ದೆಹಲಿ ಪೊಲೀಸರು ಲಾರೆನ್ಸ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ಗಳೊಂದಿಗೆ ಸಂಬಂಧ ಹೊಂದಿದ್ದ ಲೇಡಿ ಡಾನ್ ನೇಹಾಳನ್ನು ಬಂಧಿಸಿದ್ದಾರೆ. ಅಲ್ಲದೆ, ಆಕೆಯ ಪ್ರಿಯಕರನಾದ ಗ್ಯಾಂಗ್‌ಸ್ಟರ್ ಮೆಹ್ಫೂಜ್ ಅಲಿಯಾಸ್ ಬಾಬಿ ಕಬೂತರ್‌ನನ್ನು ಕೂಡ ಹರಿಯಾಣದ ಗುರುಗ್ರಾಮ್‌ನ ಮಹಿಪಾಲ್‌ಪುರದಲ್ಲಿ ಬಂಧಿಸಲಾಗಿದೆ.

ಬೆಳಗ್ಗಿನ ಹೊತ್ತಿನಲ್ಲಿ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನೇಹಾ ಸಂಜೆಯಾಗುತ್ತಿದ್ದಂತೆ ಡಾನ್ ಆಗುತ್ತಿದ್ದಳಂತೆ. ಬಾಬಿ ಕಬೂತರ್ ಗ್ಯಾಂಗ್‌ನಲ್ಲಿ ಆಕೆಯನ್ನು ಮೇಡಂ ಜೆಹರ್ ಎಂದು ಕರೆಯಲಾಗುತ್ತದೆ. ಸದ್ಯ ಆಕೆಯನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಗ್ಯಾಂಗ್‌ನ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಿಂದ ಬಂಧಿಸಲಾಗಿದೆ.

ಪೊಲೀಸರು ತಿಳಿಸಿರುವಂತೆ, ಬಾಬಿ ಕಬೂತರ್, ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಮೊದಲು ಆತನ ಚಲನವಲನದ ಮಾಹಿತಿಯನ್ನು ಗ್ಯಾಂಗ್‌ಸ್ಟರ್‌ಗಳಿಗೆ ನೀಡಿದ್ದ. ಜೊತೆಗೆ, ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲಿನ ದಾಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆಯಲ್ಲಿದ್ದ ಆತನ ಕೈವಾಡವೂ ಇದೆ ಎನ್ನಲಾಗಿದೆ

ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ನಡೆದ ಡಬಲ್ ಮರ್ಡರ್ ಹಾಗೂ ಗ್ರೇಟರ್ ಕೈಲಾಶ್‌ನ ಜಿಮ್‌ನ ಹೊರಗೆ ನಡೆದ ನಾದಿರ್ ಷಾ ಹತ್ಯೆಯಲ್ಲೂ ಬಾಬಿ ಕಬೂತರ್ ಶಂಕಿತನಾಗಿದ್ದ. ಬಾಬಿ ಕಬೂತರ್ ಸುಮಾರು ಒಂದು ದಶಕದಿಂದ ದೆಹಲಿ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದ. ಅನೇಕ ಬಾರಿ ಪ್ರಯತ್ನಿಸಿದರೂ ಆತನನ್ನು ಬಂಧಿಸಲಾಗಲಿಲ್ಲ. ಈ ಬಾರಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಬಾಬಿ ಕಬೂತರ್ ಮತ್ತು ನೇಹಾಳು ಜೊತೆಗೆ, ಗ್ಯಾಂಗ್‌ನ ಇತರೆ ಸದಸ್ಯರಾದ ಮೊಹಮ್ಮದ್ ರಾಜಿ ಖಾನ್ ಮತ್ತು ಶಹಬಾಜ್ ಕೂಡ ಬಂಧಿಸಿದ್ದಾರೆ. ಹಾಗೂ ಆರೋಪಿಗಳಿಂದ ಪೊಲೀಸರಿಂದ ಮಾದಕವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.






