹಾಡು ಬಿಡುಗಡೆಯಾಗಿದೆ. ಚಿತ್ರತಂಡಕ್ಕೆ ಹಾಗೂ ಆಗಮಿಸಿರುವ ಗಣ್ಯರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ.
ಹಾಡು ಬರೆದಿರುವ ಕವಿರಾಜ್, ಹಾಡಿರುವ ಚೈತ್ರ ಹಾಗೂ ನಾಯಕಿ ಲೇಖಾ ಚಂದ್ರ ” ಫಾಲೋ ಯು” ಹಾಡಿನ ಬಗ್ಗೆ ಮಾತನಾಡಿದರು.