ಉದಯಪುರದ ದರ್ಜಿ ಕನ್ಹಯ್ಯಾ ಲಾಲ್ ತೇಲಿ(48) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿಗಳು ಪೂರ್ವ ನಿಯೋಜನೆಯೊಂದಿಗೆ ಸನ್ನದ್ದರಾಗಿ ಬಂದಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
ಇನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು ಜುಲೈ 12 ವರೆಗೆ ಅಂದರೆ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕೊಲೆ ಆರೋಪಿಗಳಾದ ರಿಯಾಜ್ ಅಖ್ತರಿ, ಗೌಸ್ ಮೊಹಮ್ಮದ್ ಇಬ್ಬರು ಜೂನ್ 28ರಂದು ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಉಚ್ಚಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸುವ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ಇಸ್ಲಾಂಗೆ ಮಾಡಿದ ಅವಮಾನ ಮತ್ತು ಪ್ರಧಾನಿ ಮೋದಿಯನ್ನು ಸಹ ಹತ್ಯೆ ಮಾಡುವುದಾಗಿ ಆರೋಪಿಗಳು ಹತ್ಯೆ ಮಾಡಿದ ನಂತರ ಸೆಲ್ಫಿ ವಿಡಯೋ ಮೂಲಕ ಬೆದರಿಕೆ ಹಾಕಿದ್ದರು.

ಹತ್ಯೆಯಾದ ಕೆಲವೇ ಕೆಲವು ಘಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು ಇಲ್ಲಿಯವರೆಗು ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಶನಿವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಗುಂಪೊಂದು ಹಲ್ಲೆಗೆ ಯತ್ನಿಸಿದೆ ಎಂದು ವರದಿಯಾಗಿದೆ.
ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿದ್ದರು ಹಾಗು ಗಲಭೆಯಾಗದಂತೆ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಇನ್ನು ದರ್ಜಿ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು ಕಾಂಗ್ರೆಸ್ ಹಾಗು ಬಿಜೆಪಿ ನಡುವಿನ ಕೆಸರೆರಚಾಟಕ್ಕೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಆಢಳಿತವಿರುವ ರಾಜಸ್ಥಾನದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ಇಬ್ಬರು ಆರೋಪಿಗಳು ಬಿಜೆಪಿ ಬೆಂಬಲಿತರು ಎಂದು ಬಿಜೆಪಿ ಮುಖಂಡರೊಬ್ಬರ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ ತಿರುಗೇಟು ನೀಡಿದೆ.