• Home
  • About Us
  • ಕರ್ನಾಟಕ
Saturday, July 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

ನಾ ದಿವಾಕರ by ನಾ ದಿವಾಕರ
June 14, 2025
in Top Story, ಜೀವನದ ಶೈಲಿ
0
ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ
Share on WhatsAppShare on FacebookShare on Telegram

ADVERTISEMENT

—–ನಾ ದಿವಾಕರ—-

ಶಾಸನಗಳನ್ನೂ ಮೀರುವ ಪರದೆಯ ಹಿಂದಿನ ಅಮಾನುಷತೆಯನ್ನು ತೆರೆದಿಡುವ

ʼಒಡಲ ತುಡಿತಕ್ಕೆ ಕೇಡು

ಶಾಸನಾತ್ಮಕವಾಗಿ ನಿಷೇಧಿತವಾಗಿರುವ, ಕಠಿಣ ಕಾನೂನುಗಳ ಮೂಲಕ ನಿಯಂತ್ರಿಸಲ್ಪಡುವ ನಿಯಮಗಳನ್ನು ಆಡಳಿತಾತ್ಮಕವಾಗಿ ಸಕ್ರಿಯವಾಗಿರಿಸಿದ್ದರೂ, ನಿಷೇಧಕ್ಕೊಳಗಾದ ಆಚರಣೆ, ಪದ್ಧತಿ ಮತ್ತು ಸಾಮಾಜಿಕ ಚಟುವಟಿಕೆಗಳು ನಿರ್ಭೀತಿಯಿಂದ ನಡೆಯುತ್ತಿರುವ ಸಮಾಜ ಯಾವುದಾದರೂ ಇದ್ದರೆ ಅದು ಭಾರತೀಯ ಸಮಾಜ ಎನಿಸುತ್ತದೆ. ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಜಾತಿ ನಿಂದನೆ, ಮಹಿಳಾ ದೌರ್ಜನ್ಯಗಳು ಎದ್ದು ಕಾಣುವ ವಿದ್ಯಮಾನಗಳು. ಇವೆಲ್ಲವನ್ನೂ ಮೀರುವ ಒಂದು ಬೆಳವಣಿಗೆ ನಮ್ಮ ಆಧುನಿಕ-ವಿದ್ಯಾವಂತ-ಕಲಿತ ಸಮಾಜದ ಒಳಗೇ ವ್ಯವಸ್ಥಿತವಾಗಿ ಇಂದಿಗೂ ನಡೆಯುತ್ತಿರುವುದು, ಹೆಣ್ಣು ಭ್ರೂಣ ಹತ್ಯೆ-ಹೆಣ್ಣು ಶಿಶು ಹತ್ಯೆ ಎಂಬ ಮಹಾಪರಾಧ. ಸಾಂಪ್ರದಾಯಿಕ ಸಮಾಜಕ್ಕೆ ಇದು ಅಪರಾಧ ಎನಿಸುತ್ತಲೇ ಇಲ್ಲ, ಆಧುನಿಕ ನಾಗರಿಕತೆಯತ್ತ ಹೊರಳಿರುವ ಸಮಾಜಕ್ಕೆ ಇದು ಗಂಭೀರ ಅಪರಾಧ ಎನಿಸುವುದಿಲ್ಲ.

 ಈ ನಡುವೆಯೇ ಕಳೆದ ವರ್ಷ ಕರ್ನಾಟಕದ ಆರ್ಥಿಕವಾಗಿ ಸಮೃದ್ಧ ಜಿಲ್ಲೆ ಎನಿಸಿಕೊಂಡಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತಿತರ ಪ್ರದೇಶಗಳಲ್ಲಿ ಸ್ಫೋಟಿಸಿದ ಒಂದು ಸುದ್ದಿ ಜಾಗೃತ ಸಮಾಜವನ್ನು ಮತ್ತೊಮ್ಮೆ ಎಚ್ಚರಿಸಿತ್ತು. ಮಂಡ್ಯ ಸುತ್ತಮುತ್ತಲಿನ ಊರುಗಳಲ್ಲಿ ಸಿಹಿಯಾದ ಕಬ್ಬು ಅರೆಯುವ ಹತ್ತಾರು ಆಲೆಮನೆಗಳನ್ನು, ಜೀವತಳೆಯುವ ಮುನ್ನವೇ ಮನುಷ್ಯಜೀವಿಯನ್ನು ಅರೆದು, ಹೊಸಕಿ ಹಾಕುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಸುದ್ದಿ ಕರ್ನಾಟಕದ ಜನತೆಯಲ್ಲಿ ತಲ್ಲಣ ಉಂಟುಮಾಡಿತ್ತು. ಇಲ್ಲಿ ಕಬ್ಬಿಗಿಂತಲೂ ಹೆಚ್ಚು ಆಸಕ್ತಿಯಿಂದ-ಲಾಭದಾಯಕವಾಗಿ ಅರೆಯುತ್ತಿದ್ದುದು ಹೆಣ್ಣು ಭ್ರೂಣಗಳನ್ನು ಎಂಬ ವರದಿ ಕೇವಲ ಆಘಾತಕಾರಿಯಷ್ಟೇ ಅಲ್ಲ, ಹೆಣ್ಣು ಜೀವವನ್ನು ಇಂದಿಗೂ ಸಹ ಅಪಥ್ಯ/ಜನಿಸಲನರ್ಹ/ಅಸಹನೀಯ ಎಂದು ಭಾವಿಸುವ ಒಂದುಸಮಾಜದಲ್ಲಿ ನಾವಿದ್ದೇವೆ ಎಂಬ ಪಾಪಪ್ರಜ್ಞೆ ಮೂಡಿಸುವ ವಿಚಾರವಾಗಿತ್ತು.

Ahmedabad plane crash Bhagavad Gita found : ಭಗವದ್ಗೀತೆ ಸುಟ್ಟು ಹೋಗಿಲ್ಲ!! ಇದು ದೈವ ಲೀಲೆಯೋ.? | RA CHINTAN

 ಕಳೆದ ಹಲವು ವರ್ಷಗಳಲ್ಲಿ ʼ ಸಕ್ಕರೆ ನಾಡು ʼ ಮಂಡ್ಯದಲ್ಲಿ ನಡೆದಿದ್ದ 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆಗಳ ಪ್ರಕರಣಗಳು ಬಯಲಾಗುತ್ತಿದ್ದಂತೆಯೇ ಸರ್ಕಾರ ಮತ್ತು ಸಾರ್ವಜನಿಕರ ಗಮನ ಹರಿದಿದ್ದು ಆಲೆಮನೆಯಿಂದ ಮೈಸೂರು-ಮಂಡ್ಯ-ರಾಮನಗರ ಮುಂತಾದೆಡೆ ಇದ್ದ ಖಾಸಗಿ ನರ್ಸಿಂಗ್‌ ಹೋಮ್‌ಗಳ ಕಡೆಗೆ. ಸಾಂವಿಧಾನಿಕವಾಗಿ, ಶಾಸನಬದ್ಧವಾಗಿ ನಿಷೇಧಿತವಾಗಿರುವ ಹೆಣ್ಣು ಭ್ರೂಣ-ಶಿಶು ಹತ್ಯೆ ಯಾವುದೇ ಕಾನೂನು ಭೀತಿ ಇಲ್ಲದೆ ಅವ್ಯಾಹತವಾಗಿ ನಡೆಯುತ್ತಿದ್ದುದು, ಇದರಲ್ಲಿ  ʼತಜ್ಞ ವೈದ್ಯರು ʼ ಆಸ್ಪತ್ರೆಯ ಅಧಿಕಾರಿಗಳು, ಕೆಲವು ಮಹಿಳಾ ವೈದ್ಯರೂ ಭಾಗಿಯಾಗಿದ್ದುದು ಕರ್ನಾಟಕದ ಜನತೆ ನಾಚಿ ತಲೆತಗ್ಗಿಸುವಂತೆ ಮಾಡಿತ್ತು. ಈ ವರದಿಯ ನಂತರ ನಿದ್ರಾವಸ್ಥೆಯಿಂದ ಎದ್ದ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೆಣ್ಣು ಭ್ರೂಣ ಹತ್ಯೆಗಳನ್ನು ಕಾನೂನು ನಿಯಂತ್ರಿಸಬಹುದು ಆದರೆ ಜೀವತಳೆಯುವ ಮುನ್ನವೇ ಹೆಣ್ಣನ್ನು ಹೊಸಕಿ ಹಾಕುವ ಮನಸ್ಥಿತಿಗೆ ಯಾವ ಚಿಕಿತ್ಸೆ ಇರಲು ಸಾಧ್ಯ ?

 ಸಾಮಾಜಿಕ ಮೌಲ್ಯಗಳ ಒಳಸೂಕ್ಷ್ಮಗಳು

 ಚಾರಿತ್ರಿಕವಾಗಿ ಭಾರತೀಯ ಸಮಾಜದಲ್ಲಿ ಇಂದಿಗೂ ಗಟ್ಟಿಯಾಗಿರುವ ಪಿತೃಪ್ರಧಾನ ಮೌಲ್ಯಗಳು ಆರ್ಥಿಕ ಸಬಲೀಕರಣದಿಂದಾಗಲಿ, ಸಾಮಾಜಿಕ ಅರಿವಿನಿಂದಾಗಲಿ, ಸಾಂಸ್ಕೃತಿಕ ಔನ್ಯತ್ನದಿಂದಾಗಲಿ ಅಥವಾ ಶೈಕ್ಷಣಿಕ ಪ್ರಗತಿಯಿಂದಾಗಲಿ ನಶಿಸುವುದಿಲ್ಲ ಎಂಬ ಕಟು ವಾಸ್ತವವನ್ನು ತೆರೆದಿಟ್ಟ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳು, ಸಮಾಜದ ಕಣ್ತೆರೆಸಿದೆಯೋ ಇಲ್ಲವೋ ಕಾದು ನೋಡಬೇಕಿದೆ. ಆದರೆ ಇದು ಕರ್ನಾಟಕದಲ್ಲಿ ಸದಾ ಕ್ರಿಯಾಶೀಲವಾಗಿರುವ ಮಹಿಳಾ ಚಳುವಳಿಗಳು ಮತ್ತು ಎಡಪಂಥೀಯ-ಪ್ರಜಾಸತ್ತಾತ್ಮಕ ಆಂದೊಲನಗಳಲ್ಲಿ ಒಂದು ಆತ್ಮಾವಲೋಕನದ ದಾರಿಯನ್ನು ತೆರೆದಿತ್ತು. ಇದನ್ನು ಅಪರಾಧಿ ಭಾವನೆಯಿಂದ ನೋಡುವುದಕ್ಕಿಂತಲೂ, ಕ್ಷಣ ಮಾತ್ರದಲ್ಲಿ ಮಾಹಿತಿ ಜಗಜ್ಜಾಹೀರಾಗುವ ಈ ಡಿಜಿಟಲ್‌ ತಂತ್ರಜ್ಞಾನ ಯುಗದಲ್ಲೂ ಸದ್ದಿಲ್ಲದೆ ಪರದೆಯ ಹಿಂದೆ ನಡೆಯುವ ಅಮಾನುಷ ಕೃತ್ಯ ʼ ಹೆಣ್ಣು ಭ್ರೂಣ ಹತ್ಯೆ ʼ ಹೇಗೆ ನಮ್ಮ ಕಣ್ತಪ್ಪಿತು ಎಂಬ ಪ್ರಶ್ನೆ ಕಾಡಲೇಬೇಕಿದೆ, ಕಾಡಿದೆ, ಕಾಡುತ್ತಲೇ ಇದೆ.

ಈ ಜಾಗೃತ ಅಂತರ್-ಪ್ರಜ್ಞೆಯನ್ನು ಮತ್ತಷ್ಟು ಮೊನಚುಗೊಳಿಸುವ ಸಾಹಿತ್ಯಕ ಪ್ರಯತ್ನ ನಮ್ಮ ನಡುವೆಯೇ 17 ವರ್ಷಗಳ ಮುನ್ನವೇ ನಡೆದಿದೆ ಎಂದು ನಿರೂಪಿಸಿರುವುದು ಶ್ರೀ ಮಂಜುನಾಥ್‌ ಅದ್ದೆ ಅವರಿಂದ 2008ರಲ್ಲಿ ಪ್ರಕಟವಾಗಿದ್ದ “ಒಡಲ ತುಡಿತಕ್ಕೆ ಕೇಡು” ಎಂಬ ಸಂಶೋಧನಾತ್ಮಕ-ಮಾಹಿತಿಪೂರ್ಣ-ದತ್ತಾಂಶ ಆಧಾರಿತ ಅಮೂಲ್ಯ ಪುಸ್ತಕ. ಐದು ದಶಕಗಳಿಗೂ ಹೆಚ್ಚು ಕಾಲ ಮಹಿಳಾ ಸಬಲೀಕರಣಕ್ಕಾಗಿ, ಹಕ್ಕುಗಳಿಗಾಗಿ ಅಹರ್ನಿಶಿ ಹೋರಾಡುತ್ತಾ ಬಂದಿರುವ “ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ” ಪ್ರಕಟಿಸಿರುವ ಈ ಕೃತಿಯನ್ನು 17 ವರ್ಷಗಳ ನಂತರ ಮರಳಿ ಮುದ್ರಣ ಮಾಡುವ ಮೂಲಕ ʼಹೆಣ್ಣು ಭ್ರೂಣ-ಶಿಶು ಹತ್ಯೆʼ ಎಂಬ ಅಮಾನುಷ ಪದ್ಧತಿ/ಮನಸ್ಥಿತಿ ಹೇಗೆ ನಮ್ಮ ನಡುವೆ ಡಿಜಿಟಲ್‌ ಯುಗದಲ್ಲೂ ಜೀವಂತವಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ.

 ಅಧ್ಯಯನದ ವ್ಯಾಪ್ತಿ ಮತ್ತು ಕ್ಷಮತೆ

ತಮ್ಮ ʼ ಒಡಲ ತುಡಿತಕ್ಕೆ ಕೇಡು ʼ ಅಧ್ಯಯನ ಕೃತಿಯಲ್ಲಿ ಮಂಜುನಾಥ್‌ ಅದ್ದೆ ಅವರು ಮಂಡ್ಯ ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು, ಭಾರತದ ಇತರ ರಾಜ್ಯಗಳ ಹಾಗೂ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಈ ವ್ಯಾಧಿ ವ್ಯವಸ್ಥಿತವಾಗಿ ಬೇರೂರಿರುವುದನ್ನು ಅಂಕಿ ಸಂಖ್ಯೆಗಳ ಮೂಲಕ ಓದುಗರ ಮುಂದಿಡುತ್ತಾರೆ.  ಒಬ್ಬ ಹೆಣ್ಣಿನ ಮೇಲೆ ಅತ್ಯಾಚಾರ ನಡೆದಿದೆ ಎಂದ ಕೂಡಲೇ ʼಕರ್ನಾಟಕ ಬಿಹಾರ ಆಗಿದೆʼ ಎಂದು ಹುಯಿಲೆಬ್ಬಿಸುತ್ತೇವೆ. ಹೆಣ್ಣು ದೌರ್ಜನ್ಯಕ್ಕೊಳಗಾಗುವುದರಲ್ಲಿ ಭಾರತದಾದ್ಯಂತ ಸಮಾನ ಎಳೆ ಇರುವುದನ್ನು ನಾವು ನಮ್ಮ ಸ್ವಾಭಿಮಾನಕ್ಕಾಗಿ ಮರೆಮಾಚುತ್ತೇವೆ ಎನಿಸುತ್ತದೆ. ಪ್ರಮಾಣಗಳಲ್ಲಿ ವ್ಯತ್ಯಯಗಳಿಗರಬಹುದೇ ಹೊರತು, ದೌರ್ಜನ್ಯಗಳಲ್ಲಿ ಏಕರೂಪ ಇರುವುದನ್ನು ಅತ್ಯಾಚಾರದಂತಹ ದುಷ್ಕೃತ್ಯಗಳಲ್ಲೂ ಗುರುತಿಸಬಹುದು. ಅದ್ದೆ ಅವರ ಈ ಕೃತಿಯಲ್ಲಿ ಹೆಣ್ಣು ಭ್ರೂಣ ಮತ್ತು ಶಿಶು ಹೇಗೆ ಭಾರತೀಯ ಸಮಾಜದ ಅವಕೃಪೆಗೆ ಪಾತ್ರವಾಗಿದೆ ಎನ್ನುವುದನ್ನು ವಿವರಿಸಿದ್ದಾರೆ.

CM hibrhim ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಸಿಎಂ ಇಬ್ರಾಹಿಂ #pratidhvani #watch #watch #siddaramaiah

 ವಿಮೋಚನಾ ಸಂಘಟನೆಯ ಅಧ್ಯಯನದಲ್ಲಿ ಕ್ಷೇತ್ರಕಾರ್ಯ ನಡೆಸಿ ಅದಕ್ಕೆ ಅಕ್ಷರ ರೂಪ ಕೊಡುವ ಮೂಲಕ ಅದ್ದೆ ಅವರು ನಮ್ಮೊಳಗಿನ ಒಂದು ಕ್ರೂರ ಸಮಾಜವನ್ನು ತೆರೆದಿಟ್ಟಿದ್ದಾರೆ. ಹತ್ತು ಅಧ್ಯಾಯಗಳಲ್ಲಿ ವಿಸ್ತರಿಸಿರುವ ಈ ಅಧ್ಯಯನ ಕೃತಿ ಈ ಶತಮಾನದ ಮೊದಲ ದಶಕದಲ್ಲಿ  ನಡೆಸಿದ (2001) ಸಮೀಕ್ಷೆಯನ್ನು ಆಧರಿಸಿದ್ದರೂ, ಕಡೆಯ ಎರಡು ಅಧ್ಯಾಯಗಳಲ್ಲಿ ಇತ್ತೀಚಿನ ಪಾಂಡವಪುರ-ಮಂಡ್ಯ ಜಿಲ್ಲೆಯ ಪ್ರಕರಣಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಮೊದಲನೆ ಅಧ್ಯಾಯದಲ್ಲಿ ಜಾಗತಿಕ ನೋಟದ ಮೂಲಕ ಹೇಗೆ ಬುಡಕಟ್ಟು ಸಮುದಾಯಗಳನ್ನೂ ಸೇರಿದಂತೆ ಎಲ್ಲ ಸಮಾಜಗಳಲ್ಲೂ ಹೆಣ್ಣು ವರ್ಜಿತಳಾಗಿ ಕಾಣುತ್ತಾಳೆ ಎಂಬ ಅಂಶವನ್ನು ಚಾರಿತ್ರಿಕ ವಾಸ್ತವಗಳ ನಡುವೆ ಅದ್ದೆ ವಿವರಿಸುತ್ತಾರೆ. ಈ ನಿರೂಪಣೆಯಲ್ಲಿ ಸ್ತ್ರಿವಾದ ಒಂದೇ ಅಲ್ಲದೆ, ಮಾರ್ಕ್ಸ್‌ವಾದಿ ಚಿಂತನೆ ಮತ್ತು ಪಿತೃಪ್ರಧಾನತೆಯ ಒಳಸೂಕ್ಷ್ಮಗಳು ಇಡೀ ಕೃತಿಯ ಮೆರುಗು ಹೆಚ್ಚಿಸುತ್ತದೆ.

 ಎರಡನೆ ಅಧ್ಯಾಯದಲ್ಲಿ ಭಾರತದ ಚಿತ್ರಣವನ್ನು ಕಟ್ಟಿಕೊಡುವ ಅದ್ದೆ ಅವರು ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಹಿಂದೂ ಸಮಾಜ ಹೆಣ್ಣಿನ ಮೇಲೆ ವಿಧಿಸುವ ನಿರ್ಬಂಧಗಳನ್ನು, ಬೇಲಿಗಳನ್ನು ತಾತ್ವಿಕ ನೆಲೆಯಲ್ಲಿ ಚರ್ಚೆಗೊಳಪಡಿಸುತ್ತಾರೆ. ಭಾರತೀಯ ಸಮಾಜದ ವೈಶಿಷ್ಟ್ಯ ಇರುವುದು, ಹೆಣ್ಣಿನ ಸಾಮಾಜಿಕ-ಸಾಂಸ್ಕೃತಿಕ ಸ್ಥಾನಮಾನವನ್ನು ನಿರ್ಧರಿಸಲು ಎರಡಂಚಿನ ಕತ್ತಿಯನ್ನು ಬಳಸುವುದರಲ್ಲಿ. ಪುರುಷ ಪ್ರಧಾನ ಮೌಲ್ಯಗಳನ್ನು ಜಾತಿ ವ್ಯವಸ್ಥೆ ಶ್ರೇಷ್ಠತೆಯ ನೆಲೆಯಲ್ಲಿ ಹಾಗೂ ಜಾತಿ ಪ್ರಾಬಲ್ಯದ ಯಜಮಾನಿಕೆಯಲ್ಲಿ ಹೇರಿದರೆ, ಧರ್ಮದ ನೆಲೆಯಲ್ಲಿ ಧಾರ್ಮಿಕ ಸಂಹಿತೆಗಳನ್ನು ಅವಲಂಬಿಸಲಾಗುತ್ತದೆ. ಮನುಸ್ಮೃತಿಯ ಉದಾಹರಣೆಗಳನ್ನು ನೀಡುವ ಮೂಲಕ ಅದ್ದೆ ಅವರು ಇದನ್ನು ಸ್ಪಷ್ಟೀಕರಿಸುವುದು ಅಧ್ಯಯನಶೀಲತೆಯ ಕ್ಷಮತೆಯ ದ್ಯೋತಕವಾಗಿ ಕಾಣುತ್ತದೆ. ವಿವಿಧ ರಾಜ್ಯಗಳ ಲಿಂಗಾನುಪಾತದ ಅಂಕಿಸಂಖ್ಯೆಗಳನ್ನು ನೀಡುವ ಮೂಲಕ ಈ ಅಧ್ಯಯನಕ್ಕೆ ತಾತ್ವಿಕ ನೆಲೆ ಒದಗಿಸುತ್ತಾರೆ. (ಪುಟ 15 -16-17 )..

 ಇದೇ ಅಧ್ಯಾಯದ ಎರಡನೆ ಭಾಗದಲ್ಲಿ ದಕ್ಷಿಣ ಭಾರತದ ಚಿತ್ರಣವನ್ನು ಕಟ್ಟಿಕೊಡುವ ಲೇಖಕರು ಈ ಪ್ರದೇಶದಲ್ಲಿ ಲಿಂಗಾನುಪಾತ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಸಕಾರಾತ್ಮಕವಾಗಿ ಕಂಡರೂ, ಆರ್ಥಿಕವಾಗಿ-ಶೈಕ್ಷಣಿಕವಾಗಿ ಮುಂದುವರೆದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಲಿಂಗಾನುಪಾತ ಕುಸಿಯುತ್ತಿರುವುದನ್ನು ದತ್ತಾಂಶಗಳ ಮೂಲಕ ವಿವರಿಸಿದ್ದಾರೆ (ಪುಟ21). ದುರಂತ ಎಂದರೆ ಭಾರತದಲ್ಲಿ ತನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚರಿತ್ರೆಯಲ್ಲಿ, ಸಮಾಜ ಸುಧಾರಣೆಯನ್ನು 12ನೆ ಶತಮಾನದಲ್ಲೇ, ಬಸವ-ಅಲ್ಲಮರ ಮತ್ತಿತರರ ವಚನ ಚಳುವಳಿಯ ಹಿನ್ನೆಲೆಯಲ್ಲಿ , ಕಂಡಿದ್ದ  ಕರ್ನಾಟಕ ಹೆಣ್ಣು ಭ್ರೂಣ-ಶಿಶು ಹತ್ಯೆಯಲ್ಲಿ ಅಗ್ರಸ್ಥಾನ ಪಡೆದಿರುವುದು. ಹಾಗೂ ಇದು ದಿನೇದಿನೇ ಹೆಚ್ಚಾಗುತ್ತಿರುವುದು ಇಲ್ಲಿನ ಅಂಕಿಅಂಶಗಳು ಸೂಚಿಸುತ್ತವೆ. (ಪುಟ 25).

 ಮಂಡ್ಯ ಜಿಲ್ಲೆಯ ಪಾಶವಿ ಜಗತ್ತಿನ ಒಳನೋಟ

 ಆರ್ಥಿಕವಾಗಿ ಸಮೃದ್ಧಿಯಾದ ಜಿಲ್ಲೆಗಳಲ್ಲೇ ಲಿಂಗಾನುಪಾತ ಕುಸಿತ ಹೆಚ್ಚಾಗಿರುವುದು ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಹೆಚ್ಚುತ್ತಿರುವುದು ಪಿತೃಪ್ರಧಾನ-ಊಳಿಗಮಾನ್ಯ ವ್ಯವಸ್ಥೆಗೂ ಹಾಗೂ ಪುರುಷಾಧಿಪತ್ಯಕ್ಕೆ ಒಳಗಾಗಿರುವ ಚರಾಸ್ತಿ-ಸ್ಥಿರಾಸ್ತಿಗಳಿಗೂ ಇರುವ ಸೂಕ್ಷ್ಮ ಸಂಬಂಧವನ್ನು ಸೂಚಿಸುತ್ತದೆ. ಅದ್ದೆ ಅವರು ಈ ಅಂಶವನ್ನು ತಾತ್ವಿಕವಾಗಿ ಹಾಗೂ ದತ್ತಾಂಶಗಳ ಮೂಲಕ ಈ ಅಧ್ಯಾಯದಲ್ಲಿ ವಿಷದೀಕರಿಸಿದ್ದಾರೆ. ಜಿಲ್ಲಾವಾರು ಅಂಕಿಸಂಖ್ಯೆಗಳು (ಪುಟ 28ರಿಂದ 32) ಈ ಸಂಬಂಧಗಳನ್ನು ದಾಖಲೆ ಸಮೇತ ಸಾಕ್ಷೀಕರಿಸುತ್ತವೆ. ಆಧುನಿಕತೆ, ನಗರೀಕರಣ, ಕೈಗಾರಿಕಾ-ಆರ್ಥಿಕ ಅಭಿವೃದ್ಧಿ , ಶೈಕ್ಷಣಿಕ ಪ್ರಗತಿ ಮತ್ತು ಸಮಗ್ರ ಸಮೃದ್ಧಿ ಇದಾವುದೂ ಸಹ ಹೆಣ್ಣಿನ ಪಾಲಿಗೆ ಒಂದು ಸುಂದರ ಜಗತ್ತನ್ನು ಕಟ್ಟಿಕೊಡಲು ಸಾಧ್ಯವಾಗಿಲ್ಲ ಎನ್ನುವುದು ಈ ಅಂಕಿಸಂಖ್ಯೆಗಳಿಂದ ಸಾಬೀತಾಗುತ್ತದೆ. ಇತ್ತೀಚಿನ ಮಂಡ್ಯ ಜಿಲ್ಲೆಯ ಘಟನೆಗಳ ಹಿನ್ನೆಲೆಯಲ್ಲಿ ಕರ್ನಾಟಕದ ಮಟ್ಟಿಗೆ ಈ ಅಧ್ಯಾಯ ಮುಖ್ಯವಾಗಿ ಕಾಣುತ್ತದೆ. ಮಂಜುನಾಥ್‌ ಅದ್ದೆ ಅವರ ಕ್ಷೇತ್ರ ಕಾರ್ಯ ಮತ್ತು ವಿಮೋಚನಾ ಸಂಘಟನೆಯ ಕ್ರಿಯಾಶೀಲ ಪ್ರಯತ್ನಗಳನ್ನು ಪ್ರಶಂಸಿಸಲೇಬೇಕು.

 ಇದೇ ಅಧ್ಯಾಯದ ಮುಂದುವರಿಕೆಯಾಗಿ ಏಳು ತಾಲ್ಲೂಕುಗಳ ಚಿತ್ರಣವನ್ನೂ ನೀಡಿರುವುದು ಸಾಮಾಜಿಕ-ಆರ್ಥಿಕ ನೆಲೆಯಲ್ಲಿ ಹೆಣ್ಣು ಭ್ರೂಣ-ಶಿಶುಹತ್ಯೆಯ ವಿದ್ಯಮಾನವನ್ನು ಪರಾಮರ್ಶಿಸಲು ನೆರವಾಗುತ್ತದೆ. ಮೂರನೆ ಮತ್ತು 4ನೆ ಅಧ್ಯಾಯದಲ್ಲಿ ಮಂಡ್ಯ ಜಿಲ್ಲೆಯ ಮಹಿಳೆಯರ ಬದುಕು ಮತ್ತು ಸ್ಥಾನಮಾನವನ್ನು ಒರೆಹಚ್ಚಿ ನೋಡುವ ಲೇಖಕರು ಕಳೆದ ಒಂದು ಶತಮಾನದಲ್ಲಿ ಈ ಜಿಲ್ಲೆ ಕಂಡಂತಹ ನೀರಾವರಿ ಸೌಕರ್ಯ, ಕೈಗಾರಿಕಾ ಅಭಿವೃದ್ಧಿಯು ಹೆಣ್ಣು ಜೀವದ ಅಸ್ತಿತ್ವವನ್ನು ಕಾಪಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ದತ್ತಾಂಶಗಳ ಮೂಲಕ ಪ್ರಮಾಣೀಕರಿಸುತ್ತಾರೆ. ಪ್ರಗತಿಪರ ಚಳುವಳಿಗಳಲ್ಲಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಈ ಜಿಲ್ಲೆ ಈ ದಿಕ್ಕಿನಲ್ಲಿ ಏಕೆ ದೂರಗಾಮಿ ಆಲೋಚನೆಗಳಿಗೆ ತೆರೆದುಕೊಂಡಿಲ್ಲ ಎನ್ನುವ ಜಿಜ್ಞಾಸೆಗೆ ಈ ಅಧ್ಯಾಯ ಮತ್ತಷ್ಟು ಜಟಿಲ ಪ್ರಶ್ನೆಗಳನ್ನು ಸೇರಿಸುತ್ತದೆ.

 5ನೆ ಅಧ್ಯಾಯದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಕಾರಣ-ಪರಿಣಾಮಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಚರ್ಚಿಸುವ ಲೇಖಕರು, ಆಧುನಿಕ ಜೀವನಶೈಲಿ, ನಗರೀಕರಣ ಮತ್ತು ಈ ಪ್ರಕ್ರಿಯೆಗಳಿಗೆ ತೆರೆದುಕೊಂಡಿರುವ ಗ್ರಾಮೀಣ ಜನರೂ ಸಹ, ರೈತ ಸಮುದಾಯವನ್ನೂ ಒಳಗೊಂಡಂತೆ, ಹೇಗೆ ಅದ್ಧೂರಿ ಮದುವೆ ಮತ್ತಿತರ ಸಮಾರಂಭಗಳಿಗಾಗಿ ಹಾಗೂ ಹೆಣ್ಣುಮಕ್ಕಳ ಪೋಷಕರು ಗಂಡು ಸಮಾಜದ ವರದಕ್ಷಿಣೆಯ ಒತ್ತಡಗಳಿಂದ ದುಬಾರಿ ವೆಚ್ಚದ ಮದುವೆಗಳನ್ನು ಏರ್ಪಡಿಸುತ್ತಾರೆ ಎಂಬುದನ್ನು ವಿಷದವಾಗಿ ವ್ಯಾಖ್ಯಾನಿಸಿದ್ದಾರೆ. ಭೂಮಿಯ ಒಡೆತನ ಮತ್ತು ಗಂಡುಮಕ್ಕಳ ಸಿರಿವಂತಿಕೆ ಸಮಾಜದಲ್ಲಿ ವರದಕ್ಷಿಣೆ ಎಂಬ ನಿಷೇಧಿತ ವ್ಯಾಧಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವುದನ್ನು ಪ್ರಮಾಣೀಕರಿಸುತ್ತಾ, 6ನೆ ಅಧ್ಯಾಯದಲ್ಲಿ ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಹೇಗೆ ದುರ್ಬಳಕೆ ಮಾಡಲಾಗುತ್ತಿದೆ ಮತ್ತು ವೈದ್ಯರೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಹೇಗೆ ತಮ್ಮ ವಿದ್ಯೆ, ಜ್ಞಾನ ಮತ್ತು ಅರಿವನ್ನು ಸ್ವಾರ್ಥಕ್ಕಾಗಿ ಬಳಸುವುದೇ ಅಲ್ಲದೆ, ಹೆಣ್ಣು ಜೀವದ ವಿನಾಶಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದನ್ನು ಸಂಯಮದಿಂದ ಹೇಳಿದ್ದಾರೆ. (Dissenting Diagnosis – Dr Arun Gadre and Dr Abhay Shukla ಓದುವಂತರಾಗಿ).

 ವ್ಯವಸ್ಥೆಯ ಮೌನ ಮತ್ತು ತಣ್ಣನೆಯ ಕ್ರೌರ್ಯ

 7ನೆ ಅಧ್ಯಾಯದಲ್ಲಿ ಸರ್ಕಾರದ ನೀತಿಗಳ ಪರಾಮರ್ಶೆ ಮಾಡಲಾಗಿದೆ. ಯಾವುದೇ ಸರ್ಕಾರದ ನಿಕಟವರ್ತಿಗಳಾಗಿಯೇ ಇರುವ ವಾಣಿಜ್ಯೋದ್ಯಮಿಗಳು, ಕಾರ್ಪೋರೇಟ್‌ ಆಸ್ಪತ್ರೆಗಳು ಹೇಗೆ ಜನಸಾಮಾನ್ಯರನ್ನು ವಂಚಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿವೆ, ಇದು ತಿಳಿದಿದ್ದರೂ ಸರ್ಕಾರಗಳು ಹೇಗೆ ದಿವ್ಯ ನಿರ್ಲಕ್ಷ್ಯ ವಹಿಸಿವೆ ಎನ್ನುವುದನ್ನು ಮಂಜುನಾಥ್‌ ಅದ್ದೆ ಸರಳವಾದರೂ ನಿಷ್ಠುರ ಭಾಷೆಯಲ್ಲಿ ಅರುಹಿದ್ದಾರೆ. ಪಿಎನ್‌ಡಿಟಿ ಕಾಯ್ದೆಯ ಅನುಷ್ಠಾನದಲ್ಲಿ ಇರುವ ಕೊರತೆ ಮತ್ತು ಲೋಪಗಳನ್ನೂ ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ. 8ನೆ ಅಧ್ಯಾಯದಲ್ಲಿ ವಿಮೋಚನಾ ಸಂಘಟನೆ ಇತರ ಮಹಿಳಾ ಸಂಘಟನೆಗಳೊಂದಿಗೆ ನಡೆಸಿದ ಹೆಣ್ಣು ಭ್ರೂಣ ಹತ್ಯೆ ವಿರೋಧಿ ಹೋರಾಟದ ಸಂಕ್ಷಿಪ್ತ ಹಿನ್ನೋಟ ಇದೆ. ಕಡೆಯದಾಗಿ 9ನೆ ಅಧ್ಯಾಯದಲ್ಲಿ ಮಂಡ್ಯ ಜಿಲ್ಲೆಯ ಆಲೆಮನೆಗಳಲ್ಲಿ ನಡೆದ 900 ಹೆಣ್ಣು ಭ್ರೂಣ ಹತ್ಯೆಯ ಪ್ರಕರಣದ ವಿವರಗಳನ್ನು ಸೇರ್ಪಡಿಸಲಾಗಿದೆ.

ಈ ಅಧ್ಯಾಯದಲ್ಲಿ ಒದಗಿಸಲಾಗಿರುವ ಲಿಂಗಾನುಪಾತದ ಅಂಕಿಅಂಶಗಳು ಬಹಳ ಉಪಯುಕ್ತವಾಗಿವೆ. ರಾಜ್ಯಾವಾರು ಹಾಗೂ ಕರ್ನಾಟಕದಲ್ಲಿ ಜಿಲ್ಲಾವಾರು ದತ್ತಾಂಶಗಳನ್ನು 2022ರವರೆಗೂ ನೀಡಲಾಗಿದ್ದು, ಕರ್ನಾಟಕದಲ್ಲಿ ಕೊಂಚ ಸುಧಾರಿತವಾಗಿ ಕಂಡುಬಂದರೂ, ಇದು ಅಧಿಕೃತ ದಾಖಲಾದ ಪ್ರಕರಣಗಳನ್ನು ಮಾತ್ರ ಬಿಂಬಿಸುತ್ತವೆ. ಅನಧಿಕೃತವಾಗಿ ನಡೆಯುವ ಹೆಣ್ಣು ಭ್ರೂಣ ಹತ್ಯೆಯನ್ನು ಪರಿಶೋಧಿಸುವ ಜವಾಬ್ದಾರಿ ಇಡೀ ನಾಗರಿಕ ಸಮಾಜದ ಮೇಲಿದೆ. ವಿಮೋಚನಾ ಇಟ್ಟಿರುವ ಹೆಜ್ಜೆ ಕೇವಲ ಮಹಿಳಾ ಸಂಘಟನೆಗಳ ಕರ್ತವ್ಯವಷ್ಟೇ ಅಲ್ಲ. ಇದು ದೇಶದ ಪ್ರಗತಿ, ಸಂವಿಧಾನ ರಕ್ಷಣೆ ಮತ್ತು ಸಾಂವಿಧಾನಿಕ ಆಶಯಗಳಾದ ಸಮಾನತೆಯನ್ನು ಸಾಧಿಸಲು ಶ್ರಮಿಸುತ್ತಿರುವ ಎಲ್ಲ ಸಂಘಟನೆಗಳ ಆದ್ಯತೆಯಾಗಬೇಕಿದೆ. ಲೇಖಕ ಮಂಜುನಾಥ್‌ ಅದ್ದೆ ತಮ್ಮ ಅಧ್ಯಯನಕ್ಕಾಗಿ 2001ರ ಜನಗಣತಿಯನ್ನು ಅವಲಂಬಿಸಿರುವುದನ್ನು ಗಮನಿಸಿ, ವರ್ತಮಾನ ಭಾರತದಲ್ಲಿ ಹೆಣ್ಣು ಜೀವದ ರಕ್ಷಣೆಗಾಗಿ ಮಾರ್ಗೋಪಾಯಗಳನ್ನು ಗುರುತಿಸಬೇಕಿದೆ.

 ಕೊನೆಯದಾಗಿ

 “ ಒಡಲ ತುಡಿತಕ್ಕೆ ಕೇಡು ” ಕೃತಿಯು ಒಂದು ಅತ್ಯಮೂಲ್ಯ ಆಕರವನ್ನು ಒದಗಿಸಿದ್ದು, 17 ವರ್ಷಗಳ ಕಾಲ ಅಜ್ಞಾತದಲ್ಲಿದ್ದುದೇ ನಮ್ಮನ್ನು ಆತ್ಮಾವಲೋಕನಕ್ಕೆ ದೂಡಬೇಕಿದೆ. ನಿತ್ಯ ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಬಹಿಷ್ಕಾರಗಳನ್ನು ಎದುರಿಸುತ್ತಿರುವ ಹೆಣ್ಣು ಸಂಕುಲವನ್ನು ರಕ್ಷಿಸುವ ನಿಟ್ಟಿನಲ್ಲಿ, ಜೀವ ತಳೆಯುವ ಮುನ್ನವೇ ಬುಡದಲ್ಲೇ ಹೊಸಕಿ ಹಾಕುವ ಹೆಣ್ಣು ಭ್ರೂಣ ಹತ್ಯೆ ಎಂಬ ಪಾಶವಿ ಕೃತ್ಯಕ್ಕೆ ಅಂತ್ಯ ಹಾಡುವ ಸಂಕಲ್ಪದೊಂದಿಗೆ ಮಹಿಳಾ ಚಳುವಳಿಗಳು, ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು ಹಾಗೂ ಬಹುಮುಖ್ಯವಾಗಿ ಕಾರ್ಮಿಕ-ರೈತ ಸಂಘಟನೆಗಳು ಕ್ರಿಯಾಶೀಲವಾಗಿ ಕಾರ್ಯಯೋಜನೆಗಳನ್ನು ರೂಪಿಸಬೇಕಿದೆ. ಅಂಕಿ ಸಂಖ್ಯೆಗಳನ್ನು ದಾಟಿ, ವಿಶಾಲ ಸಮಾಜದತ್ತ ದೃಷ್ಟಿ ನೆಟ್ಟಾಗ ನಮಗೆ ಗೋಚರಿಸುವಂತಹ ಮಹಿಳಾ ದೌರ್ಜನ್ಯಗಳ  ವಿರುದ್ಧ ನಾಗರಿಕ ಜಗತ್ತು ದನಿ ಎತ್ತುವುದು ವರ್ತಮಾನ ಭಾರತದ ತುರ್ತು.

 ಈ ನಿಟ್ಟಿನಲ್ಲಿ “ ಒಡಲ ತುಡಿತಕ್ಕೆ ಕೇಡು ” ಕೃತಿಯು ನಮ್ಮೊಳಗಿನ ಹೋರಾಟದ ಕಿಚ್ಚನ್ನು ಮತ್ತಷ್ಟು ಕ್ರಿಯಾಶೀಲವಾಗಿಸುತ್ತದೆ. ಈ ಪ್ರಯತ್ನಕ್ಕಾಗಿ ಲೇಖಕ ಮಂಜುನಾಥ್‌ ಅದ್ದೆ ಮತ್ತು ಅವರ ಹಿಂದಿನ ಸಾಂಘಿಕ ಶಕ್ತಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಗೆ ಅಭಿನಂದನೆ ಸಲ್ಲಿಸುವುದು ತೀರಾ ಔಪಚಾರಿಕವಾಗಿಬಿಡುತ್ತದೆ. ಇದನ್ನೂ ಮೀರಿದ ಪ್ರಯತ್ನಗಳನ್ನು ಸಮಾಜದ ನಡುವೆ ಮಾಡುವ ಆದ್ಯತೆ, ಸಂಕಲ್ಪ ನಾಗರಿಕ ಜಗತ್ತಿನ ಗುರಿಯಾಗಬೇಕು. ಆಗ ಆಲೆಮನೆಗಳಲ್ಲಿ ಕಬ್ಬು ಮಾತ್ರ ಅರೆಯಲ್ಪಡುತ್ತದೆ, ಖಾಸಗಿ ಆಸ್ಪತ್ರೆಗಳಲ್ಲಿ ಹೆಣ್ಣು ಜೀವಗಳು ಲೌಕಿಕ ಪ್ರಪಂಚಕ್ಕೆ ಕಣ್ತೆರೆಯುತ್ತವೆ, ವೈದ್ಯಲೋಕ ತನ್ನ ವೃತ್ತಿಪರತೆಯನ್ನು ಮನಗಂಡು ಮಾನವೀಯತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆಗ ಮಾತ್ರ ಈ ಅಮೂಲ್ಯ ಕೃತಿ ಮತ್ತು ಅದರ ಹಿಂದಿನ ಅಪಾರ ಪರಿಶ್ರಮ ಮತ್ತು ಆಸಕ್ತಿ ಸಾಕಾರಗೊಳ್ಳಲು ಸಾಧ್ಯ. ಜನಪರ-ಜೀವಪರ ಹೋರಾಟದ ಮೈದಾನದಲ್ಲಿರುವ ಎಲ್ಲ ಸಂಘಟನೆಗಳು ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ.

DK Shivakumar: ತಿರುಪತಿ ತಿರುಮಲ ದೇವಾಲಯದ ಅಧ್ಯಕ್ಷ BR ನಾಯ್ಡು ಸನ್ಮಾನಿಸಿದ ಡಿಕೆಶಿ..! #pratidhvani

 ಮತ್ತೊಮ್ಮೆ ವಿಮೋಚನಾ ಮತ್ತು  ಮಂಜುನಾಥ್‌ ಅದ್ದೆ ಅವರಿಗೆ ಅಭಿನಂದನೆಗಳು.

-೦-೦-೦-೦- .

Tags: alien civilizationaliens videoancient civilizationsancient lost civilizationancient ufo videocities of the underworld full episodecivilization foundationscivilization quizdark secrets of romedark sidedark side exposeddark side of historydark side of japandark side of japan explaineddark side of the silk roadlost civilizationsumerian civilizationthe dark sidethe dark side of ancient greeceufo video clips
Previous Post

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

Next Post

ಗುರು ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಹಣ ಸಂಗ್ರಹ – ಮೋಸ ಹೋಗಬೇಡಿ ಎಂದು ಮಠದಿಂದ ಅಧಿಕೃತ ಪ್ರಕಟಣೆ 

Related Posts

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ
Top Story

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

by ನಾ ದಿವಾಕರ
July 12, 2025
0

ಬಹುಭಾಷಿಕ ದೇಶದಲ್ಲಿ ಭಾಷಾ ಸ್ವಾಯತ್ತತೆಯೊಂದೇ ಸಮನ್ವಯ ಸಾಧಿಸಬಲ್ಲದು ಭಾಗ 2   ಶಾಲಾ ಕಲಿಕೆಯಲ್ಲಿ ಭಾಷಾ ಅಸ್ಮಿತೆ  ಶಾಲಾ ‍ಪಠ್ಯಕ್ರಮದಲ್ಲಿ ಭಾಷಾ ಅಳವಡಿಕೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ...

Read moreDetails

DK Shivakumar: ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ..!!

July 11, 2025

HD Kumarswamy: ಉತ್ತೇಜನ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

July 11, 2025
ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ

ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ

July 11, 2025
ಮೈಸೂರಿನಲ್ಲಿ ಮಹಿಳೆಯರು ಹಾಗೂ ಪುರುಷನ ಮೇಲೆ ಲಾಂಗ್ ನಿಂದ ದಾಳಿ.

ಮೈಸೂರಿನಲ್ಲಿ ಮಹಿಳೆಯರು ಹಾಗೂ ಪುರುಷನ ಮೇಲೆ ಲಾಂಗ್ ನಿಂದ ದಾಳಿ.

July 11, 2025
Next Post
ಗುರು ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಹಣ ಸಂಗ್ರಹ – ಮೋಸ ಹೋಗಬೇಡಿ ಎಂದು ಮಠದಿಂದ ಅಧಿಕೃತ ಪ್ರಕಟಣೆ 

ಗುರು ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಹಣ ಸಂಗ್ರಹ - ಮೋಸ ಹೋಗಬೇಡಿ ಎಂದು ಮಠದಿಂದ ಅಧಿಕೃತ ಪ್ರಕಟಣೆ 

Recent News

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ
Top Story

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

by ನಾ ದಿವಾಕರ
July 12, 2025
Top Story

DK Shivakumar: ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ..!!

by ಪ್ರತಿಧ್ವನಿ
July 11, 2025
Top Story

HD Kumarswamy: ಉತ್ತೇಜನ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
July 11, 2025
ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ
Top Story

ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ

by ಪ್ರತಿಧ್ವನಿ
July 11, 2025
ಮೈಸೂರಿನಲ್ಲಿ ಮಹಿಳೆಯರು ಹಾಗೂ ಪುರುಷನ ಮೇಲೆ ಲಾಂಗ್ ನಿಂದ ದಾಳಿ.
Top Story

ಮೈಸೂರಿನಲ್ಲಿ ಮಹಿಳೆಯರು ಹಾಗೂ ಪುರುಷನ ಮೇಲೆ ಲಾಂಗ್ ನಿಂದ ದಾಳಿ.

by ಪ್ರತಿಧ್ವನಿ
July 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

ಭಾಷೆ ಅಸ್ಮಿತೆ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ

July 12, 2025

DK Shivakumar: ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ..!!

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada