ಭಾರತದಂತಹ ಸಂಕೀರ್ಣ ಅರ್ಥವ್ಯವಸ್ಥೆಯ ದೇಖರೇಕಿಗೆ ರಿಸರ್ವ್ ಬ್ಯಾಂಕಿನಂತಹ ಸಂಸ್ಥೆಯು ರಾಜಕೀಯ ನಾಯಕರ ಇಷ್ಟಾನಿಷ್ಟಗಳಿಗೆ ಮಣಿಯದೆ ಸ್ವಾಯತ್ತವಾಗಿ ಉಳಿಯುವುದು ಅತ್ಯಂತ ಮುಖ್ಯ ಸಂಗತಿ. ಆಗಲೇ ಆರ್ಥಿಕ ಸ್ಥಿರತೆಯನ್ನು ನಿರೀಕ್ಷಿಸುವುದು ಸಾಧ್ಯ.
ವಾಸ್ತವವಾಗಿ ಮೋದಿ ಸರ್ಕಾರ ರಿಸರ್ವ್ ಬ್ಯಾಂಕಿನಿಂದ ಆರಂಭದಲ್ಲಿ ಬಯಸಿದ್ದ ಮೀಸಲು ನಿಧಿಯ ಮೊತ್ತ ಮೂರು ಲಕ್ಷ ಕೋಟಿ ರುಪಾಯಿಗಳು. ಬ್ಯಾಂಕು ಮತ್ತು ಸರ್ಕಾರದ ನಡುವೆ ನಡೆದ ಒಂದು ಬಗೆಯ ರಾಜಿ ಒಪ್ಪಂದದ ಕಾರಣ ಈ ಮೊತ್ತ 1.76 ಕೋಟಿ ಲಕ್ಷ ರುಪಾಯಿಗಳಿಗೆ ಇಳಿದಿದೆ. ಆರ್.ಬಿ.ಐ.ನ ಕೊರಳಪಟ್ಟಿ ಹಿಡಿದು ಮೀಸಲು ನಿಧಿ ಪಡೆದಿರುವ ಈ ಬೆಳವಣಿಗೆ ಅತ್ಯಂತ ಕೆಟ್ಟ ಪೂರ್ವನಿದರ್ಶನ ಹಾಕಿಕೊಟ್ಟಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಚಾಳಿ ಮತ್ತೆ ಮತ್ತೆ ಪುನರಾವರ್ತನೆ ಆಗುವುದಿಲ್ಲ ಎಂಬ ಯಾವುದೇ ಖಾತ್ರಿ ನೀಡಲು ಬರುವುದಿಲ್ಲ ಎಂದಿದ್ದಾರೆ. ಈ ಮೀಸಲು ನಿಧಿಯ ವರ್ಗಾವಣೆಯಿಂದ ಆರ್.ಬಿ.ಐ. ಸದ್ಯಕ್ಕೆ ಯಾವುದೇ ಹಾನಿಗೆ ಈಡಾಗುವುದಿಲ್ಲ ನಿಜ. ಆದರೆ ಆರ್ಥಿಕ ಅವಘಡವೊಂದು ಸಂಭವಿಸಿದರೆ ಅದನ್ನು ಎದುರಿಸಿ ನಿರ್ವಹಿಸಲು ಅಗತ್ಯವಿರುವಷ್ಟು ನಿಧಿ ಈಗ ಅದರ ಬಳಿ ಇಲ್ಲ. ಅಂತಹ ಬಿಕ್ಕಟ್ಟನ್ನು ಎದುರಿಸಲು ಆರ್.ಬಿ.ಐ ಬಳಿ ಇರುವ ಮೀಸಲು ನಿಧಿಯ ಮೊತ್ತ ಕನಿಷ್ಠ ಪ್ರಮಾಣದ್ದು. ರಿಸರ್ವ್ ಬ್ಯಾಂಕಿನ ಮೀಸಲು ನಿಧಿಗಳನ್ನು ತಳ ಮಟ್ಟ ಮುಟ್ಟಿಸುವುದು ಒಳ್ಳೆಯದಲ್ಲ. ಮುಂಬರುವ ದಿನಗಳಲ್ಲಿ ಈ ತಳಮಟ್ಟವೇ ಕಾಯಂ ಆಗಿ ಪರಿಣಮಿಸಿಬಿಡಬಹುದು.
ಆರ್.ಬಿ.ಐ.ನ ಸ್ವಾಯತ್ತತೆಯ ಮೇಲೆ ಸರ್ಕಾರ ದಾಳಿ ನಡೆಸಿತ್ತು. ಸಾರ್ವಜನಿಕ ಹಿತಕ್ಕಾಗಿ ಆರ್.ಬಿ.ಐ.ಗೆ ನಿರ್ದೇಶನಗಳನ್ನು ನೀಡುವ ಅಧಿಕಾರ ತನಗೆ ಉಂಟು ಎಂದು ಸಮರ್ಥಿಸಿಕೊಂಡ ಸರ್ಕಾರ ಆರ್.ಬಿ.ಐ. ಕಾಯಿದೆಯ ಸೆಕ್ಷನ್ 7ನ್ನು ಉಲ್ಲೇಖಿಸಿತ್ತು. ಗವರ್ನರ್ ಹುದ್ದೆ ಮತ್ತು ನಿರ್ದೇಶಕ ಮಂಡಳಿಯ ಸದಸ್ಯರ ಹುದ್ದೆಗಳಿಗೆ ಸರ್ಕಾರ ತನ್ನದೇ ಜನರನ್ನು ತುಂಬಿಸಿದ ನಂತರವೂ ಸರ್ಕಾರದೊಂದಿಗಿನ ಆರ್.ಬಿ.ಐ. ಭಿನ್ನಮತ ಅಳಿದಿರಲಿಲ್ಲ. ಬಿಮಲ್ ಜಲನ್ ಸಮಿತಿಗೂ ವಿಸ್ತರಿಸಿತ್ತು. ಸಮಿತಿಯ ಸದಸ್ಯರಾಗಿದ್ದ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ ಎಸ್. ಸಿ. ಗರ್ಗ್ ಅವರು ಆರ್.ಬಿ.ಐ. ನಿಧಿಗಳನ್ನು ವರ್ಗ ಮಾಡಬೇಕೆಂಬ ಜಲನ್ ಸಮಿತಿಯ ಶಿಫಾರಸನ್ನು ಒಪ್ಪಿರಲಿಲ್ಲ. ಭಿನ್ನಮತ ದಾಖಲಿಸಿದ್ದರು. ಕಡೆಗೆ ಗರ್ಗ್ ಅವರನ್ನು ಹಣಕಾಸು ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಲಾಯಿತು. ಜಲನ್ ಸಮಿತಿಯಲ್ಲಿ ಅವರ ಸ್ಥಾನವನ್ನು ಹೊಸ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ತುಂಬಿದರು. ಶಿಫಾರಸುಗಳನ್ನು ಅನುಮೋದಿಸಿದರು.

ರಿಸರ್ವ್ ಬ್ಯಾಂಕ್ ನಿಧಿಗೆ ಕೇಂದ್ರ ಕೈ ಹಾಕಿದ್ದು ಇದೇ ಮೊದಲು
ರಿಸರ್ವ್ ಬ್ಯಾಂಕಿನ ಮೀಸಲು ನಿಧಿಯ ಭಾರೀ ಮೊತ್ತಕ್ಕೆ ಕೇಂದ್ರ ಸರ್ಕಾರವೊಂದು ಕೈ ಹಾಕಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. 1962ರ ಚೀನಾ ಯುದ್ಧದ ಸಂದರ್ಭದಲ್ಲಿ ಮೊದಲ ಮತ್ತು ಕಡೆಯ ಬಾರಿಗೆ ಕೇಂದ್ರ ಸರ್ಕಾರ ಆರ್.ಬಿ.ಐ. ಮೀಸಲು ನಿಧಿಯನ್ನು ವರ್ಗ ಮಾಡುವಂತೆ ಕೇಳಿತ್ತು. ಅಗತ್ಯ ಬಿದ್ದರೆ ಬಳಸಿಕೊಳ್ಳಿ ಎಂದು ಆರ್.ಬಿ.ಐ ಕೂಡ ಹೇಳಿತ್ತು. ಆದರೆ ಅಂದಿನ ಸರ್ಕಾರ ಮೀಸಲು ನಿಧಿಗೆ ಕೈ ಹಾಕಲೇ ಇಲ್ಲ. ಯುದ್ಧ ಶೀಘ್ರವಾಗಿ ಮುಗಿದಿತ್ತು. 1991ರಲ್ಲಿ ಆರ್ಥಿಕ ಸ್ಥಿತಿ ತೀರಾ ಕೆಟ್ಟಿತ್ತು. ಚಂದ್ರಶೇಖರ್ ನೇತೃತ್ವದ ಸರ್ಕಾರ ಅಂದು ಬಂಗಾರವನ್ನು ಬಳಸಿತೇ ವಿನಾ ಆರ್.ಬಿ.ಐ. ಮೀಸಲು ನಿಧಿಯ ಮೇಲೆ ಕಣ್ಣು ಹಾಕಲಿಲ್ಲ.
ನೋಟು ರದ್ದು ಮತ್ತು ಜಿ.ಎಸ್.ಟಿ. ವೈಫಲ್ಯಗಳನ್ನು ಮರೆಮಾಚಲು ಮೋದಿ ಸರ್ಕಾರ ಆರ್.ಬಿ.ಐ. ಮೀಸಲು ನಿಧಿಗೆ ಕೈಹಾಕಿದೆ. ಬ್ಯಾಂಕುಗಳು ನಿಶ್ಯಕ್ತವಾಗಿರುವ ಇಂದಿನ ಸಂದರ್ಭದಲ್ಲಿ ಕಟ್ಟಕಡೆಯ ಕ್ರಮವಾಗಿ ಖಾತ್ರಿದಾರನ ಪಾತ್ರವನ್ನು ಆರ್.ಬಿ.ಐ. ವಹಿಸಬೇಕಾಗುತ್ತದೆ. ಅದರೆ ಅದರ ಬಂಡವಾಳವನ್ನೇ ಕರಗಿಸಿ ಇಡೀ ಅರ್ಥವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಲಾಗಿದೆ. ದೀಪಾವಳಿಯಂದು ಪಟಾಕಿ ಸುಡಲು ಕುಟುಂಬದ ತಲೆ ತಲಾಂತರದ ಚರಾಸ್ತಿ ಸ್ಥಿರಾಸ್ತಿಯನ್ನು ಮಾರಾಟ ಮಾಡಿದಂತಾಗಿದೆ ಎಂದು ಆರ್ಥಿಕ ತಜ್ಞ ಮೋಹನ್ ಗುರುಸ್ವಾಮಿ ಇಂಗ್ಲಿಷ್ ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಹೋಲಿಸಿದ್ದಾರೆ. 1998ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿದ್ದ ಮೋಹನ್ ಗುರುಸ್ವಾಮಿ ಇದೀಗ ಸೆಂಟರ್ ಫಾರ್ ಪಾಲಿಸಿ ಆಲ್ಟರ್ನೇಟಿವ್ಸ್ ನ ನಿರ್ದೇಶಕರು.

ರಿಸರ್ವ್ ಬ್ಯಾಂಕ್ ಇಂಡಿಯಾವನ್ನು 1935ರಲ್ಲಿ ಸ್ಥಾಪಿಸಿದವರು ಬ್ರಿಟಿಷರು. ಎರಡನೆಯ ವಿಶ್ವಯುದ್ಧದಲ್ಲಿ ನಗದಿನ ತೀವ್ರ ಅಗತ್ಯ ಅವರಿಗೆ ಬಿದ್ದಿತ್ತು. ಆಗಲೂ ಅವರು ಆರ್.ಬಿ.ಐ. ಮೀಸಲು ನಿಧಿಗೆ ಕೈ ಹಾಕಲಿಲ್ಲ. ಮಗುವಿನ ಶಿಕ್ಷಣಕ್ಕಾಗಿ ಇಟ್ಟ ಹಣವನ್ನು ಒಯ್ದು ಔತಣಕೂಟಕ್ಕೆ ಉಡಾಯಿಸಿದಂತಾಗಿದೆ ಎಂದು ಟೀಕಿಸಿದ್ದಾರೆ. ನೋಟು ರದ್ದು ಕ್ರಮದಿಂದಾಗಿ ಆರ್.ಬಿ.ಐ. ಮೂರು ಲಕ್ಷ ಕೋಟಿ ರುಪಾಯಿಯನ್ನು ಕಳೆದುಕೊಂಡಿತ್ತು. ಆ ಗಾಯದ ಮೇಲೆ ಬರೆ ಎಳೆವಂತೆ ಇದೀಗ 1.76 ಲಕ್ಷ ಕೋಟಿ ಮೀಸಲು ನಿಧಿಯನ್ನು ವರ್ಗ ಮಾಡಿಸಿಕೊಳ್ಳಲಾಗಿದೆ. ಕೇಂದ್ರೀಯ ಬ್ಯಾಂಕಿನ ಮೀಸಲು ನಿಧಿಗಳನ್ನು ಅನಾಹುತ ಅಥವಾ ವಿನಾಶದ ಸಂದರ್ಭಗಳಲ್ಲಿ ಮಾತ್ರವೇ ಮುರಿಯಲಾಗುತ್ತದೆ. ಅರ್ಜೆಂಟೈನ ಮತ್ತು ಗ್ವಾಟೆಮಾಲ ಇನ್ನೂ ಹಲವು ಆಫ್ರಿಕನ್ ದೇಶಗಳು ಇತ್ತೀಚೆಗೆ ಮೀಸಲು ನಿಧಿಗೆ ಕೈ ಹಾಕಿದ್ದವು. ದಿವಾಳಿಯ ಅಂಚಿಗೆ ತಲುಪಿದ ವಿನಾಶಕಾರಿ ಸ್ಥಿತಿ ಆ ದೇಶಗಳಲ್ಲಿತ್ತು. ಬ್ರಿಟನ್, ಅಮೆರಿಕೆ, ಚೀನಾ, ರಷ್ಯಾ ಎಂದಿಗೂ ಇಂತಹ ಕೆಲಸಕ್ಕೆ ಕೈ ಹಾಕಿಲ್ಲ. ಕಾಲು ಮುರಿದರೆ ಶಸ್ತ್ರಚಿಕಿತ್ಸೆ ಮಾಡಬೇಕು ಇಲ್ಲವೇ ಅದು ಅಲ್ಲಾಡದಂತೆ ಅಚ್ಚಿನಲ್ಲಿಟ್ಟು ಕೂಡಿಕೊಳ್ಳುವ ಸ್ಥಿತಿ ಕಲ್ಪಿಸಬೇಕು. ಅದನ್ನು ಬಿಟ್ಟು ನೋವು ನಿವಾರಣೆಗೆ ಮಾರ್ಫಿನ್ ಕೊಡಕೂಡದು ಎಂಬುದು ಅವರ ನಿಚ್ಚಳ ನಿಲುವು.
ಲಾಗಾಯಿತಿನಿಂದಲೂ ಆರ್.ಬಿ.ಐ. ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬಂದಿದೆ. ವಿಶ್ವಮಾರುಕಟ್ಟೆಯಲ್ಲಿ ದೇಶಕ್ಕೆ ಸಾಲ ದೊರೆಯುವುದು ಈ ವಿಶ್ವಾಸಾರ್ಹತೆಯಿಂದಲೇ. ಈ ವಿಶ್ವಾಸಾರ್ಹತೆಗೆ ಭಂಗ ತಂದರೆ ದೇಶದ ಮಾರುಕಟ್ಟೆಯಲ್ಲಿ ಅರಾಜಕತೆ ಉಂಟಾಗುವುದಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತವನ್ನು ಯಾರೂ ನಂಬುವುದಿಲ್ಲ. ನೋಟು ರದ್ದು ಆರ್.ಬಿ.ಐ. ವಿಶ್ವಾಸಾರ್ಹತೆಗೆ ನೀಡಿದ ಹೊಡೆತ ಎಂದು ಅವರು ಬಣ್ಣಿಸಿದ್ದಾರೆ.