ಶತಕ ವಂಚಿತ ಶಿಖರ್ ಧವನ್ ಸೇರಿದಂತೆ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ ಮನ್ ಗಳು ಸಿಡಿಸಿದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 309 ರನ್ ಗಳ ಗುರಿ ಒಡ್ಡಿದೆ.
ಪಾರ್ಟ್ ಆಫ್ ಸ್ಪೇನ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭದ ಹೊರತಾಗಿಯೂ ನಾಟಕೀಯ ಕುಸಿತ ಕಂಡು 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 308 ರನ್ ಗಳಿಸಿದೆ.
ಭಾರತ ತಂಡಕ್ಕೆ ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಗೆ 119 ರನ್ ಜೊತೆಯಾಟದ ಮೂಲಕ ಭರ್ಜರಿ ಆರಂಭ ನೀಡಿದರು. ಚೊಚ್ಚಲ ಅರ್ಧಶಕತ ಸಿಡಿಸಿದ ಶುಭಮನ್ ಗಿಲ್ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 64 ರನ್ ಸಿಡಿಸಿ ಔಟಾದರು.
ಶಿಖರ್ ಧವನ್ 99 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 97 ರನ್ ಗಳಿಸಿದ್ದಾಗ ಔಟಾಗಿ 3 ರನ್ ಗಳಿಂದ ಶತಕ ವಂಚಿತರಾದರು. ಇದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಜೊತೆ 2ನೇ ವಿಕೆಟ್ ಗೆ 94 ರನ್ ಪಾಲುದಾರಿಕೆ ನಿಭಾಯಿಸಿದರು. ಅಯ್ಯರ್ 57 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 54 ರನ್ ಗಳಿಸಿದರು.