ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನಲೆ, ಇಂದು ಸುಮಾರು 45 ಕ್ಷೇತ್ರಗಳಿಗೆ 5 ನೇ ಹಂತದ ಚುನಾವಣೆ ನಡೆಯುತ್ತಿದ್ದು, ಬಿಧಾನ್ ನಗರ ಕ್ಷೇತ್ರದ ಮತಗಟ್ಟೆಯ ಬಳಿ ಬಿಜೆಪಿ ಹಾಗು ಟಿಎಂಸಿ ಅಭ್ಯರ್ಥಿಗಳ ನಡುವೆ ಘರ್ಷಣೆ ನಡೆದಿದೆ.ಭದ್ರತಾ ದೃಷ್ಟಿಯಿಂದ ತಕ್ಷಣ ಎಚ್ಚೆತ್ತುಕೊಂಡ ಚುನಾವಣಾ ಆಯೋಗ ಆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ಸಿಬ್ಬಂದಿಯನ್ನು ನಿಯೋಜಿಸಿದೆ.
ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ ನಡೆದಿದ್ದು, ಎಂಟು ಜನರು ಗಾಯಗೊಂಡಿದ್ದಾರೆಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಟಿಎಂಸಿ ಅಭ್ಯರ್ಥಿ ಸುಜಿತ್ ಬೋಸ್ ಅವರು ಬಿಜೆಪಿ ಅಭ್ಯರ್ಥಿ ಸಬಿಯಾಸಾಚಿ ದತ್ತಾ ಈ ಘರ್ಷಣೆಗೆ ಕಾರಣ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಉತ್ತರದ ಪರಗಣ ಜಿಲ್ಲೆಯ ಕಮರಹತಿಯ ಮತದಾನದ ಕೇಂದ್ರದಲ್ಲಿ ಬಿಜೆಪಿ ಏಜೆಂಟ್ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಚುನಾವಣಾ ಆಯೋಗ ವರದಿ ಕೇಳಿದೆ ಎಂದು ಎಎನ್ಐ ವರದಿ ಮಾಡಿದೆ. ಮೃತ ವ್ಯಕ್ತಿಯ ಹೆಸರು ಅಭಿಜೀತ್ ಸಮಂತಾ, ಆತ ಅಸ್ವಸ್ಥಗೊಂಡಾಗ ಆತನ ಸಹಾಯಕ್ಕೆ ಯಾರೋ ಬರಲಿಲ್ಲ ಹಾಗು ತುರ್ತು ಚಿಕಿತ್ಸೆಗೆ ಯಾವುದೇ ಸೌಲಭ್ಯವಿರಲಿಲ್ಲ ಎಂದು ಮೃತ ವ್ಯಕ್ತಿಯ ಸಹೋದರ ಎಎನ್ಐ ಗೆ ತಿಳಿಸಿದ್ದಾರೆ.
ಇಂದು ಪಶ್ಚಿಮ ಬಂಗಾಳದಲ್ಲಿ ಜಲ್ಪೈಗುರಿ, ಕಾಲಿಂಪಾಂಗ್, ಡಾರ್ಜಿಲಿಂಗ್ ನಾಡಿಯಾ ಜಿಲ್ಲೆಗಳಲ್ಲಿ, ಉತ್ತರ 24 ಪರಗಣಗಳು, ಮತ್ತು ಪೂರ್ಬಾ ಬರ್ಧಾಮನ್ ಜಿಲ್ಲೆಗಳನ್ನು ಸೇರಿ ಒಟ್ಟು 45 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 39 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 319 ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಒಟ್ಟು 8 ಹಂತದ ಚುನಾವಣೆಯಲ್ಲಿ 5 ನೇ ಹಂತದ ಚುನಾವಣೆ ಎಲ್ಲದಕ್ಕಿಂತ ದೊಡ್ಡ ಹಂತವಾಗಿದೆ. ಜೊತೆಗೆ ರಾಜಕೀಯವಾಗಿಯೂ ಮಹತ್ವ ಪಡೆದಿದೆ.