ರಾಜಕೀಯ ಪಕ್ಷಗಳ ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುವುದು ಮತದಾರನ ಹಕ್ಕು
-ನಾ ದಿವಾಕರ
ಕೇಂದ್ರ ಚುನಾವಣಾ ಆಯೋಗದ ಸಾಂವಿಧಾನಿಕ ನಿಯಮಾವಳಿಗಳು ಎಷ್ಟೇ ಶಾಸನಬದ್ಧವಾಗಿದ್ದರೂ ಭಾರತದಲ್ಲಿ ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಸ್ಥಿರ ಬಂಡವಾಳ ಹೂಡಿಕೆ ಮತ್ತು ಚರ ಬಂಡವಾಳದ ಹರಿವಿಗೆ ಒದಗಿಬರುವ ಸಾಂವಿಧಾನಿಕ ಪ್ರಕ್ರಿಯೆಯಾಗಿ ಪರಿಣಮಿಸಿವೆ. ಪಕ್ಷಾತೀತವಾಗಿ ಕಾಣಬಹುದಾದ ಒಂದು ಸಮಾನ ಎಳೆ ಎಂದರೆ ಗ್ರಾಮಪಂಚಾಯತ್-ಸ್ಥಳೀಯ ಸಂಸ್ಥೆಗಳಿಂದ ವಿಧಾನಸಭೆ-ಸಂಸತ್ತಿನವರೆಗೆ ನಡೆಯುವ ಚುನಾವಣೆಗಳು ಮೂಲತಃ ಮಾರುಕಟ್ಟೆ ಶಕ್ತಿಗಳ ಹಣಕಾಸು ನೆರವಿನೊಂದಿಗೇ ನಡೆಯುತ್ತವೆ. ಬೆರಳೆಣಿಕೆಯಷ್ಟು ಅಪವಾದಗಳನ್ನು ಹೊರತುಪಡಿಸಿದರೆ ಸಂಭಾವ್ಯ ಜನಪ್ರತಿನಿಧಿಗಳು ತಮ್ಮ ಆರ್ಥಿಕ ತಳಪಾಯ ಮತ್ತು ಮಾರುಕಟ್ಟೆ ಪ್ರಭಾವವನ್ನು ಆಧರಿಸಿಯೇ ಮತದಾರರನ್ನು ಒಲಿಸಿಕೊಳ್ಳಲು ಯತ್ನಿಸುವುದು ಸಾಮಾನ್ಯವಾಗಿ ಕಾಣಬಹುದಾದ ದೃಶ್ಯ. ಇದು ಹೊಸ ವಿದ್ಯಮಾನವೂ ಅಲ್ಲ.
ಭಾರತ 1980ರಲ್ಲಿ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ರಾಜಕೀಯ ಪಕ್ಷಗಳಿಗೆ ಮಾರುಕಟ್ಟೆಯ ಓಲೈಕೆ ಒಂದು ಪ್ರಧಾನ ಕಾರ್ಯಸೂಚಿಯಾದರೆ ವ್ಯಕ್ತಿಗತ ನೆಲೆಯಲ್ಲಿ ಕೆಲವೇ ಬಂಡವಾಳಿಗರನ್ನು ತುಷ್ಟೀಕರಿಸುವುದು ಅನುಷಂಗಿಕ ಕಾರ್ಯಸೂಚಿಯಾಗಿ ಪರಿಣಮಿಸಿರುವುದು ವಾಸ್ತವ. ಡಿಜಿಟಲ್ ಯುಗದ ಉಚ್ಚ್ರಾಯ ಹಂತದಲ್ಲಿರುವ ಭಾರತದಲ್ಲಿ ಈಗ ಆಪ್ತ ಬಂಡವಾಳಶಾಹಿ ವ್ಯವಸ್ಥೆ ಅಧಿಕೃತವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವುದು, ಇತ್ತೀಚಿನ ಅಂಬಾನಿ ಕುಟುಂಬದ ಮದುವೆ ಸಂಭ್ರಮದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಂಬಾನಿ ಪುತ್ರನ ಮದುವೆಗೆ ಅನುಕೂಲ ಮಾಡಿಕೊಡಲು ಜಾಮ್ನಗರದ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹತ್ತು ದಿನಗಳ ಕಾಲ ತಾತ್ಕಾಲಿಕವಾಗಿ ಅಂತರ ರಾಷ್ಟ್ರೀಯ ದರ್ಜೆಗೆ ಏರಿಸಿರುವ ಕ್ರಮ ಆಪ್ತ ಬಂಡವಾಳಶಾಹಿಯ ಪರಾಕಾಷ್ಠೆಯಾಗಿ ಕಾಣುತ್ತದೆ.

ಚುನಾವಣಾ ಬಾಂಡ್ ಎಂಬ ಹಿಂಬಾಗಿಲು
ಈ ನಡುವೆಯೇ ಕೇಂದ್ರ ಎನ್ಡಿಎ ಸರ್ಕಾರ 2018ರಲ್ಲಿ ಜಾರಿಗೆ ತಂದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂಕೋರ್ಟ್ ಅಸಾಂವಿಧಾನಿಕ ಎಂದು ಹೇಳಿರುವುದು ಬಂಡವಾಳಶಾಹಿಯ ವೈರುಧ್ಯಗಳನ್ನು ತೆರೆದಿಡುತ್ತದೆ. 2017ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಹಣಕಾಸು ಮಸೂದೆಯ ರೂಪದಲ್ಲಿ ಮಂಡಿಸಿ ಜಾರಿಗೊಳಿಸಿದ ಚುನಾವಣಾ ಬಾಂಡ್ ಯೋಜನೆ ಮೂಲತಃ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ಯಮಿಗಳ ಹೆಸರುಗಳನ್ನು ಗೋಪ್ಯವಾಗಿರಿಸುವ ಒಂದು ಮಾರ್ಗವಾಗಿತ್ತು. ಈ ಯೋಜನೆಯನ್ನು ಜಾರಿಗೊಳಿಸಲು ಆರ್ಬಿಐ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಹಣಕಾಸು ಮಸೂದೆಗೆ ರಾಜ್ಯಸಭೆಯ ಅನುಮೋದನೆ ಅಗತ್ಯ ಇರುವುದಿಲ್ಲ, ಹಾಗಾಗಿ 2017ರಲ್ಲಿ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿದ್ದರೂ ಎನ್ಡಿಎ ಸರ್ಕಾರ ಲೋಕಸಭೆಯ ಬಹುಮತವನ್ನು ಬಳಸಿಕೊಂಡು ಈ ಯೋಜನೆಗೆ ಚಾಲ್ತಿ ನೀಡಿತ್ತು.
ಈ ಯೋಜನೆಯನ್ನು ಜಾರಿಗೊಳಿಸುವ ಸಲುವಾಗಿಯೇ ಹಲವು ಇತರ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿತ್ತು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎ ಅನ್ವಯ ರಾಜಕೀಯ ಪಕ್ಷಗಳು 20,000/- ಕ್ಕೂ ಹೆಚ್ಚಿನ ಮೊತ್ತದ ದೇಣಿಗೆ ಪಡೆದರೆ ದಾಖಲೆಗಳನ್ನು ಇಡಬೇಕಾಗುತ್ತದೆ. 2017ರ ಹಣಕಾಸು ಕಾಯ್ದೆ ಇದನ್ನು ತಿದ್ದುಪಡಿ ಮಾಡಿ ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಗೆ ಈ ನಿಯಮ ಅನ್ವಯಿಸದಂತೆ ಮಾಡಲಾಯಿತು. 1951ರ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಸಿ ಅನ್ವಯ 20 ಸಾವಿರಕ್ಕೂ ಮೇಲ್ಪಟ್ಟ ದೇಣಿಗೆಗಳಿಗೆ ರಾಜಕೀಯ ಪಕ್ಷಗಳು ಆಯಾ ಹಣಕಾಸು ವರ್ಷದಲ್ಲಿ ಲೆಕ್ಕಪತ್ರಗಳನ್ನು ಒಪ್ಪಿಸಬೇಕಿತ್ತು. ಈ ನಿಯಮವನ್ನು ತಿದ್ದುಪಡಿ ಮಾಡಿ ಚುನಾವಣಾ ಬಾಂಡ್ಗಳ ಮೂಲಕ ಪಡೆಯುವ ದೇಣಿಗೆಗೆ ವಿನಾಯಿತಿ ನೀಡಲಾಯಿತು. 2013ರ ಕಂಪನಿಗಳ ಕಾಯ್ದೆಯ ಸೆಕ್ಷನ್ 182(3) ಅನ್ವಯ ಎಲ್ಲ ಕಂಪನಿಗಳೂ ತಮ್ಮ ವಾರ್ಷಿಕ ಲೆಕ್ಕಪತ್ರಗಳಲ್ಲಿ ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಯ ವಿವರಗಳನ್ನು, ಪಕ್ಷಗಳ ಹೆಸರು ಮತ್ತು ಮೊತ್ತದೊಂದಿಗೆ ಒದಗಿಸಬೇಕಿತ್ತು. 2017ರ ಕಾಯ್ದೆಯಲ್ಲಿ ಈ ನಿಯಮವನ್ನು ಸಡಿಲಗೊಳಿಸಿ ಕೇವಲ ಮೊತ್ತವನ್ನು ನಮೂದಿಸಿದರೆ ಸಾಕು ಎಂದು ತಿದ್ದುಪಡಿ ಮಾಡಲಾಯಿತು.
ಭಾರತದ ಸಾಮಾನ್ಯ ಮತದಾರನಿಗೆ ನ್ಯಾಯವ್ಯವಸ್ಥೆಯು ಸದಾ ಅಪಾರದರ್ಶಕವಾಗಿಯೇ ಇರುತ್ತದೆ. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಪ್ರಜಾತಂತ್ರದ ಮೂಲ ಅಡಿಪಾಯ. ಆದರೆ ಈ ತಳಹದಿಯನ್ನೇ ಭಂಗಗೊಳಿಸುವಂತಹ ಒಂದು ಕಾಯ್ದೆಯನ್ನು ಜಾರಿಗೊಳಿಸುವ ಸಲುವಾಗಿ ನಾಲ್ಕು ಪ್ರಚಲಿತ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗಿತ್ತು. ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಯಾವುದೇ ಪಕ್ಷ ಇಂತಹ ಕಾಯ್ದೆಗಳನ್ನು ಸುಲಭವಾಗಿ ಜಾರಿಗೊಳಿಸುತ್ತದೆ. ಏಕೆಂದರೆ ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ಸ್ವತಂತ್ರವಾಗಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ. ಪಕ್ಷದ ವಿಪ್ ಅಥವಾ ಅಣತಿಯಂತೆ ಮಸೂದೆಗಳಿಗೆ ಪ್ರತಿಕ್ರಯಿಸಬೇಕಾಗುತ್ತದೆ. ಈ ನ್ಯೂನತೆಯನ್ನೇ ಬಳಸಿಕೊಂಡ ಬಿಜೆಪಿ ಸರ್ಕಾರ ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ಸಾರ್ವಜನಿಕ ಸಮಾಲೋಚನೆಯನ್ನೂ ನಡೆಸದೆ, ಲೋಕಸಭೆಯಲ್ಲಿ ಚರ್ಚೆಗೂ ಅವಕಾಶವೀಯದೆ, ಧ್ವನಿಮತದ ಮೂಲಕ ಯೋಜನೆಗೆ ಚಾಲನೆ ನೀಡಿತ್ತು.
ಬಂಡವಾಳ ಮಾರುಕಟ್ಟೆಯ ರಾಜಕಾರಣ
ಕಾರ್ಪೋರೇಟ್ ಉದ್ದಿಮೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ವಿಶ್ವದಾದ್ಯಂತ ಪ್ರಚಲಿತವಾಗಿರುವ ಒಂದು ಪದ್ಧತಿ. ಇದರ ಔಚಿತ್ಯದ ಪ್ರಶ್ನೆ ಬದಿಗಿಟ್ಟು ನೋಡಿದಾಗಲೂ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕಾರ್ಪೋರೇಟ್ ಉದ್ದಿಮೆಗಳ ರಾಜಕೀಯ ದೇಣಿಗೆಗೆ ಒಂದು ಮಿತಿಯನ್ನು ವಿಧಿಸಿರುವುದನ್ನು ಕಾಣಬಹುದು. ಭಾರತದಲ್ಲೂ ಸಹ ಚುನಾವಣಾ ಬಾಂಡ್ ಯೋಜನೆಗೆ ಮುನ್ನ ಈ ಪರಿಮಿತಿ ಜಾರಿಯಲ್ಲಿತ್ತು. ಔದ್ಯಮಿಕ ಜಗತ್ತು ರಾಜಕೀಯ ಪಕ್ಷಗಳ ಮೇಲೆ ಅಥವಾ ಆಳ್ವಿಕೆಯ ಮೇಲೆ ಪ್ರಭಾವ ಬೀರದಂತೆ ತಡೆಯಲು ಈ ನಿಯಮವನ್ನು ಅನುಸರಿಸಲಾಗುತ್ತಿತ್ತು. ಆದರೆ ಚುನಾವಣಾ ಬಾಂಡ್ ಯೋಜನೆಯಲ್ಲಿ ಈ ಮಿತಿಯನ್ನೇ ತೆಗೆದುಹಾಕಲಾಯಿತು. ಅಷ್ಟೇ ಅಲ್ಲದೆ, ಕಂಪನಿಗಳು ತಮ್ಮ ಲಾಭದ ಒಂದು ನಿಗದಿತ ಅಂಶವನ್ನು ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡುವ ನಿಯಮವನ್ನೂ ತೆಗೆದುಹಾಕಲಾಯಿತು.
(ಮುಂದುವರೆಯುತ್ತದೆ)