ಕಾನೂನು ಪಾಲನೆಯ ಪಕ್ಷಪಾತದ ಪ್ರಶ್ನೆ ಮುನ್ನೆಲೆಗೆ ತಂದ ಡಾ ಕಕ್ಕಿಲಾಯ ಪ್ರಕರಣ

ಮಂಗಳೂರಿನ ಜನಪರ ವೈದ್ಯ ಡಾ ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಸೂಪರ್ ಮಾರ್ಕೆಟ್ಟಿನಲ್ಲಿ ಮಾಸ್ಕ್ ಧರಿಸಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಕಠಿಣ ಕಾನೂನಿನಡಿ ಎಫ್ ಐ ಆರ್ ದಾಖಲಿಸಿರುವುದು ಈಗ ಸಾಕಷ್ಟು ವಿವಾದಕ್ಕೀಡಾಗಿದೆ.

ಕೋವಿಡ್ ಸೇರಿದಂತೆ ಹಲವು ರೋಗ ಮತ್ತು ಆರೋಗ್ಯ ಸಮಸ್ಯೆಗಳ ವಿಷಯದಲ್ಲಿ ಡಾ ಕಕ್ಕಿಲಾಯರು ಜನಪರವಾಗಿ ಮಾತನಾಡುತ್ತಿದ್ದರು ಮತ್ತು ಸ್ವತಃ ಸ್ವಯಂಸೇವಕರ ತಂಡ ಕಟ್ಟಿಕೊಂಡು ಅರಿವು ಮೂಡಿಸುವ, ವೈದ್ಯಕೀಯ ನೆರವು ನೀಡುವ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಸಾಕಷ್ಟು ವಿಷಯಗಳಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ, ಅವೈಜ್ಞಾನಿಕ, ಮೌಢ್ಯ ಪ್ರೇರಿತ ನಡೆ-ನಿರ್ಧಾರಗಳನ್ನು ಪ್ರಶ್ನಿಸುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಂತಹ ಕಠಿಣ ಪ್ರಕರಣ ದಾಖಲಿಸಿ, ಅವರ ಮೇಲೆ ಸೇಡಿನ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

ಸದ್ಯದ ಕಾನೂನು ಪ್ರಕಾರ 250 ರೂ. ದಂಡ ವಿಧಿಸಿ ಮುಕ್ತಾಯಮಾಡಬಹುದಾಗಿದ್ದ ಘಟನೆಯನ್ನು ಹೀಗೆ ಗಂಭೀರ ಪ್ರಕರಣವನ್ನಾಗಿ ಮಾಡುವಲ್ಲಿ ಅವರ ವೈಜ್ಞಾನಿಕ ಮತ್ತು ವೈಚಾರಿಕ ಜನಜಾಗೃತಿ ಮತ್ತು ಜನಪರ ಕೆಲಸಗಳಿಂದ ಇರಿಸುಮುರಿಸಿಗೆ ಒಳಗಾಗಿದ್ದ ಕರಾವಳಿಯ ಕೋಮು ಶಕ್ತಿಗಳ ಕೈವಾಡವಿದೆ. ಅದಕ್ಕೆ ಅವರ ವಿರುದ್ಧ ಕೇಸು ದಾಖಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವರ ಸಂಭಾಷಣೆಗಳು, ಸಂಭ್ರಮಿಸುವ ಮಾತುಗಳೇ ಸಾಕ್ಷಿ. ಬಿಜೆಪಿ ಮತ್ತು ಅದರ ಕೋಮುವಾದಿ ಶಕ್ತಿಗಳು ಕರೋನಾದ ವಿಷಯದಲ್ಲಿ ಕೂಡ ಗೋಮೂತ್ರ, ಸಗಣಿ ಬಳಕೆಯಂತಹ ವಿಷಯಗಳನ್ನು ಪ್ರಚುರಪಡಿಸುವ ಮೂಲಕ ಸಾವು-ಬದುಕಿನ ಹೋರಾಟದಲ್ಲೂ ಜನರಲ್ಲಿ ಮೌಢ್ಯಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಯತ್ನ ನಡೆಸುತ್ತಿರುವಾಗ, ಡಾ ಕಕ್ಕಿಲಾಯ ಅಂತಹ ಮೌಢ್ಯಗಳ ವಿರುದ್ಧ ಬಹಿರಂಗ ಟೀಕೆ- ಟಿಪ್ಪಣಿಗಳ ಮೂಲಕ ಜನರಲ್ಲಿ ಕರೋನಾದ ಕುರಿತು ವೈಜ್ಞಾನಿಕ ಅರಿವು ಮೂಡಿಸುತ್ತಿದ್ದರು.

ಮೌಢ್ಯ, ಧರ್ಮದ್ವೇಷ, ಸುಳ್ಳು ಸುದ್ದಿ, ವದಂತಿಗಳ ಮೇಲೆಯೇ ನಿಂತಿರುವ ಕರಾವಳಿಯ ಕೋಮುವಾದಿ ಶಕ್ತಿಗಳಿಗೆ ಸಹಜವಾಗೇ ವೈದ್ಯರ ಈ ಕಾರ್ಯಗಳು ಕಣ್ಣು ಕೆಂಪಗಾಗಿಸಿದ್ದವು. ಜೊತೆಗೆ ಆಸ್ಪತ್ರೆ ಮತ್ತು ಔಷಧ ವಲಯದ ಪ್ರಭಾವಿ ಲಾಬಿಗಳು ಕೂಡ ಜನಸಾಮಾನ್ಯರ ಪರ ಮತ್ತು ಸರಳ ಚಿಕಿತ್ಸೆಯನ್ನು ಪ್ರತಿಪಾದಿಸುತ್ತಿದ್ದ ಡಾ ಕಕ್ಕಿಲಾಯ ವಿರುದ್ದ ಕತ್ತಿ ಮಸೆಯುತ್ತಿದ್ದವು. ಇದೀಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಕೂಡ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸಿ ವೈದ್ಯರನ್ನು ಹಣಿಯುವ ಯತ್ನ ನಡೆಸಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಆರೋಪ.

ಒಂದು ಕಡೆ, ಹೀಗೆ ಮನೆಯ ಪಕ್ಕದ ಸೂಪರ್ ಮಾರ್ಕೆಟ್ಟಿನಲ್ಲಿ ಮಾಸ್ಕ್ ಧರಿಸದೇ ಖರೀದಿಗೆ ಹೋಗಿದ್ದರು ಎಂದು ಕಕ್ಕಿಲಾಯ ವಿರುದ್ಧ ದೂರು ದಾಖಲಿಸಿ ಉಗ್ರ ಕಾನೂನು ಪಾಲನೆಯ ವರಸೆ ಮೆರೆದಿರುವ ಪೊಲೀಸರು, ಎಲ್ಲರ ವಿಷಯದಲ್ಲೂ ಇಷ್ಟೇ ಕಠಿಣ ಕಾನೂನು ಪಾಲಿಸುವರೇ ಎಂಬುದು ಈಗ ವ್ಯಾಪಕ ಚರ್ಚೆಯಾಗುತ್ತಿರುವ ಸಂಗತಿ. ಏಕೆಂದರೆ, ಒಂದು ಕಡೆ ಡಾ ಕಕ್ಕಿಲಾಯ ವಿರುದ್ಧ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿರುವಾಗಲೇ, ಅದೇ ದಿನ, ಮೇ 18ರಂದು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಅಂತರ್ ಜಿಲ್ಲಾ ಪ್ರಯಾಣ ಮಾಡಿದ್ದಲ್ಲದೆ, ಬೆಂಗಳೂರಿನಿಂದ ನಂಜನಗೂಡಿಗೆ ಹೋಗಿ ಅಲ್ಲಿನ ನಂಜುಂಡೇಶ್ವರ ದೇವಾಲಯದಲ್ಲಿ ಹೋಮ-ಹವನ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದು ಲಾಕ್ ಡೌನ್ ಕಾನೂನಿನ ಸಂಪೂರ್ಣ ಉಲ್ಲಂಘನೆ. ಆದರೆ, ಅವರ ವಿರುದ್ಧ ರಾಜ್ಯ ಪೊಲೀಸರು ಈವರೆಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಸಾರ್ವಜನಿಕ ದೂರುಗಳು ಕೇಳಿಬಂದಿದ್ದರೂ, ರಾಜ್ಯ ಹೈಕೋರ್ಟ್ ಕೂಡ ಪೊಲೀಸರಿಗೆ ಸೂಚನೆ ನೀಡಿದ್ದರೂ, ಪೊಲೀಸರು ಇನ್ನೂ ಮೀನಾಮೇಷ ಎಣಿಸುತ್ತಿದ್ದಾರೆ.

ಮತ್ತೊಂದು ಕಡೆ, ಗುರುವಾರ ಶಿವಮೊಗ್ಗ ನಗರದಲ್ಲಿ ಆರ್ ಎಸ್ ಎಸ್ ನ ಸೇವಾ ಭಾರತಿ ವತಿಯಿಂದ ನಡೆದ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೂಡ ಸ್ವತಃ ಸಚಿವ ಕೆ ಎಸ್ ಈಶ್ವರಪ್ಪ ಮಾಸ್ಕ್ ಸರಿಯಾಗಿ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಲಾಕ್ ಡೌನ್ ನಿಯಮಗಳನ್ನೂ ಗಾಳಿಗೆ ತೂರಿ ನೂರಾರು ಜನರನ್ನು ಸೇರಿಸಿಕೊಂಡು ಸಮಾರಂಭ ನಡೆಸಿದ್ದಾರೆ. ಆ ಸಮಾರಂಭದಲ್ಲಿ ಸಿ ಎಂ ಯಡಿಯೂರಪ್ಪಅವರ ಮತ್ತೊಬ್ಬ ಪುತ್ರ ಬಿ ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಆರ್ ಎಸ್ ಎಸ್ ಪ್ರಮುಖರು ಕೂಡ ಭಾಗವಹಿಸಿದ್ದಾರೆ. ಸಮಾರಂಭದ ವೀಡಿಯೋ ಮತ್ತು ಫೋಟೋಗಳು, ಪತ್ರಿಕಾ ವರದಿಯ ತುಣುಕುಗಳು ವೈರಲ್ ಆಗಿದ್ದು, ಆ ಬಗ್ಗೆ ಶಿವಮೊಗ್ಗ ಜಿಲ್ಲಾಡಳಿತವಾಗಲೀ, ಶಿವಮೊಗ್ಗ ಪೊಲೀಸರಾಗಲೀ ಯಾವ ಕ್ರಮ ಜರುಗಿಸಿದ್ದಾರೆ ಎಂಬ ಪ್ರಶ್ನೆ ಕೇಳಿಬಂದಿದೆ.

ಅಲ್ಲದೆ, ಲಾಕ್ ಡೌನ್ ಜಾರಿಯ ನಡುವೆಯೇ ಸಿಎಂ ಯಡಿಯೂರಪ್ಪ ಆಪ್ತರಲ್ಲಿ ಒಬ್ಬರಾದ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಸ್ಕ್ ಧರಿಸದೇ ಉಡುಪಿಯ ಪಡುಬಿದ್ರೆಯ ಬೀದಿಗಳಲ್ಲಿ ಓಡಾಡುತ್ತಿದ್ದ ಫೋಟೋಗಳು ಮತ್ತು ಆ ಕುರಿತ ಸ್ಥಳೀಯ ಪತ್ರಿಕೆಗಳ ವರದಿಗಳು ಕೂಡ ವೈರಲ್ ಆಗಿವೆ. ಸ್ವತಃ ಶ್ರೀನಿವಾಸ ಕಕ್ಕಿಲಾಯರ ವಿರುದ್ಧ ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿ, ಅವರ ಮೇಲೆ ಹಲ್ಲೆ ನಡೆಸುವ, ಅವರನ್ನು ಬಗ್ಗುಬಡಿಯುವ ಮಾತನಾಡುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ಮಂದಿ, ತಮ್ಮದೇ ನಾಯಕರ ಇಂತಹ ವರಸೆಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ದೇಶದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಮಂದಿಗೆ ಒಂದು ಕಾನೂನು ಮತ್ತು ಇತರರಿಗೆ ಮತ್ತೊಂದು ಕಾನೂನು ಇದೆಯೇ? ಎಂಬ ಮಾತು ಕೇಳಿಬಂದಿದೆ.

ಅಲ್ಲದೆ, ಈ ವಿಷಯದಲ್ಲಿ ಬಹಳ ಪ್ರಮುಖವಾಗಿ ರಾಜ್ಯ ಪೊಲೀಸ್ ಇಲಾಖೆಯ ಪಕ್ಷಪಾತಿ ಧೋರಣೆ ಮತ್ತು ಅಧಿಕಾರಸ್ಥರ ಪರ ಒಂದು ನಿಲುವು ಮತ್ತು ಅಧಿಕಾರವಿರದ ಜನಸಾಮಾನ್ಯರ ವಿಷಯದಲ್ಲಿ ಮತ್ತೊಂದು ನಿಲುವು ಎಂಬ ದಂದ್ವ ನೀತಿಯ ಬಗ್ಗೆ ರಾಜ್ಯಾದ್ಯಂತ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬಿ ವೈ ವಿಜಯೇಂದ್ರ, ಬಿ ವೈ ರಾಘವೇಂದ್ರ, ಸಚಿವ ಕೆ ಎಸ್ ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಅವರುಗಳು ಕೋವಿಡ್ ಮತ್ತು ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿದ ಬಗ್ಗೆ ರಾಜ್ಯ ಪೊಲೀಸರು ಎಷ್ಟು ದಿಟ್ಟ ಕ್ರಮ ಜರುಗಿಸಲಿದ್ದಾರೆ ಎಂಬುದನ್ನು ಜನಸಾಮಾನ್ಯರು ಎದುರು ನೋಡುತ್ತಿದ್ದಾರೆ. ಹಾಗಾಗಿ ಕೋವಿಡ್ ನಿಯಮಗಳ ಪಾಲನೆಯ ವಿಷಯದಲ್ಲಿ ಈ ಪ್ರಕರಣಗಳು ರಾಜ್ಯದಲ್ಲಿ ಸದ್ಯ ಹೊಸ ಚರ್ಚೆಯನ್ನೇ ಹುಟ್ಟುಹಾಕಿವೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಲಾಕ್ ಡೌನ್ ಹೇರುವ ತಯಾರಿಯಲ್ಲಿರುವ ರಾಜ್ಯ ಸರ್ಕಾರ, ತಾನೇ ಜಾರಿಗೊಳಿಸಿದ ಕಾನೂನು ಪಾಲನೆಯ ವಿಷಯದಲ್ಲಿ ತನ್ನ ಪಕ್ಷಪಾತಿ ಧೋರಣೆಯ ಕುರಿತ ಜನರ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಕಾನೂನು ಜಾರಿಯ ತನ್ನ ನೈತಿಕತೆ ಉಳಿಸಿಕೊಳ್ಳಬೇಕಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...