ವಿಜಯಪುರ : ಗ್ರಾಮೀಣ ಪತ್ರಕರ್ತರಿಗೆ ರಾಜ್ಯ ಸರ್ಕಾರ (State Government) ನೀಡಿರುವ ಬಸ್ ಪಾಸ್ ಸದ್ಭಳಕೆ ಮಾಡಿಕೊಂಡು, ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಬೆಳಕಿಗೆ ತರುವ ಮೂಲಕ ಸರ್ಕಾರದ ಕಣ್ತೆರೆಸುವ ಕೆಲಸವನ್ನು ಗ್ರಾಮೀಣ ಪತ್ರಕರ್ತರು ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ (M.B. Patil) ಹೇಳಿದರು.

ಜಿಲ್ಲೆಯ ವಿವಿಧ ತಾಲೂಕುಗಳ 40 ಗ್ರಾಮೀಣ ಪತ್ರಕರ್ತರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಡಮಾಡಿದ ಗ್ರಾಮೀಣ ಬಸ್ ಪಾಸ್‌ಗಳನ್ನು ನಗರದ ಗಾಂಧಿ ಭವನದಲ್ಲಿ ಶನಿವಾರ ವಿತರಿಸಿ ಅವರು ಮಾತನಾಡಿದರು.
ನಮ್ಮ ಭವ್ಯ ಭಾರತ ಪ್ರತಿಶತ ಶೇ.80ರಷ್ಟು ಹಳ್ಳಿಗಳಿಂದ ಕೂಡಿದೆ. ಗ್ರಾಮಗಳ ಅಭಿವೃದ್ಧಿಯಾದಾಗಲೇ ಭಾರತದ ನೈಜ ಅಭಿವೃದ್ಧಿ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಗ್ರಾಮೀಣ ಪತ್ರಕರ್ತರು ಭವ್ಯ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಗ್ರಾಮೀಣ ಪತ್ರಕರ್ತರು ತಮ್ಮ ಹೋಬಳಿ ಇಲ್ಲವೇ ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸಲು ಅನುಕೂಲ ಆಗಬೇಕು ಎಂಬ ಸದುದ್ದೇಶದಿಂದ ಹಿಂದಿನ ಮುಖ್ಯಮಂತ್ರಿಗಳು ಈ ಬಸ್ ಪಾಸ್ ವ್ಯವಸ್ಥೆಗೆ ಅಸ್ತು ನೀಡಿದ್ದರು. ಆದರೆ ಈ ಬಸ್ ಪಾಸ್ ವಿತರಣೆಗೆ ಮಾನದಂಡಗಳ ಗೊಂದಲದಿಂದಾಗಿ ಬಸ್ ಪಾಸ್ ವಿತರಣೆಯಲ್ಲಿ ಕೊಂಚ ವಿಳಂಬವಾಗಿತ್ತು. ಈಗ ಮಾನದಂಡಗಳನ್ನು ಸರಳೀಕರಣಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ 40 ಜನ ಪತ್ರಕರ್ತರಿಗೆ ಬಸ್ ಪಾಸ್ ಗಳನ್ನು ರಾಜ್ಯ ಸರ್ಕಾರ ವಿತರಿಸುತ್ತಿರುವುದು ಸಂತಸದ ಸಂಗತಿ ಎಂದರು.

ಗ್ರಾಮೀಣ ಮಟ್ಟದಲ್ಲಿರುವ ಕುಡಿಯುವ ನೀರು, ರಸ್ತೆ, ಬಸ್ ವ್ಯವಸ್ಥೆ, ನೀರಾವರಿ, ವಿದ್ಯುಚ್ಛಕ್ತಿ ಮತ್ತಿತರೆ ಹತ್ತಾರು ಸಮಸ್ಯೆಗಳನ್ನು ಗ್ರಾಮೀಣ ಪತ್ರಕರ್ತರು ಬೆಳಕಿಗೆ ತಂದರೆ ಆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅನುಕೂಲವಾಗುತ್ತದೆ ಎಂದರು.
ಈಗಾಗಲೇ ಎಷ್ಟೋ ಸಲ ನಮ್ಮ, ಅಧಿಕಾರಿಗಳು ಹಾಗೂ ಸರ್ಕಾರದ ಕಣ್ತೆರೆಸುವ ಕೆಲಸವನ್ನು ಗ್ರಾಮೀಣ ಪತ್ರಕರ್ತರು ಮಾಡಿದ್ದಾರೆ. ಅದಕ್ಕೆಂದೇ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಜಾಸೇವಾ ಇಲಾಖೆ ಕಾರ್ಯಾರಂಭ ಮಾಡುವ ಮೂಲಕ ಜನರ ಮನೆ ಬಾಗಿಲಗೆ ಸರ್ಕಾರವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಲುಕ ಈ ಇಲಾಖೆ ಹುಟ್ಟು ಹಾಕಿದ್ದು, ಇದು ಭಾರತದಲ್ಲೇ ಉತ್ತಮ ಪ್ರಯೋಗವಾಗಿದೆ ಎಂದು ಸಚಿವರು ಬಣ್ಣಿಸಿದರು.
ಮುಖ್ಯಮಂತ್ರಿಯವರ ಕನಸಿನ ಕೂಸಾಗಿರುವ ಈ ಯೋಜನೆಯಡಿ ಶಾಸಕಾಂಗ, ಕಾರ್ಯಾಂಗದೊಟ್ಟಿಗೆ ಪತ್ರಕರ್ತರು ಸೇರಿ ಮಹಾತ್ಮಾ ಗಾಂಧೀಜಿಯವರ ನೈಜ ಭಾರತದ ಕನಸನ್ನು ನನಸು ಮಾಡೋಣ ಎಂದರು.






