ದೇಶದ ರೈತರ ಉದ್ಧಾರಕ್ಕಾಗಿ ಪ್ರಧಾನಮಂತ್ರಿ ಮೋದಿಯವರು ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಈ ಬಾರಿ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಮೀಸಲಿಟ್ಟಿರುವ ಅನುದಾನ 65 ಸಾವಿರ ಕೋಟಿ. ಇದೀಗ ಬಯಲಿಗೆ ಬಂದಿರುವ ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಎಂಬ ಗುಜರಾತಿ ಉದ್ಯಮಿ ಎಸಗಿರುವ ಬ್ಯಾಂಕಿಂಗ್ ವಂಚನೆ ಹಗರಣದ ಮೊತ್ತ ಬರೋಬ್ಬರಿ 23 ಸಾವಿರ ಕೋಟಿ ರೂಪಾಯಿ!
ಅಂದರೆ, ಮೋದಿಯವರ ದೇಶದ ಬಡ ರೈತರ ಮಾನ ಕಾಯಲು ಸಮ್ಮಾನ್ ಯೋಜನೆಗೆ ತೆಗೆದಿಟ್ಟಿರುವ ಅನುದಾನದ ಸರಿಸುಮಾರು ಅರ್ಧದಷ್ಟು ಮೊತ್ತವನ್ನು ಅವರದೇ ತವರು ರಾಜ್ಯದ ಉದ್ಯಮಿಯೊಬ್ಬ ದೇಶದ ಬ್ಯಾಂಕಿಂಗ್ ವಲಯಕ್ಕೆ ಧೋಖಾ ಮಾಡಿದ್ದಾನೆ! ಅದೂ ದೇಶದ ಅಗ್ರಮಾನ್ಯ ಎಸ್ ಬಿಐ ಬ್ಯಾಂಕ್ ಸೇರಿದಂತೆ ಬರೋಬ್ಬರಿ 28 ಬ್ಯಾಂಕುಗಳಿಗೆ ಆತ ಎಸಗಿರುವ ಧೋಖಾದ ಪ್ರಮಾಣ 22,842 ಸಾವಿರ ಕೋಟಿ ರೂಪಾಯಿ!
ಈವರೆಗಿನ ಭಾರತೀಯ ಬ್ಯಾಂಕಿಂಗ್ ಅಷ್ಟೇ ಅಲ್ಲದೆ, ದೇಶ ಕಂಡ ಅತಿ ದೊಡ್ಡ ಹಗರಣವಾಗಿರುವ ಈ ವಂಚನೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ವೈಫಲ್ಯ, ಮೋದಿಯವರೂ ಸೇರಿದಂತೆ ದೇಶದ ಆಡಳಿತ ವ್ಯವಸ್ಥೆಯ ಜನದ್ರೋಹಕ್ಕೆ ಅತಿದೊಡ್ಡ ನಿದರ್ಶನವಾಗಿ ಇದೀಗ ಬಯಲಾಗಿದೆ. 2012 ಮತ್ತು 2017ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಗುಜರಾತ್ ಮೂಲದ ಈ ಎಬಿಜಿ ಕಂಪನಿ ದೇಶದ 28 ಬ್ಯಾಂಕುಗಳಲ್ಲಿ ಸಾಲ ಎತ್ತಿ ಈ ವಂಚನೆ ಎಸಗಿದ್ದು, ಆ ಭಾರೀ ಮೊತ್ತದ ಹಣವನ್ನು ತನ್ನ ಹಡುಗು ನಿರ್ಮಾಣ ಉದ್ಯಮದ ಹೆಸರಿನಲ್ಲಿ ಪಡೆದು, ಬಳಿಕ 98 ವಿವಿಧ ತನ್ನ ಖಾಸಗೀ ಕಂಪನಿಗಳ ಹೆಸರಿನಲ್ಲಿ ಆಸ್ತಿಪಾಸ್ತಿಗಳಿಗೆ ಹೂಡಿಕೆ ಮಾಡಿ ಭಾರೀ ವಂಚನೆ ಎಸಗಿದೆ ಎಂಬುದು ಸಿಬಿಐ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.
ಸಿಬಿಐ ದಾಖಲಿಸಿರುವ ಪ್ರಕರಣದ ಕುರಿತ ಎಫ್ ಐಆರ್ ಮಾಹಿತಿಯ ಪ್ರಕಾರ 2012 ರಿಂದ 2017ರ ಅವಧಿಯಲ್ಲಿ ಹಲವು ಹಣಕಾಸು ವರ್ಗಾವಣೆಯ ಮೂಲಕ ಈ ವಂಚನೆಯನ್ನು ಎಸಗಿದ್ದು, ಮುಖ್ಯವಾಗಿ ಸಾಲ ಕೊಟ್ಟ ಬ್ಯಾಂಕುಗಳು ಮತ್ತು ದೇಶದ ಹಣಕಾಸು ವಂಚನೆಯ ಮೇಲೆ ಕಣ್ಣಿಡಬೇಕಾದ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳ ಉದಾಸೀನ ಮತ್ತು ಔದಾರ್ಯಗಳೇ ಮುಖ್ಯವಾಗಿ ಈ ಬೃಹತ್ ಮೊತ್ತದ ಸಾರ್ವಜನಿಕ ಹಣಕಾಸು ಧೋಖಾಕ್ಕೆ ಮೂಲ ಕಾರಣ.
ಸಾಲ ಕೊಟ್ಟ ಬ್ಯಾಂಕುಗಳ ಪಟ್ಟಿಯನ್ನು ನೋಡಿದರೆ ಯಾರಿಗಾದರೂ ಅಚ್ಚರಿಯಾಗದೇ ಇರದು. ದೇಶದ ರೈತರು ನಿರಂತರ ಬರ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಅನ್ನದಾತರ ಆಸರೆಗೆ ಸರ್ಕಾರಗಳು ಬರಬೇಕು. ಸಾಲ ಮನ್ನಾ ಮೂಲಕ ಅವರ ಕೈಹಿಡಿಯಬೇಕು ಎಂಬ ಕೂಗು ಕೇಳಿಬಂದಾಗ, 2015-16ರ ಹೊತ್ತಿಗೆ ಕೃಷಿ ಸಾಲ ಮನ್ನಾ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತದೆ ಎಂದು ಬೊಬ್ಬೆ ಹೊಡೆದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವೂ ಸೇರಿದಂತೆ 28 ಬ್ಯಾಂಕುಗಳಿಗೆ ಈ ಗುಜರಾತಿ ಮಹಾವಂಚಕನಿಗೆ ಕರೆಕರೆದು ಸಾಲ ಕೊಟ್ಟಿವೆ. ಅಷ್ಟೇ ಅಲ್ಲ; ಕೊಟ್ಟ ಸಾಲವನ್ನು ವಾಪಸು ಕೊಡುವಂತೆ ಆತನ ಮೇಲೆ ಒತ್ತಡವನ್ನೂ ಹಾಕದೇ ಆತ ಜನರ ಹಣಕ್ಕೆ ಪಂಗನಾಮ ಹಾಕಲು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೈಜೋಡಿಸಿವೆ!
ಫೆಬ್ರವರಿ 7ರಂದು ಸಿಬಿಐ ದಾಖಲಿಸಿರುವ ಪ್ರಕರಣದ ವಿವರಗಳ ಪ್ರಕಾರ, ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಎಸ್ ಬಿಐ ಸೇರಿದಂತೆ ಎಬಿಜಿ ಒಟ್ಟು 28 ಬ್ಯಾಂಕುಗಳಿಂದ 22,842 ಕೋಟಿ ರೂ. ಸಾಲ ಎತ್ತಿದೆ. ಆ ಪೈಕಿ ಐಸಿಐಸಿಐ ಬ್ಯಾಂಕ್ ಅತಿದೊಡ್ಡ ಮೊತ್ತವನ್ನು ಸಾಲ ನೀಡಿದ್ದು, 7,089 ಕೋಟಿ ರೂಪಾಯಿ ನೀಡಿದೆ. ನಂತರದ ಸ್ಥಾನದಲ್ಲಿ ಐಡಿಬಿಐ ಬ್ಯಾಂಕ್ ಇದ್ದು, ಅದು 3,639 ಕೋಟಿ ರೂ, ಎಸ್ ಬಿಐ 2,925 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಬರೋಡಾ 1,614 ಕೋಟಿ ರೂ, ಪಂಜಾಬ್ ನ್ಯಾಷನಲ್ ಬ್ಯಾಂಕ್ 1,244 ಕೋಟಿ ರೂ, ಎಕ್ಸಿಮ್ ಬ್ಯಾಂಕ್ 1,327 ಕೋಟಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ 1,244 ಕೋಟಿ ಮತ್ತು ಬ್ಯಾಂಕ್ ಆಫ್ ಇಂಡಿಯಾ 719 ಕೋಟಿ ಸಾಲ ನೀಡಿ ಗುಜರಾತಿ ವಂಚಕನಿಗೆ ಆಶೀರ್ವದಿಸಿವೆ!

ಇಷ್ಟು ಬೃಹತ್ ಮೊತ್ತದ ಸಾಲವನ್ನು ಪಡೆದ ಈ ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಆರಂಭವಾಗಿದ್ದು 1985ರಲ್ಲಿ. ಎಬಿಜಿ ಸಮೂಹದ ರಿಷಿಕುಮಾರ್ ಅಗರ್ ವಾಲ್ ಈ ಕಂಪನಿಯ ಮಾಲೀಕ. ಗುಜರಾತಿನ ಸೂರತ್ ಮತ್ತು ದಾಹೇಶ್ ನಲ್ಲಿ ಕಂಪನಿ ಹಡಗುಕಟ್ಟೆ ಹೊಂದಿದ್ದು, ಹಡಗು ನಿರ್ಮಾಣ, ದುರಸ್ತಿ ಕಾರ್ಯಚಟುವಟಿಕೆ ನಡೆಸುತ್ತಿತ್ತು. ಆರಂಭದಲ್ಲಿ ಭಾರೀ ಲಾಭದಲ್ಲಿದ್ದ ಕಂಪನಿ 16 ವರ್ಷಗಳಲ್ಲಿ ಬರೋಬ್ಬರಿ 165 ಹಡಗುಗಳನ್ನು ನಿರ್ಮಾಣ ಮಾಡಿತ್ತು. ಅದರ ಆ ಉದ್ಯಮ ಚಟುವಟಿಕೆಗೆ ಐಸಿಐಸಿಐ ಮತ್ತು ಎಸ್ ಬಿಐ ಸೇರಿದಂತೆ 28 ಬ್ಯಾಂಕುಗಳು ಹಣಕಾಸು ನೆರವು ಎಂದು ಭಾರೀ ಮೊತ್ತದ ಸಾಲ ನೀಡಿದ್ದವು.
ಆದರೆ, 2008-09ರ ಆರ್ಥಿಕ ಹಿಂಜರಿತದ ಹೊತ್ತಿಗಾಗಲೇ ಕಂಪನಿ ಭಾರೀ ನಷ್ಟದಲ್ಲಿತ್ತು ಮತ್ತು ಸಾಲ ಮರುಪಾವತಿ ಮಾಡದ ಹೀನಾಯ ಸ್ಥಿತಿಗೆ ತಲುಪಿತ್ತು. ಆದಾಗ್ಯೂ ಬ್ಯಾಂಕುಗಳು ನಾಮುಂದು ತಾಮುಂದು ಎಂದು ಪೈಪೋಟಿಯ ಮೇಲೆ ಮುಳುಗುತ್ತಿರುವ ಹಡಗು ಕಂಪನಿಗೆ ಸಾಲ ಕೊಟ್ಟಿದ್ದವು. ಅಮೆರಿಕದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಲೇಮನ್ ಬ್ರದರ್ಸ್ ಕಂಪನಿ ಮುಳಗುತ್ತಲೇ ಗುಜರಾತಿನ ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಕೂಡ ತಳಸೇರಿತ್ತು.
ಕಂಪನಿಯ ಉದ್ಯಮ ಚಟುವಟಿಕೆ, ವ್ಯವಹಾರಗಳು ಮತ್ತು ಅದರೊಂದಿಗೆ ವ್ಯಾವಹಾರಿಕ ನಂಟು ಹೊಂದಿದ್ದ ಕಂಪನಿಗಳ ಪತನದ ಮಾಹಿತಿ ಇದ್ದರೂ ಕಣ್ಣುಮುಚ್ಚಿ ಕುಳಿತಿದ್ದ ಬ್ಯಾಂಕುಗಳು, ತಮ್ಮ ಸಾಲದ ವಾಪಸ್ಸಾತಿಯ ಖಾತ್ರಿಯ ಬಗ್ಗೆ ಯಾಕೆ ಎಚ್ಚರಿಕೆ ವಹಿಸಲಿಲ್ಲ ಎಂಬುದು ಆ ವಂಚಕ ಉದ್ಯಮಿ ಮತ್ತು ಬ್ಯಾಂಕುಗಳ ನಡುವಿನ ಕುಚುಕು ಕುಚುಕು ವ್ಯವಹಾರದ ಕ್ಲ್ಯೂ ಕೊಡುತ್ತಿದೆ. 2008-09ರ ಸುಮಾರಿಗೆ ಕಂಪನಿ ನಷ್ಟದ ಹಾದಿ ಹಿಡಿದಿದ್ದರೂ ಎಚ್ಚೆತ್ತುಕೊಳ್ಳದ ಎಸ್ ಬಿಐ ಬರೋಬ್ಬರಿ ಆರು ವರ್ಷಗಳ ಬಳಿಕ 2014ರಲ್ಲಿ ಎಬಿಜಿ ಗೆ ನೀಡಿದ ತನ್ನ ಸಾಲದ ಮರು ಹೊಂದಾಣಿಕೆಯ ಯತ್ನಿಸಿತ್ತು. ಕಾರ್ಪೊರೇಟ್ ಡೆಬ್ಟ್ ರೀಸ್ಟ್ರಕ್ಚರಿಂಗ್ (ಸಿಡಿಆರ್) ಯೋಜನೆಯಡಿ ನಡೆಸಿದ ಆ ಯತ್ನಕ್ಕೂ ಕಂಪನಿ ಸ್ಪಂದಿಸಿರಲಿಲ್ಲ. ಯಾಕೆಂದರೆ, ಮರು ಹೊಂದಾಣಿಕೆಗೆ ಪೂರಕವಾಗಿ ಸಾಲದ ಬಡ್ಡಿ ಮತ್ತು ಕಂತು ಬಾಕಿಯನ್ನು ಕಟ್ಟಲು ಕೂಡ ಎಬಿಜಿ ಶಕ್ತವಾಗಿರಲಿಲ್ಲ!
ಆ ಹಿನ್ನೆಲೆಯಲ್ಲಿ 2016ರಲ್ಲಿ ಎಬಿಜಿ ಕಂಪನಿಯ ಸಾಲವನ್ನು ವಸೂಲಾಗದ ಸಾಲ(NPA) ಎಂದು ಘೋಷಿಸಲಾಯಿತು. 2013ರ ನವೆಂಬರ್ 30ಕ್ಕೆ ಪೂರ್ವಾನ್ವಯವಾಗುವಂತೆ ಎನ್ ಪಿಎ ಘೋಷಿಸಲಾಗಿದ್ದರೂ, ಕಂಪನಿಯ ಮಾಲೀಕರು ಮತ್ತು ಪಾಲುದಾರರ ಮೇಲೆ ನಿಗಾ ಇರಿಸುವುದನ್ನು ಸಾಲ ನೀಡಿದ ಬ್ಯಾಂಕುಗಳೂ ಮರೆತವು ಮತ್ತು ಚುನಾವಣಾ ಸಂದರ್ಭದಲ್ಲಿ ನಿದ್ರೆಬಿಟ್ಟು ಪ್ರತಿಪಕ್ಷಗಳ ನಾಯಕರು ಮತ್ತು ಅವರ ಆಪ್ತರ ಮೇಲೆ, ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಸುವ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಆದಾಯ ತೆರಿಗೆ(IT) ತನಿಖಾ ಸಂಸ್ಥೆಗಳೂ ಕಣ್ಣು ಮುಚ್ಚಿ ಕುಳಿತವು. ಪರಿಣಾಮವಾಗಿ ಇದೀಗ ವಂಚಕರಾದ ಕಂಪನಿಯ ಮಾಲೀಕ ರಿಷಿ ಕುಮಾರ್ ಅಗರ್ ವಾಲ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ತಲೆಮರೆಸಿಕೊಂಡಿರುವುದಾಗಿ ಸಿಬಿಐ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ!
ಈ ನಡುವೆ 2019ರಲ್ಲಿ ಕಂಪನಿಯ ಸಾಲದಲ್ಲಿ ಭಾರೀ ವಂಚನೆ ನಡೆದಿರುವುದನ್ನು ಪತ್ತೆ ಮಾಡಿದ ಬಳಿಕ ಆ ವರ್ಷದ ಜನವರಿಯಲ್ಲಿ ಕಂಪನಿಯ ಫೋರೆನ್ಸಿಕ್ ಆಡಿಟ್ ನಡೆಸಿದ ಅರ್ನಸ್ಟ್ ಅಂಡ್ ಯಂಗ್ ಎಲ್ ಎಲ್ ಪಿಗೆ 2012 ಏಪ್ರಿಲ್ ಮತ್ತು 2017ರ ಜುಲೈ ಅವಧಿಯಲ್ಲಿ ಭಾರೀ ಅಕ್ರಮ ನಡೆದಿರುವುದು ತಿಳಿದುಬಂದಿದೆ. ಬ್ಯಾಂಕುಗಳಿಂದ ಉದ್ಯಮ ಚಟುವಟಿಕೆಗಾಗಿ ಪಡೆದ ಸಾಲವನ್ನು ಕಂಪನಿ ಮಾಲೀಕರು ತಮ್ಮ ಖಾಸಗಿ ಆಸ್ತಿಗಳಲ್ಲಿ ಹೂಡಿಕೆ ಮಾಡಿರುವುದು, ಹಣಕಾಸು ಅಕ್ರಮ ವರ್ಗಾವಣೆ, ವಂಚನೆ, ಬ್ಯಾಂಕ್ ಅನುದಾನದ ದುರುಪಯೋಗವನ್ನು ಆ ಆಡಿಟ್ ನಲ್ಲಿ ಪತ್ತೆ ಮಾಡಲಾಯಿತು. ಆ ವೇಳೆ ಕಂಪನಿಯ ತನ್ನ 98 ಇತರೆ ಸಹ ಸಂಸ್ಥೆಗಳಲ್ಲಿ ಆ ಭಾರೀ ಮೊತ್ತದ ಸಾಲವನ್ನು ಹೂಡಿಕೆ ಮಾಡಿರುವುದು ಕೂಡ ಪತ್ತೆಯಾಗಿತ್ತು. ಆ ಆಧಾರದ ಮೇಲೆ 2020ರ ಆಗಸ್ಟ್ ನಲ್ಲಿ ಎಸ್ ಬಿಐ ದೂರು ದಾಖಲಿಸಿತ್ತು. ಎಸ್ ಬಿಐ ದೂರು ನೀಡಿದ ಒಂದೂವರೆ ವರ್ಷದ ಬಳಿಕ ಸಿಬಿಐ 2022ರ ಫೆಬ್ರವರಿ 7ರಂದು ಅಧಿಕೃತವಾಗಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಇದಿಷ್ಟು ದೇಶವನ್ನೇ ಬೆಚ್ಚಿಬೀಳಿಸಿರುವ ಮಹಾ ವಂಚನೆಯ ಆಘಾತಕಾರಿ ವಿವರಗಳು. ಆದರೆ ಪ್ರಶ್ನೆಗಳಿರುವುದು ದೇಶದ ಬ್ಯಾಂಕಿಂಗ್ ಮತ್ತು ಆಡಳಿತ ವ್ಯವಸ್ಥೆಯ ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ.
ದೇಶದ ಬಡವರು, ರೈತರು ಮಾಡುವ ಸಾವಿರ- ಎರಡು ಸಾವಿರ ಸಾಲಕ್ಕೆ ನೂರೆಂಟು ಖಾತರಿ ಕೇಳುವ, ಪ್ರತಿ ಬಾರಿಯೂ ಕಂತು ಕಟ್ಟುವುದು ಒಂದೆರಡು ದಿನ ವಿಳಂಬವಾದರೂ ಎಚ್ಚರಿಕೆ ನೀಡುವ, ಸಾಲ ಬಾಕಿ ಉಳಿಸಿಕೊಂಡರೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸುವ, ಕೊನೆಗೂ ಕಷ್ಟದಲ್ಲಿ ಸಾಲ ಕಟ್ಟಲಾಗದೇ ಕೈಚೆಲ್ಲಿದರೆ ಒಂದೆರಡು ಸಾವಿರ ರೂಪಾಯಿ ಸಾಲಕ್ಕೆ ಹೊಲ-ಮನೆಯನ್ನೇ ಹರಾಜು ಹಾಕುವ ಎಸ್ ಬಿಐನಂತಹ ಬ್ಯಾಂಕುಗಳು ಬರೋಬ್ಬರಿ 23 ಸಾವಿರ ಕೋಟಿ ರೂ. ಸಾಲಕ್ಕೆ ಯಾವುದೇ ಖಾತರಿ ಪಡೆಯಲಿಲ್ಲವೆ? ಯಾಕೆ ಸಾಲ ವಸೂಲಾತಿಗೆ ಬಿಗಿ ಕ್ರಮ ಕೈಗೊಳ್ಳಲಿಲ್ಲ? ಆಸ್ತಿ ಹರಾಜಿಗೆ ಹೋಗಲಿಲ್ಲ ಯಾಕೆ?
ಹಾಗೇ, ದೇಶದ ಬಡಪಾಯಿ ಮಾಧ್ಯಮಸಂಸ್ಥೆಗಳನ್ನೂ ಬಿಡದೆ ಆಡಳಿತರೂಢ ಸರ್ಕಾರ ಮತ್ತು ಪಕ್ಷದ ವಿಷಯದಲ್ಲಿ ನಿಷ್ಪಕ್ಷಪಾತವಾಗಿರುವ ಮತ್ತು ಟೀಕೆ ಮತ್ತು ವಿಮರ್ಶೆಗೊಳಪಡಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಸೀಳುನಾಯಿಗಳಂತೆ ಎರಗುವ ಐಟಿ ಮತ್ತು ಇಡಿಗಳು ಬರೋಬ್ಬರಿ ಕಳೆದ ಹತ್ತು ವರ್ಷಗಳಿಂದ ಎಬಿಜಿ ವಂಚನೆಯ ವಿಷಯದಲ್ಲಿ ಕಣ್ಣು ಮುಚ್ಚಿಕುಳಿತುಕೊಂಡಿರುವುದರ ಹಿಂದೆ ಯಾರಿದ್ದಾರೆ ಮತ್ತು ಯಾಕೆ ಇದ್ದಾರೆ? ಅದರಲ್ಲೂ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಇಬ್ಬರು ಪ್ರಮುಖರ ತವರು ರಾಜ್ಯದ ಉದ್ಯಮಿಯೇ ಈ ಅಕ್ರಮದ ಸೂತ್ರದಾರ ಮತ್ತು ಕಳೆದ ಐದಾರು ವರ್ಷಗಳಲ್ಲಿ ಲಲಿತ್ ಮೋದಿ, ನೀರವ್ ಮೋದಿ, ಮೆಹೂಲ್ ಚೋಕ್ಸಿ, ಅಮಿ ಮೋದಿ, ನಿಶಾಲ್ ಮೋದಿ, ಜತಿನ್ ಮೆಹ್ತಾ, ಚೇತನ್ ಸಂದೇಸರಾ ಮತ್ತು ನಿತಿನ್ ಸಂದೇಸರಾ ಸೇರಿದಂತೆ ಗುಜರಾತಿನ ಮೂಲದವರ ಸರಣಿ ಬ್ಯಾಂಕಿಂಗ್ ವಂಚನೆಗಳ ವಿಷಯದಲ್ಲಿ ದೇಶದ ತನಿಖಾ ಸಂಸ್ಥೆಗಳ ಜಾಣಕುರುಡು ಏನನ್ನೂ ಸೂಚಿಸುತ್ತದೆ? ಎಂಬುದು ಪ್ರಶ್ನೆ.
‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಎಂಬ ಹೇಳಿಕೆಯ ಮೂಲಕವೇ 2014ರಲ್ಲಿ ಸ್ವಚ್ಛ ಮತ್ತು ಪಾರದರ್ಶಕ ಆಡಳಿತದ ಭರವಸೆಯ ಮೇಲೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿರುವಾಗಲೇ ಈ ಭಾರೀ ಬ್ಯಾಂಕಿಂಗ್ ವಂಚನೆ ಮೊಳೆತಿತ್ತು ಮತ್ತು ಇದೀಗ ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿದ ಏಳು ವರ್ಷಗಳಿಂದಲೂ ಈ ವಂಚನೆಯನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗಿತ್ತು ಯಾಕೆ ಎಂಬುದು ಕೂಡ ಉತ್ತರಸಿಗಬೇಕಾದ ಪ್ರಶ್ನೆ. ಉತ್ತರ ಸಿಗುವುದೆ?