ಕೇಂದ್ರ ಸರಕಾರ ಶುಕ್ರವಾರ ತಡರಾತ್ರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಸುಂಕ ಹೆಚ್ಚಿಸಿ ಹೊರಡಿಸಿದ್ದ ಆದೇಶವನ್ನು ಒಂದು ತಿಂಗಳ ಕಾಲ ಮುಂದೂಡಿದ್ದು, ವಾಹನ ಚಾಲಕರು ನಿಟ್ಟುಸಿರುಬಿಡುವಂತಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಸುಂಕ ಹೆಚ್ಚಳ ಮುಂದೂಡಲಾಗಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಬಜೆಟ್ ನಲ್ಲಿ ಘೋಷಿಸಿದಂತೆ ಅಕ್ಟೋಬರ್ 1, 2022ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ 2 ರೂ. ಹೆಚ್ಚಿಸಲಾಗುವುದು ಎಂದು ತಿಳಿಸಿತ್ತು. ಆದರೆ ಪರ್ಯಾಯ ಇಂಧನಗಳ ಬಳಕೆಗೆ ಇನ್ನಷ್ಟು ಅವಕಾಶ ಬೇಕು ಎಂದು ಕಂಪನಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ಮುಂದೂಡಲಾಗಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಕಬ್ಬು ಮತ್ತು ಧಾನ್ಯಗಳಿಂದ ಉತ್ಪಾದಿಸಿದ ಎಥೆನಾಲ್ ಅನ್ನು ಶೇ.10ರಷ್ಟು ಪ್ರಮಾಣದಲ್ಲಿ ಪೆಟ್ರೋಲ್ ನಲ್ಲಿ ಮಿಶ್ರಣ ಮಾಡಬೇಕಿತ್ತು. ಅಂದರೆ ಪೆಟ್ರೋಲ್ ಶೇ.90ರಷ್ಟು ಇದ್ದರೆ ಶೇ.10ರಷ್ಟು ಏಥೆನಾಲ್ ಮಿಶ್ರಣ ಮಾಡಿದ ಇಂಧನ ಪೂರೈಸಲಾಗುವುದು. ಇದರಿಂದ ರೈತರಿಗೂ ಹೆಚ್ಚುವರಿ ಆದಾಯ ತಂದುಕೊಡಬಹುದಾಗಿದೆ.