ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಗೌರಿಶಂಕರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಎನ್ ಚೆನ್ನಿಗಪ್ಪ ಅವರ ಮಗನಾಗಿರುವ ಗೌರಿಶಂಕರ್, ಜನರೊಂದಿಗೆ ಉತ್ತಮ ಒಡನಾಟವನ್ನೂ ಹೊಂದಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಗೌರಿಶಂಕರ್, ಕಳೆದ ಗೌರಿ ಗಣೇಶ ಹಬ್ಬದಿಂದಲೇ ಪ್ರತಿಗ್ರಾಮಗಳಿಗೂ ಭೇಟಿ ನೀಡಿ, ಮತದಾರರನ್ನು ಓಲೈಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದು ಮಾಜಿ ಶಾಸಕ ಸುರೇಶ್ಗೌಡ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬಹಿರಂಗ ವೇದಿಕೆಯಲ್ಲಿ ಕೊಲೆ ಆರೋಪ ಮಾಡಿದ ಸುರೇಶ್ಗೌಡ
ಮೊನ್ನೆಯಷ್ಟೆ ಗ್ರಾಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಸುರೇಶ್ಗೌಡ ಅವರು ನನ್ನನ್ನು ಕೊಲೆ ಮಾಡುಸ್ತೀಯಾ..? ನನ್ನನ್ನು ಕೊಲೆ ಮಾಡಿಸಲು ಜೈಲಿನಲ್ಲಿರುವ ಆರೋಪಿಗೆ ಸುಪಾರಿ ಕೊಟ್ಟಿದ್ದೀಯಾ..? 5 ಕೋಟಿ ಸುಪಾರಿ ಕೊಟ್ಟು ಹೆಣ ಸಿಗದಂತೆ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದೀಯಾ ಅಂತೆಲ್ಲಾ ಜನರ ಮುಂದೆ ಬಹಿರಂಗ ಮಾಡಿದ್ದರು. ಆ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ್ದ ಸುರೇಶ್ಗೌಡ, ಹೌದು ನನಗೆ ಕೊಲೆ ಬೆದರಿಕೆ ಇರುವುದು ಸತ್ಯ, ನಾನು ಈಗಾಗಲೇ ಸಿಎಂ ಹಾಗು ಗೃಹ ಸಚಿವರ ಜೊತೆಗೂ ಈ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದಿದ್ದರು. ಆ ಬಳಿಕ ಜೆಡಿಎಸ್ ಕಾರ್ಯಕರ್ತನಿಗೆ ಫೋನ್ ಮಾಡಿ ಬಾಯಿಗೆ ಬಂದ ಹಾಗೆ ಬೈದಿದ್ದ ಆಡಿಯೋ ಕೂಡ ವೈರಲ್ ಆಗಿತ್ತು.
ಸುರೇಶ್ಗೌಡಗೆ ಮಾನಸಿಕ ಸ್ಥಿತಿ ಸರಿಯಿಲ್ಲ – ಗೌರಿಶಂಕರ್
ಶಾಸಕರ ಮಾತನ್ನು ತೀರ ಕ್ಷುಲ್ಲಕ ಎನ್ನುವಂತೆ ವ್ಯಂಗ್ಯ ಮಾಡಿದ್ದ ಹಾಲಿ ಶಾಸಕ ಗೌರಿಶಂಕರ್, ಮಾಜಿ ಶಾಸಕರ ಮಾತನ್ನು ಕೇಳಿದರೆ ಶಾಲಾ ಮಕ್ಕಳು ಕೂಡ ನಕ್ಕು ಬಿಡ್ತಾರೆ. ಅವರದ್ದೇ ಸರ್ಕಾರ ಇದೆ. ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಯಾವ ತನಿಖೆಗೆ ಬೇಕಾದರೂ ಒತ್ತಾಯ ಮಾಡಲಿ. ನಾನು ಆ ರೀತಿಯ ಕುತಂತ್ರ ಮಾಡುವ ವ್ಯಕ್ತಿ ನಾನಲ್ಲ. ನಾವು ಸಿದ್ಧಗಂಗಾ ಮಠದ ಪರಂಪರೆಯಲ್ಲಿ ಬೆಳೆದು ಬಂದವರು, ನಾವು ಏನಿದ್ದರೂ ನೇರವಾಗಿ ಹೋರಾಟ ಮಾಡುತ್ತೇವೆ. 10 ವರ್ಷ ಶಾಸಕರಾಗಿ ಕೆಲಸ ಮಾಡಿರುವ ಸುರೇಶ್ಗೌಡ ಅವರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು, ಸುರೇಶ್ಗೌಡ ಅವರಿಗೆ ಮಾನಸಿಕ ಸ್ಥಿಮಿತ ಸರಿಯಿಲ್ಲ ಎಂದಿದ್ದರು. ಜೊತೆಗೆ ನಾನು ತುಮಕೂರು ಎಸ್ಪಿ ಅವರನ್ನು ಭೇಟಿ ಮಾಡಿ ಮಾಜಿ ಶಾಸಕರ ಆರೋಪದ ಬಗ್ಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಪತ್ರವನ್ನೂ ಬಿಡುಗಡೆ ಮಾಡಿದ್ದರು.

ಶಾಸಕರ ಮನವಿ ಬಳಿಕ ಓಡಿ ಬಂದು ದೂರು ಕೊಟ್ಟ ಮಾಜಿ ಶಾಸಕ
ಶಾಸಕರೇ ತುಮಕೂರು ಎಸ್ಪಿಗೆ ಮನವಿ ಮಾಡಿದ ಬಳಿಕ ಜೀವ ಭಯ ಇರುವ ಬಗ್ಗೆ ಮಾಜಿ ಶಾಸಕ ಸುರೇಶ್ಗೌಡ ದೂರು ಸಲ್ಲಿಸದಿದ್ದರೆ ಕೆಟ್ಟ ಸಂದೇಶ ರವಾನೆ ಆಗುತ್ತದೆ ಎನ್ನುವ ಕಾರಣಕ್ಕೆ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ ಸುರೇಶ್ಗೌಡ, ನನ್ನನ್ನು ಕೊಲೆ ಮಾಡಲು ಶಾಸಕ ಗೌರಿಶಂಕರ್, ಅಟ್ಟಿಕಾ ಗೋಲ್ಡ್ ಸಂಸ್ಥೆ ಮಾಲೀಕ ಬಾಬು, ಹಿರೇಹಳ್ಳಿ ಮಹೇಶ್ ಎಂಬುವರ ಮೇಲೆ ಎಫ್ಐಆರ್ ಮಾಡಿಸಿದ್ದರು. ಯಾವಾಗ ಮಾಜಿ ಶಾಸಕರು ದೂರು ನೀಡಿದ್ರು ಹಾಲಿ ಶಾಸಕರೂ ದೂರು ನೀಡಿದ್ದಾರೆ. ಮಾಜಿ ಶಾಸಕ ಸುರೇಶ್ಗೌಡ ಅವರಿಂದಲೇ ನನಗೆ ಜೀವ ಬೆದರಿಕೆ ಇದೆ ಎಂದು ಪ್ರಕರಣ ದಾಖಲು ಮಾಡಿದ್ದಾರೆ. ಮಾಜಿ ಶಾಸಕರು ಅರೆಯೂರಿನಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಆ ಬಳಿಕ ಜೀವ ಭಯ ಕಾಡ್ತಿದೆ ಎಂದಿದ್ದಾರೆ.
ತಮ್ಮ ರಾಜಕೀಯ ತೆವಲಿಗೆ ಪೊಲೀಸ್ ಠಾಣೆಗೆ ದೂರು
ಚುನಾವಣಾ ಕಾವು ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತೀವ್ರವಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಅಥವಾ ಜನರನ್ನು ತಮ್ಮ ಕಡೆಗೆ ಓಲೈಸಿಕೊಳ್ಳಲು ಮಾಜಿ ಶಾಸಕ ಸುರೇಶ್ಗೌಡ ಸುಳ್ಳು ಆರೋಪ ಮಾಡಿದ್ದಾರೆ ಎನ್ನುವುದು ಕ್ಷೇತ್ರದ ಜನರೇ ಹೇಳುತ್ತಿದ್ದಾರೆ. ಆದರೆ ಯಾವಾಗ ಎಸ್ಪಿಗೆ ಶಾಸಕರು ದೂರು ನೀಡಿದರೋ ಆಗ ಇಕ್ಕಟ್ಟಿಗೆ ಸಿಲುಕಿ ತಾನೇ ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರತಿದೂರು ದಾಖಲಾಗಿದೆ. ಯಾರು ಯಾರಿಗೆ ಜೀವ ಬೆದರಿಕೆ ಹಾಕಿದ್ದಾರೆ ಅನ್ನೋದನ್ನು ಪೊಲೀಸ್ರು ತನಿಖೆ ಮಾಡಿ ಪ್ರಕರಣವನ್ನು ಇತ್ಯರ್ಥ ಮಾಡಬೇಕಿದೆ. ಯಾರಿಂದ ಯಾರಿಗೂ ಜೀವ ಬೆದರಿಕೆ ಇಲ್ಲ ಎನ್ನುವುದಾದರೆ ಇಬ್ಬರಿಗೂ ತನಿಖಾ ವೆಚ್ಚವನ್ನು ಭರಿಸುವಂತೆ ನೋಟಿಸ್ ಕೊಡಬೇಕು.
ಕೃಷ್ಣಮಣಿ