ಆಗಸ್ಟ್ 10ರಂದು ಹರಾಜು ಪ್ರಕ್ರಿಯೆ ಅಂತ್ಯಗೊಳ್ಳಲಿದ್ದು, ಅಕ್ಟೋಬರ್ ನಲ್ಲಿ 5ಜಿ ತರಂಗಾಂತರ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲಾ ಕಡೆ 5ಜಿ ತರಂಗಾಂತರ ಉಪಕರಣಗಳನ್ನು ಅಳವಡಿಸಿ 5ಜಿ ಸೇವೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ ಎಂದರು.
೫ಜಿ ಹರಾಜು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಹರಾಜು ಪ್ರಕ್ರಿಯೆ ಪರಿಶೀಲನೆ ಕುರಿತು ಸಮಿತಿ ರಚಿಸಲಾಗಿದ್ದು, ಪರಿಶೀಲನೆ ನಡೆದಿದೆ. ಆಗಸ್ಟ್ 10ರಂದು ಟೆಲಿಕಾಂ ಕಂಪನಿಗಳಿಗೆ ತರಂಗಾಂತರ ಹಂಚಿಕೆ ಆಗಲಿದೆ. ಅಕ್ಟೋಬರ್ ನಲ್ಲಿ ಸೇವೆ ಆರಂಭವಾಗುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.
ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ದೂರ ಸಂಪರ್ಕ ಸೇವೆ ಲಭಿಸುತ್ತಿದ್ದು, ಇದು ೫ಜಿ ತರಂಗಾಂತರ ಹಂಚಿಕೆಯಲ್ಲೂ ಮುಂದುವರಿಯುವ ವಿಶ್ವಾಸವಿದೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದರು.
ಅಮೆರಿಕ ಮತ್ತು ಯುರೋಪ್ ಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಶೇ.೧೦ರಷ್ಟು ರೇಡಿಯೇಷನ್ ಕಡಿಮೆ ಇರಲಿದೆ ಎಂದು ಹೇಳಿದ ಅವರು, ಈ ಮೂಲಕ 5ಜಿ ತರಂಗಾಂತರ ತಂತ್ರಜ್ಞಾನದಿಂದ ಯಾವುದೇ ಮನುಷ್ಯರ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.