ಭಾರತಕ್ಕಿಂತ ಮೊದಲು ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ 25 ನೌಕೆ ಇಳಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸುವ ರಷ್ಯಾ ಕನಸು ಈಗ ಭಗ್ನಗೊಂಡಿದೆ.
ಲೂನಾ-25 ನೌಕೆಯು ಚಂದ್ರನಲ್ಲಿ ಇಳಿಯುವ ಮುನ್ನ ನಡೆದ ಪೂರ್ವ ಲ್ಯಾಂಡಿಂಗ್ ತಯಾರಿ ವೇಳೆ ಸಂಭವಿಸಿದ ತಾಂತ್ರಿಕ ತೊಂದರೆಯಿಂದ ನೌಕೆಯು ಚಂದ್ರನ ಮೇಲೆ ಅಪ್ಪಳಿಸಿ ಪತನಗೊಂಡಿದೆ ಎಂದು ರಷ್ಯಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ʼರೋಸ್ಕೋಸ್ಮಾಸ್ʼ ಭಾನುವಾರ (ಆಗಸ್ಟ್ 20) ತಿಳಿಸಿದೆ.
ರಷ್ಯಾದ ಲೂನಾ 25 ಗಗನ ನೌಕೆಯು ಶನಿವಾರ (ಆಗಸ್ಟ್ 19) ಚಂದ್ರನ ಕಕ್ಷೆ ತಲುಪಲು ಸಿದ್ಧತೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಭಾನುವಾರ ನಸುಕಿನ ಜಾವ 2.57ಕ್ಕೆ ಸಂಪರ್ಕ ಕಡಿತವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ನೌಕೆಯ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸಿದೆ ಎಂದು ರೊಸ್ಕೋಸ್ಮಾಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳಿರುವ ಕುರಿತು ಅನ್ವೇಷಣೆ ನಡೆಸಲು ಉದ್ದೇಶದಿಂದ ‘ಲೂನಾ-25’ ನೌಕೆಯನ್ನು ಆಗಸ್ಟ್ 11ರಂದು ರಷ್ಯಾ ಉಡಾವಣೆ ಮಾಡಿತ್ತು. ನೌಕೆಯು ಸೋಮವಾರ (ಆಗಸ್ಟ್ 21) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಮಯ ನಿಗದಿ ಮಾಡಲಾಗಿತ್ತು.
“ಆಗಸ್ಟ್ 21ಕ್ಕೆ ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಯೋಜಿಸಲಾಗಿತ್ತು. ಇದರನ್ವಯ ಶನಿವಾರ ಫ್ರೀ ಲ್ಯಾಂಡಿಂಗ್ ಕಕ್ಷೆಗೆ ನೌಕೆಯನ್ನು ತರುವ ಕೆಲಸ ನಡೆದಿತ್ತು. ಸುಮಾರು 11 ಗಂಟೆಯ ವೇಳೆ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಯೋಜಿತ ಕಕ್ಷಗೆ ನೌಕೆಯು ಹೋಗಲು ವಿಫಲವಾಗಿದ್ದು, ಪತನಗೊಂಡಿದೆ” ಎಂದು ‘ರೊಸ್ಕೋಸ್ಮಾಸ್’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಷ್ಯಾದ ಬಾಹ್ಯಾಕಾಶ ನೌಕೆಯು ಸೋಮವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಮಯ ನಿಗದಿ ಮಾಡಲಾಗಿತ್ತು. ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳಿರುವ ಕುರಿತು ಅನ್ವೇಷಣೆ ನಡೆಸಲು ಉದ್ದೇಶಿಸಲಾಗಿತ್ತು.
ಲೂನಾ 25 ಬಾಹ್ಯಾಕಾಶ ನೌಕೆಯು ಶನಿವಾರ ಕಕ್ಷೆ ಸೇರುವುದು ನಿಗದಿಯಾಗಿತ್ತು. ಆದರೆ ತುರ್ತು ಸನ್ನಿವೇಶದಿಂದಾಗಿ ಮಾನ್ಯುವರ್ ವಿಫಲವಾಗಿತ್ತು. ತಂಡವು ಪರಿಸ್ಥಿತಿಯನ್ನು ವಿಶ್ಲೇಷಣೆ ನಡೆಸುತ್ತಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಹೇಳಿಕೆಯಲ್ಲಿ ತಿಳಿಸಿತ್ತು.
ರಷ್ಯಾವು ಕಳೆದ ವಾರ ತನ್ನ ಚಂದ್ರ ನೌಕೆ ಕಳುಹಿಸಿತ್ತು. ಈ ಮೂಲಕ ಇಸ್ರೊ, ನಾಸಾ ಹಾಗೂ ಇತರೆ ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಪೈಪೋಟಿಗೆ ಸೇರಿಕೊಂಡಿತ್ತು. ಅದು ಆಗಸ್ಟ್ 21ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ದಿನ ನಿಗದಿ ಮಾಡಲಾಗಿದೆ ಎಂದು ರೋಸ್ಕೋಸ್ಮೊಸ್ ಮುಂಚೆ ತಿಳಿಸಿತ್ತು.
ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ 3 ನೌಕೆಯು ಆಗಸ್ಟ್ 23ರ ಸಂಜೆ 5.47ರ ಸುಮಾರಿಗೆ ಲ್ಯಾಂಡ್ ಆಗಲು ಪ್ರಯತ್ನ ನಡೆದಿದೆ. ವಿಕ್ರಮ್ ಲ್ಯಾಂಡರ್ ಅಂದುಕೊಂಡಂತೆಯೇ ಚಂದಮಾಮನ ಅಂಗಳಕ್ಕೆ ಇಳಿದರೆ ಜಾಗತಿಕ ಬಾಹ್ಯಾಕಾಶ ವಿಜ್ಞಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದಂತೆ ಆಗಲಿದೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಿಂದ ಅಖಾಡಕ್ಕೆ ಎಂಟ್ರಿ ಕೊಡ್ತಾರಾ ಪ್ರಿಯಾಂಕಾ ವಾದ್ರಾ..?
ಇಸ್ರೊದ ಚಂದ್ರಯಾನ ನೌಕೆಗಿಂತಲೂ ತಡವಾಗಿ ಉಡಾವಣೆಯಾದ ರಷ್ಯಾದ ಲೂನಾ 25, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಗುರಿ ಹೊಂದಿತ್ತು. ಭಾರತದ ಚಂದ್ರಯಾನ 3 ನಿಗದಿಯಂತೆ ಯಶಸ್ವಿಯಾಗಿ ಚಂದ್ರನ ಗಡುಸಾದ ಹಾಗೂ ಬೃಹತ್ ಗುಂಡಿಗಳಿಂದ ಕೂಡಿದ ನೆಲದ ಮೇಲೆ ಇಳಿದು, ಕಾರ್ಯಾಚರಣೆ ಶುರುಮಾಡಿದರೆ ಆ ಕಿರೀಟ ಭಾರತದ ಮುಡಿಗೇರಲಿದೆ.
ಈ ಅಭೂತಪೂರ್ವ ಗಳಿಗೆಗಾಗಿ ಭಾರತೀಯರು ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಚಂದ್ರಯಾನ 2 ನೌಕೆಯ ವಿಕ್ರಮ್ ಲ್ಯಾಂಡರ್, ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ವಿಫಲವಾಗಿತ್ತು.