ಬೆಂಗಳೂರು : ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ನ 12 ಸೀಸನ್ ಇನ್ನೇನು ಮುಕ್ತಾಯದ ಹಂತ ತಲುಪಿದೆ. ಆದರೆ ಯಾರು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಗೆಲುವು ಕಾಣಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿವೆ.

ಈ ನಡುವೆ ಜಾಗತಿಕ ಮಟ್ಟದ ದೈತ್ಯ ಸರ್ಚ್ ಇಂಜಿನ್ ಗೂಗಲ್ ಮಾತ್ರ ಈ ಬಾರಿ ಗಿಲ್ಲಿಯ ಗೆಲುವು ಪಕ್ಕಾ ಎಂದು ಹೇಳುತ್ತಿದೆ. 12 ಸೀಸನ್‌ನ ಬಿಗ್ ಬಾಸ್ ಸ್ಪರ್ಧೆಯ ವಿನ್ನರ್ ಯಾರಾಗಲಿದ್ದಾರೆ ಎಂದು ಸರ್ಚ್ ಮಾಡಿದಾಗ ಅದರಲ್ಲಿ ಗಿಲ್ಲಿ ಎಂದು ತೋರಿಸುತ್ತಿರುವುದು ಗಿಲ್ಲಿ ಅಭಿಮಾನಿಗಳಲ್ಲಿ ಸಾಕಷ್ಟು ಸಂತಸಕ್ಕೆ ಕಾರಣವಾಗಿದೆ.ಇ
ಇನ್ನೂ ರನ್ನರ್ ಅಪ್ ಆಗಿ ಅಶ್ವೀನಿ ಗೌಡ ಸ್ಥಾನ ಪಡೆಯಲಿದ್ದಾರೆ ಎಂದು ಗೂಗಲ್ ಭವಿಷ್ಯ ನುಡಿದಿದೆ. ಈಗಾಗಲೇ ಹೆಚ್ಚಿನ ಜನರು ಈ ಪ್ರಶ್ನೆಯನ್ನು ಗೂಗಲ್‌ಗೆ ಕೇಳಿದ್ದಾರೆ. ಉತ್ತರ ಮಾತ್ರ ಗಿಲ್ಲಿ ಅಂತ ಬಂದದ್ದು ಇತರ ಸ್ಪರ್ಧಿಗಳ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇನ್ನೂ ಇದೀಗ ಗಿಲ್ಲಿಯ ಹಾಸ್ಯ ಹಾಗೂ ಮನರಂಜನೆ ಮೆಚ್ಚಿ ಗಿಲ್ಲಿನಟನಿಗಾಗಿ ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಮಾನದ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಅವರು ತಮ್ಮ ಸಾಮಾಜಿಲ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಗಿಲ್ಲಿಗೆ ಶುಭ ಹಾರೈಸಿದ್ದಾರೆ. ಈ ಕೆಳಗಿನಂತೆ ದಿನೇಶ್ ಅಮಿನ್ ಮಟ್ಟು ಬರಹ ಹಂಚಿಕೊಂಡಿದ್ದಾರೆ…
ನನಗೆ ಹಾಸ್ಯ ನಟರು ಇಷ್ಟ. ಹಿಂದಿಯ ಮೆಹಮ್ಮೂದ್, ಅಸ್ರಾನಿ, ಟುನ್ ಟುನ್,ಕೆಸ್ಟೊ ಮುಖರ್ಜಿ, ಜಾನಿವಾಕರ್ ನಿಂದ ಹಿಡಿದು ಜಾನಿ ಲಿವರ್, ರಾಜ್ ಪಾಲ್ ಯಾದವ್.. ಕನ್ನಡದ ನರಸಿಂಹರಾಜು, ಬಾಲಕೃಷ್ಣ, ಮುಸುರಿ ಕೃಷ್ಣಮೂರ್ತಿ ಕಾಶೀನಾಥ್, ರಂಗಾಯಣ ರಘು …., ತಮಿಳಿನ ವಡಿವೇಲು, ಯೋಗಿ ಬಾಬು.. ಎಲ್ಲರೂ ಇಷ್ಟ.
ಚಾರ್ಲಿ ಚಾಪ್ಲಿನ್ ನನ್ನು ಮೀರಿಸಿದ ಹಾಸ್ಯಕಲಾವಿದ ಅವನಿಗಿಂತ ಹಿಂದೆ ಮತ್ತು ನಂತರ ಹುಟ್ಟಿದ್ದಾರೆ ಎಂದು ನನಗೆ ಅನಿಸಿಲ್ಲ. ಆತ ಎಂತಹ ಅಭಿಜಾತ ಕಲಾವಿದನೆಂದರೆ ಅವನ ನಂತರದ ಯಾವ ಹಾಸ್ಯನಟನಿಗೂ ಚಾಪ್ಲಿನ್ ಪ್ರಭಾವದಿಂದ ಹೊರಬರಲಾಗಿಲ್ಲ. ಒಳ್ಳೆಯ ಹಾಸ್ಯನಟನಾಗದೆ ಪರಿಪೂರ್ಣ ನಟನಾಗಲು ಸಾಧ್ಯವಿಲ್ಲವೇನೋ? ಪ್ರಖ್ಯಾತ ನಟರೆಲ್ಲರೂ ಒಳ್ಳೆಯ ಹಾಸ್ಯನಟರೂ ಹೌದು. ಇದಕ್ಕೆ ಅಮಿತಾಬ್ ಬಚ್ಚನ್, ರಾಜ್ ಕುಮಾರ್, ಕಮಲ್ ಹಾಸನ್ ಮೊದಲಾದವರೇ ನಿದರ್ಶನ.
ಇತ್ತೀಚೆಗೆ ಟಿವಿ ಚಾನೆಲ್ ಗಳಲ್ಲಿ ರಿಯಾಲಿಟಿ ಶೋಗಳು ಶುರುವಾದ ನಂತರ ಹಾಸ್ಯದ ಹೆಸರಲ್ಲಿ ಪೋಲಿ ಜೋಕುಗಳು, ಅಪಹಾಸ್ಯಗಳು ಮೆರೆಯತೊಡಗಿರುವುದು ನಿಜ. ಆದರೆ ಇದರಲ್ಲಿ ಭಾಗವಹಿಸುತ್ತಿರುವ ಹಾಸ್ಯ ಕಲಾವಿದರಲ್ಲಿ ಹೆಚ್ಚಿನವರು ಪ್ರತಿಭಾವಂತರು. ಮೊದಲು ಹೊಟ್ಟೆಪಾಡಿಗೆ, ನಂತರ ದುಡ್ಡಿನ ಆಸೆಗೆ ಮಾಡಬಾರದು ಎಂದು ಅನಿಸಿದ್ದನ್ನೆಲ್ಲ ಅವರು ಮಾಡುತ್ತಿರುವಂತೆ ಕಾಣುತ್ತಿದೆ.
ಇಷ್ಟೆಲ್ಲ ಪೀಠಿಕೆ ಯಾಕೆಂದರೆ….
ಗಿಲ್ಲಿ ನನಗೆ ಇಷ್ಟದ ನಟ. ಆತ ಪ್ರಾರಂಭದಲ್ಲಿ ಮಂಡ್ಯ ಕನ್ನಡದಲ್ಲಿ ಯೂಟ್ಯೂಬ್ ಗೆ ಮಾಡುತ್ತಿದ್ದ ಹಾಸ್ಯದ ವಿಡಿಯೊಗಳು ಚೆನ್ನಾಗಿರುತ್ತಿತ್ತು. ಒಂದೊಂದೇ ಟೇಕ್ ನಲ್ಲಿ ದೀರ್ಘವಾಗಿ ತಡವರಿಸದೆ ಆಡುತ್ತಿದ್ದ ಮಾತುಗಳು, ಅವನ ಭಾವ,ಭಂಗಿ,ನಟನೆ ಅಧ್ಭುತ. ಟಿವಿ ಚಾನೆಲ್ ನಲ್ಲಿಯೂ ಅವನು ಮಾತಿನ ಮೋಡಿಗೆ ಮರುಳಾಗದವರು ಇರಲಾರರು.
ಆದರೆ ಬಿಗ್ ಬಾಸ್ ನಲ್ಲಿ ಮಾತ್ರ ಅವನು ಕಳೆದುಹೋಗಿದ್ದ, ಅಲ್ಲಿನ ಅವನ ಪ್ರೇಮಪ್ರಸಂಗ, ಜಗಳ, ಹಠಮಾರಿತನ ಇವೆಲ್ಲವೂ ಅವನಿಗೆ ಒಗ್ಗುವಂತಹದ್ದಲ್ಲ. ಮೂಲತ: ಅವನೊಬ್ಬ ಹಾಸ್ಯ ನಟ. ಒಂದೊಮ್ಮೆ ಅವನೇನಾದರೂ ಬಿಗ್ ಬಾಸ್ ನಲ್ಲಿ ಗೆದ್ದರೆ ಗಿಲ್ಲಿ ಹಿಂದಿನ ಹಾಸ್ಯನಟನಾಗಿ ಉಳಿಯುತ್ತಾನೋ ಇಲ್ಲವೋ ಎಂಬ ಸಂದೇಹ ನನಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳಾದ ನಂತರ ಅವರು ಬೇರೆ ಜಗತ್ತಿಗೆ ಶಿಪ್ಟ್ ಆಗಿ ಬಿಡುತ್ತಾರೆ. ಸೋನಿ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಪಿಲ್ ಶರ್ಮಾ ಒಬ್ಬ ಅಧ್ಭುತ ನಟ, ಈಗ ನೆಟ್ ಫ್ಲಿಕ್ಸ್ ನಲ್ಲಿ ಹಿಂದಿನ ಕಪಿಲ್ ಶರ್ಮಾನನ್ನು ಕಾಣಲಾಗುವುದಿಲ್ಲ. ಈಗ ಅವನೊಬ್ಬ ಸೆಲೆಬ್ರಿಟಿ ಆ್ಯಂಕರ್ .
ಗಿಲ್ಲಿ ಗೆಲ್ಲಲಿ ಮತ್ತು ಗಿಲ್ಲಿಯಾಗಿಯೇ ನಮ್ಮೆಲ್ಲರ ಮನ ರಂಜಿಸುತ್ತಿರಲಿ.
ವಿ.ಸೂ: ನಾನು ಬಿಗ್ ಬಾಸ್ ನೋಡುತ್ತಿರುತ್ತೇನೆ, ಯಾಕೆಂದರೆ ಕನ್ನಡದ ಕೆಟ್ಟ ಸೀರಿಯಲ್ ಮತ್ತು ಅದಕ್ಕಿಂತ ಹೆಚ್ಚೇನು ಒಳ್ಳೆಯದಲ್ಲದ ಕನ್ನಡದ ನ್ಯೂಸ್ ಚಾನೆಲ್ ಗಳಿಗಿಂತ ಕನ್ನಡದ ಬಿಗ್ ಬಾಸ್ ಓಕೆ.