ಹವಾಮಾನ ವೈಪರೀತ್ಯ ಹಾಗೂ ಸೂಕ್ತ ಮಾರುಕಟ್ಟೆ ದೊರೆಯದ ಕಾರಣ ರೈತರು ಪ್ರತಿವರ್ಷ ಸಂಕಷ್ಟ ಅನುಭವಿಸುತ್ತಾರೆ. ಇದನ್ನ ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ಪಿಎಂ ಕಿಸಾನ್ ಯೋಜನೆ ಕೂಡ ಒಂದಾಗಿದೆ. ಆದರೆ ಈ ಯೋಜನೆ ನಿಜವಾಗಿ ರೈತರಿಗೆ ತಲುಪಲು ಸರ್ಕಾರದ ಆದೇಶಗಳೆ ಅಡ್ಡಿಯಾಗಿ. ಅಧಿಕಾರಿಗಳ ನಿರ್ಲಕ್ಷ್ಯ, ಕೆಳ ಹಂತದ ಸಿಬ್ಬಂದಿಗೆ ರೈತರ ಪರವಾಗಿ ಇಚ್ಛಾಶಕ್ತಿ ಇಲ್ಲದಿರೋದೆ ಈ ಯೋಜನೆ ರೈತರಿಗೆ ಸರಿಯಾಗಿ ದೊರೆಯದಂತೆ ಮಾಡಿದೆ.
ಯೋಜನೆ 2019 ರಲ್ಲಿ ಈ ಯೋಜನೆ ಜಾರಿಯಾಗಿದೆ. ಪ್ರತಿ ವರ್ಷ ರೈತರಿಗೆ 12 ಸಾವಿರ ರೂಪಾಯಿ ನೀಡಲು ಸರ್ಕಾರ ಯೋಚನೆ ಮಾಡಿಕೊಂಡು ಯೋಜನೆ ಹಾಕಿದೆ. ಆದರೆ ಇದುವರೆಗೂ ಎಲ್ಲ ರೈತರಿಗೆ ಇದರ ಲಾಭ ದೊರೆತಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರೈತರಿಗೆ ಸಮಯಕ್ಕೆ ಸರಿಯಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ದೊರೆಯುತ್ತಿಲ್ಲ. ಪ್ರತಿ ವರ್ಷ ಮೂರು ಕಂತುಗಳಲ್ಲಿ ಸರ್ಕಾರ ರೈತರ ಖಾತೆಗೆ ಹಣ ಹಾಕುತ್ತದೆ. ಕೆಲವು ರೈತರಿಗೆ ಒಂದು ಕಂತು ಹಣ, ಮತ್ತೆ ಕೆಲವು ರೈತರಿಗೆ ಎರಡು ಕಂತು ಹಣ ಜಮಾ ಆಗಿದೆ. ಆದರೆ ಕೆಲ ತಿಂಗಳುಗಳಿಂದ ಉಳಿದ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮೆ ಆಗದೇ ಇರುವುದರಿಂದ ರೈತರು ನಿತ್ಯ ಕೃಷಿ ಇಲಾಖೆ, ಬ್ಯಾಂಕ್ ಗಳಿಗೆ ಅಲೆದಾಡಿ, ಸದ್ಯ ಸಿಎಸ್ಸಿ ಕೇಂದ್ರಗಳತ್ತ ಮುಖ ಮಾಡುವಂತಾಗಿದೆ. ವಿಜಯಪುರ ಜಿಲ್ಲೆಯೊಂದರಲ್ಲೇ ಒಟ್ಟು 2,55,306 ರೈತರು ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಜನವರಿ ಮೊದಲ ವಾರದಲ್ಲಿ ಬಿಡುಗಡೆಗೊಳಿಸಿದ್ದ ಕಂತಿನ ಹಣ ಕೇವಲ 1,57,011 ರೈತರ ಖಾತೆಗೆ ಜಮೆ ಆಗಿದೆ. ಉಳಿದ ಹಣ ಇನ್ನೂ ರೈತರ ಕೈ ಸೇರಿಲ್ಲ. ತಾಂತ್ರಿಕ ಕಾರಣ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ರೈತರನ್ನು ಹೈರಾಣಾಗಿಸಿದೆ.
ಇ-ಕೆವೈಸಿ ಆಗದೆ ಇರುವುದು, ಎನ್.ಸಿ.ಸಿ.ಐ- ಆಧಾರ್ ಹೊಂದಾಣಿಕೆ ಆಗದೇ ಇರುವುದು, ಜಮೀನು ಪತ್ರ ಮತ್ತಿತರ ಕಾರಣಗಳಿಂದ ಹಣ ಜಮೆ ಆಗುತ್ತಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದಾರೆ. ರೈತರು ಈ ಸಮಸ್ಯೆ ಪರಿಹಾರಕ್ಕೆ ಕೆಲಸ ಕಾರ್ಯ ಬಿಟ್ಟು ಅಲೆಯುವಂತಾಗಿದೆ. ರೈತರು ತಮಗೆ ಹಣ ಬಾರದ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಲು ಹೋದರೆ ದಾಖಲೆ ಸರಿಯಾಗಿ ನೀಡಿಲ್ಲ ಎನ್ನುತ್ತಿದ್ದಾರೆ. ಅಧಿಕಾರಿಗಳು ಹೇಳಿದ ದಾಖಲೆ ಪಡೆಯಲು ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಲು ಹೋದರೆ ಸರ್ವರ್ ಇಲ್ಲ ಅಂತ ವಾಪಸ್ ಕಳಿಸಿ ಬಿಡುತ್ತಾರೆ. ಬ್ಯಾಂಕಿನಲ್ಲಿ ಆಧಾರ್ ಲಿಂಕ್ ಮಾಡಿಸಲು ಹೋದರೆ ಈಗಾಗಲೇ ಲಿಂಕ್ ಇರುವುದಾಗಿ ಹೇಳುತ್ತಾರೆ. ಎಲ್ಲಿ ಹೋದರೂ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹೀಗಾಗಿ ರೈತರಲ್ಲಿ ಯೋಜನೆಯ ಪ್ರಯೋಜನ ಪಡೆಯೋದು ಹೇಗೆ, ಸರ್ಕಾರ ದಿನಕ್ಕೊಂದು ನಿಯಮ ಬದಲಿಸಿದರೆ ಅದು ರೈತರಿಗೆ ತಲುಪೋದು ಯಾವಾಗಾ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲ ಈ ಹಿಂದಿನ ಕಂತುಗಳ ಹಣವೇ ಪಾವತಿಯಾಗಿಲ್ಲ, ಮುಂದಿನ ಕಂತುಗಳಾದ್ರು ಬರುತ್ತವೋ ಇಲ್ಲವೋ ಎಂಬ ಆತಂಕ ರೈತರಿಗೆ ಕಾಡುತ್ತಿದೆ. ಅಧಿಕಾರಿಗಳು ಸಹ ರೈತರಿಗೆ ಸರಿಯಾದ ಮಾಹಿತಿ ನೀಡಿ ಯೋಜನೆ ರೈತರ ಖಾತೆಗೆ ತಲುಪುವಂತೆ ಮಾಡಬೇಕಾಗಿದೆ.
“ಯೋಜನೆ ಆರಂಭವಾದ ಮೊದಲ ಕಂತಿನಿಂದ ಪ್ರತಿ ಬಾರಿ ಖಾತೆಗೆ 2 ಸಾವಿರ ಜಮಾ ಆಗಿದೆ. ಈ ಹಣದಿಂದ ಸಂಸಾರ ಸಾಗಿದೆ. ಆದರೆ, ಎರಡ್ಮೂರು ಕಂತುಗಳ ಹಣ ಬಂದೇ ಇಲ್ಲ. ಬ್ಯಾಂಕಿನಲ್ಲಿ ಕೇಳಿದರೆ ಹಣ ಜಮಾ ಆಗಿಲ್ಲ ಎಂದು ಕೇಳಿ ಕಳಿಸುತ್ತಾರೆ. ಆಧಾರ್ ಲಿಂಕ್ ಮಾಡಿಸಿದರೆ ಬರುತ್ತದೆ ಎಂದಿದ್ದಕ್ಕೆ ಬ್ಯಾಂಕಿಗೆ ತೆರಳಿದ್ದೆ. ಅಲ್ಲಿ ಕಂಪ್ಯೂಟರ್ ಕೇಂದ್ರಕ್ಕೆ ಹೋಗಲು ಹೇಳಿದರು. ಅಲ್ಲಿ ಸರ್ವರ್ ಇಲ್ಲ ಅಂತ ಹೇಳುತ್ತಿದ್ದಾರೆ. ಏನು ಮಾಡಬೇಕೆಂದು ತಿಳಿತಿಲ್ಲ” ಎನ್ನುತ್ತಾರೆ ರೈತ ರವಿಂದ್ ಪಾಟೀಲ್.