ಕನ್ನಡ ಚಿತ್ರರಂಗದ ಮತ್ತೊಂದು ತಾರೆ ತನ್ನ ಇಹಲೋಕ ಪಯಣ ಮುಗಿಸಿದೆ. ತಾರೆ ಅಥವಾ ಸ್ಟಾರ್ ಎಂದರೆ ಕೇವಲ ನಾಯಕ ನಟರಿಗೆ ಮಾತ್ರವೇ ಅನ್ವಯಿಸುವ ಸಂದರ್ಭದಲ್ಲಿ ಇಂದು ನಮ್ಮನ್ನಗಲಿರುವ ಹಾಸ್ಯ ನಟ, ಪೋಷಕ ನಟ ಮತ್ತು ಕಲಾವಿದ ಎಸ್ ಶಿವರಾಂ ಅವರನ್ನು ಸಹ ತಾರೆ ಎಂದು ಸಂಬೋಧಿಸುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಶ್ರೀಯುತ ಶಿವರಾಂ ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರು.ತಮ್ಮ ೮೪ನೆಯ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾಗಿದ್ದಾರೆ. ಶಿವರಾಂ ಅವರ ಸಾವಿನೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ಪೀಳಿಗೆಯ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ಪುನೀತ್ ರಾಜಕುಮಾರ್ ಅವರ ನಿರ್ಗಮನದ ಒಂದು ತಿಂಗಳೊಳಗೆ ಮತ್ತೋರ್ವ ಕಲಾವಿದರು ನಿರ್ಗಮಿಸಿರುವುದು ಕನ್ನಡ ಚಿತ್ರರಂಗಕ್ಕೆ ಆಘಾತ ಉಂಟುಮಾಡಿರುವುದು ಸಹಜ.
ಶ್ರೀಯುತ ಎಸ್ ಶಿವರಾಂ ಮೂಲತಃ ರಂಗಭೂಮಿ ನಟರು. ಚಿತ್ರರಂಗ ಪ್ರವೇಶ ಮಾಡಿದ್ದು ಓರ್ವ ಸಹ ನಿರ್ದೇಶಕರಾಗಿ, ನಿರ್ಮಾಪಕರಾಗಿ ನಂತರ ನಟರಾಗಿ. ೧೯೩೮ರ ಜನವರಿ ೨೮ ರಂದು ಬೆಂಗಳೂರಿನ ಚೂಡಸಂದ್ರದಲ್ಲಿ ಜನಿಸಿದ ಶಿವರಾಂ ತಮ್ಮ ಚಿತ್ರರಂಗದ ಪಯಣ ಆರಂಭಿಸಿದ್ದು ೧೯೫೮ರಲ್ಲಿ ಸಹನಿರ್ದೇಶಕರಾಗಿ. ಆರು ದಶಕಗಳ ತಮ್ಮ ಪಯಣದಲ್ಲಿ ಆರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶಿವರಾಂ ಎಲ್ಲ ರೀತಿಯ ಪಾತ್ರಗಳಲ್ಲೂ ತಮ್ಮ ಕಲಾ ಪ್ರತಿಭೆಯನ್ನು ಹೊರಗೆಡಹಿದ್ದಾರೆ. ತಮ್ಮ ಸಹೋದರ ರಾಮನಾಥನ್ ಅವರೊಡನೆ ಸೇರಿ ರಾಶಿ ಸೋದರರ ಲಾಂಛನದಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿರುವ ಶಿವರಾಂ ಪೂರ್ಣ ಪ್ರಮಾಣ ಪೋಷಕ ನಟರಾಗಿ ಪ್ರವೇಶಿಸಿದ್ದು ೧೯೬೫ರಲ್ಲಿ ಬೆರೆತ ಜೀವ ಚಿತ್ರದ ಮೂಲಕ. ಹಾಸ್ಯ ನಟರಾಗಿಯೂ ಸಹ ಕೇವಲ ಹಾವಭಾವಗಳ ಮೂಲಕ ಮಾತ್ರವಲ್ಲದೆ ಉತ್ಕೃಷ್ಟ ಭಾವಾಭಿನಯದ ಮೂಲಕವೂ ಶಿವರಾಂ ಕನ್ನಡದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
೧೯೭೦ರಲ್ಲಿ ಗೆಜ್ಜೆ ಪೂಜೆ, ನಂತರ ಉಪಾಸನೆ, ೧೯೭೯ರಲ್ಲಿ ನಾನೊಬ್ಬ ಕಳ್ಳ ಮುಂತಾದ ಚಿತ್ರಗಳ ನಿರ್ಮಾಪಕರೂ ಆಗಿರುವ ಶಿವರಾಂ, ನಾಗರಹಾವು ಚಿತ್ರದಲ್ಲಿ ನಿರ್ವಹಿಸಿದ ಪಾತ್ರ ಇಂದಿಗೂ ಪ್ರೇಕ್ಷಕರ ಮನಸಲ್ಲಿ ಅಚ್ಚಳಿಯದೆ ಉಳಿದಿದೆ. ಬೆರೆತ ಜೀವ , ಮಾವನ ಮಗಳು (೧೯೬೫), ಲಗ್ನಪತ್ರಿಕೆ ೧೯೬೭, ಶರಪಂಜರ, ಮುಕ್ತಿ, ಭಲೇ ಅದೃಷ್ಟವೋ ಅದೃಷ್ಟ ೧೯೭೧, ನಾಗರ ಹಾವು , ನಾ ಮೆಚ್ಚಿದ ಹುಡುಗ, ಸಿಪಾಯಿರಾಮು, ಹೃದಯಸಂಗಮ ೧೯೭೨, ಶುಭಮಂಗಳ, ಹೊಂಬಿಸಿಲು, ಹೊಸ ಬೆಳಕು, ನಾನೊಬ್ಬ ಕಳ್ಳ, ಹಾಲುಜೇನು, ಶ್ರಾವಣ ಬಂತು , ಗುರುಶಿಷ್ಯರು ಮುಂತಾದ ಚಿತ್ರಗಳಲ್ಲಿನ ಶಿವರಾಂ ಅವರ ಅಭಿನಯ ಕನ್ನಡಿಗರ ಮನಸೂರೆಗೊಂಡಿದೆ. ೧೯೮೦ರಲ್ಲಿ ತಾವೇ ನಿರ್ಮಿಸಿದ ಡ್ರೆöÊವರ್ ಹನುಮಂತು ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿ ತಮ್ಮೊಳಗಿನ ಹಾಸ್ಯ ಕಲಾವಿದನ ಪರಿಚಯ ಮಾಡಿಸಿರುವುದು ಶಿವರಾಂ ಅವರ ಹೆಗ್ಗಳಿಕೆ. ಶರಪಂಜರದ ಅಡುಗೆ ಭಟ್ಟನ ಪಾತ್ರ, ಶುಭಮಂಗಳದಲ್ಲಿ ಅಂಬರೀಶ್ ಅವರೊಟ್ಟಿಗೆ ನೀಡಿದ ಅಭಿನಯ ಅವರನ್ನು ಕನ್ನಡಿಗರ ಮನಸಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲಿಸಿದೆ.
ಗುಬ್ಬಿ ವೀರಣ್ಣ ಅವರ ನಾಟಕಗಳಿಂದ ಪ್ರಭಾವಿತರಾಗಿದ್ದ ಶಿವರಾಂ ಆರಂಭದಲ್ಲಿ ನಾಟಕಗಳಲ್ಲೂ ಅಭಿನಯಿಸಿದ್ದು, ನಂತರದ ದಿನಗಳಲ್ಲೂ ರಂಗಭೂಮಿಯ ಸೇವೆ ಸಲ್ಲಿಸಿದ್ದಾರೆ. ಶಿವರಾಂ ತಮ್ಮ ಚಿತ್ರರಂಗದ ಪಯಣದಲ್ಲಿ ಜೊತೆಗೂಡಿದ ಬಾಲಕೃಷ್ಣ, ಅಶ್ವತ್, ಸಂಪತ್, ನರಸಿಂಹರಾಜು, ಉದಯಕುಮಾರ್, ಕಲ್ಯಾಣಕುಮಾರ್ ಮತ್ತು ಎಲ್ಲರಿಗಿಂತಲೂ ಮಿಗಿಲಾಗಿ ರಾಜಕುಮಾರ್ ಅವರೊಡನೆ ಅತ್ಯುತ್ತಮ ನಟನೆಯನ್ನು ನೀಡುವ ಮೂಲಕ ತಮ್ಮದೇ ಆದ ಛಾತಿಯನ್ನು ಹೊಂದಿದ್ದರು. ೧೯೬೦-೯೦ರ ಅವಧಿಯಲ್ಲಿ ಪೋಷಕ ನಟ ಪಾತ್ರಗಳಿಗೆ ಅಶ್ವತ್, ಸಂಪತ್ ಮುಂತಾದ ನಟರಿಗೆ ಹೆಚ್ಚು ಅವಕಾಶಗಳು ದೊರೆತ ಕಾರಣ ಶಿವರಾಂ ಹಾಸ್ಯ ನಟರಾಗಿಯೇ ಹೆಚ್ಚು ಜನಪ್ರಿಯರಾಗಬೇಕಾಯಿತು. ಈ ಮೇರು ನಟರಿಗೆ ಸರಿಸಮಾನವಾದ ನಟನಾ ಕೌಶಲ್ಯವನ್ನು ಹೊಂದಿದ್ದ ಶಿವರಾಂ ಅವರಿಗೆ ಒಂದು ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಿಗಬೇಕಾಗಿದ್ದ ಸ್ಥಾನ ಸಿಗಲಿಲ್ಲ ಎಂದೇ ಹೇಳಬಹುದು.
ಏನೇ ಇರಲಿ, ಶಿವರಾಂ ಆರು ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದಾರೆ. ತಮ್ಮ ಸೌಜನ್ಯ, ಸಂಯಮ ಮತ್ತು ಅದ್ಭುತ ನಟನೆಯ ಮೂಲಕ ಚಿತ್ರರಸಿಕರ ಹೃದಯ ಗೆದ್ದಿದ್ದಾರೆ. ಡಾ ರಾಜ್ ಅವರೊಡನೆ ಹಲವು ಚಿತ್ರಗಳಲ್ಲಿ ನಟಿಸಿರುವ ಶಿವರಾಂ ಕೆಲವೊಂದು ಚಿತ್ರಗಳಲ್ಲಿ ಖಳನ ಪಾತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂತಹ ಒಬ್ಬ ಪ್ರತಿಭಾವಂತ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ. ಅಗಲಿದ ಹಿರಿಯ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ.