ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಜೆಪಿಯಿಂದ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಜೂನ್ ೩ರಂದು ನಡೆಯಲಿರುವ ವಿಧಾನ ಪರಿಷತ್ ಸ್ಥಾನಕ್ಕೆ ವಿಜಯೇಂದ್ರ ಹೆಸರು ಅಂತಿಮಗೊಳಿಸಲಾಗಿದ್ದು, ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಧಾನಪರಿಷತ್ ಚುನಾವಣೆಗೆ ವಿಜಯೇಂದ್ರ ಹೆಸರು ಶಿಫಾರಸು ಮಾಡಿದ್ದು, ಸಭೆಯಲ್ಲಿ ಎಲ್ಲರಿಗೂ ಅವಿರೋಧವಾಗಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದರು.
ಬಿಜೆಪಿಯಿಂದ ವಿಜಯೇಂದ್ರ ಮೇಲ್ಮನೆಗೆ ಪ್ರವೇಶಿಸುವ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಪಕ್ಷದ ಅಭ್ಯರ್ಥಿಗಳ ಪಟ್ಟಿ ಕಳುಹಿಸಿಕೊಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ತೆರವಾಗಿರುವ 7 ಸ್ಥಾನಗಳ ಪೈಕಿ ೪ ಸ್ಥಾನ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹೊಂದಿದ್ದು, ವಿಜಯೇಂದ್ರ ಅಲ್ಲದೇ, ಛಲವಾದಿ ನಾರಾಯಣಸ್ವಾಮಿ, ಲಕ್ಷ್ಮಣ್ ಸವದಿ, ಎಂ. ರಾಜೇಂದ್ರ, ಮಹೇಶ್ ತೆಂಗಿನಕಾಯಿ ಸೇರಿದಂತೆ 20 ಹೆಸರನ್ನು ಶಿಫಾರಸು ಮಾಡಲಾಗಿದೆ.