ನಾಳೆ ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಿಕೊಳ್ಳಲು ಅದ್ದೂರಿಯಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಇಂದಿನಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ದತೆ ಮಾಡಿಕೊಂಡಿದ್ದು, ನಾಳೆ ಎಲ್ಲಾ ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ಇದೇ ಮೊದಲ ಬಾರಿಗೆ ಮುತ್ತೈದೆಯರಿಗೆ ಅರಿಶಿನ – ಕುಂಕುಮ ನೀಡಲಾಗುವುದು.
ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಲಕ್ಷ್ಮೀ ಪೂಜೆ ಮಾಡಿ ಮನೆಗೆ ಲಕ್ಷ್ಮೀಯನ್ನು ಕೂರಿಸಿ ಆರಾಧನೆ ಮಾಡಲಾಗುತ್ತೆ. ಈ ವರಮಹಾಲಕ್ಷ್ಮೀ ಹಬ್ಬ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬ. ಅದೇ ರೀತಿ ನಾಳೆ ಎಲ್ಲೆಡೆ ವರ ಮಹಾಲಕ್ಷ್ಮಿ ಹಬ್ಬವನ್ನು ತಮ್ಮ ಮನೆಗಳಲ್ಲಿ ಆಚರಣೆ ಮಾಡುತ್ತಾರೆ. ಈ ಹಿನ್ನೆಲೆ ಇಂದು ಕೆ.ಆರ್. ಮಾರ್ಕೆಟ್ನಲ್ಲಿ ಮುಂಜಾನೆಯಿಂದಲೇ ಹಬ್ಬದ ಖರೀದಿಯಲ್ಲಿ ಜನರು ತೊಡಗಿದ್ರು. ಹೂವು ಹಣ್ಣಿನ ಬೆಲೆ ದುಬಾರಿಯಾದ್ರೂ ಹಬ್ಬ ಮಾಡ್ಬೇಕು ಅಂತ ಜನರು ಸಾಮಾಗ್ರಿಗಳನ್ನು ಖರೀದಿ ಮಾಡಿ ಹಬ್ಬಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡರು.
ಇತ್ತ ಜೊತೆಗೆ ನಗರದ ದೇವಾಲಯಗಳಲ್ಲೂ ಕೂಡಾ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಇಂದಿನಿಂದಲೇ ದೇವಾಲಯದಲ್ಲಿ ಸಿದ್ಧತೆ ಮಾಡಿಕೊಂಡಿದ್ದು ನಾಳೆ ಬೆಳಗ್ಗೆ 9 ಗಂಟೆಯಿದ ದೇವಾಲಯಗಳಲ್ಲಿ ಪೂಜೆ ಆರಂಭವಾಗಲಿದೆ. ಜೊತೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ.

ನಾಳೆ ಎಲ್ಲೆಲ್ಲಿ ವಿಶೇಷ ಪೂಜೆ ?
• ನಾಳೆ ಕಾಡುಮಲ್ಲಿಕಾರ್ಜುನನಿಗೆ ವಿಶೇಷ ಪೂಜೆ
• ಬನಶಂಕರಿ ದೇವಿಗೆ ಲಕ್ಷ್ಮೀಯ ಅಲಂಕಾರ ಹಾಗೂ ಶಾಕಾಂಬರಿ ದೇವಿಗೆ ಡ್ರೈ ಫ್ರೂರ್ಟ್ಸ್ ಅಲಂಕಾರ
• ಮಹಾಲಕ್ಷ್ಮಿ ಮಂದಿರ ವೃತ್ತದ ಲಕ್ಷ್ಮೀ ದೇವಿಗೆ ವಿಶೇಷ ಅಭಿಷೇಕ
• ಮಹಾಲಕ್ಷ್ಮಿ ಲೇಔಟ್ ವೀರಾಂಜನೇಯ ದೇವಾಲಯದಲ್ಲಿ ಲಕ್ಷ್ಮೀಗೆ ವಿಶೇಷ ಅಭಿಷೇಕ
ಬೆಳಗ್ಗೆ 9 ಗಂಟೆಗೆ ಅಲಂಕಾರ ಕಾರ್ಯಗಳು ಆರಂಭವಾಗಲಿದ್ದು, ಬೆಳಗ್ಗೆ 10 ಗಂಟೆಯಿಂದ ದೇವಿಗೆ ಪಾದ ದರ್ಶನಕ್ಕೆ ವ್ಯವಸ್ಥೆ ಹಾಗೂ 10 ಗಂಟೆಗೆ ಭಕ್ತರಿಗೆ ಮಹಾಮಂಗಳಾರತಿ ದರ್ಶನ ಪಡೆಯಲು ಎಲ್ಲೆಡೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮುಜರಾಯಿ ಇಲಾಖೆಯಿಂದ ಹಬ್ಬದ ಪ್ರಯುಕ್ತ ನಾಳೆ ಎಲ್ಲಾ ಮುತ್ತೈದೆಯರಿಗೂ ಅರಿಶಿನ ಕುಂಕುಮ ನೀಡಬೇಕು ಎಂದು ಆದೇಶವಾಗಿದೆ. ಹೀಗಾಗಿ ನಾಳೆ ಬನಶಂಕರಿ, ಲಕ್ಷ್ಮೀ ನರಸಿಂಹ ದೇವಾಲಯ, ಮಹಾಲಕ್ಷ್ಮಿ ಲೇಔಟ್ನ ಪ್ರಸನ್ನ ವೀರಾಂಜನೇಯ ದೇವಸ್ಥಾನ, ಕಾಡು ಮಲ್ಲಿಕಾರ್ಜುನ ದೇವಾಲಯ ಸೇರಿ ಎಲ್ಲಾ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಅರಿಶಿನ ಕುಂಕುಮ ನೀಡಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ನಾಳಿನ ವರಮಾಲಕ್ಷ್ಮೀ ಹಬ್ಬಕ್ಕೆ ಎಲ್ಲಾ ದೇವಾಲಯಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಮುಂಜಾನೆಯಿಂದಲೇ ವಿಶೇಷ ಅಲಂಕಾರದಲ್ಲಿರುವ ದೇವಿ ಲಕ್ಷ್ಮೀಯ ದರ್ಶನವನ್ನು ಭಕ್ತರು ಪಡೆಯಬಹುದು.