ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಬಳಿಕ ಸಿಎಂ ಸ್ಥಾನಕ್ಕಾಗಿ ಹಗ್ಗಾಜಗ್ಗಾಟ ನಡೆದಿತ್ತು. ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ ಸ್ಥಾನವೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದರು. ಕಳೆದ ನಾಲ್ಕು ದಿನಗಳಿಂದ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಯಲ್ಲೇ ಬೀಡು ಬಿಟ್ಟರೂ ಮುಖಾಮುಖಿ ಆಗದೆ, ಅಂತರ ಕಾಯ್ದುಕೊಂಡಿದ್ದರು. ಪ್ರತ್ಯೇಕವಾಗಿ ನಾಯಕರ ಜೊತೆಗೆ ಚರ್ಚೆ ನಡೆಸಿದ್ದರು. ತಮ್ಮ ಆಪ್ತ ಶಾಸಕರ ಜೊತೆಗೆ ಚರ್ಚೆ ನಡೆಸುತ್ತ ಹೈಕಮಾಂಡ್ ಮೇಲೆ ಒತ್ತಡ ತಂತ್ರ ಅನುಸರಿಸುವ ಕೆಲಸ ಮಾಡಿದ್ದರು. ಆದರೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನೂತನ ಸಿಎಂ ಯಾರು ಅನ್ನೋ ಪ್ರಶ್ನೆಗೆ ಉತ್ತರ ನೀಡುವ ಕೆಲಸ ಮಾಡಿದೆ. ಸಿದ್ದರಾಮಯ್ಯ ಸಿಎಂ ಆಗಲಿದ್ದು, ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇಂದು ಸಂಜೆ ಶಾಸಕಾಂಗ ಸಭೆ ನಿಗದಿಯಾಗಿದ್ದು, ಸಭೆ ಬಳಿಕ ಮತ್ತೆ ಉಭಯ ನಾಯಕರು ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿ ಆಗಿ ಪದಗ್ರಹಣ..
ಮಾಜಿ ಸಿಎಂ ಸಿದ್ದರಾಮಯ್ಯ, ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಲಿದ್ದು, ಆ ಬಳಿಕ ಮಂತ್ರಿ ಮಂಡಲದ ಆಯ್ಕೆ ಶುರುವಾಗಲಿದೆ. ಈಗಾಗಲೇ ಒಬ್ಬರೇ ಡಿಸಿಎಂ ಎನ್ನುವ ಮಾತನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದೆ. ಇನ್ನು ರಾಜಭವನಕ್ಕೆ ತೆರಳಿ ಪ್ರಮಾಣ ವಚನ ಕಾರ್ಯಕ್ರಮದ ಸಿದ್ಧತೆಗಳನ್ನು ಶುರು ಮಾಡುವಂತೆ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಡಾ ಜಿ. ಪರಮೇಶ್ವರ್, ರಾಜ್ಯಪಾಲರಿಗೆ ಕೆಪಿಸಿಸಿ ಅಧ್ಯಕ್ಷರ ಪತ್ರ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಶನಿವಾರ ಮಧ್ಯಾಹ್ನ 12.30ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ ಎನ್ನಲಾಗಿದೆ. ಮೇ 20ರಂದು ಬೆಂಗಳೂರಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನದ ಮೂಲಕ ಪ್ರಮಾಣ ವಚನ ಕಾರ್ಯಕ್ರಮ ನಡೆಸಲು ಹೈಕಮಾಂಡ್ ನಿರ್ಧಾರ ಮಾಡಿದೆ. ಸಿಎಂ ಸಿದ್ದರಾಮಯ್ಯ ಪದಗ್ರಹಣ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸಿಎಂಗಳು, ಸಚಿವರು, ಕಾಂಗ್ರೆಸ್ ಬೆಂಬಲಿಸುವ ರಾಜ್ಯದ ಸಿಎಂಗಳಿಗೂ ಆಹ್ವಾನ ನೀಡಲಾಗಿದೆ. ಹೊರ ರಾಜ್ಯಗಳ ವಿಪಕ್ಷ ನಾಯಕರಿಗೂ ಆಹ್ವಾನ ನೀಡಲಿದ್ದು, ಬಿಜೆಪಿ ವಿರೋಧಿ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.
ಅಧಿಕಾರ ಹಂಚಿಕೆ ಕಗ್ಗಂಟು ಸುಖಮಯ ಆಗಿದ್ದು ಹೇಗೆ..?
ಕಾಂಗ್ರೆಸ್ನ ಘಟಾನುಘಟಿ ನಾಯಕರಾದ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದರು. ಅಂತಿಮವಾಗಿ ಅಧಿಕಾರ ಹಂಚಿಕೆಯನ್ನು ಸುಸೂತ್ರವಾಗಿ ಮುಗಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮೇಲುಗೈ ಸಾಧಿಸಿದೆ. ಸಿಎಂ ಹುದ್ದೆಯನ್ನು 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಆದರೆ ಇದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ಅಧಿಕಾರ ಹಂಚಿಕೆ ವಿಚಾರವನ್ನು ಎಐಸಿಸಿ ನಾಯಕರೇ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಪಟ್ಟು ಹಿಡಿದಿದ್ದರು ಎನ್ನಲಾಗಿದ್ದು, ಅಂತಿಮವಾಗಿ ಆಡಳಿತ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣಕ್ಕೆ ಬಹಿರಂಗ ಮಾಡದೆ ಇರಲು ನಿರ್ಧಾರ ಮಾಡಲಾಗಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಎಂದು ಅಧಿಕೃತವಾಗಿ ಘೋಷಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಅಧಿಕಾರ ಹಂಚಿಕೆ ಬಗ್ಗೆ ನಿಮಗೆ ಹೇಳಿದ್ದು ಯಾರು..? ಟಿವಿಯಲ್ಲಿ ಬಂದಿದ್ದು ಎಲ್ಲವೂ ಸತ್ಯವಲ್ಲ ಎಂದು ಉತ್ತರ ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಸಿಎಂ ಆಗುವುದು ಯಾವಾಗ ಗೊತ್ತ..?
ಶನಿವಾರ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಲಿರುವ ಸಿದ್ದರಾಮಯ್ಯ, 2025 ರ ನವೆಂಬರ್ 20ರ ವರೆಗೆ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಲಿದ್ದಾರೆ.. ಆ ಬಳಿಕ ಅಂದರೆ 2025 ರ ನವೆಂಬರ್ 25 ರಂದು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿ ಅಧಿಕಾರಕ್ಕೆ ಏರಲಿದ್ದಾರೆ. ಸಿದ್ದರಾಮಯ್ಯ ಅವರಿಂದ ಗೌರವಯುವಾಗಿ ಅಧಿಕಾರ ಹಸ್ತಾಂತರ ಮಾಡಿಸುವ ಹೊಣೆಗಾರಿಕೆಯನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗು ಕೆ.ಸಿ ವೇಣುಗೋಪಾಲ್ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಧಿಕಾರ ಹಸ್ತಾಂತರಕ್ಕೂ ಮುನ್ನ ಸಿಎಂ ಹಾಗು ಡಿಸಿಎಂ ಇಬ್ಬರೂ ಒಟ್ಟಿಗೆ ಕುಳಿತು ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕು. ಮನಸಿಗೆ ಬಂದ ಹಾಗೆ ಸಿಎಂ ಅಧಿಕಾರ ಚಲಾಯಿಸಬಾರದು. ಅಧಿಕಾರ ಹಸ್ತಾಂತರದ ವೇಳೆ ಸಮಸ್ಯೆ ತಂದೊಡ್ಡಬಾರದು ಅನ್ನೋ ಒಪ್ಪಂದವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಇನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಭಾರಿ ಸಂಖ್ಯೆಯಲ್ಲಿದ್ದು ಪ್ರಾದೇಶಿಕವಾರು, ಜಿಲ್ಲಾವಾರು ಹಾಗು ಜಾತಿವಾರು ಆದ್ಯತೆ ನೀಡಲು ಚಿಂತನೆ ಮಾಡಲಾಗಿದೆ. ಕೆಲವು ಹಿರಿಯ ಸಚಿವರಿಗೆ ಮಾತ್ರ ಐದು ವರ್ಷ ಅವಕಾಶ ನೀಡಲಿದ್ದು, ಯುವಕರಿಗೆ ಎರಡೂವರೆ ವರ್ಷ ಸಚಿವ ಸ್ಥಾನ ನೀಡಿ ಆ ಬಳಿಕ ವಾಪಸ್ ಪಡೆಯಲಾಗುವುದು. ಮುಂದಿನ ಅವದಿಗೆ ಮತ್ತೆ ಒಂದಿಷ್ಟು ಯುವಕರನ್ನು ಸಚಿವರನ್ನಾಗಿ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.
ಕೃಷ್ಣಮಣಿ