ಮೈಸೂರು : ವರುಣದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೊರಗಿನವರು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ರಾಮಣ್ಣ, ಇಟಲಿಯಲ್ಲಿ ಹುಟ್ಟಿದ ಸೋನಿಯಾಗಾಂಧಿ ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲಬಹುದು, ಅಲಹಾಬಾದ್ ನಲ್ಲಿ ಜನಿಸಿದ ಇಂದಿರಾಗಾಂಧಿ ಚಿಕ್ಕಮಗಳೂರಿಗೆ ಬರಬಹುದು, ವಿದೇಶಿ ಅಮ್ಮನಿಗೆ ದಿಲ್ಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಹೋಗಬಹುದು, ಹಾಗಾದ್ರೇ ಸೋಮಣ್ಣ ವರುಣಾಕ್ಕೆ ಬರಬಾರದಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯು ಬಿ.ಎಲ್ ಸಂತೋಷ್ ಕಪಿಮುಷ್ಠಿಯಲ್ಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು.ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ಧಾಗಲೇ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಬಸವರಾಜ ಬೊಮ್ಮಾಯಿ ಮೊದಲಾದ ನಾಯಕರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ಧಾರೆ.ಸಂತೋಷ್ ಸಿವಿಲ್ ಇಂಜಿನಿಯರ್ ಪದವೀಧರರು.ಅವರು ಮನಸ್ಸು ಮಾಡಿದ್ದರೇ ಉನ್ನತ ಹುದ್ದೆಗೆ ಹೋಗಬಹುದಿತ್ತು.ಅವರೇ ಸ್ವಂತ ಉದ್ದಿಮೆ ಸ್ಥಾಪನೆ ಮಾಡಬಹುದಿತ್ತು.ಆದರೆ ಅದ್ಯಾವುದನ್ನು ಬಯಸದ ಸಂತೋಷ್ ಅವರು ಬಿಜೆಪಿ ಗೆಲುವಿಗಾಗಿ ಹಗಲಿರುಳು ದುಡಿಯುತ್ತಾ ಬಂದಿದ್ಧಾರೆ.ಪಕ್ಷಕ್ಕಾಗಿ ತಮ್ಮ ಸರ್ವಸ್ವವನ್ನೂ ಮುಡುಪಾಗಿಟ್ಟಿದ್ಧಾರೆ.ನಮ್ಮ ಪಕ್ಷದ ಹಿರಿಯ ನಾಯಕರಾಗಿರುವ ಸಂತೋಷ್ ಅವರನ್ನು ಟೀಕಿಸುವ ನೈತಿಕತೆ, ಯೋಗ್ಯತೆ ಸಿದ್ಧರಾಮಯ್ಯರಿಗೆ ಇಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿ 60 ಸೀಟು ದಾಟಲ್ಲ ಎಂಬ ಸಿದ್ದರಾಮಯ್ಯ ವ್ಯಂಗ್ಯಕ್ಕೂ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಇದಕ್ಕೆಲ್ಲ ಮೇ 10ರಂದು ರಾಜ್ಯದ ಜನ ಉತ್ತರ ಕೊಡಲಿದ್ದಾರೆ.ಮೇ 13ರಂದು ಯಾರು ಎಷ್ಟು ಸ್ಥಾನ ಪಡೆಯುತ್ತಾರೆಂದು ಗೊತ್ತಾಗಲಿದೆ.ಕಾಂಗ್ರೆಸ್ ಪಕ್ಷ 70 ಸೀಟು ಗಳಿಸಿದರೇ ಹೆಚ್ಚು ಎಂದು ಕುಟುಕಿದ್ದಾರೆ.