ರಾಜ್ಯ ರಾಜಕಾರಣದಲ್ಲಿ ಚಿತ್ರ ವಿಚಿತ್ರ ಬೆಳವಣಿಗೆಗಳು ಆಗುತ್ತಿದ್ದು ಆಡಳಿತ ಸರ್ಕಾರ ಸಿಎಂ ಗದ್ದುಗೆ ಗುದ್ದಾಟ ವಿಚಾರದಲ್ಲಿ ಪದೆ ಪದೆ ಮುಜುಗರಕ್ಕೆ ಈಡಾಗುತ್ತಿದೆ. ಈ ಕುರಿತು ಮಸತಾನಾಡಿರುವ ಈಶ್ವರಪ್ಪ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾಗ್ತಾರೋ, ಇರ್ತಾರೋ ಗೊತ್ತಿಲ್ಲ ಎಂದಿದ್ದಾರೆ.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಇತ್ತೀಚೆಗೆ ಪಕ್ಷದ ಒಳಗೂ ಟೀಕೆ ಮಾಡುವ ಬೆಳವಣಿಗೆ ನಮ್ಮ ಪಕ್ಷದಲ್ಲೂ ಬಂದು ಬಿಟ್ಟಿದೆ. ಪಕ್ಷದ ಒಳಗಿರುವವರು ಟೀಕೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಎಂದೂ ಇರಲಿಲ್ಲ. ಇದನ್ನು ನಾನು ನೊಂದು ಹೇಳುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಮೂರನೇ ಅಲೆ ಬರುತ್ತದೋ ಇಲ್ಲವೋ, ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಬರುತ್ತದೋ ಇಲ್ಲವೋ, ಮುಖ್ಯಮಂತ್ರಿ ಬದಲಾಗ್ತಾರೋ, ಇರ್ತಾರೋ ಗೊತ್ತಿಲ್ಲ. ಆದರೆ ಕಾರ್ಯಕರ್ತರು, ತಮ್ಮ ನಿಷ್ಠೆ, ಸಿದ್ದಾಂತವನ್ನ ಸಂಘಟನೆಗೆ ತೋರಿಸಿ ಬೆಳೆಸಬೇಕಿದೆ. ಸಂಘಟನೆ ಶಕ್ತಿ ಬೆಳೆಸಿಕೊಂಡು ಹೋಗುತ್ತಿದ್ದರೆ, ಎಂದಿಗೂ ನಮ್ಮ ಪಕ್ಷಕ್ಕೆ ತೊಂದರೆಯಾಗುವುದಿಲ್ಲ. ಯಾರೂ ಏನೇ ಮಾತನಾಡಿದರೂ ಪರವಾಗಿಲ್ಲ. ಕಾರ್ಯಕರ್ತರು ಸಂಘಟನೆ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ಮಾತ್ರ ಯೋಚಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಇತ್ತ ಆಡಳಿತ ಪಕ್ಷ ಸಿಎಂ ಗದ್ದುಗೆಗೆ ಗುದ್ದಾಟ ನಡೆಸುತ್ತಿದ್ದರೆ, ಅತ್ತ ಕಾಂಗ್ರೆಸ್ ಮುಂದಿನ ಸಿಎಂ ಯಾರು? ಸಿದ್ದರಾಮಯ್ಯ ಅಥವಾ ಡಿ.ಕೆ ಶಿವಕುಮಾರ್ ಎಂಬ ಚರ್ಚೆಯನ್ನು ಅವರದ್ದೆ ಶಾಸಕರು ಮಾತಾಡುತ್ತಿದ್ದಾರೆ.