ಯಾದಗಿರಿ ಪಿಎಸ್ಐ ಪರಶುರಾಮ (PSI Parasurama) ನಿಗೂಢ ಸಾವಿನ ಒಂದೊಂದೇ ರಹಸ್ಯಗಳೇ ಬಯಲಾಗುತ್ತಿದೆ. ಒಂದು ಕಡೆ ಪಿಎಸ್ಐ ಸಾವಿಗೆ ಕಾಂಗ್ರೆಸ್ ಶಾಸಕರೇ ಕಾರಣ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಫೀಲ್ಡ್ಗಿಳಿದಿದೆ. ಈ ಮಧ್ಯೆ ಇಂದು ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪರಶುರಾಮ ನಿವಾಸಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಪರಶುರಾಮನ ಸ್ನೇಹಿತರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.ಆರ್.ಅಶೋಕ್ ಜೊತೆ ಮಾತನಾಡಿದ ಪರಶುರಾಮನ ಸ್ನೇಹಿತರು ಪೋಸ್ಟ್ ಮಾರ್ಟಮ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಮಾರ್ಟಮ್ ಪ್ರಕ್ರಿಯೆ ಫಾಲೋ ಮಾಡಿಲ್ಲ ಎಂಬ ಸಂಗತಿ ತಿಳಿಸಿದ್ದಾರೆ.ಸಾಂತ್ವಾನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, ಪರಶುರಾಮ ಕುಟುಂಬದ ಜೊತೆ ಮಾತನಾಡಿ ಮಾಹಿತಿ ಪಡೆದಿರುವೆ.
ಈ ಸರ್ಕಾರ ಪೊಲೀಸರ ಜೊತೆ ನಡೆದುಕೊಳ್ತಿರುವ ರೀತಿ ನೋವಾಗಿದೆ. ದಲಿತ ಕುಟುಂಬದ ಹೆಣ್ಣು ಮಗಳು ನ್ಯಾಯಕ್ಕಾಗಿ ಅಂಗಲಾಚುವಂತಾಗಿದೆ. ನಾವು ಇನ್ನೂ ಯಾವ ಯುಗದಲ್ಲಿ ಇದ್ದೇವೆ ಅನ್ನೋದು ಗೊತ್ತಾಗುತ್ತಿಲ್ಲ. ನಮ್ಮ ಏರಿಯಾದಲ್ಲಿ ದಲಿತರು ಇರಬಾರದು ಅಂತಾ ಶಾಸಕರು ಹೇಳಿದ್ರಂತೆ. ಹೀಗಂತ ಕುಟುಂಬದವರು ನಮಗೆ ಮಾಹಿತಿ ನೀಡಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನದಡಿ ನಾವೆಲ್ಲಾ ಇರೋದು. ಇಂತಹ ನೀಚತನವನ್ನು ಯಾರೂ ಸಹಿಸಿಕೊಳ್ಳಲು ಆಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಕರಣವನ್ನು ಸಿಬಿಐಗೆ ನೀಡಬೇಕು: ಆರ್.ಅಶೋಕ್ ಪಿಎಸ್ಐ ಪರಶುರಾಮ ಸಾವಿನ ಬಗ್ಗೆ ವರದಿಯೇ ಬಂದಿಲ್ಲ, ಆದರೆ ಗೃಹ ಸಚಿವರು ಹೃದಯಾಘಾತದಿಂದ ಸಾವಾಗಿದೆ ಅಂತಾರೆ. ಪ್ರಕರಣವನ್ನು ಸಿಬಿಐಗೆ ನೀಡಬೇಕು.
ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಿ ಅಂತ ಯಾರು ಅರ್ಜಿ ನೀಡಿದ್ರು ಪೊಲೀಸ್ ಇಲಾಖೆ ಸತ್ತುಹೋಗಿದೆ ಅಂತ ಎನ್ನಿಸುತ್ತೆ. ಪ್ರಕರಣ ದಾಖಲಿಸಿಕೊಳ್ಳಲು 14 ಗಂಟೆ ತೆಗೆದುಕೊಂಡಿದ್ದಾರೆ, ಆದರೆ ಒಂದೇ ಗಂಟೆಯಲ್ಲಿ ಸಿಐಡಿ ತನಿಖೆಗೆ ನೀಡಿದ್ದಾರೆ. ಸರ್ಕಾರ ಎಲ್ಲಾ ಪ್ರಕರಣಗಳನ್ನು ಸಿಐಡಿ ಕೊಡ್ತಿದ್ದಾರೆ. ಕೊಟ್ಟಿರುವ ಯಾವುದಾದರೂ ಪ್ರಕರಣದಲ್ಲಿ ಸತ್ಯ ಹೊರಬಂದಿದೆಯಾ? ಪರಮೇಶ್ವರ್ ಸಿಎಂ ಜೊತೆ ಮಾತಾಡಿದ್ದೇನೆ ಅಂತ ಹೇಳಿದ್ರು ಆದರೆ ಈ ಪ್ರಕರಣದ ಪ್ರಭಾವ ಸಿಎಂವರೆಗೆ ಹೋಗಿದೆ ಎಂದು ಹೇಳಿದ್ದಾರೆ.