
ಮೈಸೂರು: ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಗೃಹ ಸಚಿವ ಪರಮೇಶ್ವರ್, ಕಲ್ಲು ತೂರಾಟ ಪ್ರಕರಣದಲ್ಲಿ ಯಾರೇ ಘಟಾನುಘಟಿಗಳು ಇದ್ದರೂ ಶಿಕ್ಷೆ ಆಗುತ್ತದೆ ಎಂದಿದ್ದಾರೆರ. ಕಾನೂನು ಕೈಗೆ ಎತ್ತಿಕೊಂಡರೆ ಸುಮ್ಮನೆ ಇರುವುದಿಲ್ಲ ಎಂದು ಮೈಸೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಗುಡುಗಿದ್ದಾರೆ.

ನಾನು ಘಟನೆ ಏಕೆ ಆಯ್ತು ಯಾರಿಂದ ಆಯ್ತು ಅಂತ ತನಿಖೆ ಮಾಡಲು ಹೇಳಿದ್ದೆ. ಪ್ರಾಥಮಿಕ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದೇನೆ. ಅಧಿಕಾರಿಗಳು ನನಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ತನಿಖೆಗೆ ಈಗಾಗಲೇ ಆದೇಶ ಮಾಡಿರುವುದರಿಂದ, ಏನೆಲ್ಲಾ ಚರ್ಚೆ ಆಗಿದೆ, ಘಟನೆಯಲ್ಲಿ ಯಾರು ಇದ್ದಾರೆ ಅದೆಲ್ಲ ಹೇಳೋಕೆ ಆಗಲ್ಲ ಎಂದಿದ್ದಾರೆ.

ಪೊಲೀಸರಿಗೆ, ವಾಹನಗಳಿಗೆ, ಠಾಣೆಗೆ ಕಲ್ಲು ಹೊಡೆದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಿ ತನಿಖೆ ಮಾಡುತ್ತಿದ್ದಾರೆ ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್. ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ K.N ರಾಜಣ್ಣಗೆ ಗೃಹ ಸಚಿವ ಪರಮೇಶ್ವರ್ ಕೌಂಟರ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಪೊಲೀಸ್ ಇಲಾಖೆಗೆ ಕಾನೂನು ಅಷ್ಟೇ ಮುಖ್ಯ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ತಾರೆ. ಪಕ್ಷ, ವ್ಯಕ್ತಿ ಪೊಲೀಸರಿಗೆ ಮುಖ್ಯವಲ್ಲ. ಪೊಲೀಸರನ್ನ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜಣ್ಣ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಈ ನಡುವೆ ಉದಯಗಿರಿ ಗಲಭೆಗೆ ಕಾರಣವಾದ ವಾಟ್ಸಾಪ್ ಪೋಸ್ಟರ್ ಹರಿಬಿಟ್ಟಿದ್ದ ಆರೋಪಿ ಸುರೇಶ್ನನ್ನ 1 ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಮೈಸೂರು ಕೋರ್ಟ್ ಮೂಲಕ 1 ದಿನದಲ್ಲಿ ಮಹಜರು ಮುಗಿಸಿ, ಮೊಬೈಲ್ ಸೀಜ್ ಮಾಡುವಂತೆ ಮೈಸೂರಿನ ಕೋರ್ಟ್ ಆದೇಶ ಹೊರಡಿಸಿದೆ.