
—-ನಾ ದಿವಾಕರ—-
ವಿಕಾಸದ ಹಾದಿಯಲ್ಲಿ ನವ ಭಾರತದ ಸಮಾಜ ನೈತಿಕ ಅವನತಿಯತ್ತ ಸಾಗುತ್ತಿರುವುದು ದುರಂತ
ಭಾರತ ವಿಕಾಸದ ಹಾದಿಯಲ್ಲಿ ದಾಪುಗಾಲು ಹಾಕುತ್ತಿರುವುದು ಅಲ್ಲಗಳೆಯಲಾಗದ ಸತ್ಯ. ಆದರೆ ವಿಕಾಸ ಎಂಬ ಉನ್ನತಾದರ್ಶ ಪದವನ್ನು ದೇಶ ನಡೆಯುತ್ತಿರುವ ಹಾದಿಯಲ್ಲಿ ಎದುರಾಗುವ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ-ಧಾರ್ಮಿಕ-ಆಧ್ಯಾತ್ಮಿಕ ಸನ್ನಿವೇಶಗಳಿಗೆ ಅನ್ವಯಿಸಿದಾಗ ಈ ಪದದೊಳಗೇ ಏನೋ ದೋಷವಿದೆ ಎನಿಸಿಬಿಡುತ್ತದೆ. ಏಕೆಂದರೆ ಚಾರಿತ್ರಿಕವಾಗಿ, ಅಭಿಜಾತ ಅಭಿವ್ಯಕ್ತಿಯಾಗಿ ವಿಕಾಸ ಎನ್ನುವುದು ಒಂದು ವಿದ್ಯಮಾನವಾಗಿದ್ದು, ಜೀವ ವಿಕಾಸದೊಂದಿಗೇ ಮಾನವ ವಿಕಾಸವೂ ಅದರ ಒಂದು ಭಾಗವಾಗುತ್ತದೆ. ಈ ಜೀವ ವಿಕಾಸದ ಹಾದಿಯಲ್ಲೇ ಮಾನವ ಜಗತ್ತು ಇಂದು ಚಂದ್ರ ಲೋಕದ ಮೇಲೆ ಕಾಲಿರಿಸಿದೆ, ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳ ಕಾಲ ವಿಹರಿಸಿ, ಸುರಕ್ಷಿತವಾಗಿ ಹಿಂದಿರುಗುವ ವೈಜ್ಞಾನಿಕ ಕ್ಷಮತೆ ಪಡೆದುಕೊಂಡಿದೆ.
ಆದರೆ ಮಾನವ ಸಮಾಜದ ಅಭ್ಯುದಯವನ್ನು ನಿರ್ಧರಿಸುವುದು ಈ ಭೌತಿಕ ಬೆಳವಣಿಗೆ ಮಾತ್ರವೇ ಅಲ್ಲ. ಇದನ್ನು ಆಗುಮಾಡುವ ಬೌದ್ಧಿಕ ಚಿಂತನೆ ಮತ್ತು ಮತ್ತು ಆ ಚಿಂತನಾ ವಿಧಾನವನ್ನು ನಿರ್ದೇಶಿಸುವ ಒಂದು ಸಮಾಜ, ಅದರೊಳಗೆ ಅಂತರ್ಗತವಾಗಿರಬೇಕಾದ ಸಂಸ್ಕೃತಿ-ಪರಂಪರೆ ಹಾಗೂ ಈ ಸಮಾಜಕ್ಕೆ ಮುಂದಾರಿ ತೋರುವ ಸಮಕಾಲೀನ ಭೌತಿಕ-ಬೌದ್ಧಿಕ ನಿದರ್ಶನಗಳು. ದುರಂತ ಎಂದರೆ 77 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತ ವಸಾಹತು ದಾಸ್ಯದಿಂದ ಮುಕ್ತವಾಗಿದ್ದರೂ, ತನ್ನದೇ ಆದ ಪ್ರಾಚೀನ ಸಂಕುಚಿತ ಕೋಶಗಳಿಂದ ಹೊರಬರಲಾಗಿಲ್ಲ ಅಥವಾ ಆ ಸಮಾಜವನ್ನು ನಿಯಂತ್ರಿಸಿ ನಿರ್ವಹಿಸುತ್ತಿದ್ದ ಸಾಮಾಜಿಕ ಧೋರಣೆ-ಸಾಂಸ್ಕೃತಿಕ ಚಿಂತನೆಗಳ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿಯೇ ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನ ಮತ್ತು ಬೌದ್ಧಿಕ ಜ್ಞಾನವಿಸ್ತಾರದ ಹೊರತಾಗಿಯೂ ವರ್ತಮಾನದ ಭಾರತ ಪುರಾತನ ಸಮಾಜದ ಪ್ರತಿಬಿಂಬದಂತೆ ಕಾಣುತ್ತಿದೆ.
ಆದರ್ಶಪ್ರಾಯ ಸಮಾಜದ ಕನಸು
ಇದು ವ್ಯಕ್ತಿಗತ ನೆಲೆಯಲ್ಲಿ ಮಾಡುವ ಆರೋಪವಲ್ಲ ಬದಲಾಗಿ ಸಮಷ್ಟಿ ನೆಲೆಯಲ್ಲಿ ನಿಂತು ನೋಡಬೇಕಾದ ಆತ್ಮವಿಮರ್ಶೆಯ ಅಭಿವ್ಯಕ್ತಿ. ಗಾಂಧಿ-ಅಂಬೇಡ್ಕರ್-ನೆಹರೂ ಆದಿಯಾಗಿ ಸ್ವಾತಂತ್ರ್ಯದ ಪೂರ್ವಸೂರಿಗಳು ಭವಿಷ್ಯ ಭಾರತವನ್ನು ಊಹಿಸಿಕೊಂಡಿದ್ದಕ್ಕೂ, ನಾವು ಕಳೆದ ಏಳು ವರ್ಷಗಳಲ್ಲಿ ಕಟ್ಟಿರುವ ಸಮಾಜಕ್ಕೂ ಹೋಲಿಕೆ ಏನಾದರೂ ಇದ್ದರೆ ಅದು ಕೇವಲ ಸಾಹಿತ್ಯಕ ಗ್ರಂಥಗಳಲ್ಲಿ ಮಾತ್ರ ಕಾಣಲು ಸಾಧ್ಯ. ಏಕೆಂದರೆ ಕಾಲಕಾಲಕ್ಕೆ ಈ ದೇಶದ ಚಿಂತನಾವಾಹಕರು ಸ್ವಾತಂತ್ರ್ಯಪೂರ್ವದ ಕನಸುಗಳನ್ನು ಸಾಕಾರಗೊಳಿಸುವ ಮಾರ್ಗೋಪಾಯಗಳನ್ನು, ವಿಧಾನಗಳನ್ನು ಮತ್ತು ಆದರ್ಶಗಳನ್ನು ಅಕ್ಷರಗಳಲ್ಲಿ ದಾಖಲಿಸುತ್ತಲೇ ಬಂದಿದ್ದಾರೆ. ಗತಕಾಲದ ಹಾಗೂ ವರ್ತಮಾನದ ಈ ಭಿನ್ನ ಆಲೋಚನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಸಾಧ್ಯವಾಗಿದೆಯೇ ಎಂಬ ಜಿಜ್ಞಾಸೆಯೊಂದಿಗೇ, ಈ ಆರೋಗ್ಯಕರ ಚಿಂತನೆಗಳನ್ನು ದೇಶವನ್ನು ಮುನ್ನಡೆಸುವ ವಾರಸುದಾರ ಶಕ್ತಿಗಳು ಗಮನಿಸಿವೆಯೇ ಎಂಬ ಯಕ್ಷಪ್ರಶ್ನೆಯನ್ನೂ ನಾವು ಎದುರಿಸಬೇಕಿದೆ.
ವರ್ತಮಾನದ ರಾಜಕಾರಣ, ಸಾಂಸ್ಕೃತಿಕ ಲೋಕದ ಸಿನೆಮಾ, ಆಡಳಿತ ವ್ಯವಸ್ಥೆಯ ಅಧಿಕಾರಶಾಹಿ, ಸಾಮಾಜಿಕ ಜೀವನಶೈಲಿ ಇವೆಲ್ಲವನ್ನೂ ಗಮನಿಸಿದಾಗ, ಈ ಪ್ರಶ್ನೆಯೇ ನಮ್ಮನ್ನು ಮರುಪ್ರಶ್ನೆಗೆ ದೂಡುತ್ತದೆ. ಯಾವ ದೇಶದಲ್ಲಾದರೂ, ಯಾವುದೇ ರೀತಿಯ ಆಳ್ವಿಕೆಯನ್ನು ಹೊಂದಿದ್ದರೂ ಅಲ್ಲಿನ ಸಮಾಜವನ್ನು ನಿರ್ದೇಶಿಸುವ ಜವಾಬ್ದಾರಿ ಚುನಾಯಿತ ಪ್ರಜಾಪ್ರಭುತ್ವವಾಗಲೀ ಅಥವಾ ಸ್ವಯಂ ಸ್ಥಾಪಿತ ನಿರಂಕುಶಾಧಿಕಾರವಾಗಲೀ, ಆಳುವ ಸರ್ಕಾರದ ಮೇಲಿರುತ್ತದೆ. ಈ ಆಳ್ವಿಕೆಯ ವಾರಸುದಾರರ ನಡೆ, ನುಡಿ, ವ್ಯಕ್ತಿಗತ ವರ್ತನೆ, ಪ್ರಾಮಾಣಿಕತೆ, ಜನನಿಷ್ಠೆ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಭೌತಿಕ-ಬೌದ್ಧಿಕ ನೈತಿಕತೆ ಸಮಾಜವನ್ನು ಅತಿಯಾಗಿ ಪ್ರಭಾವಿಸುತ್ತದೆ. ಹಾಗಾಗಿಯೇ ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲೇ “ ಸಾಂವಿಧಾನಿಕ ನೈತಿಕತೆ ”ಯ ಬಗ್ಗೆ ಪದೇ ಪದೇ ಶಾಸನಸಭೆಯಲ್ಲಿ ಪ್ರಸ್ತಾಪಿಸುವುದನ್ನು ಸ್ಮರಿಸಬಹುದು.

ಆದರೆ ಈ ʼಶಾಸನ ಸಭೆʼ ಎನ್ನುವ ಒಂದು ಪವಿತ್ರ ತಾಣವೇ ಇಂದು ಭ್ರಷ್ಟರ, ಲಾಭಕೋರ ಉದ್ಯಮಿಗಳ, ವಿಷಯ ಲಂಪಟರ ಮತ್ತು ಸಿರಿವಂತರ ಆಡುಂಬೊಲವಾಗಿದೆ. ರಾಜಕೀಯ ನಾಯಕತ್ವ ಸಮಾಜದೊಳಗಿಂದಲೇ ಉಗಮಿಸುವ ಒಂದು ಮಾನವ ಶಕ್ತಿ. ಅದು ಸಮಾಜದ ಎಲ್ಲ ಅವಲಕ್ಷಣಗಳನ್ನೂ ಮೀರಿ ಒಂದು ಉದಾತ್ತ ಹಾದಿ ತೋರುವ ವ್ಯಕ್ತಿತ್ವದ ಸಂಕೇತವಾಗಿರುವುದು ಅಪೇಕ್ಷಿತ. ಪ್ರಾಮಾಣಿಕತೆ-ಸತ್ಯಸಂಧತೆ-ಪ್ರಾಮಾಣಿಕತೆ-ಪಾರದರ್ಶಕತೆ ಮುಂತಾದ ಔದಾತ್ಯಗಳನ್ನು ಬದಿಗಿಟ್ಟು ನೋಡಿದಾಗಲೂ, ವಿಶಾಲ ಸಮಾಜದ ನಡುವೆ ಸದಾ ಸಕ್ರಿಯವಾಗಿರುವ ಮತ್ತು ಅದನ್ನು ನಿಯಂತ್ರಿಸುವ ರಾಜಕೀಯ ನಾಯಕತ್ವ ಕನಿಷ್ಠ ಆದರಣೀಯವಾಗಿಯಾದರೂ ಇರಬೇಕಾದ್ದು ನಾಗರಿಕತೆಯ ಲಕ್ಷಣ. ಇಂತಹ ಒಂದು ವ್ಯಕ್ತಿತ್ವವನ್ನೂ ಸಮಕಾಲೀನ ರಾಜಕಾರಣದಲ್ಲಿ ಕಾಣಲಾಗುವುದಿಲ್ಲ. ಸ್ವಾತಂತ್ರ್ಯದ ಆರಂಭಿಕ ದಿನಗಳಲ್ಲಿ ಅಲ್ಪಸ್ವಲ್ಪ ಕೊರತೆಗಳೊಂದಿಗೆ ಗುರುತಿಸಬಹುದಾಗಿದ್ದ ಇಂತಹ ನಾಯಕತ್ವಗಳು ಈಗ ದಂತಕತೆಗಳಾಗಿ ನಮ್ಮ ನಡುವೆ ಜೀವಂತವಾಗಿವೆ.
ರಾಜಕೀಯ ಸಾಂಸ್ಕೃತಿಕ ಅನೈತಿಕತೆ
ಕರ್ನಾಟಕದ ವಿಧಾನಸಭೆಯನ್ನು ಆವರಿಸಿರುವ ʼ ಹನಿಟ್ರ್ಯಾಪ್ ʼ ಹಗರಣ ಇದರ ಒಂದು ಅತಿವಿಕೃತ ಆಯಾಮ ಎನ್ನಬಹುದು. ಶಾಸಕ ಮುನಿರತ್ನ ಅವರಿಂದ ಆರಂಭವಾದ ಈ ಹನಿಟ್ರ್ಯಾಪ್ ಎಂಬ ಸಾಮಾಜಿಕ ವಿಕೃತಿ ಈಗ ವಿಧಾನಸೌಧದಲ್ಲಿ ಪ್ರಧಾನ ಚರ್ಚೆಯ ವಿಷಯವಾಗಿರುವುದೇ ನಮ್ಮ ಆಳ್ವಿಕೆಯ ನೈತಿಕತೆ ಪಾತಾಳಕ್ಕೆ ಕುಸಿದಿರುವುದರ ಸೂಚನೆ ಅಲ್ಲವೇ. ಕಾಂಗ್ರೆಸ್ನ ಹಿರಿಯ ನಾಯಕ ಕೆ. ಎನ್. ರಾಜಣ್ಣ ಬಹಳ ಪ್ರಾಮಾಣಿಕವಾಗಿ (!) “ ನನ್ನ ಮೇಲೆ ಹನಿಟ್ರ್ಯಾಪ್ ನಡೆದಿರುವುದು ನಿಜ. ಅದನ್ನು ಹೇಳಿಕೊಳ್ಳೋಕೆ ನನಗೆ ನಾಚಿಕೆಯೇನೂ ಇಲ್ಲ, ನಾನೇನು ಸತ್ಯ ಹರಿಶ್ಚಂದ್ರನೂ ಅಲ್ಲ ಶ್ರೀರಾಮಚಂದ್ರನೂ ಅಲ್ಲ ” (ಪ್ರಜಾವಾಣಿ 21-3-2025) ಎಂದು ಹೇಳಿದ್ದಾರೆ. ಇದು ಬಹಳ ದೊಡ್ಡ ಹೆಸರುಗಳಾದುವಲ್ಲವೇ ? ಡಾ. ರಾಜ್ಕುಮಾರ್ ಅವರನ್ನೇ ಕಾಣಲು ಅಸಾಧ್ಯವಾಗಿರುವಾಗ, ಇಂದಿನ ರಾಜಕಾರಣಿಗಳಲ್ಲಿ ವಾಲ್ಮೀಕಿಯ ರಾಮ, ರಾಘವಾಂಕನ ಸತ್ಯಹರಿಶ್ಚಂದ್ರರನ್ನು ಕಾಣಲು ಸಾಧ್ಯವೇ ? ವ್ಯಕ್ತಿತ್ವ ಮತ್ತು ನಾಯಕತ್ವ ಎರಡರ ನಡುವಿನ ಸಂಪರ್ಕ-ಸಂಬಂಧಗಳು ಕಳಚಿಹೋದಾಗ ಇಂತಹ ಅಪಭ್ರಂಶಗಳು ಸಂಭವಿಸುತ್ತವೆ.

ಭಾರತದ ಸಾಂಪ್ರದಾಯಿಕ, ವಿಶೇಷವಾಗಿ ತಳಸ್ತರದ, ಸಮಾಜವನ್ನು ಪ್ರಧಾನವಾಗಿ ಪ್ರಭಾವಿಸುವ ಸಿನೆಮಾ ಎಂಬ ಸಾಂಸ್ಕೃತಿಕ ಲೋಕ ಇಂದು ಏನಾಗಿದೆ ? ಇಲ್ಲಿ ಡಾ. ರಾಜ್ ಶಾಶ್ವತವಾದ ದಂತಕತೆಯಾಗಿಯೇ ಉಳಿಯುತ್ತಾರೆ. ಏಕೆಂದರೆ ರಾಜ್ ಮತ್ತು ಅವರ ಪೀಳಿಗೆಯ ಕಲಾವಿದರ ವ್ಯಕ್ತಿನಿಷ್ಠೆ, ನೈತಿಕತೆ, ಕಲಾಬದ್ಧತೆ ಮತ್ತು ಸಾಮಾಜಿಕ ಸೂಕ್ಷ್ಮ ಪ್ರಜ್ಞೆ, ವರ್ತಮಾನದ ʼಸ್ಯಾಂಡಲ್ವುಡ್ʼ ನಲ್ಲಿ ಊಹಿಸುವುದೂ ಕಷ್ಟ. ಹೆಸರು ಆಕರ್ಷಕವಾದರೂ ಅಲ್ಲಿ ದುರ್ಗಂಧ ಬೀರುತ್ತಿರುವುದನ್ನು ಹೇಗೆ ನೋಡುವುದು. ಮಿ ಟೂ ಆರೋಪಗಳು ಮತ್ತೊಮ್ಮೆ ಮುನ್ನಲೆಗೆ ಬಂದಿರುವುದೇ ಅಲ್ಲದೆ, ಅಭಿಮಾನಿಗಳಿಂದ ಆರಾಧಿಸಲ್ಪಡುವ ನಾಯಕ ನಟರು ಕೊಲೆ ಆರೋಪ ಹೊತ್ತಿರುವುದು, ಈ ಸಾಂಸ್ಕೃತಿಕ ಸಂವಹನ ಲೋಕವನ್ನು ಅಧಃಪತನದತ್ತ ಕೊಂಡೊಯ್ದಿದೆ.
ಒಂದು ಕಾಲದಲ್ಲಿ ಸಿನೆಮಾ ನಾಯಕನನ್ನು ಪರದೆಯ ಮೇಲೆ ನೋಡಿ ʼ ನಾನೂ ಇವರಂತಾಗಬೇಕು ʼ ಎಂದು ಭಾವಿಸುತ್ತಿದ್ದ, ಅಥವಾ ಖಳನಟರ ಪಾತ್ರವನ್ನು ನೋಡಿ ʼ ಏನೇ ಆದರೂ ಹೀಗಾಗಬಾರದು ʼ ಎಂದು ಪ್ರಮಾಣಿಸುತ್ತಿದ್ದ ದಿನಗಳನ್ನೂ ನೋಡಿದ್ದೇವೆ. ಅಂತಹ ಕಥಾ ಹಂದರಗಳು ಈ ಪ್ರಕ್ರಿಯೆಯಲ್ಲಿ ಮುಖ್ಯಪಾತ್ರ ವಹಿಸಿದರೂ, ನಟನೆಯಲ್ಲಿ ತಲ್ಲೀನರಾಗಿ ಅರ್ಪಿಸಿಕೊಳ್ಳುತ್ತಿದ್ದ ಕಲಾವಿದರೂ ಸಹ ತಮ್ಮ ವೈಯುಕ್ತಿಕ ಬದುಕಿನಲ್ಲಿ ಇಂತಹ ಆದರ್ಶಗಳನ್ನು ನಮ್ಮ ನಡುವೆ ಬಿಟ್ಟು ಹೋಗಿದ್ದಾರೆ ಅಲ್ಲವೆ. ಇದೇ 25ರಂದು ಜನ್ಮಶತಮಾನೋತ್ಸವವೊಂದು ನಮ್ಮ ಚಾಮಯ್ಯ ಮೇಷ್ಟ್ರು , ಕೆ.ಎಸ್. ಅಶ್ವಥ್ ಅವರನ್ನು ನೆನಪಿಸುತ್ತದೆ. ಸಿನೆಮಾ ಕೇವಲ ಮನರಂಜನೆ ಮಾತ್ರವೇ ಅಲ್ಲ, ಅದು ಸಮಾಜಕ್ಕೆ ಸಂದೇಶ ನೀಡುವ ಒಂದು ಬೌದ್ಧಿಕ ವಾಹಕ ಎಂಬ ಕಲ್ಪನೆಯೂ ಇಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಾಗಾಗಿಯೇ ಈ ಹಿರಿಯ ತಲೆಮಾರಿನ ಕಲಾವಿದರು ದಂತಕತೆಗಳಾಗಿ ಪುಸ್ತಕಗಳಲ್ಲಿ ಉಳಿದಿದ್ದಾರೆ/ಉಳಿಯಲಿದ್ದಾರೆ.

ಧರ್ಮ ಅಧ್ಯಾತ್ಮ ಮತ್ತು ಸಂಸ್ಕೃತಿ
ನಮ್ಮ ಸಾಂಪ್ರದಾಯಿಕ ಸಮಾಜವನ್ನು, ವಿಶೇಷವಾಗಿ ತಳಸ್ತರದ ಶ್ರಮಿಕ ವರ್ಗದ ದುಡಿಯುವ ಜನತೆಯನ್ನು ಪರಿಣಾಮಕಾರಿಯಾಗಿ ಪ್ರಭಾವಿಸುವ ಮತ್ತೊಂದು ವಲಯವನ್ನು ನಾವು ಆಧ್ಯಾತ್ಮಿಕ ಮತ್ತು ಧಾರ್ಮಿಕ ನೆಲೆಗಳಲ್ಲಿ ಗುರುತಿಸಬಹುದು. ಆದರೆ ಇಂದೇನಾಗಿದೆ ? ದೈವ ಸನ್ನಿಧಿಯಲ್ಲೇ ಸೌಜನ್ಯ ಹೆಸರಿನ ಒಬ್ಬ ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಾಳೆ, ಭೀಕರವಾಗಿ ಹತ್ಯೆಯಾಗುತ್ತಾಳೆ, 12 ವರ್ಷಗಳು ಕಳೆಯುತ್ತವೆ, ಆದರೆ ಆಕೆಯ ಹಂತಕರು ಯಾರು, ಅತ್ಯಾಚಾರಿಗಳು ಯಾರು ಎನ್ನುವ ಸತ್ಯವನ್ನು ನಮ್ಮ ಸಮಾಜ ಹೊರಗೆಡಹುವುದಿಲ್ಲ. ಈ ಅಪರಾಧಿಗಳು ಅನ್ಯಲೋಕ ಜೀವಿಗಳೇನೂ ಆಗಿರಲಿಕ್ಕಿಲ್ಲ. ನಮ್ಮ ನಡುವೆಯೇ ಇದ್ದಾರೆ. ಆದರೆ ನಮ್ಮ ರಾಜಕೀಯ-ಕಾನೂನು ವ್ಯವಸ್ಥೆ ಅಮಾಯಕನನ್ನು ಶಿಕ್ಷಿಸಿದೆಯೇ ಹೊರತು ನಿಜವಾದ ಅಪರಾಧಿಯನ್ನು ಗುರುತಿಸಲೂ ಪ್ರಯತ್ನಿಸುತ್ತಿಲ್ಲ.
ಮತ್ತೊಂದು ಆಧ್ಯಾತ್ಮಿಕ ಕೇಂದ್ರದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪಗಳು ನ್ಯಾಯಾಲಯದ ವಿಚಾರಣೆಗೊಳಪಟ್ಟಿವೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಯಾವುದೇ ಸೀಮೆಗಳಿಲ್ಲ ಎನ್ನುವುದನ್ನು ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳು ನಿರೂಪಿಸುವಾಗಲೇ, ನಮ್ಮ ರಾಜಕೀಯ ಕ್ಷೇತ್ರವೂ ʼ ನಾವು ಯಾರಿಗೇನು ಕಡಿಮೆ ʼ ಎನ್ನುವಂತೆ ಹಾಸನದ ಪೆನ್ ಡ್ರೈವ್ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಈ ಕಾಮಾತಿರೇಕ ಮತ್ತು ಪುರುಷಾಧಿಪತ್ಯದ ಮತ್ತೊಂದು ಆಯಾಮವಾಗಿ ಈಗ ʼಹನಿಟ್ರ್ಯಾಪ್ʼ ಪ್ರಕರಣ ತಲೆದೋರಿದೆ. ಜನಪ್ರತಿನಿಧಿಗಳ ವ್ಯಕ್ತಿಗತ ಅನೈತಿಕತೆಯನ್ನು ಬಿಂಬಿಸುವ ಈ ಪ್ರಕರಣಗಳನ್ನು ಇಡೀ ರಾಜ್ಯ ಸಮಸ್ಯೆ ಎಂದು ಬಿಂಬಿಸುವಂತೆ ವಿಧಾನಸೌಧದ ಸದನದಲ್ಲಿ ಚರ್ಚೆ ಮಾಡುವುದೇ ಚೋದ್ಯ ಎನಿಸುವುದಿಲ್ಲವೇ ? ಕಾನೂನಾತ್ಮಕವಾಗಿ ಪಡೆಯಬಹುದಾದ ಜಾಮೀನು ಅಥವಾ ರಿಹಾಯಿಯಿಂದ ಆರೋಪಿಗಳು ಸಂತುಷ್ಟರಾಗಬಹುದು, ಆದರೆ ವಿಶಾಲ ಸಮಾಜದ ಸಾಮಾಜಿಕ ಪ್ರಜ್ಞೆ ಅಬಾಧಿತವಾಗಿರಲು ಸಾಧ್ಯವೇ ? ಈ ಪ್ರಶ್ನೆಗೆ ಯಾರು ಉತ್ತರಿಸಬೇಕು ?

ಕೋಟ್ಯಧಿಪತಿಗಳ ಆಡುಂಬೊಲವಾಗಿರುವ ದೇಶದ ವಿಧಾನಸಭೆಗಳಲ್ಲಿ ಸಾರ್ವಭೌಮ ಜನತೆಯನ್ನು ಪ್ರತಿನಿಧಿಸುವ 4,092 ಜನಪ್ರತಿನಿಧಿಗಳ ಪೈಕಿ 1,861 ಶಾಸಕರು (ಶೇ. 45) ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. 1,205 ಶಾಸಕರು (ಶೇ. 29) ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಇತ್ತೀಚಿನ ಎಡಿಆರ್ ( Association of Democratic Rights) ಸಮೀಕ್ಷೆ ಹೇಳುತ್ತದೆ. ಕರ್ನಾಟಕದ ವಿಧಾನಸಭೆಯಲ್ಲಿ 31 ಶತಕೋಟ್ಯಧಿಪತಿಗಳಿದ್ದಾರೆ ಎಂದು ಹೇಳಲಾಗಿದೆ. (ವಿವರಗಳಿಗಾಗಿ ಪ್ರಜಾವಾಣಿ ಮಾರ್ಚ್ 21 ನೋಡಿ). ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ದ ನಡೆಯುತ್ತಿರುವ ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್ “ ಬಡವರು ಐದು ಅಡಿ ಒತ್ತುವರಿ ಮಾಡಿದರೆ ಓಡೋಡಿ ಬಂದು ತೆರವು ಮಾಡುತ್ತೀರಿ, ಬುಲ್ಡೋಜರ್ ತೆಗೆದುಕೊಂಡು ಹೋಗಿ ಮನೆ ಒಡೆದು ಹಾಕ್ತೀರಿ, ಭಿಕ್ಷುಕರನ್ನೂ ಬಿಡುವುದಿಲ್ಲ, ಪ್ರಭಾವಿಗಳು ಒತ್ತುವರಿ ಮಾಡಿದರೆ ಸದರವೇ ”ಎಂದು ಕೇಳಿರುವುದು ( ಪ್ರಜಾವಾಣಿ 20 ಮಾರ್ಚ್ 2025) ಏನನ್ನು ಸೂಚಿಸುತ್ತದೆ ?
ಸಾಮಾಜಿಕ ಜವಾಬ್ದಾರಿಯ ಕೊರತೆ
ಈ ಎಲ್ಲ ವಿಕೃತಿಗಳಿಗೂ ಕಳಶವಿಟ್ಟಂತೆ ಕನ್ನಡದ ವಿದ್ಯುನ್ಮಾನ ಸುದ್ದಿವಾಹಿನಿಗಳು (ಕೆಲವು ಅಪವಾದಗಳು ಇರಬಹುದೇನೋ ?) ಆರೋಪಿಗಳನ್ನೇ ವೈಭವೀಕರಿಸುವ, ಅಪರಾಧಿಗಳನ್ನು ಮರೆಮಾಚುವ, ಪ್ರಭಾವಿಗಳನ್ನು ರಕ್ಷಿಸುವ ಒಂದು ಮಾದರಿಯನ್ನೇ ಸೃಷ್ಟಿಸಿಬಿಟ್ಟಿವೆ. ಮಾರುಕಟ್ಟೆ, ಬಂಡವಾಳ ಮತ್ತು ಅದರೊಂದಿಗೆ ಬೆಸೆದುಕೊಂಡಿರುವ ರಾಜಕೀಯ ವ್ಯವಸ್ಥೆಯನ್ನು ಜನತೆಯ ನಡುವೆ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸುವ ತಮ್ಮ ವೃತ್ತಿ ಧರ್ಮ ಮತ್ತು ನೈತಿಕತೆಯನ್ನೇ ಮರೆತಿರುವ ಬಹುತೇಕ ಮಾಧ್ಯಮಗಳು ಭವಿಷ್ಯದ ತಲೆಮಾರಿಗೆ ಯಾವ ಸಂದೇಶ ನೀಡುತ್ತಿವೆ. ವಿಧಾನ ಸೌಧದಲ್ಲಿ ಇಂದಿಗೂ ಕಂಗೊಳಿಸುವ ಕೆಂಗಲ್, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗ್ಡೆ ಮುಂತಾದ ನಾಯಕರ ಭಾವಚಿತ್ರಗಳು ಒಂದು ರೀತಿಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಅಣಕಿಸುತ್ತಿರುವಂತೆ ಕಾಣುತ್ತದೆ. ಸಾಲದ್ದಕ್ಕೆ ವಿಧಾನಸೌಧದ ಮುಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯೂ ಇದೆ. ದಿನನಿತ್ಯ ಇದನ್ನು ನೋಡುತ್ತಲೇ ಒಳಗೆ ಹೋಗುವ ಪ್ರತಿನಿಧಿಗಳಿಗೆ, ಬಾಬಾಸಾಹೇಬರು ಮತ್ತೆಮತ್ತೆ ನೆನಪಿಸುತ್ತಿದ್ದ ಸಾಂವಿಧಾನಿಕ ನೈತಿಕತೆಯ ಅರ್ಥವಾದರೂ ಗೊತ್ತಿರಬೇಕಲ್ಲವೇ ?
ಕರ್ನಾಟಕದ ಸಮಾಜವನ್ನು ಪ್ರತಿಬಿಂಬಿಸುವ, ಪ್ರಭಾವಿಸುವ ಎಲ್ಲ ಕ್ಷೇತ್ರಗಳೂ ನೈತಿಕತೆ ಕಳೆದುಕೊಂಡು ಭ್ರಷ್ಟವಾಗಿದೆ. ಅಧ್ಯಾತ್ಮ ಮಠಗಳು, ದೈವ ಸನ್ನಿಧಿಗಳು, ಅಧಿಕಾರ ಕೇಂದ್ರಗಳು, ಶೈಕ್ಷಣಿಕ ನೆಲೆಗಳು, ಚಲನಚಿತ್ರ ರಂಗ ಹೀಗೆ ಆರೋಗ್ಯ ಸಮಾಜಕ್ಕೆ ಚಿಕಿತ್ಸಕವಾಗಬೇಕಿರುವ ಎಲ್ಲ ವಲಯಗಳಲ್ಲೂ ಅತ್ಯಾಚಾರ, ಕೊಲೆ, ಮಹಿಳಾ ದೌರ್ಜನ್ಯ, ಹಣಕಾಸು ಭ್ರಷ್ಟಾಚಾರ ತಾಂಡವಾಡುತ್ತಿದೆ. ಲಿಂಗ ಸೂಕ್ಷ್ಮತೆ-ಮಹಿಳಾ ಸಂವೇದನೆಯ ಕೊರತೆ ನ್ಯಾಯಾಂಗದಲ್ಲೂ ಇದೆ ಎಂದು ಸಾಕ್ಷೀಕರಿಸುವಂತಹ ತೀರ್ಪುಗಳು ಹೇರಳವಾಗಿವೆ. ಇತ್ತೀಚಿನ ಪ್ರಕರಣವೊಂದರ ಅಲಹಾಬಾದ್ ಹೈಕೋರ್ಟ್ ತೀರ್ಪು ಈಗ ಚರ್ಚೆಗೊಳಗಾಗುತ್ತಿದೆ. ಈ ನಡುವೆ ವ್ಯಕ್ತಿಗತವಾದ ತಮ್ಮ ಅನೈತಿಕತೆಯನ್ನು ಸಾರ್ವತ್ರೀಕರಿಸುವ ನಿಟ್ಟಿನಲ್ಲಿ ರಾಜಕೀಯ ನಾಯಕರು ʼ ಹನಿಟ್ರ್ಯಾಪ್ʼ ಪ್ರಕರಣವನ್ನು ಸಮಸ್ತ ಕನ್ನಡಿಗರ ಸಮಸ್ಯೆ ಎಂಬಂತೆ ಬಿಂಬಿಸುತ್ತಿದ್ದಾರೆ. ಪರಸ್ಪರ ದೋಷಾರೋಪಣೆ ಮಾಡುತ್ತಾ ನಡುಸಂತೆಯಲ್ಲಿ ಬೆತ್ತಲಾಗಿರುವಾಗ, ಇದನ್ನು ಚರ್ಚೆ ಮಾಡಲು ವಿಧಾನಸೌಧ ಬಳಕೆಯಾಗುತ್ತಿರುವುದು ಶತಮಾನದ ದುರಂತ.
ಇನ್ನು ಕುಸಿಯಲಾಗದಷ್ಟು ತಳಮಟ್ಟವನ್ನು ತಲುಪಿರುವ ರಾಜ್ಯ ರಾಜಕಾರಣ-ಸಿನೆಮಾ-ಅಧ್ಯಾತ್ಮ ಮತ್ತು ವಿಶಾಲ ಸಮಾಜ, ಈ ಪಾತಾಳದಿಂದ ಹೊರಬಂದರೆ ಸಾಕಾಗಿದೆ. ಇಲ್ಲವಾದರೆ ವರ್ತಮಾನವೂ ನಮ್ಮನ್ನು ಕ್ಷಮಿಸುವುದಿಲ್ಲ, ಭವಿಷ್ಯದ ತಲೆಮಾರು ನೆನಪಿಸಿಕೊಳ್ಳುವುದೂ ಇಲ್ಲ. ಈ ಕನಿಷ್ಠ ಎಚ್ಚರಿಕೆಯಾದರೂ ಸಮಾಜದಲ್ಲಿದ್ದರೆ ಸಾಕು.
-೦-೦-೦-೦-