ಸಿದ್ದರಾಮಯ್ಯ ದಲಿತ ನಾಯಕರ ವಿರೋಧಿ ಎನ್ನುವ ಅಭಿಯಾನ ಕೋಲಾರದ ನಡೆಯುವ ಸಮಯದಲ್ಲೇ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಬಂಡೆದ್ದ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ 2023ರ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣಾ ಪ್ರಣಾಳಿಕ ಸಮಿತಿಯಲ್ಲಿ ಅಧ್ಯಕ್ಷನಾಗಿ ಇದ್ದರೂ ನನ್ನ ಗಮನಕ್ಕೇ ಬಾರದೆ ಕೆಲವೊಂದು ನಿರ್ಧಾರಗಳು ಆಗುತ್ತಿವೆ. ಹೀಗಿರುವಾಗ ನಾನು ಪ್ರಣಾಳಿಕ ಸಮಿತಿ ಅಧ್ಯಕ್ಷನಾಗಿ ಯಾಕೆ ಇರಬೇಕು ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸುರ್ಜೆವಾಲ ಎದುರೇ ಬಂಡಾಯ ಭುಗಿಲೆದ್ದಿದೆ.
ಉಚಿತ ಯೋಜನೆಗಳ ಬಗ್ಗೆ ನನಗೆ ಗೊತ್ತೇ ಇರಲಿಲ್ಲ..!
ಕಾಂಗ್ರೆಸ್ ಈಗಾಗಲೇ ಎರಡು ಮಹತ್ವದ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ. ಮೊದಲನೆಯದಾಗಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಮತ್ತೊಂದು ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಬಗ್ಗೆಯೂ ಘೋಷಣೆ ಮಾಡಲಾಯ್ತು. ಮಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡುವ ಬಗ್ಗೆಯೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಮಾನ ನನಗೆ ಬೇಡ ಅಂತ ಪರಮೇಶ್ವರ್ ರಾಜೀನಾಮೆ ನೀಡಿದ್ದಾರೆ. ಡಾ ಜಿ. ಪರಮೇಶ್ವರ್ ರಾಜೀನಾಮೆ ಬೆನ್ನಲ್ಲೇ ಸುರ್ಜೆವಾಲ ಸಂಧಾನ ಪ್ರಯತ್ನ ಮಾಡಿದ್ದು, ರಾಜೀನಾಮೆ ಹಿಂಪಡೆಯುವಂತೆ ಪರಮೇಶ್ವರ್ಗೆ ಮನವಿ ಮಾಡಿದ್ದಾರೆ. ಆದರೆ ಪ್ರಜಾಧ್ವನಿ ಯಾತ್ರೆಗೆ ನಾನು ಬರ್ತೀನಿ. ಆದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನ ನನಗೆ ಬೇಡ, ರಾಜೀನಾಮೆ ಹಿಂಪಡೆಯಲ್ಲ ಎಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಇಂದಿನ ಕಾರ್ಯಕ್ರಮಕ್ಕೆ ಗೈರಾಗಲು ಪರಂ ನಿರ್ಧಾರ..!
ಇಂದಿನಿಂದ ಪ್ರಜಾಧ್ವನಿ ಸಮಾವೇಶ ಕೋಲಾರದ ಮುಳಬಾಗಿಲುವಿನಿಂದ ಆರಂಭ ಆಗುತ್ತಿದ್ದು, ಬೆಳಗ್ಗೆ 10 ಗಂಟೆಗೆ ಮುಳಬಾಗಿಲುವಿನ ಕುರುಡುಮಲೆ ವಿನಾಯಕ ದೇಗುಲದಲ್ಲಿ ಡಿ.ಕೆ ಶಿವಕುಮಾರ್ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ಚುನಾವಣಾ ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್ ರಾಜೀನಾಮೆ ನೀಡದ ಬಳಿಕ ನಾನು ಯಾವ ಯಾತ್ರೆಗೂ ಬರುವುದಿಲ್ಲ, ನಾನು ಡಿಸಿಎಂ ಆಗಿದ್ದವನು, 8 ವರ್ಷ ಕಾಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದೇನೆ. ನನಗೆ ಗೊತ್ತಿಲ್ಲದೆ ಘೋಷಣೆ ಆದ ಬಳಿಕ ಚುನಾವಣಾ ಪ್ರಣಾಳಿಕ ಸಮಿತಿ ಪಟ್ಟಿಗೆ ಸೇರಿಸುವುದು ಸರಿಯಲ್ಲ. ನೀವು ಯಾತ್ರೆ ಮುಂದುವರಿಸಿ ಎಂದಿದ್ದಾರೆ ಎನ್ನಲಾಗಿದ್ದು, ರಣದೀಪ್ ಸಿಂಗ್ ಸುರ್ಜೇವಾಲ ಪರಮೇಶ್ವರ್ ಅವರನ್ನು ಮನವೊಲಿಸಲು ಸಾಕಷ್ಟು ಹರಸಾಹಸ ಮಾಡಿದ್ದಾರೆ. ಕೊನೆಗೆ ಬಿಜೆಪಿ, ಜೆಡಿಎಸ್ ಹಾಗು ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಸುರ್ಜೆವಾಲ ಮನವೊಲಿಸಿದ್ದಾರೆ.

ಡಿಕೆಶಿ ಏಕವ್ಯಕ್ತಿ ನಿರ್ಧಾರ ಮಾಡ್ತಿದ್ದಾರಾ..? ಸಿದ್ದು ಸೈಲೆಂಟ್ ಹೇಗೆ..?
ಕಾಂಗ್ರೆಸ್ ಘೋಷಣೆ ಮಾಡಿರುವ ಎರಡು ಪ್ರಮುಖ ಅಂಶಗಳು ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೇ ಗೊತ್ತಿಲ್ಲ ಎಂದ ಮೇಲೆ ಡಿ.ಕೆ ಶಿವಕುಮಾರ್ ಏಕಾಂಗಿಯಾಗಿ ಈ ನಿರ್ಧಾರ ಮಾಡುತ್ತಿದ್ದಾರಾ..? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇನ್ನು ಸಿದ್ದರಾಮಯ್ಯ ಕೂಡ ಶಿವಕುಮಾರ್ ಮಾತಿಗೆ ಸುಮ್ಮನೆ ತಲೆ ಆಡಿಸುತ್ತಿದ್ದಾರಾ..? ಅನ್ನೋ ಪ್ರಶ್ನೆಯೂ ಕಾಡುತ್ತದೆ. ಒಂದು ವೇಳೆ ಬೇರೆ ಎಲ್ಲಾ ನಾಯಕರಿಗೂ ಈ ವಿಚಾರ ಗೊತ್ತಾದರೆ ಬಹಿರಂಗ ಆಗುವ ಭೀತಿಯಲ್ಲಿ ಉಭಯ ನಾಯಕರು ಗೌಪ್ಯವಾಗಿ ತಯಾರಿ ಮಾಡಿಕೊಂಡಿರಬಹುದು ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಸಿದ್ದರಾಮಯ್ಯಗೆ ಈ ಮಾಹಿತಿಯೇ ಇಲ್ಲದೆ ಘೋಷಣೆ ಮಾಡಿದ್ದರೆ..! ಡಾ ಜಿ ಪರಮೇಶ್ವರ್ಗಿಂತ ಮೊದಲು ಸಿದ್ದರಾಮಯ್ಯ ಅವರೇ ಸಿಡಿದು ಏಳುತ್ತಿದ್ದರು ಅಲ್ಲವೇ..? ಒಟ್ಟಾರೆ ಕಾಂಗ್ರೆಸ್ನಲ್ಲಿ ದಲಿತರ ಏಳಿಗೆ ಸಹಿಸಲ್ಲ ಅನ್ನೋ ಆರೋಪದ ನಡುವೆ ಈ ವಿಚಾರ ಸ್ಫೋಟ ಆಗಿರುವುದು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪ ಆಗಿದೆ.