ಶಿವಮೊಗ್ಗ : ಒಳ ಮೀಸಲಾತಿ ವಿರೋಧಿಸಿ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಬಂಜಾರ ಹಾಗೂ ಭೋವಿ ಸಮಾಜದ ಪ್ರತಿಭಟನಾಕಾರರು ಬಿಎಸ್ವೈ ನಿವಾಸದ ಮೇಲೆ ಕಲ್ಲು ತೂರಿ, ಚಪ್ಪಲಿಗಳನ್ನು ಎಸೆದು ಆಕ್ರೋಶ ಹೊರಹಾಕಿದ ಘಟನೆಯು ವರದಿಯಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಒಳಮೀಸಲಾತಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರಿಂದ ಸಮಾಜಕ್ಕೆ ಉಂಟಾದ ನಷ್ಟವನ್ನು ವಿರೋಧಿಸಿ ಶಿಕಾರಿಪುರ ತಾಲೂಕಿನ ಬಂಜಾರ ಹಾಗೂ ಭೋವಿ ಸಮಾಜದ ಜನತೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ನಡುವೆಯೇ ಬಿಎಸ್ವೈ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಪೊಲೀಸರು ಅಡ್ಡ ಬರುತ್ತಿದ್ದಂತೆಯೇ ಉದ್ರಿಕ್ತರಾದ ಪ್ರತಿಭಟನಾಕಾರರ ಗುಂಪು ಬಿಎಸ್ವೈ ನಿವಾಸಕ್ಕೆ ಚಪ್ಪಲಿ ಹಾಗೂ ಕಲ್ಲು ತೂರಿದೆ. ಕಲ್ಲು ಎಸೆತದ ರಭಸಕ್ಕೆ ಬಿಎಸ್ವೈ ನಿವಾಸದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಯತ್ನಿಸಿದ ಪೊಲೀಸರು ಮೇಲೆಯೂ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಬಿಎಸ್ವೈ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನೀಡಲಾಗುತ್ತಿದೆ. ಕಲ್ಲು ತೂರಾಟದ ವೇಳೆ ಅನೇಕ ಮಹಿಳೆಯರಿಗೂ ಗಾಯಗಳಾಗಿದೆ ಎನ್ನಲಾಗಿದೆ.