ಪಾದಯಾತ್ರೆಗೂ ಮೊದಲೇ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ಬಿಜೆಪಿ ನಾಯಕರು ನಡೆದುಕೊಳ್ತಿರೋ ರೀತಿನೀತಿಗಳು ಸರಿ ಕಾಣ್ತಿಲ್ಲ ಎಂದು ಪಾದಯಾತ್ರೆಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು. ಆದರೆ ದೆಹಲಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ವಿಜಯೇಂದ್ರ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಪಾದಯಾತ್ರೆಗೆ ಬಂದು ಚಾಲನೆ ಕೊಟ್ಟ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆ ಮಂಡ್ಯ ತಲುಪುವ ತನಕ ನಿಯಂತ್ರಣದಲ್ಲಿದ್ದ ಪಾದಯಾತ್ರೆ ಮಂಡ್ಯ ಗಡಿ ತಲುಪುತ್ತಿದ್ದ ಹಾಗೆ ಗಲಿಬಿಲಿಗೊಂಡ ಇಲಿಯಂತೆ ಆಗಿದೆ.

ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣವಾಗಿದ್ದ ಹಾಸನದ ಮಾಜಿ ಶಾಸಕ ಪ್ರೀತಂಗೌಡ ಪಾದಯಾತ್ರೆಯಲ್ಲಿ ಭಾಗಿಯಾಗಿ ಕಿಚ್ಚು ಹಚ್ಚುವ ಕೆಲಸ ಮಾಡಿದ್ದರು. ಆ ಬಳಿಕ ಮಂಡ್ಯದಲ್ಲಿ ಗೌಡರ ಗೌಡ ಪ್ರೀತಂಗೌಡ ಅಂತಾ ಘೋಷಣೆ ಹಾಕಿಸಿಕೊಂಡು ಮತ್ತೊಂದು ಸಂದೇಶ ರವಾನೆ ಮಾಡುವ ಪ್ರಯತ್ನ ಮಾಡಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಗೌಡರ ಗೌಡ ದೇವೇಗೌಡ ಎಂದು ಘೋಷಣೆ ಕೂಗುವ ಜೊತೆಗೆ ತಳ್ಳಾಟ, ನೂಕಾಟ ನಡೆದಿತ್ತು. ಆ ಬಳಿಕ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ಹಾಸನದ ಬಿಜೆಪಿ ನಾಯಕರು ಕುಮಾರಣ್ಣನವರನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲಾ ಸರಿಯಿರಲ್ಲ. ತಮ್ಮ ಪಾಡಿಗೆ ತಾವು ಇದ್ದರೆ ಸೂಕ್ತ ಎನ್ನುವ ಎಚ್ಚರಿಕೆ ಸಂದೇಶವನ್ನೂ ಕೊಟ್ಟಿದ್ದರು.

ಮಂಡ್ಯ ಗಡಿ ದಾಟುವ ಮೊದಲೇ ಮೈತ್ರಿ ಪಾದಯಾತ್ರೆ ಒಗ್ಗಟ್ಟು ಕಳೆದುಕೊಂಡಿದ್ದು, ಗುರುವಾರ ಮಧ್ಯಾಹ್ನದ ನಂತರದ ಪಾದಯಾತ್ರೆಯಲ್ಲಿ ದೋಸ್ತಿಗಳು ದೂರ ದೂರ ಎನ್ನುವಂತಾಯ್ತು. ಗುರುವಾರ ಮಧ್ಯಾಹ್ನ ನಿಖಿಲ್ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಪ್ರತ್ಯೇಕ ಪಾದಯಾತ್ರೆ ಮಾಡಿದ್ರು. ವಿಜಯೇಂದ್ರ, ಸಿಟಿ ರವಿ, ಮುರುಗೇಶ್ ನಿರಾಣಿ, ಆರ್. ಅಶೋಕ್, ಅಶ್ವಥ್ ನಾರಾಯಣ್ ಮುಂದೆ ಪಾದಯಾತ್ರೆ ಮಾಡಿಕೊಂಡು ಹೋದರೆ ಸ್ವಲ್ಪ ದೂರದಲ್ಲಿ ಹಿಂದಿನಿಂದ ನಿಖಿಲ್ ಕುಮಾರಸ್ವಾಮಿ ಯಿಂದ ಪಾದಯಾತ್ರೆ ಮಾಡಟಿಕೊಂಡು ಬಂದರು. ವಿಜಯೇಂದ್ರ ಮುಂದೆ ಬಿಜೆಪಿ ಪರವಾದ ಡಿಜೆ ವಾಹನಗಳು ಹೋದರೆ ನಿಖಿಲ್ ಕುಮಾರಸ್ವಾಮಿ ಮುಂದೆ ಜೆಡಿಎಸ್ ಪಕ್ಷದ ಪರವಾದ ಡಿಜೆ ವಾಹನಗಳು ಸಾಗಿದವು. 5 ದಿನಗಳಿಂದ ಒಗ್ಗಟ್ಟಿನಿಂದ ಸಾಗುತ್ತಿದ್ದ ಪಾದಯಾತ್ರೆ 6 ದಿನಕ್ಕೆ ಹಳಿ ತಪ್ಪಿತ್ತು.

ಮಾಜಿ ಶಾಸಕ ಪ್ರೀತಂಗೌಡ ಫ್ಲೆಕ್ಸ್‌ಗೆ ಬೆಂಕಿ ಹಾಕಿದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿರುವ ಮಾಜಿ ಸಚಿವ ಸಿಟಿ ರವಿ, ಎರಡೂ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದು ಕೆಲವು ಜನರು ಅಷ್ಟೆ. ಸಾವಿರಾರು ಜನ ಭಾಗವಹಿಸಬೇಕಾದ್ರೆ ಅವರವರ ನಾಯಕರ ಬಗ್ಗೆ ಅಭಿಮಾನದಿಂದ ಘೋಷಣೆ ಕೂಗಿದ್ದಾರೆ ಅಷ್ಟೆ. ಆ ತರಹದ ಘಟನೆ ಏನು ನಡೆದಿಲ್ಲ. ಕುಮಾರಸ್ವಾಮಿ ನಮ್ಮ NDA ನಾಯಕರು. ಅವರಿಗೆ ಇರಬೇಕಾದ ಗೌರವ ಇದ್ದೇ ಇದೆ. ಪ್ರೀತಂ ಅವರು ಅಪ್ ಕಮ್ಮಿಂಗ್ ಬಿಜೆಪಿ ಲೀಡರ್. ಪ್ರೀತಂಗೌಡರನ್ನ ರಕ್ಷಣೆ ಮಾಡಿಕೊಂಡು ಕುಮಾರಸ್ವಾಮಿ ಅವರಿಗೂ ರೆಸ್ಪೆಕ್ಟ್ ಕೊಟ್ಟು ನಮ್ಮ ಮೈತ್ರಿ ಮುಂದುವರಿಸುತ್ತೇವೆ ಎಂದಿದ್ದಾರೆ. ಆದರೆ ಬಿರುಕು ಎಷ್ಟರ ಮಟ್ಟಿಗೆ ಇದೆ..? ಎನ್ನುವುದು ಇಂದಿನ ಸಮಾವೇಶದಲ್ಲಿ ಬಯಲಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ನಾಯಕರು ತೇಪೆ ಹಾಕ್ತಾರಾ..? ಕಾದು ನೋಡ್ಬೇಕು.
ಕೃಷ್ಣಮಣಿ