ಮತ್ತೆ ರಾಮ ನಾಮಬಲದ ಮೇಲೆ ಯೂಪಿ ಚುನಾವಣೆ ಎದುರಿಸಲು ಅಣಿಯಾಗುತ್ತಿರುವ ಬಿಜೆಪಿ

ದೇಶದಲ್ಲಿ ಇನ್ನೂ ಪ್ರತಿ ದಿನ ಸುಮಾರು ಒಂದೂಕಾಲು ಲಕ್ಷ ಕರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸುಮಾರು ಮೂರು ಸಾವಿರ ಜನ ಕ್ರೂರಿ ಕರೋನಾಗೆ ಬಲಿ ಆಗುತ್ತಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ಗೆ ಮೂರನೇ ಅಲೆಯ ಕರೋನಾ ಕೂಡ ಅಪ್ಪಳಿಸಲಿದೆ ಎಂದು ನೀತಿ ಆಯೋಗ ಎಚ್ಚರಿಸಿದೆ. ಮೂರನೇ ಅಲೆಯಿಂದ ಪಾರಾಗಲು ಹೆಚ್ಚೆಚ್ಚು ಲಸಿಕೆ ಹಾಕುವುದೇ ಪರಿಹಾರ ಮಾರ್ಗ ಎಂದಿದೆ. ಆದರೆ ದಿನದಿಂದ ದಿನಕ್ಕೆ ಕರೋನಾ ಲಸಿಕೆ ಕೊರತೆ ಹೆಚ್ಚುತ್ತಲೇ ಇದೆ. ಈ ಗಂಭೀರ ಸಮಸ್ಯೆಯನ್ನು ಪಕಕ್ಕೆ ಸರಿಸಿರುವ ಆಡಳಿತಾರೂಢ ಬಿಜೆಪಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗಳ ತಯಾರಿ ಬಗ್ಗೆ ಚಿಂತನ-ಮಂಥನ ನಡೆಸಿದೆ. ಬಿಜೆಪಿಯ ಮಾತೃ ಸಂಸ್ಥೆ ಅಥವಾ ಮಾರ್ಗದರ್ಶಕ ಸಂಸ್ಥೆ ಆರ್ ಎಸ್ ಎಸ್ ಕೂಡ ಚುನಾವಣೆಗೆ ಅಣಿ ಆಗುವದರತ್ತವೇ ಚಿತ್ತ ಹರಿಸಿದೆ.

ಒಂದೆಡೆ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ನೇತೃತ್ವದಲ್ಲಿ ಶನಿವಾರ ಮತ್ತು ಭಾನುವಾರ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯುತ್ತಿದೆ. ಇನ್ನೊಂದೆಡೆ ಶನಿವಾರದಿಂದ ಮೂರು ದಿನ ಇದೇ ದೆಹಲಿಯಲ್ಲಿ ಆರ್ ಎಸ್ ಎಸ್ ನ ಟಾಪ್ 10 ನಾಯಕರಾದ ಮೋಹನ್ ಭಾಗವತ್, ದತ್ತಾತ್ರೆ ಹೊಸಬಾಳೆ, ಕೃಷ್ಣ ಗೋಪಾಲ್, ಅರುಣ್ ಕುಮಾರ್, ರಾಮದುತ್, ಡಾ. ಮನ್ಮೋಹನ್ ವೈದ್ಯ, ಮುಕುಂದ್ ಸಿಆರ್ ಮತ್ತು ರಾಮದುತ್ ಚಕ್ರಧರ್, ಭೈಯಾಜಿ ಜೋಶಿ ಮತ್ತು ಸುರೇಶ್ ಸೋನಿ ಸಭೆ ನಡೆಸುತ್ತಿದ್ದಾರೆ. ಎರಡೂ ಸಭೆಗಳ ಏಕಮಾತ್ರ ಉದ್ದೇಶ 2022ರಲ್ಲಿ ಉತ್ತರ ಪ್ರದೇಶ ಚುನಾವಣೆಯನ್ನು ಮತ್ತೆ ಗೆಲ್ಲುವುದು ಹೇಗೆ ಎಂದು‌ ಚರ್ಚಿಸುವುದು. ಈ ಸಭೆಗಳಿಂದ ಸದ್ಯಕ್ಕೆ ತಿಳಿದುಬರುತ್ತಿರುವ ಮಾಹಿತಿಗಳ ಪ್ರಕಾರ ಬಿಜೆಪಿಯು ಮುಂದಿನ ಚುನಾವಣೆಯಲ್ಲೂ ‘ರಾಮನ ಜಪ’ ಮಾಡಲು ನಿರ್ಧರಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶವನ್ನು ಮತ್ತೆ ವಶಪಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಚೆನ್ನಾಗಿ ಮನವರಿಕೆಯಾಗಿದೆ. 2022ರಲ್ಲಿ ಉತ್ತರ ಪ್ರದೇಶವನ್ನು ಕಳೆದುಕೊಂಡರೆ 2024ಕ್ಕೆ ಮತ್ತೊಮ್ಮೆ ದೆಹಲಿ ಗದ್ದುಗೆ ಧಕ್ಕಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ ಎನ್ನುವುದು ಚೆನ್ನಾಗಿ ಗೊತ್ತಿದೆ. ಅದೇ ಕಾರಣಕ್ಕೆ ಶತಾಯಗತಾಯ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂದು ರಣತಂತ್ರ ರೂಪಿಸಲಾಗುತ್ತಿದೆ. ಆದರೆ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಉಂಟಾಗಿರುವ ಹೀನಾಯ ಸೋಲು ‘ಏನೆ ಮಾಡಿದರೂ ಕಷ್ಟ’ ಎಂಬ ಸಂದೇಶ ರವಾನಿಸಿದೆ.

ಈ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಸುತ್ತಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ಗಳಿಗೆ ಸದ್ಯ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಹೋದರೆ ಚುನಾವಣೆಯಲ್ಲಿ ಸೋಲುವುದು ಖಚಿತ ಎನಿಸಿದೆ. ಅದೇ ಕಾರಣಕ್ಕೆ ಮತ್ತೆ ‘ಶ್ರೀರಾಮನ ನಾಮಬಲದ ಮೇಲೆ ಚುನಾವಣೆ ಎದುರಿಸೋಣ’ ಎಂಬ ನಿರ್ಧಾರ ಮಾಡಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಅದು ಹೇಗೆ ಎಂದರೆ, ಕರೋನಾ ಇರಲಿ, ಬಿಡಲಿ ಇದೇ ಅಕ್ಟೋಬರ್ ವೇಳೆಗೆ ಅಯೋಧ್ಯೆಯಲ್ಲಿನ ದೇವಾಲಯದ ಅಡಿಪಾಯ ಕಾರ್ಯ ಪೂರ್ಣಗೊಳಿಸಬೇಕು. ಇದಾದ ಕೂಡಲೇ ದೇವಾಲಯದ ನೆಲ ಮಹಡಿ ಕೆಲಸವನ್ನೂ ಪ್ರಾರಂಭಿಸಬೇಕು. ಅಡಿಪಾಯದ ಕೆಲಸ ಪೂರ್ಣ ಆದ ಬಗ್ಗೆ ಮತ್ತು ನೆಲ ಮಹಡಿಯ ಕೆಲಸವನ್ನು ಆರಂಭಿಸಿದ ಬಗ್ಗೆ ವ್ಯಾಪಕ‌ ಪ್ರಚಾರ ನಡೆಸಬೇಕು. ಪೂರಕವಾದ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ‌‌ನಿರ್ಮಾಣ ಮಾಡುವ ಕೆಲಸ ಬಿರುಸಾಗಿ ನಡೆಯುತ್ತಿದೆ ಎಂಬ ಸಂದೇಶ ರವಾನಿಸಬೇಕು ಎಂದು‌ ನಿರ್ಧರಿಸಿದೆ ಎನ್ನಲಾಗಿದೆ.

ಇದಾದ ಮೇಲೆ ಕರೋನಾ ಇದ್ದರೂ ಸುಮಾರು 26 ತಿಂಗಳ ಕಾಲವಕಾಶದಲ್ಲಿ ಅಂದರೆ 2023ರ ಅಂತ್ಯದ ವೇಳೆಗೆ ಅಥವಾ 2024ರ ಆರಂಭದ ವೇಳೆಗೆ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಸಂಪೂರ್ಣ ಕೆಲಸವನ್ನು ಮುಗಿಸಬೇಕು. ಪ್ರಧಾನಿ ನರೇಂದ್ರ ಮೋದಿ ದೇವಾಲಯವನ್ನು ಉದ್ಘಾಟಿಸಬೇಕು. ಅದರಿಂದ 2024ರ ಲೋಕಸಭಾ ಚುನಾವಣೆಗೆ ಅನುಕೂಲ ಆಗುವಂತೆ ನೋಡಿಕೊಳ್ಳಬೇಕು ಎಂದು ಕೂಡ ನಿರ್ಧರಿಸಲಾಗಿದೆ. ಇದೇ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಅಯೋಧ್ಯೆ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಇತ್ತೀಚೆಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ.

ಹಿಂದೆ ಸರಿದ ಯೋಗಿ, ಮೋದಿ, ಅಭಿವೃದ್ಧಿ ಅಜೆಂಡಾ

ಒಂದು ಹಂತದಲ್ಲಿ ಅಯೋಧ್ಯೆ ವಿಷಯವನ್ನು ಸಂಪೂರ್ಣವಾಗಿ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಬೇಕು, ಉತ್ತರ ಪ್ರದೇಶದ ಚುನಾವಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಿನಲ್ಲಿ ಅಥವಾ ನರೇಂದ್ರ ಮೋದಿ ಹೆಸರಿನಲ್ಲಿ ಅಥವಾ ಅಭಿವೃದ್ಧಿ ಅಜೆಂಡಾ ಎಂಬ ಹೆಸರಿನಲ್ಲಿ ಎದುರಿಸಬೇಕು ಎಂದು‌ ಯೋಚನೆ ಮಾಡಲಾಗಿತ್ತು. ಆದರೆ ಗೋವಿನ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯ, ಯೋಗಿ ಆದಿತ್ಯನಾಥ್ ಅವರ ಠಾಕೂರ್ ಸಮುದಾಯದ ಜಾತಿ ರಾಜಕಾರಣ, ಸುಧಾರಿಸದ ಕಾನೂನು ಸುವ್ಯವಸ್ಥೆ, ಹಿಡಿತಕ್ಕೆ ಸಿಗದ ಆಡಳಿತ, ರೈತ ಚಳವಳಿ, ಕರೋನಾ ನಿರ್ವಹಣೆಯಲ್ಲಿ ಆದ ವೈಫಲ್ಯ, ನೂರಾರು ಶವಗಳು ಗಂಗಾನದಿಯಲ್ಲಿ ತೇಲುವಂತಾದುದು ಮತ್ತಿತರ ವಿಷಯಗಳಿಂದಾಗಿ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಚುನಾವಣೆ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದೇ ಕಾರಣಗಳಿಂದಾಗಿ ಮೋದಿ ಮತ್ತು ಯೋಗಿ ಜನಪ್ರಿಯತೆಯೂ ಕುಸಿದಿರುವುದರಿಂದ ಅವರ ಹೆಸರಿನಲ್ಲಿ ಚುನಾವಣೆ ನಡೆಸುವುದರಿಂದ ಪ್ರಯೋಜನ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಆದುದರಿಂದ ಬಿಜೆಪಿ ಮತ್ತೆ ‘ಹಳೆಯ ಗಂಡನ ಪಾದವೇ ಗತಿ’ ಎಂಬಂತೆ ರಾಮನ ಮಂತ್ರ ಜಪಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...