
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಗ್ಯಾರಂಟಿಗಳನ್ನು ಕೊಡ್ತೀವಿ ಎಂದು ಘೋಷಣೆ ಮಾಡಿದ್ದಕ್ಕೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಬರೋಬ್ಬರಿ 136 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಅಧಿಕಾರದ ಗದ್ದುಗೆಗೆ ಏರಿದ ಬಳಿಕ ಕಾಂಗ್ರೆಸ್ ಕೂಡ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿತ್ತು. ಒಂದೊಂದಾಗಿ ಯೋಜನೆ ಜಾರಿ ಮಾಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಅನ್ನೋ ಬಿರುದಾಂಕಿತವನ್ನೂ ಸಿದ್ದರಾಮಯ್ಯ ಹೇಳಿಕೊಂಡ್ರು. ಆದರೆ ಇದೀಗ ಕಳೆದ ಎರಡ್ಮೂರು ತಿಂಗಳಿಂದ ಮಹಿಳೆಯರಿಗೆ ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎನ್ನುವ ಕೂಗು ಎದ್ದಿತ್ತು. ನಾಲ್ಕೈದು ದಿನಗಳ ಹಿಂದೆ ಒಂದು ತಿಂಗಳ ಹಣ ಬಂದಿತ್ತು. ಇನ್ನೂ ಒಂದು ತಿಂಗಳ ಹಣ ಬ್ಯಾಲೆನ್ಸ್ ಇದೆ. ಈ ನಡುವೆ ಸಣ್ಣದೊಂದು ಗೊಂದಲ ಸೃಷ್ಟಿಯಾಗಿದೆ.

ಆಗಸ್ಟ್ ತಿಂಗಳಿಂದಲೇ ಗ್ಯಾರಂಟಿಯ ಗೃಹಲಕ್ಷ್ಮೀ ಜಾರಿ ಮಾಡಿದ್ದ ಕಾಂಗ್ರೆಸ್ ಸರ್ಕಾರ ವರ್ಷ ತುಂಬುವ ಮೊದಲೇ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಆಗಬೇಕು ಅಂತ ಸಚಿವರುಗಳೇ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈಗಾಗಲೇ ಹೈಕಮಾಂಡ್‌ಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದು, ಸರ್ಕಾರದ ಯೋಜನೆಗಳು ಬಡವರಿಗಷ್ಟೇ ಸಿಗಬೇಕು. ಶ್ರೀಮಂತರಿಗೆ ಕೊಡಬೇಕಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರದಲ್ಲಿ ಭಾಗಿಯಾಗಿರುವ ಸಚಿವರುಗಳೇ ಈ ರೀತಿ ಹೇಳುತ್ತಿರುವುದು ಗ್ಯಾರಂಟಿ ಗೊಂದಲ ಹುಟ್ಟುಹಾಕಿದೆ. ಶ್ರೀಮಂತರು ಬಡವರು ಅನ್ನೋ ಆಧಾರದಲ್ಲಿ ಕೆಲವರನ್ನು ಕೈಬಿಡಲಾಗುತ್ತದೆ ಎನ್ನುವ ಸಣ್ಣದೊಂದು ಗುಸುಗುಸು ಶುರುವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಗ್ಯಾರಂಟಿ ಯೋಜನೆಗಳು ಕೈಹಿಡಿದಿಲ್ಲ ಎಂದು ಈ ಮೊದಲು ಕಾಂಗ್ರೆಸ್ ಶಾಸಕರು ಅಪಸ್ವರ ಎತ್ತಿದ್ದರು. ಆದರೆ ಸೋಲಿನ ಬೆನ್ನಲ್ಲೇ ಯೋಜನೆ ರದ್ದು ಮಾಡಿದ್ರೆ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಅನ್ನೋ ಕಾರಣಕ್ಕೆ ತಾತ್ಕಾಲಿಕವಾಗಿ ತಡೆಯಿಡಿಯಲಾಗಿತ್ತು. ಆದರೀಗ ಎಲ್ಲವೂ ಒಂದು ಹಂತಕ್ಕೆ ತಲುಪಿದ್ದು, ಸರ್ಕಾರ ಒಂದು ನಿರ್ಧಾರ ಮಾಡಲೇಬೇಕು ಅನ್ನೋ ಚರ್ಚೆಗಳು ಶುರುವಾಗಿವೆ. ಈ ವಿಚಾರದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ಮಾಹಿತಿ ನೀಡಿದ್ದು, ಗ್ಯಾರಂಟಿಗಳು ಶ್ರೀಮಂತರಿಗೆ ಹೋಗೋದನ್ನು ತಡೆಯಬೇಕು ಎಂದು ಹೈಕಮಾಂಡ್‌ಗೂ ಮಾಹಿತಿ ನೀಡಿದ್ದೇವೆ. ಆದರೆ ಗ್ಯಾರಂಟಿ ಯೋಜನೆಯನ್ನೇ ನಿಲ್ಲಿಸೋದಿಲ್ಲ. ಜನರು ಹೇಳುವ ಮಾತುಗಳನ್ನೇ ನಾಯಕರ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ.

ಒಂದು ಕಡೆ ಶ್ರೀಮಂತರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡಬಾರದು ಅನ್ನೋ ಬಗ್ಗೆ ಗಟ್ಟಿ ದನಿಯಲ್ಲಿ ಹೇಳುವಾಗಲೇ ಮತ್ತೊಂದು ಕಡೆ ಗ್ಯಾರಂಟಿ ಬಗ್ಗೆ ಭಿನ್ನ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಡವರಿಗೆ ಸಿಗಬೇಕು ನಿಲ್ಲಿಸಲ್ಲ ಎಂದಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಗ್ಯಾರಂಟಿ ಯೋಜನೆ ಮಿಸ್ ಯೂಸ್ ಆಗ್ತಿದ್ದರೆ ಕ್ರಮ ಅಗತ್ಯ ಎನ್ನುವ ಮೂಲಕ ತಡೆಯುವ ಮಾತನ್ನಾಡಿದ್ದಾರೆ. ಗ್ಯಾರಂಟಿ ನಿಲ್ಲಿಸಲ್ಲ, ವಿಪಕ್ಷಗಳಿಗೆ ಹೊಟ್ಟೆಕಿಚ್ಚು ಅಷ್ಟೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಮಾತ್ರ ಸರ್ಕಾರ ಕೊಟ್ಟಿದ್ದ ಭರವಸೆಗಳು ಹಳ್ಳ ಹಿಡಿಯುತ್ತಿವೆ ಎನ್ನುವ ಮೂಲಕ ಸರ್ಕಾರದ ಮೇಲೆ ಮುಗಿಬೀಳಲು ಸಿದ್ಧವಾಗಿದ್ದೇವೆ ಎನ್ನುವ ಸುಳಿವು ಕೊಟ್ಟಿದ್ದಾರೆ. ಆದರೆ ಗ್ಯಾರಂಟಿ ಗೊಂದಲವನ್ನು ಸರ್ಕಾರವೇ ಹುಟ್ಟು ಹಾಕಿದೆ. ಈಗಾಗಲೇ ಹಣ ಬಾರದೆ ಗೃಹಿಣಿಯರು ಆಕ್ರೋಶಗೊಂಡಿದ್ದಾರೆ. ಸರ್ಕಾರವೇ ಈ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ.

ಕೃಷ್ಣಮಣಿ