ನೆಹರೂ ಕುರಿತು ಬಿಜೆಪಿ ಹೇಳಿದ ಐದು ಸುಳ್ಳುಗಳು
ಸ್ವತಂತ್ರ ಭಾರತದ ಮೊತ್ತಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಅವರ 132ನೇ ಜಯಂತಿಯನ್ನು ನಾವು ಆಚರಿಸುತ್ತಾ ಇದ್ದೇವೆ. ಪ್ರಥಮ ಪ್ರಧಾನಿಯಾಗಿ ಭಾರತದ ಹಲವು ‘ಪ್ರಥಮ’ಗಳಿಗೆ ಕಾರಣರಾದ ನೆಹರು ಕುರಿತು ಸುಳ್ಳು ಸುದ್ದಿ ಸೃಷ್ಟಿಸಿ ಅದಕ್ಕೆ ಪ್ರಚಾರ ನೀಡುವ ವ್ಯವಸ್ಥಿತ ಪಿತೂರಿ ದೇಶದಲ್ಲಿ ಹಿಂದಿನಿಂದಲೂ ನಡೆಯುತ್ತಾ ಇದೆ. ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯಾವ ಸಂಕಷ್ಟಕ್ಕೆ ಸಿಲುಕಿದರೂ, ನೆಹರು ಆಡಳಿತದ ಕಡೆಗೆ ಬೊಟ್ಟು ಮಾಡುವುದು ಸಾಮಾನ್ಯವೆಂಬಂತಾಗಿದೆ. ಇದಕ್ಕೆ ಹೊರತಾಗಿ, ನೆಹರು ಅವರ ಜೀವನ, ರಾಜಕೀಯ ನೀತಿ ಹಾಗೂ ಜೀವನ ಶೈಲಿಯ ಕುರಿತು ಸಂಘಪರಿವಾರ ಹಿಂದಿನಿಂದಲೂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಬಂದಿದೆ. ಅದರಲ್ಲೂ, ಯಾವುದೇ ವಿಚಾರವನ್ನು ತಿರುಚಿ ಸಂಘಪರಿವಾರಕ್ಕೆ ಬೇಕಾದ ರೀತಿಯಲ್ಲಿ ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಬಿಜೆಪಿ ‘ಐಟಿ ಸೆಲ್’ ಹೊತ್ತುಕೊಂಡಿದೆ. ಎಷ್ಟರ ಮಟ್ಟಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತದೆ ಎಂದರೆ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಅವರು ಐಟಿ ಸೆಲ್ ನೀಡಿರುವ ಸುಳ್ಳು ಸುದ್ದಿಯನ್ನು ನಂಬಿ ಚಾನೆಲ್ ಒಂದರಲ್ಲಿ ‘Exclusive Breaking News’ ನಂತೆ ಪ್ರಸ್ತುತ ಪಡಿಸುತ್ತಾರೆ. ಪ್ರಧಾನಿ ಮೋದಿಯ ಆಪ್ತರಿಂದ ಹಿಡಿದುಕಟ್ಟ ಕಡೇಯ ಕಾರ್ಯಕರ್ತರವರೆಗೂ, ನೆಹರೂ ಕುರಿತ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಷಡ್ಯಂತ್ರ ಇನ್ನೂ ನಡೆಯುತ್ತಲೇ ಇದೆ. ನೆಹರು ಮರಣವನ್ನಪ್ಪಿ ಐದು ದಶಕಗಳು ಕಳೆಯುತ್ತಾ ಬಂದರೂ, ಇನ್ನೂ ಅವರ ಜಪ ದೇಶದಲ್ಲಿ ನಡೆಯುತ್ತಲೇ ಇದೆ. ಅವರ ಕುರಿತು ದೇಶದಲ್ಲಿ ಹಬ್ಬಿಸಲಾದ ಪ್ರಮುಖ ಸುಳ್ಳುಗಳ ಪಟ್ಟಿ ಇಲ್ಲಿದೆ. ನೆಹರೂ RSS ಶಾಖೆಗೆ ಭೇಟಿ ನೀಡಿದ್ದರೇ? ಆರ್ಎಸ್ಎಸ್ ಸಿದ್ದಾಂತಗಳನ್ನು ಕಟುವಾಗಿ ಟೀಕಿಸುತ್ತಿದ್ದ ನೆಹರು, ಆರ್ಎಸ್ಎಸ್ ಶಾಖೆಗೆ ಭೇಟಿ ನೀಡಿದ ಚಿತ್ರವೈರಲ್ ಆಗಿತ್ತು. ‘I Support Doval’ ಎಂಬ ಫೇಸ್ಬುಕ್ ಪೇಜ್ ನಲ್ಲಿ ಈ ಚಿತ್ರವನ್ನು ಅಪ್ಲೋಡ್ ಮಾಡಲಾಗಿತ್ತು. “ತುಂಬಾ ಕಷ್ಟದಿಂದ ಈ ಚಿತ್ರ ಲಭಿಸಿದೆ. ನೆಹರು ಆರ್ಎಸ್ಎಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ನೀವು ಹೇಳಿ, ನೆಹರು ಕೂಡಾ ಕೇಸರಿ ಭಯೋತ್ಪಾದಕರಾಗಿದ್ದರೇ?” ಎಂಬ ಒಕ್ಕಣೆಯೊಂದಿಗೆ ಈ ಚಿತ್ರವನ್ನು ಹರಿಯಬಿಡಲಾಗಿತ್ತು. ಈ ಚಿತ್ರ ನಿಜವಾಗಿಯೂ ನೆಹರು ಅವರದ್ದೇ. ಆದರೆ, ಅವರು ಧರಿಸಿರುವ ಸಮವಸ್ತ್ರ ಆರ್ಎಸ್ಎಸ್ ಸಮವಸ್ತ್ರವಲ್ಲ. ಈ ಚಿತ್ರವನ್ನು 1939ರಲ್ಲಿ ಉತ್ತರಪ್ರದೇಶದ ನೈನಿ ಎಂಬಲ್ಲಿ ತೆಗೆಯಲಾಗಿತ್ತು. 1925ರಲ್ಲಿ ಆರ್ಎಸ್ಎಸ್ ಸಮವಸ್ತ್ರವನ್ನು ಪರಿಚಯಿಸಿದ್ದರೂ, ಅವರು ಕಪ್ಪು ಬಣ್ಣದ ಟೋಪಿ ಬಳಸುತ್ತಿದ್ದರು. ಈ ಚಿತ್ರದಲ್ಲಿ ಬಿಳಿ ಬಣ್ಣದ ಟೋಪಿಯನ್ನು ನೆಹರುಧರಿಸಿದ್ದಾರೆ. ಇದು ಭಾರತೀಯ ಸೇವಾದಳದ ಸಮವಸ್ತ್ರವಾಗಿದ್ದು ಆರ್ಎಸ್ಎಸ್ ಸಮವಸ್ತ್ರವಲ್ಲ. 2. ನೆಹರೂ ಸ್ತ್ರೀಲೋಲರಾಗಿದ್ದರೇ? ಬಿಜಪಿ ಐಟಿ ಸೆಲ್ ಕಾಂಗ್ರೆಸ್ಸಿಗೆ ಮುಜುಗರ ಉಂಟುಮಾಡುವ ಸಲುವಾಗಿ, ನೆಹರು ಕುರಿತು ಅತ್ಯಂತ ಕೀಳು ಮಟ್ಟದ ಅಪಪ್ರಚಾರವನ್ನು ಆರಂಭಿಸಿದ್ದವು. ನೆಹರು ತಮ್ಮ ಸಹೋದರಿ ಹಾಗೂ ಸೋದರ ಸಂಬಂಧಿಯೊಂದಿಗೆ ತೆಗೆಸಿದ ಚಿತ್ರಗಳನ್ನು ಪರಸ್ತ್ರೀಯರೊಂದಿಗಿನ ಚಿತ್ರಗಳೆಂದು ಬಿಂಬಿಸಿ ಅವರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಖುದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರಗಳನ್ನು ಹಂಚಿಕೊಂಡು ತಪ್ಪು ಮಾಹಿತಿಯನ್ನು ನೀಡಿದ್ದರು. ಮೊದಲ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆ ಪಂಡಿತ್ ಜವಹರ್ ಲಾಲ್ ನೆಹರು ಅವರ ಸಹೋದರಿ ವಿಜಯಲಕ್ಷ್ಮೀ ಪಂಡಿತ್. ಎರಡನೇ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ನಯನತಾರ ಸೆಹಗಲ್. ಇವರು ನೆಹರು ಅವರ ಸೋದರ ಸೊಸೆ. ಈ ಚಿತ್ರಗಳನ್ನು ಬಳಸಿ ಕೀಳು ಅಭಿರುಚಿಯ ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸವನ್ನು ಬಿಜೆಪಿ ಐಟಿ ಸೆಲ್ ಮಾಡುತ್ತಲೇ ಇದೆ. ...
Read moreDetails