ಪಾರ್ಟಿಯಲ್ಲಿ ಡ್ರಗ್ಸ್ ಪಡೆದಿದ್ದೇ ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಪೋಗಟ್ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಈ ಮೂಲಕ ಅನುಮಾನಸ್ಪದ ಸಾವು ಪ್ರಕರಣಕ್ಕೆ ತಿರುವು ಲಭಿಸಿದೆ.
ಆಗಸ್ಟ್ 22ರಿಂದ 24ರವರೆಗೆ ಗೋವಾ ಪ್ರವಾಸದಲ್ಲಿದ್ದ ಸೋನಾಲಿ ಪೋಗಟ್ 22 ರಾತ್ರಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಮಾರನೇ ದಿನ ಬೆಳಿಗ್ಗೆ ಕೊಠಡಿಗೆ ಆಗಮಿಸಿದ ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದರು.
ಗೋವಾ ಇನ್ ಸ್ಪೆಕ್ಟರ್ ಜನರಲ್ ಒಮ್ವಿರ್ ಸಿಂಗ್ ಬಿಶ್ನೋಯಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದು, ಪಾರ್ಟಿಯಲ್ಲಿ ಸೋನಾಲಿ ಅವರಿಗೆ ಯಾರೋ ನಿಷೇಧಿತ ಡ್ರಗ್ಸ್ ಅನ್ನು ಒತ್ತಾಯಪೂರ್ವಕವಾಗಿ ನೀಡಿದ್ದಾರೆ. ಡ್ರಗ್ಸ್ ಸೇವನೆಯಿಂದ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಆಗಸ್ಟ್ 23ರ ಬೆಳಿಗ್ಗೆ 4.30ರ ಸುಮಾರಿಗೆ ಸೋನಾಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಆಕೆಯನ್ನು ಇಬ್ಬರು ಬಾತ್ ರೂಮ್ ಗೆ ಕರೆದೊಯ್ದಿದ್ದಾರೆ. ಅಲ್ಲಿ 2 ಗಂಟೆಗಳ ಕಾಲ ಏನು ಮಾಡಿದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬರಬೇಕಿದೆ ಎಂದು ಅವರು ಹೇಳಿದರು.
ಪ್ರಕರಣದ ಸಂಬಂಧ ಈಗಾಗಲೇ ಸೋನಾಲಿ ಅವರ ಇಬ್ಬರು ಆಪ್ತರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆದಿದೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಆಕೆಯ ಸಾವಿಗೆ ಡ್ರಗ್ಸ್ ಪ್ರಭಾವ ಎಂಬುದು ತಿಳಿದು ಬಂದಿದ್ದು ಎಫ್ ಎಸ್ ಎಲ್ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಬಿಶ್ನೊಯಿ ತಿಳಿಸಿದ್ದಾರೆ.