ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉಜ್ವಲಾ ಯೋಜನೆಯಡಿ 450 ರೂ.ಗೆ ಗ್ಯಾಸ್ ಸಿಲಿಂಡರ್, ಯುವಕರಿಗೆ 2.5 ಲಕ್ಷ ಸರಕಾರಿ ಉದ್ಯೋಗ ಸೃಷ್ಟಿ, ಹೆಣ್ಣು ಮಗುವಿನ ಹೆಸರಿಗೆ 2 ಲಕ್ಷ ರೂ. ಉಳಿತಾಯ ಬಾಂಡ್, ರೈತರ ಭೂಮಿ ಹರಾಜಿಗೆ ಸೂಕ್ತ ಪರಿಹಾರ ನೀತಿ ರೂಪಿಸುವುದಾಗಿ ವಾಗ್ದಾನ ಮಾಡಿದೆ.
ಜೈಪುರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ”ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದ ಬಳಿಕ ವಿವಿಧ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ನಡೆದ ಉದ್ಯೋಗ ನೇಮಕಾತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಾಗೂ ವಿವಿಧ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗುವುದು,” ಎಂದು ಘೋಷಿಸಿದರು.
ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಹಲವು ಪರಿಣಾಮಕಾರಿ ಕ್ರಮ ಕೈಗೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಬಿಜೆಪಿ, ಪ್ರತಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಠಾಣೆ ನಿರ್ಮಾಣ, ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಘಟಕ ರಚನೆ, ಪ್ರತಿ ನಗರಗಳಲ್ಲಿ ಮಹಿಳಾ ಪೀಡಕರ ಆಟಾಟೋಪ ಹತ್ತಿಕ್ಕಲು ಆ್ಯಂಟಿ ರೋಮಿಯೊ ಸ್ಕ್ವ್ಯಾಡ್ ಸ್ಥಾಪಿಸುವ ಭರವಸೆ ನೀಡಿದೆ.

ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.