ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ (ಆಗಸ್ಟ್ 4) ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮೋದಿ ಉಪನಾಮ ಸಂಬಂಧ ತಾವು ನೀಡಿದ್ದ ಹೇಳಿಕೆಗೆ ಗುಜರಾತ್‌ನ ಸೂರತ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಕೆಲವೇ ಗಂಟೆಗಳಲ್ಲಿ ಲಾಲು ಅವರನ್ನು ರಾಹುಲ್ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಆರ್‌ಜೆಡಿ ಸಂಸದೆ ಮೀಸಾ ಭಾರತಿ ಅವರ ನಿವಾಸಲ್ಲಿ ಲಾಲು ಹಾಗೂ ರಾಹುಲ್ ಗಾಂಧಿ ಅವರ ಭೇಟಿ ನಡೆಯಿತು. ಈ ವೇಳೆ ಲಾಲು ಪ್ರಸಾದ್ ಅವರ ಪುತ್ರ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೂಡ ಹಾಜರಿದ್ದರು.
ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಅವರ ಜತೆಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಅವರು ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿ ಹಾಗೂ ಇಂಡಿಯಾ ಮೈತ್ರಿಕೂಟದ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಲಾಲು ಅವರ ಆರೋಗ್ಯವನ್ನೂ ರಾಹುಲ್ ಗಾಂಧಿ ಅವರು ವಿಚಾರಿಸಿದರು ಎಂದು ವರದಿ ಹೇಳಿದೆ.
ಬಿಹಾರದಲ್ಲಿ ಆರ್‌ಜೆಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರದ ಭಾಗವಾಗಿವೆ. ರಾಹುಲ್ ಗಾಂಧಿ ಹಾಗೂ ಲಾಲು ಪ್ರಸಾದ್ ಅವರ ಮಾತುಕತೆ ವೇಳೆ ಬಿಹಾರದ ರಾಜಕೀಯದ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಪ್ರತಿಪಕ್ಷಗಳ ʼಇಂಡಿಯಾʼ ವಿರುದ್ಧ ಪಿಐಎಲ್ | ಕೇಂದ್ರ, ಚುನಾವಣಾ ಆಯೋಗ, ವಿಪಕ್ಷಗಳಿಗೆ ದೆಹಲಿ ಹೈಕೋರ್ಟ್ ನೋಟಿಸ್
ಈ ಮಾಸಾಂತ್ಯದಲ್ಲಿ ಮುಂಬೈನಲ್ಲಿ ಇಂಡಿಯಾ ಒಕ್ಕೂಟದ ಮೂರನೇ ಸಭೆ ನಡೆಯಲಿದ್ದು ಸಭೆಗೂ ಮುನ್ನ ರಾಹುಲ್ ಗಾಂಧಿ ಹಾಗೂ ಲಾಲು ಪ್ರಸಾದ್ ಅವರ ಭೇಟಿ ಮಹತ್ವ ಪಡೆದಿದೆ.
ಮೋದಿ ಉಪನಾಮ ಹೇಳಿಕೆ ಸಂಬಂಧ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದಕ್ಕೆ ರಾಹುಲ್ ಗಾಂಧಿ ಈಗ ನಿರಾಳರಾಗಿದ್ದು ಮೈತ್ರಿಕೂಟ ಬಲಪಡಿಸುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ. ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಹುಲ್ ಅವರ ಹಾದಿ ಸುಗಮವಾಗಿದೆ.






