ಬೆಂಗಳೂರು:ಏ.೦೨: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳ ಪರಾಕ್ರಮದ ನಡುವೆಯೂ ತಿಲಕ್ ವರ್ಮಾ ಅಬ್ಬರಿಸಿದರು. ಆರಂಭದಲ್ಲಿ ಅಬ್ಬರದ ಪ್ರದರ್ಶನ ನೀಡಿದ ಬೆಂಗಳೂರು ಬೌಲರ್ಸ್, ಅಂತಿಮ ಹಂತದಲ್ಲಿ ಹಳಿ ತಪ್ಪಿದರು. ಸ್ಲಾಗ್ ಓವರ್ಗಳಲ್ಲಿ ಹೆಚ್ಚು ರನ್ ಲೀಕ್ ಮಾಡಿದರು. ತಿಲಕ್ ವರ್ಮಾರ ಅಮೋಘ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್, ಉತ್ತಮ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಆರ್ಸಿಬಿಗೆ 172 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ನೀರಸ ಓಪನಿಂಗ್ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ – ಇಶಾನ್ ಕಿಶನ್, ಕ್ರೀಸ್ ಕಚ್ಚಿನಿಲ್ಲುವ ಪ್ರಯತ್ನ ನಡೆಸದೆ ನಿರಾಸೆ ಮೂಡಿಸಿದರು. ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಇಶಾನ್ (10) ವಿಕೆಟ್ ಒಪ್ಪಿಸಿದರೆ, 10 ಎಸೆತಗಳನ್ನು ಎದುರಿಸಿದ ರೋಹಿತ್ (1), ಒಂದು ಜೀವದಾನ ಪಡೆದರೂ ಅದರ ಲಾಭ ಪಡೆಯಲಿಲ್ಲ.
IPLನ 2ನೇ ದುಬಾರಿ ಆಟಗಾರ, 17.50 ಕೋಟಿ ಒಡೆಯ ಕ್ಯಾಮರೂನ್ ಗ್ರೀನ್, ಮುಂಬೈ ತಂಡಕ್ಕೆ 5 ರನ್ಗಳ ಕಾಣಿಕೆ ನೀಡಲಷ್ಟೇ ಶಕ್ತರಾದರು. ರೀಸ್ ಟಾಪ್ಲೆ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ಬಳಿಕ ಮಿಸ್ಟರ್ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸಹ ಹೇಳಿಕೊಳ್ಳುವಂಥ ಪ್ರದರ್ಶನ ನೀಡಲಿಲ್ಲ. ಕಳಪೆಯಾಟ ಆಡಿದ ಸ್ಕೈ, 16 ರನ್ಗಳಿಗೆ ಆಟ ಮುಗಿಸಿದರು.
ಟಿಮ್ ಡೇವಿಡ್ ಕೂಡ ಒಂದಂಕಿಗೆ ವಿಕೆಟ್ ನಿರ್ಗಮಿಸಿದರು. ನೇಹಾಲ್ ವಡೇರಾ 21 ರನ್, ಹೃತೀಕ್ ಶೋಕೀನ್ 5 ರನ್ ಗಳಿಸಿ ನಿರ್ಗಮಿಸಿದರು. ಇದರಿಂದ ಅಂಬಾನಿ ಬ್ರಿಗೇಡ್, ಅಲ್ಪಮೊತ್ತಕ್ಕೆ ಕುಸಿಯುವ ಆತಂತಕ್ಕೆ ಸಿಲುಕಿತು.
ಮುಂಬೈ ಮಾನ ಕಾಪಾಡಿದ ತಿಲಕ್
ಆದರೆ ಸತತ ವಿಕೆಟ್ ಪತನದ ನಡುವೆಯೂ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ತೋರಿದರು. ಮಾರಕ ಬೌಲಿಂಗ್ ಮಧ್ಯೆಯೂ ಆರ್ಸಿಬಿ ಬೌಲರ್ಗಳನ್ನು ಕಾಡಿದರು. ಸ್ಪೋಟಕ ಆಟದ ಮೂಲಕ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಮುಂಬೈ ಮರ್ಯಾದೆ ಕಾಪಾಡಿದರು. ಅಗ್ರೆಸ್ಸಿವ್ ಅರ್ಧಶತಕ ಸಿಡಿಸಿದ ತಿಲಕ್ ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಮೊದಲು ಅಬ್ಬರಿಸಿದ್ದ ಬೌಲರ್ಸ್ಗೆ ಕೊನೆಯಲ್ಲಿ ಬೆಂಡೆತ್ತಿದ ತಿಲಕ್ ವರ್ಮಾ, ಅಜೇಯ ಇನ್ನಿಂಗ್ಸ್ ಕಟ್ಟಿದರು. 46 ಎಸೆತಗಳಲ್ಲಿ 84 ರನ್ ಚಚ್ಚಿದರು. ಅವರ ಖತರ್ನಾಕ್ ಇನ್ನಿಂಗ್ನಲ್ಲಿ 9 ಬೌಂಡರಿ, 4 ಸಿಕ್ಸರ್ಗಳು ಇದ್ದವು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಬೆಂಗಳೂರು ಪರ ಮೊಹಮ್ಮದ್ ಸಿರಾಜ್, ಟಾಪ್ಲೆ, ಆಕಾಶ್ ದೀಪ್ ಹರ್ಷಲ್ ಪಟೇಲ್, ಮೈಕೇಲ್ ಬ್ರೇಸ್ವೆಲ್ ತಲಾ 1 ವಿಕೆಟ್ ಪಡೆದರು. ಕರಣ್ ಶರ್ಮಾ 2 ವಿಕೆಟ್ ಕಬಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI)
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI)
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್ (ವಿಕೆಟ್), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್