ಬಿಜೆಪಿ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ ಪ್ರಮುಖ ಮೂವರು ಆರೋಪಿಗಳನ್ನು ಕರ್ನಾಟಕ ಗಡಿ ಬಳಿ ಮಂಗಳೂರಿ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿ ಹಲ್ಲೆ ನಡೆಸಿದ ಮೂವರು ಆರೋಪಿಗಳಾದ ಸುಳ್ಯದ ನಿವಾಸಿಗಳಾದ ಶಿಯಾಬ್ (33), ಅಂಕತಡ್ಕದ ರಿಯಾಝ್ (27) ಸುಳ್ಯದ ಎಲಿಮಲೆ ನಿವಾಸಿ ಬಶೀರ್ನನ್ನು ಇಂದು ಬೆಳಗ್ಗೆ ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದರು.

ಪ್ರವೀಣ್ ಹತ್ಯೆಗೈದು ಪ್ರಮುಖ ಮೂವರು ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದರು. ಆ ಬಳಿಕ ಪೊಲೀಸರು ಆರೋಪಿಗಳ ಪತ್ತೆಗಾಗಿ ಕೇರಳದಲ್ಲಿ ಬೀಡುಬಿಟ್ಟಿದ್ದರು. ಇದೀಗ ತಲಪಾಡಿಯಲ್ಲಿ ಮೂವರು ಆರೋಪಿಗಳಾದ ಶಿಯಾಬ್, ರಿಯಾಝ್, ಬಶೀರ್ ಎಂಬಾತನನ್ನು ಬಂಧಿಸಲಾಗಿದೆ.
ಶಿಯಾಬ್ ಕ್ಯಾಂಪ್ಕೋ ಕಂಪನಿಗೆ ಕೊಕ್ಕೊ ವಿತರಣೆ ಮಾಡುತ್ತಿದ್ದರೆ ರಿಯಾಝ್ ಕೋಳಿ ವ್ಯಾಪಾರ ಮಾಡುತ್ತಿದ್ದ. ಬಶೀರ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ. ಕೃತ್ಯಕ್ಕೆ ೪ ಬೈಕ್ ಹಾಗೂ ೧ ಕಾರನ್ನು ಬಳಸಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
BJP Yuva Morcha worker Praveen Nettaru murder case | Today around 8 am, Dakshina Kannada Police nabbed 3 people who were involved in the murder. Earlier, we had arrested 7 people who were part of the conspiracy. So, a total of 10 people arrested: ADGP Mangaluru, Karnataka pic.twitter.com/0F4HukDbau
— ANI (@ANI) August 11, 2022
ಆರೋಪಿಗಳ ಬಗ್ಗೆ ಮೊದಲೇ ನಮಗೆ ಸುಳಿವು ಸಿಕ್ಕಿತ್ತು. ಆದರೆ ನಾವು ಬಹಿರಂಗ ಮಾಡಿರಲಿಲ್ಲ. ಮುಂದೆ ಈ ರೀತಿಯ ಯಾವುದೇ ಕೃತ್ಯ ನಡೆಯದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಾರೆಂಟ್ ಇಶ್ಯೂ ಮಾಡಿ ಹಂತಕರು ಮತ್ತು ಹಂತಕರಿಗೆ ಸಹಕಾರ ನೀಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರನ್ನು ಬಂಧನ ಮಾಡುವುದಿಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸುತ್ತೇವೆ.
ಯಾರನ್ನು ಫಿಕ್ಸ್ ಮಾಡುವುದಕ್ಕೆ ಹೋಗುವುದಿಲ್ಲ. ಯಾರನ್ನೋ ಬಂಧಿಸುವುದಕ್ಕೆ ಇದು ಹುಡುಗಾಟವಲ್ಲ. ನಮಗೆ ಜಾತಿ, ಧರ್ಮ, ಬಣ್ಣ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲ ಮಾಹಿತಿಯನ್ನು ನಾವು ಎನ್ಐಎಗೆ ನೀಡುತ್ತೇವೆ. ಎನ್ಐಎ ಕೂಡಾ ತನಿಖೆ ಮುಂದುವರಿಸುತ್ತಿದೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ.
ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಶತಾಯಗತಾಯವಾಗಿ ಈ ಪ್ರಕರಣ ಭೇದಿಸಬೇಕಾಗಿತ್ತು. ಜನರಲ್ಲಿಯೂ ಸಾಕಷ್ಟು ಆತಂಕವಿತ್ತು. ಪ್ರಕರಣ ಭೇದಿಸಲು ಸಾಕಷ್ಟು ಒತ್ತಡಗಳಿತ್ತು. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅಧಿಕಾರಿ ತಂಡಕ್ಕೆ ಬಹುಮಾನವೂ ಘೋಷಿಸಲಾಗುತ್ತದೆ ಎಂದು ತಿಳಿಸಿದರು.