2018 ರ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು. ಆದರೆ 2023 ರ ಚುನಾವಣೆಯಲ್ಲಿ ಭಾಗವಹಿಸಿದ್ದೀರಿ ನಿಮಗೆ ಅಭಿನಂದನೆಗಳು. ಚುನಾವಣೆ ಬಹಿಷ್ಕಾರದಿಂದಾಗಿ ಈ ಗ್ರಾಮಕ್ಕೆ ಅನುದಾನ ಬಂದಿರಲಿಲ್ಲ. ಆದರೆ, ಕಳೆದ ಸಲದ ಚುನಾವಣೆಯಲ್ಲಿ ನೀವು ಭಾಗಿಯಾಗಿರುವುದಕ್ಕೆ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಅನುದಾನ ನೀಡಿ ಗ್ರಾಮದ ಸಮಗ್ರ ಅಭಿವೃದ್ದಿ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮದಲ್ಲಿ ರೂ 26.25 ಲಕ್ಷ ವೆಚ್ಚದಲ್ಲಿ ಎಸ್ ಟಿ ಓಣಿಯಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಗೃಹ ಲಕ್ಷ್ಮೀ ಹಾಗೂ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಯಾರು ಲಾಭ ಪಡೆದುಕೊಂಡಿಲ್ಲ ಅಂತವರು ಆನ್ ಲೈನ್ ನಲ್ಲಿ ದಾಖಲಿಸಬೇಕು. ಆದಷ್ಟು ಬೇಗ ಎಲ್ಲ ಫಲಾನುಭವಿಗಳಿಗೆ ತಲಾ ರೂ 2000 ಬಿಡುಗಡೆ ಮಾಡಲಾಗುವುದು.
ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತ ಪ್ರಯಾಣ ಮಾಡಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿನಿತ್ಯ 60 ಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ಬಿಜೆಪಿಗರು ಈ ಯೋಜನೆಗಳ ಕುರಿತು ಟೀಕಿಸುತ್ತಿದ್ದಾರೆ. ನಮ್ಮ ಸರ್ಕಾರ ಬಡವರಿಗೆ ಸಹಾಯ ಮಾಡಿದರೆ ಬಿಜೆಪಿಗರಿಗೆ ಹೊಟ್ಟೆಕಿಚ್ಚು ಶುರುವಾಗಿದೆ ಎಂದು ಟೀಕಿಸಿದರು.
ವೇದಿಕೆಯ ಮೇಲೆ ವೀರನಗೌಡ ಪರಸರೆಡ್ಡಿ ಸೇರಿದಂತೆ ಹಲವರಿದ್ದರು