ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ 13 ಆರೋಪಿಗಳನ್ನು ಹತ್ಯೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿದ್ದಾರೆ.
ಪೊಲೀಸರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು 2ನೇ ಬಾರಿಗೆ ಸ್ಥಳ ಮಹಜರು ನಡೆಸಿದ್ದಾರೆ. ಬೆಳಗ್ಗೆ ದರ್ಶನ್, ಪವಿತ್ರಾ ಗೌಡ ಹೊರತುಪಡಿಸಿ ಇತರ ಆರೋಪಿಗಳನ್ನು ರೇಣುಕಾಸ್ವಾಮಿ ಶವ ಎಸೆದಿದ್ದ ಸುಮನಹಳ್ಳಿ ಸಮೀಪದ ಅನುಗ್ರಹ ಅಪಾರ್ಟ್‌ಮೆಂಟ್ ಹತ್ತಿರದ ಮೋರಿಯ ಹತ್ತಿರ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಯಿಸಿ, ಹಲ್ಲೆ ಮಾಡಿ, ಹತ್ಯೆ ಮಾಡಿದ ಕಾಮಾಕ್ಷಿಪಾಳ್ಯದ ಶೆಡ್ ನಲ್ಲಿ ಸ್ಥಳ ಮಹಜರು ಮಾಡಲಾಗಿದೆ. 4 ವಾಹನಗಳಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ 13 ಆರೋಪಿಗಳನ್ನು ಪೊಲೀಸರು ಕರೆ ತಂದು ಸ್ಥಳ ಮಹಜರು ನಡೆಸಿದ್ದಾರೆ.

ಪಟ್ಟಣಗೆರೆ ವಿನಯ್‌ಗೆ ಸೇರಿದ ಶೆಡ್‌ಗೆ ಮಧ್ಯಾಹ್ನ ಬಿಗಿ ಭದ್ರತೆಯಲ್ಲಿ ದರ್ಶನ್ ಸೇರಿ ಇತರ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಪೊಲೀಸರು ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಆರೋಪಿ ದರ್ಶನ್ ಪೊಲೀಸರ ಮುಂದೆ ಕೈ ಕಟ್ಟಿ ನಿಂತಿದ್ದರು.
ಮಂಗಳವಾರವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದರು. ಬೆಳಗ್ಗೆಯಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಅಲ್ಲಿ ಪರಿಶೀಲನೆ ನಡೆಸಿತು. ರೇಣುಕಾಸ್ವಾಮಿ ಕೂಲೆಯಾದ ನಂತರ ಸ್ಕಾರ್ಫಿಯೋ ಕಾರಿನಲ್ಲಿ ಶವವನ್ನು ಸಾಗಣೆ ಮಾಡಿ ಮೋರಿಗೆ ಎಸೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.